Bengaluru: ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಸಾವು
Team Udayavani, Aug 11, 2024, 12:12 PM IST
ಬೆಂಗಳೂರು: ಪೀಣ್ಯದ ಎನ್‌ಟಿಟಿಫ್ ವೃತ್ತದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಕೆ ವೇಳೆ ಮೇಲ್ಛಾವಣಿ ಕುಸಿದು ಉತ್ತರ ಕರ್ನಾಟಕ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೂಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಯಾದಗಿರಿ ಮೂಲದ ಇಮಾಮ್ ಶೇಖ್(28) ಮತ್ತು ಕಲಬುರಗಿ ಮೂಲದ ವೀರೇಶ್(35) ಮೃತರು. ಕಲಬುರಗಿ ಮೂಲದ ಪ್ರಕಾಶ್(55) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದುಕೊಂಡಿರುವ ಕಂಪನಿ, ಕಟ್ಟಡದ ಮಾಲೀಕರಾದ ಗೋವಿಂದರಾಜು, ಎಂಜಿನಿಯರ್‌ಗಳು, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ತುಮಕೂರಿನ ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ಎಂಬವರು, ತಮ್ಮ ಖಾಲಿ ನಿವೇಶನದಲ್ಲಿ ಯೋಮ್ ಸ್ವಿಚ್ ಗೇರ್ ಕಂಪನಿಗೆ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಿದ್ದಾರೆ. ಶನಿವಾರ 5ನೇ ಮಹಡಿಯ ಟೆರೆಸ್‌ನಲ್ಲಿ ಆರ್‌ಸಿಸಿ ಹಾಕುವ ಕೆಲಸ ನಡೆಯುತ್ತಿತ್ತು. ಜತೆಗೆ ಲಿಫ್ಟ್ ಅಳವಡಿಕೆ ಕಾರ್ಯ ಕೂಡ ನಡೆಯುತ್ತಿತ್ತು. ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಕಟ್ಟಡ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಕೂಡಲೇ ಇತರೆ ಕಾರ್ಮಿಕರು ಸ್ಥಳಕ್ಕೆ ಧಾವಿಸಿ, ಎಲ್ಲಾ ಕಾರ್ಮಿಕರ ಮೇಲೆ ಬಿದ್ದಿದ್ದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿ ದ್ದರು. ಆದರೆ, ವೀರೇಶ್ ಮತ್ತು ಇಮಾಮ್ ಶೇಖ್ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಪ್ರಕಾಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ನಾಲ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಕುರಿತು ಕಾರ್ಮಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ನಿರ್ಲಕ್ಷ್ಯ ಆರೋಪ: ಕಟ್ಟಡ ನಿರ್ಮಾಣ ಮಾಡುವ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಯಮವಿದೆ. ಆದರೆ, ಗುತ್ತಿಗೆದಾರ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದ ಸಂಸ್ಥೆ ಮೇಲ್ಛಾವಣಿ ನಿರ್ಮಾಣದ ವೇಳೆ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ. ಹೀಗಾಗಿ ಕಟ್ಟಡ ಮಾಲೀಕರು, ಗುತ್ತಿಗೆದಾರರರು, ಮ್ಯಾನೇಜರ್, ಎಂಜಿನಿಯರ್ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದ್ದು, ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದರು. ಇನ್ನು ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಹಾಗೂ ಪೀಣ್ಯ ಉಪವಿಭಾಗದ ಎಸಿಪಿ, ಠಾಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ಈ ಕಟ್ಟಡ ಮಾಲೀಕರು. ತುಮಕೂರು ನಗರ ಕ್ಷೇತ್ರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಜಿತಗೊಂಡಿದ್ದರು ಎಂದು ತಿಳಿದು ಬಂದಿದೆ.
ಕಟ್ಟಡ ಕಾಮಗಾರಿ ವೇಳೆ ಮೇಲ್ಛಾವಣಿ ಕುಸಿದು, 7 ಮಂದಿ ಕಾರ್ಮಿಕರು ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆಗಸೋಲದೇವಹಳ್ಳಿಯ ಸೋಮಶೆಟ್ಟಿ ಹಳ್ಳಿ ನಿವಾಸಿಗಳಾದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಗುತ್ತಿಗೆದಾರರ ಹಾಗೂ ಇತರರ ನಿರ್ಲಕ್ಷ್ಯ ದಿಂದ ಅವಘಡವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಕಟ್ಟಡ ಮಾಲೀಕರು, ಗುತ್ತಿಗೆದಾರ ಸಂಸ್ಥೆ ಸೇರಿ ಹಲವರ ವಿರುದ್ಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಸೈದುಲ್ಲಾ ಅಡಾವತ್, ಡಿಸಿಪಿ ಉತ್ತರ ವಿಭಾಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.