Atul Subhash Case: ಟೆಕಿ ಅತುಲ್ ಆತ್ಮಹತ್ಯೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ
ಟೆಕಿ ಸುಭಾಷ್ ಆತ್ಮ ಹತ್ಯೆಗೆ ನ್ಯಾಯ ಕೊಡಿಸುವುದು ನಮ್ಮ ಹೊಣೆ: ಆಯುಕ್ತ
Team Udayavani, Dec 14, 2024, 10:45 AM IST
ಬೆಂಗಳೂರು/ನವದೆಹಲಿ: ಬಿಹಾರ ಮೂಲದ ಬೆಂಗಳೂರು ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಅತುಲ್‌ಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಇದೇವೇಳೆ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ನ್ಯಾಯ ಕೊಡಿಸುವಂತದ್ದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಅದನ್ನು ನಾವು ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಪತ್ನಿಯ ಕಿರುಕುಳ ತಾಳಲಾರದೇ ಸಾವಿಗೆ ಶರಣಾಗುತ್ತಿರುವುದಾಗಿ 26 ಪುಟಗಳ ಪತ್ರ ಬರೆದು, ವಿಡಿಯೋ ಮಾಡಿಕೊಂಡು ಇತ್ತೀಚೆಗೆ ಅತುಲ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅತುಲ್‌ಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ಎಲ್ಲೆಡೆಯಿಂದ ಕೇಳಿಬರತೊಡಗಿದೆ. ಅತುಲ್ ಪರ ಶುಕ್ರವಾರ ಕೋಲ್ಕತಾ, ಹೈದ್ರಾಬಾದ್, ಚಂಡೀಗಢ, ನವದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿವಿಧ ಸಂಘಟನೆಗಳು, ಟೆಕಿಗಳು, ಯುವಜನರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅತುಲ್ ಭಾವಚಿತ್ರವಿರುವ ಫೋಟೋಗಳು, ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ.
ಇನ್ನೊಂದೆಡೆ, ಅತುಲ್ ಸಾವಿಗೆ ಕಾರಣ ಎನ್ನಲಾದ ಅವರ ಪತ್ನಿ ನಿಖಿತಾ ಸಿಂಘಾನಿಯಾರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಎಂದು ಒತ್ತಾಯಿಸಿ 100ಕ್ಕೂ ಅಧಿಕ ಮಂದಿ ಬೆಂಗಳೂರು ನಗರದ ಬೆಳ್ಳಂದೂರಿನಲ್ಲಿರುವ ಐ.ಟಿ. ಕಂಪನಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಯಾನಂದ್, ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳ ಬಂಧನದ ಕಾರ್ಯ ಪ್ರಗತಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಇಲಾಖೆಯಿಂದ ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತ್ತಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ತನಿಖಾಧಿಕಾರಿಯಾಗಿದ್ದು, 2 ತಂಡ ರಚಿಸಲಾಗಿದೆ. ಮೃತ ವ್ಯಕ್ತಿಯ ಸಹೋದರನ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಅದಕ್ಕೆ ಪೂರಕವಾಗಿ ಪೊಲೀಸರು ವ್ಯಾಪಕವಾದ ತನಿಖೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಟೆಕಿ ಪತ್ನಿ ವಜಾಕ್ಕೆ ಒತ್ತಾಯ: ಟ್ವಿಟರ್ ಖಾತೆ ಬ್ಲಾಕ್ ಮಾಡಿದ ಕಂಪನಿ ಸಿಇಒ:
ಎಲ್ಲ ಬೆಳವಣಿಗೆಗಳ ನಡುವೆಯೇ, ಟೆಕಿ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾಳನ್ನು ಕೆಲಸದಿಂದ ವಜಾ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಆಕೆ ಕೆಲಸ ಮಾಡುತ್ತಿರುವ ಕಂಪನಿಯ ಸಿಇಒ ಜ್ಯೂಲಿ ಸ್ವೀಟ್ ಅವರಿಗೆ ಟ್ವೀಟರ್‌ನಲ್ಲಿ ಒತ್ತಾಯಗಳ ಸುರಿಮಳೆಯಾಗಿದೆ. ಇದರಿಂದ ಬೇಸತ್ತು ಹೋಗಿರುವ ಅವರು ಮೈಕ್ರೋಬ್ಲಾಗಿಂಗ್ ಜಾಲತಾಣದಲ್ಲಿ ತಮ್ಮ ಪ್ರೊಫೈಲನ್ನೇ ಲಾಕ್ ಮಾಡಿದ್ದಾರೆ. ಅವರಿಗೆ ಖಂಡನೆ ವ್ಯಕ್ತಪಡಿಸಿ ಟ್ವೀಟ್ ಮಾಡಲು ಹೋದಾಗ “ದೀಸ್ ಪೋಸ್ಟ್ಸ್ ಆರ್ ಪ್ರೊಟೆಕ್ಟೆಡ್. ಓನ್ಲಿ ಅಪ್ರೂವ್x ಫಾಲೋವರ್ಸ್ ಕ್ಯಾನ್ ಸೀ ಪೋಸ್ಟ್ಸ್’ ಎಂಬ ಸಂದೇಶ ಕಾಣುತ್ತಿದೆ.
ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ತಡೆಗೆ ತಜ್ಞರ ಸಮಿತಿ ರಚಿಸಿ: ಸುಪ್ರೀಂಕೋರ್ಟ್‌ಗೆ ಅರ್ಜಿ:
ನವದೆಹಲಿ: ದೇಶದಲ್ಲಿ ಜಾರಿಯ ಲ್ಲಿರುವ ವರದಕ್ಷಿಣೆ ತಡೆ ಕಾನೂನು ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನ್ಯಾಯವಾದಿ ವಿಶಾಲ್ ತಿವಾರಿ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಈ ಕಾಯ್ದೆಗಳಲ್ಲಿ ಮತ್ತಷ್ಟು ಸುಧಾರಣೆ ಮಾಡ ಬೇಕೆಂದು ಒತ್ತಾಯಿಸಿದ್ದಾರೆ. ಉದ್ದೇಶಿತ ಸಮಿತಿ ಯಲ್ಲಿ ಸುಪ್ರೀಂ ನಿವೃತ್ತ ನ್ಯಾಯ ಮೂರ್ತಿಗಳು, ಕಾನೂನು ಕ್ಷೇತ್ರದ ಪರಿಣಿತರು ಇರಬೇಕು ಎಂದೂ ಪ್ರತಿಪಾದಿ ಸಿದ್ದಾರೆ. ಪತ್ನಿ ಕಿರುಕುಳದಿಂದ ನೊಂದಿರುವುದಾಗಿ ಆರೋಪಿಸಿ ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಚರ್ಚೆಯಾಗುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ವಿವಾಹದ ವೇಳೆ ಪಡೆದ ಹಾಗೂ ನೀಡಿದ ಉಡುಗೊರೆಗಳ ವಿವರಗಳನ್ನೂ ನಮೂದಿಸಿ ವಿವಾಹ ನೋಂದಣಿ ಮಾಡಿಸಬೇಕು ಎಂದೂ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
3 ದಿನಗಳಲ್ಲಿ ವಿಚಾರಣೆಗೆ ಬರಲು ಅತುಲ್ ಪತ್ನಿಗೆ ಪೊಲೀಸರ ತಾಕೀತು:
ಜೌನ್‌ಪುರ್: ಆತ್ಮಹತ್ಯೆಗೆ ಶರಣಾಗಿರುವ ಟೆಕಿ ಅತುಲ್ ಸುಭಾಷ್ ಪತ್ನಿ ನಿಕಿತಾ ಸಿಂಘಾನಿಯಾಗೆ ಬೆಂಗಳೂರು ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಅದರಲ್ಲಿ “3 ದಿನಗಳ ಒಳಗಾಗಿ ಮಾರತ್‌ಹಳ್ಳಿ ಠಾಣೆಯಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ನಿಮ್ಮ ವಿರುದ್ಧ ವಿಚಾರಣೆ ನಡೆಸಿ, ತನಿಖೆ ನಡೆಸಲು ಸೂಕ್ತ ಕಾರಣಗಳು ಇವೆ’ ಎಂದು ಉಲ್ಲೇಖೀಸಲಾಗಿದೆ. ಪೊಲೀಸರು ನೀಡಿದ ನೋಟಿ ಸ್‌ನಲ್ಲಿ ಸಿಂಘಾನಿಯಾ ಅವರಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಸೂಚಿಸ ಲಾಗಿದೆ. ಉ.ಪ್ರದೇಶದ ಅವರ ಮನೆಯಲ್ಲಿ ಯಾರೂ ಇಲ್ಲದ ಕಾರಣ, ಬಾಗಿಲಿಗೆ ನೋಟಿಸ್ ಅಂಟಿಸಿ ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್:
ಅತುಲ್ ಸಾವಿನ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿದೆ. ಫೇಸ್‌ಬುಕ್, ಇನ್‌ಸ್ಟಾ, ಟ್ವೀಟರ್‌ನಲ್ಲಿ ಈ ಕುರಿತು ಭಾರೀ ಚರ್ಚೆ, ವಾಗ್ವಾದಗಳು ಆರಂಭವಾಗಿವೆ. ಟ್ವೀಟರ್‌ನಲ್ಲಿ ಗುರುವಾರದಿಂದೀಚೆಗೆ “ಅತುಲ್ ಸುಭಾಷ್’, “ಜಸ್ಟಿಸ್ ಈಸ್ ಡ್ನೂ’, “ಅತುಲ್ ವೀ ಲವ್ ಯೂ’, “ಮೆನ್ ಟೂ’, “ಜಸ್ಟಿಸ್ ಟು ಅತುಲ್ ಸುಭಾಷ್’ ಸೇರಿದಂತೆ ಹಲವು ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗಿವೆ. ಇನ್ನಾದರೂ ಜೀವನಾಂಶ ಕಾನೂನಿಗೆ ತಿದ್ದುಪಡಿ ಆಗಲಿ, ರಾಷ್ಟ್ರೀಯ ಪುರುಷರ ಆಯೋಗವೂ ರಚನೆಯಾಗಲಿ, ಅತುಲ್ ಸಾವಿಗೆ ನ್ಯಾಯ ಸಿಗಲಿ ಎಂದು ಹಲವರು ಆಗ್ರಹಿಸಿದ್ದಾರೆ. ಮಹಿಳೆಯರೂ ಕೌಟುಂಬಿಕ ದೌರ್ಜನ್ಯ ನಡೆಸುತ್ತಾರೆ. ಆದರೆ, ಅಂಥವರಿಂದ ಪುರುಷರನ್ನು ರಕ್ಷಿಸುವ ಕಾನೂನುಗಳೇ ಇಲ್ಲ ಎಂದೂ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಹಿಳೆಯರು ನಡೆಸಿದ್ದಾರೆನ್ನಲಾದ ದೌರ್ಜನ್ಯಗಳ ವಿಡಿಯೋಗಳನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.