ಬೈಕ್ ಪರಿಶೀಲನೆ ಹೆಸರಿನಲ್ಲಿ ತಂದೆ-ಮಗನಿಗೆ ಹಲ್ಲೆ
Team Udayavani, Aug 3, 2018, 11:51 AM IST
ಬೆಂಗಳೂರು: ಇತ್ತೀಚೆಗೆ ಸಂಚಾರ ಪೇದೆ ರಸ್ತೆಯಲ್ಲಿ ಕಂಡ ಕಂಡ ವಾಹನ ಸವಾರರ ಮೇಲೆ ಲಾಠಿ ಬೀಸಿದ ಘಟನೆ ನಡೆದಿದ್ದ ಬೆನ್ನಲ್ಲೇ ಪಿಎಸ್‌ಐಯೊಬ್ಬರು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಪ್ರದರ್ಶಿಸಿರುವ ಘಟನೆ ನಡೆದಿದೆ.
ಜೇಬಿನಲ್ಲಿ ಕೈ ಹಾಕಿಕೊಂಡು ಮಾತನಾಡಿದಕ್ಕೆ ಆಕ್ರೋಶಗೊಂಡ ಬಾಣಸವಾಡಿ ಪಿಎಸ್‌ಐ ಮುರಳಿ, ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ಮಾಲೀಕ ಸತೀಶ್ ಆದಲ್ ಮತ್ತು ಇವರ ಪುತ್ರ ಸಾಮ್ಸನ್ ಮೇಲೆ ಶನಿವಾರ ಸಂಜೆ ಲಾಠಿ ಪ್ರಹಾರ ಮಾಡಿದ್ದು, ತಡೆವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ದಸಂಸ ಕಾರ್ಯಕರ್ತರು ಗುರುವಾರ ಬಾಣಸವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತಿಗೆ ಆಗ್ರಹಿಸಿದರು. ಲಿಂಗರಾಜಪುರದ ಜಾನಕಿರಾಮ್ ಲೇಔಟ್ ನಿವಾಸಿ ಸತೀಶ್ ಆದಲ್ ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ನಡೆಸುತ್ತಿದ್ದು, ಪುತ್ರ ಸಾಮ್ಸನ್ ಕೂಡ ಕಾಲೇಜು ಬಳಿಕ ತಂದೆಗೆ ಸಹಾಯ ಮಾಡುತ್ತಿದ್ದ.
ಕಳೆದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಬಾಣಸವಾಡಿ ಪಿಎಸ್‌ಐ ಮುರಳಿ ಹಾಗೂ ಪೇದೆ ಲೋಕೇಶ್ ಗಸ್ತು ತಿರುಗುತ್ತಿದ್ದರು. ಈ ವೇಳೆ ಸತೀಶ್ ತಮ್ಮ ಎರಡು ಬೈಕ್‌ಗಳನ್ನು ಅಂಗಡಿ ಎದುರು ನಿಲ್ಲಿಸಿಕೊಂಡಿದ್ದರು. ಇದನ್ನು ಕಂಡ ಪಿಎಸ್‌ಐ ಬೈಕ್‌ಗಳು ