ನೀನೆಲ್ಲಿ ನಡೆವೆ ದೂರ.. ಎಲ್ಲೆಲ್ಲೂ ನೀರೇ: ರಾಜಧಾನಿಯಲ್ಲಿ 23 ವರ್ಷಗಳ ಬಳಿಕ ಅತಿ ಹೆಚ್ಚು ಮಳೆ
Team Udayavani, Sep 6, 2022, 12:52 PM IST
ರಾಜಧಾನಿಯಲ್ಲಿ 23 ವರ್ಷಗಳ ಬಳಿಕ ಅತಿ ಹೆಚ್ಚು ಮಳೆ ಆಗಿದ್ದು, ಸತತ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಅರ್ಧ ಬೆಂಗಳೂರು ಮುಳುಗಡೆಯಾಗಿದೆ. 60ಕ್ಕೂ ಹೆಚ್ಚಿನ ಬಡಾವಣೆ ಜಲಾವೃತವಾಗಿದ್ದು, ಬೋಟ್‌ಗಳ ಮೂಲಕ ಜನರನ್ನು ಹೊರಗೆ ಕರೆತರಲಾಗುತ್ತಿದೆ. ಹಲವು ಲೇಔಟ್‌ಗಳು ನಿರಂತರವಾಗಿ ಮುಳುಗುತ್ತಿರುವುದರಿಂದ ನಿವಾಸಿಗಳು ಬಡಾವಣೆ ಖಾಲಿ ಮಾಡುತ್ತಿದ್ದಾರೆ. ಇನ್ನು ರಸ್ತೆಗಳು, ಜಂಕ್ಷನ್‌ಗಳಲ್ಲಿ ನೀರು ತುಂಬಿಕೊಂಡಿದ್ದು, ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಜತೆಗೆ ಮಾರತ್ತಹಳ್ಳಿ, ಮಹದೇವಪುರ, ಐಟಿಪಿಎಲ್, ಹೂಡಿ ಸೇರಿ ಪೂರ್ವ ಭಾಗದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಲುು ತೊಂದರೆಯಾಗುತ್ತಿದ್ದು, ಆನ್‌ಲೈನ್ ಕ್ಲಾಸ್‌ಗಳ ಮೊರೆ ಹೋಗಲಾಗಿದೆ.
ಜನರ ಓಡಾಟಕ್ಕೆ ಬೋಟ್ ವ್ಯವಸ್ಥೆ: ಮಹದೇವಪುರ, ಪೂರ್ವ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳು ಪರದಾಡುವಂತಾಗಿದೆ. ರೈನ್ ಬೋ ಡ್ರೈವ್, ಅನುಗ್ರಹ ಲೇಔಟ್‌ಗಳು ಕಳೆದ 3 ತಿಂಗಳಲ್ಲಿ 5ನೇ ಬಾರಿ ಜಲಾವೃತವಾಗಿವೆ. 60ಕ್ಕೂ ಹೆಚ್ಚಿನ ಬಡಾವಣೆಗಳಿಗೆ ನೀರು ನುಗ್ಗಿದೆ. 273 ಮನೆಗಳಲ್ಲಿ ನೀರು ನಿಂತಿದೆ. ಜಲಾವೃತ ಬಡಾವಣೆಗಳಲ್ಲಿ ಜನರ ಓಡಾಟಕ್ಕೆ ಬೋಟ್‌ಗಳ ವ್ಯವಸ್ಥೆ ಮಾಡಲಾಗಿದೆ. ನೀರನ್ನು ಹೊರಹಾಕಲು 45 ಪಂಪ್‌ಸೆಟ್‌ಗಳನ್ನು ನಿಯೋಜಿಸಲಾಗಿದೆ.
ಭವಿಷ್ಯದ ಚಿಂತೆಯಲ್ಲಿ ಕೊಳಗೇರಿ ನಿವಾಸಿಗಳು : ಬಡಾವಣೆಗಳಷ್ಟೇ ಅಲ್ಲ, ಬೆಳ್ಳಂದೂರಿನ ಮುನ್ನೆಕೊಳಾಲು ಕೊಳಗೇರಿ ಸಂಪೂರ್ಣ ಮುಳುಗಿದೆ. ಅಲ್ಲಿದ್ದ 20ಕ್ಕೂ ಹೆಚ್ಚಿನ ಶೆಡ್‌ಗಳ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ. ಶೆಡ್‌ನಲ್ಲಿದ್ದ ವಸ್ತುಗಳು, ಆಹಾರ ಸಾಮಗ್ರಿಗಳೆಲ್ಲವೂ ನೀರುಪಾಲಾಗಿವೆ. ಅಲ್ಲಿನ ಜನ ಸೋಮವಾರ ಆಹಾರಕ್ಕಾಗಿ ಪರದಾಡಿದ್ದಾರೆ. ಭವಿಷ್ಯದ ಚಿಂತೆಯೂ ಅವರನ್ನು ಕಾಡುವಂತಾಗಿದೆ.
ಪರಿಹಾರ ಕಾರ್ಯಕ್ಕಾಗಿ ಪರದಾಟ : ಭಾರೀ ಮಳೆಗೆ ಒಮ್ಮೆಲೇ 60ಕ್ಕೂ ಹೆಚ್ಚಿನ ಬಡಾವಣೆ ಜಲಾ ವೃತವಾದ ಪರಿಣಾಮ ಬಿಬಿಎಂಪಿ ಸೇರಿ ಇನ್ನಿತರ ಇಲಾಖೆಗಳು ಪರಿಹಾರ ಕಾರ್ಯಕ್ಕಾಗಿ ಪರದಾಡುವಂತಾಗಿತ್ತು. ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ, ಜನರನ್ನು ಮನೆಯಿಂದ ಹೊರತರಲು, ಪ್ರವಾಹಕ್ಕೆ ತುತ್ತಾದವರಿಗೆ ಆಹಾರ ನೀಡುವುದು ಸೇರಿ ಇನ್ನಿತರ ಕೆಲಸಗಳನ್ನು ಸಮರ್ಪಕವಾಗಿ ಮಾಡದಂತಾಗಿತ್ತು. ಅದರಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿತ್ತು.
ವಾಹನಗಳನ್ನು ಎಳೆದ ಸಾರ್ವಜನಿಕರು : ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದ ಬಿಎಂಟಿಸಿ ಬಸ್‌ನ್ನು ಸಾರ್ವಜನಿಕರು ಹಗ್ಗ ಕಟ್ಟಿ ಎಳೆದು ಪ್ರವಾಹದಿಂದ ಹೊರತಂದರು. ಅದೇ ರೀತಿ ರೈನ್‌ಬೋ ಡ್ರೈವ್ ಲೇಔಟ್‌ನಲ್ಲಿ ನೀರಿನಲ್ಲಿ ಮುಳುಗಿದ್ದ ಕಾರೊಂದನ್ನು ಸ್ಥಳೀಯ ನಿವಾಸಿಗಳು ಹಗ್ಗದ ಸಹಾಯದಿಂದ ಹೊರಗೆಳೆದರು.
ಧರೆಗುರುಳಿದ ಮರಗಳು: ಮಳೆಯ ಪರಿಣಾಮ ವಿವಿಧೆಡೆ 10ಕ್ಕೂ ಹೆಚ್ಚಿನ ಮರಗಳು ಬಿದ್ದಿವೆ. ಎಚ್‌ಎಸ್‌ಆರ್ ಲೇಔಟ್, ಮಹಾಲಕ್ಷ್ಮೀ ಲೇಔಟ್ ಸೇರಿ ಇನ್ನಿತರ ಕಡೆಗಳಲ್ಲಿ ಮರ ಬಿದ್ದಿವೆ. ಮಹಾ ಲಕ್ಷ್ಮೀಲೇಔಟ್‌ನ ಸೋಮೇಶ್ವರ ನಗರದಲ್ಲಿ ಟಾಟಾ ಏಸ್ ವಾಹನದ ಮೇಲೆ ಬೃಹತ್ ಮರ ಬಿದ್ದು ವಾಹನ ಸಂಪೂರ್ಣ ಜಖಂ ಆಗುವಂತಾಗಿತ್ತು.
