ಮೆಟ್ರೋ ನಿಲ್ದಾಣಗಳ ನಡುವೆ ಸೈಕಲ್ ಪಥ
Team Udayavani, Feb 4, 2018, 12:16 PM IST
ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಮೈಸೂರು ಮಾದರಿಯಲ್ಲಿ “ಟ್ರಿಣ್ ಟ್ರಿಣ್’ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, 18 ಕೋಟಿ ರೂ. ವೆಚ್ಚದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳ ನಡುವೆ 71 ಕಿ.ಮೀ. ಉದ್ದದ ಬೈಸಿಕಲ್ ಪಥ ನಿರ್ಮಿಸಲು ಮುಂದಾಗಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಕಾರದೊಂದಿಗೆ 80.18 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸುತ್ತಿದ್ದು, ನಮ್ಮ ಮೆಟ್ರೋ ನಿಲ್ದಾಣಗಳ ನಡುವೆ ಬೈಸಿಕಲ್ ಪಥ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ರಸ್ತೆಗಳಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ತಕ್ಕಂತೆ 1.8 ಮೀಟರ್‌ನಿಂದ 2 ಮೀ. ಅಗಲದ 71 ಕಿ.ಮೀ ಪಥ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಪಥ ನಿರ್ಮಾಣಕ್ಕಾಗಿ ಟೆಂಡರ್ ಆಹ್ವಾನಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಪಥ ನಿರ್ಮಾಣಕ್ಕಾಗಿ ನಮ್ಮ ಮೆಟ್ರೋದ ನೇರಳೆ ಹಾಗೂ ಹಸಿರು ಮಾರ್ಗಗಳ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ನೇರಳೆ ಮಾರ್ಗದ ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾ ನಗರ, ಹಲಸೂರು, ಟ್ರಿನಿಟಿ, ಎಂ.ಜಿ.ರಸ್ತೆ, ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಹಾಗೂ ಹಸಿರು ಮಾರ್ಗದ ಪೀಣ್ಯ, ಯಶವಂತಪುರ, ಮಹಾಲಕ್ಷ್ಮೀ ಬಡಾವಣೆ, ರಾಜಾಜಿನಗರ, ಜಯನಗರ, ಆರ್.ವಿ.ರಸ್ತೆ, ಬನಶಂಕರಿ ಮತ್ತು ಜೆ.ಪಿ.ನಗರ ನಿಲ್ದಾಣಗಳ ನಡುವೆ ಪಥ ನಿರ್ಮಿಸಲು ನಿರ್ಧರಿಸಲಾಗಿದೆ.
345 ಬೈಸಿಕಲ್ ನಿಲುಗಡೆ ತಾಣ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ 250ರಿಂದ 350 ಮೀಟರ್‌ಗೆ ಒಂದು ಬೈಸಿಕಲ್ ನಿಲುಗಡೆ ತಾಣ ನಿರ್ಮಿಸುವಂತೆ ನಗರ ಭೂಸಾರಿಗೆ ನಿರ್ದೇಶನಾಲಯ ಯೋಜನೆ ರೂಪಿಸಿದೆ. ಅದರಂತೆ 25 ಕಿ.ಮೀ. ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸುತ್ತಿರುವ ಪಾಲಿಕೆ, ನಗರದಾದ್ಯಂತ 345 ಬೈಸಿಕಲ್ ನಿಲುಗಡೆ ತಾಣ ನಿರ್ಮಿಸಲು ತೀರ್ಮಾನಿಸಿದೆ. ಜತೆಗೆ ಬೈಸಿಕಲ್‌ಗಳು ಕೊರತೆಯಾಗದಂತೆ 6 ಸಾವಿರ ಬೈಸಿಕಲ್ ಖರೀದಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪ್ರತ್ಯೇಕ ಸೊಸೈಟಿ ಸ್ಥಾಪನೆ: ಸಾರ್ವಜನಿಕ ಬೈಸಿಕಲ್ ಯೋಜನೆ ಅನುಷ್ಠಾನ ಮತ್ತು ಕಾರ್ಯಾಚರಣೆಗಾಗಿ ಪ್ರತ್ಯೇಕ ಸೊಸೈಟಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಸೊಸೈಟಿಯು ಬೆಂಗಳೂರಿನಲ್ಲಿ ಸಾರ್ವಜನಿಕ ಬೈಸಿಕಲ್ ಸೇವೆಯ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಲಿದೆ. ಬೈಸಿಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೈಸಿಕಲ್ ದಿನಾಚರಣೆ, ತೆರೆದ ಬೀದಿ ಸೇರಿದಂತೆ ಮೋಟಾರು ವಾಹನಗಳ ಬಳಕೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಪರ್ಮಿಟ್ ಪಡೆಯುವುದು ಅಗತ್ಯ: ಬೈಸಿಕಲ್ ಸೇವೆ ನೀಡುವವರು ನಗರ ಭೂ ಸಾರಿಗೆ ನಿರ್ದೇಶನಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಪರ್ಮಿಟ್ ಪಡೆಯಬೇಕು. ಪರ್ಮಿಟ್ ಪಡೆದ ಸಂಸ್ಥೆಗಳು ಬೈಸಿಕಲ್‌ಗಳು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಬೈಸಿಕಲ್ ಕಳವು-ನಿರೋಧಕ ತಂತ್ರಾಂಶ ಸೇರಿ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಪರ್ಮಿಟ್ ಪಡೆಯುವ ಸಂಸ್ಥೆಗಳಿಗೆ ಹಲವು ರೀತಿ ಷರತ್ತು ವಿಧಿಸಲಾಗಿದೆ.