ವಿಧಾನಸೌಧಕ್ಕೂ ನೀರು: ಮಳೆಯ ಪರಿಣಾಮ ವಿಧಾನಸೌಧ ಬೇಸ್ ಮೆಂಟ್‌ನಲ್ಲಿನ ಕ್ಯಾಂಟೀನ್‌ಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಳೆ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕ್ಯಾಂಟೀನ್ ಸಂಪೂರ್ಣ ಜಲಾವೃತವಾಗಿತ್ತು.
ಮಳೆಗೆ ರೈತರ ಪರದಾಟ: ಮಳೆಯಿಂದಾಗಿ ಕೆ.ಆರ್.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳು ಜಲಾವೃತವಾಗಿದ್ದವು. ಇದರಿಂದಾಗಿ ಸೋಮವಾರ ಬೆಳಗ್ಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪರದಾಡಿದರು. ಅದೇ ರೀತಿ ಮಹದೇವಪುರದ ಜ್ಯೋತಿಪುರ, ಹಂಚರಹಳ್ಳಿಯಲ್ಲಿನ ಜಮೀನುಗಳಿಗೆ ನೀರು ನುಗ್ಗಿ ಅಪಾರಪ್ರಮಾಣ ಬೆಳೆ ನಾಶವಾಗುವಂತಾಗಿತ್ತು. ಪ್ರಮುಖವಾಗಿ ಮುಸುಕಿನ ಜೋಳ, ಸೀಮೆಹುಲ್ಲು, ರಾಗಿ, ತರಕಾರಿ ಬೆಳೆಗಳು ನೀರು ಪಾಲಾಗುವಂತಾಗಿದೆ.
ಕೆರೆಗಳೆಲ್ಲವೂ ಭರ್ತಿ : ಸತತ ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಅದರಲ್ಲೂ ಮಹದೇವಪುರ, ಪೂರ್ವ ವಲಯ ವ್ಯಾಪ್ತಿಯಲ್ಲಿನ ಬೆಳ್ಳಂದೂರು, ವರ್ತೂರು ಕೆರೆ, ಸಾವಳಿ ಕೆರೆ, ವಿಭೂತಿಪುರ ಕೆರೆ, ಬೇಗೂರು ಕೆರೆ ಸೇರಿ 20ಕ್ಕೂ ಹೆಚ್ಚಿನ ಕೆರೆಗಳಲ್ಲಿ ನೀರು ಶೇಖರಣೆಯ ಸಾಮರ್ಥ್ಯ ಮೀರಿದೆ. ಹೀಗಾಗಿ ಎಲ್ಲ ಕೆರೆಗಳ ಕೋಡಿ ಬಿದ್ದು ನೀರು ಹರಿಯುತ್ತಿದೆ.
23 ವರ್ಷದ ನಂತರ ಹೆಚ್ಚಿನ ಮಳೆ : ಬೆಂಗಳೂರಿನಲ್ಲಿ ಜೂನ್ 1ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಸರಾಸರಿ 313 ಮಿ.ಮೀ. ಮಳೆಯಾಗುತ್ತದೆ. ಆದರೆ, ಈ ಬಾರಿ 709 ಮಿ.ಮೀ. ಮಳೆಯಾಗಿದೆ. 1999ರ ನಂತರ ಈ ಬಾರಿ ಅತಿ ಹೆಚ್ಚು ಮಳೆ ಸುರಿದಿದೆ. 1999ರಲ್ಲಿ 725 ಮಿ.ಮೀ. ಮಳೆಯಾಗಿತ್ತು.
ಬಡಾವಣೆ ಖಾಲಿ ಮಾಡಿದ ಜನ : ಮಳೆ ಹೆಚ್ಚಾಗಿ ಪ್ರವಾಹ ಸೃಷ್ಟಿಯಾಗುತ್ತಿದ್ದಂತೆ ಬೆಳ್ಳಂದೂರಿನ ಕರಿಯಮ್ಮ ಅಗ್ರಹಾರ ಬಡಾವಣೆಯ ಜನರು ಮನೆ ಖಾಲಿ ಮಾಡಿ ಕೊಂಡು ಹೋದರು. ಮನೆ ಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರ ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.