ಪರ್ಮಿಟ್ ಪಡೆಯುವವರಿಗೆ ವಿಧಿಸಲಾಗಿರುವ ಷರತ್ತುಗಳು
-ಕಳವು-ನಿರೋಧಕ ತಂತ್ರಾಂಶ ಸೇರಿ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು
-ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸಲಾದ ವ್ಯಾಪ್ತಿಯಲ್ಲಿ ನಿಲುಗಡೆ ಹಬ್/ಸ್ಥಳ ಮಾಹಿತಿ ನೀಡಬೇಕು
-ನೈಜ ಸಮಯ ದತ್ತಾಂಶ ಸಂಗ್ರಹ ಅವಕಾಶವಿರಬೇಕು
-ಯಾವುದೇ ಕಾರಣಕ್ಕೂ ದತ್ತಾಂಶ ಮಾಹಿತಿ ಹಂಚಿಕೊಳ್ಳುವಂತಿಲ್ಲ
-ಪರ್ಮಿಟ್‌ದಾರರು ಸೇವಾ ಮಟ್ಟದ ಒಪ್ಪಂದ ತಪ್ಪಿದರೆ ದಂಡ
-6 ತಿಂಗಳಲ್ಲಿ ತಪ್ಪುಗಳು ಪುನರಾವರ್ತನೆಯಾದರೆ ಪರ್ಮಿಟ್ ರದ್ದು
-ಸೇವೆ ನೀಡುವಲ್ಲಿ ಲಿಂಗ, ಜಾತಿ, ಧರ್ಮ, ಭಾಷೆ ಆಧಾರದಲ್ಲಿ ತಾರತಮ್ಯ ಮಾಡಬಾರದು
-ಪರ್ಮಿಟ್‌ದಾರರಿಗೆ ಸಮಂಜಸವೆಂದು ಪರಿಗಣಿಸಲಾದ ಬಳಕೆ ಶುಲ್ಕವನ್ನು ನಿಗದಿಪಡಿಸಲು ಅನುಮತಿ
ಮಾರ್ಗದರ್ಶಿ ತತ್ವಗಳು
-ಪ್ರತಿ 100 ನಿವಾಸಿಗಳಿಗೆ 3 ಬೈಸಿಕಲ್‌ಗಳಂತೆ ಬೆಂಗಳೂರಿಗೆ ಒಟ್ಟು 3 ಲಕ್ಷ ಬೈಸಿಕಲ್‌ಗಳು
-ಒಂದು ಬೈಸಿಕಲ್‌ಗೆ 3 ಅಥವಾ ಹೆಚ್ಚು ಟ್ರಿಪ್‌ಗ್ಳು ಅಥವಾ ಒಟ್ಟು 7.5 ಲಕ್ಷ ಟ್ರಿಪ್‌ಗ್ಳು
-ಜನರು ಕನಿಷ್ಠ 250ರಿಂದ ಗರಿಷ್ಠ 500 ಮೀ. ನಡೆಯುವ ದೂರದಲ್ಲಿ ಸೈಕಲ್ ಲಭ್ಯವಾಗಬೇಕು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.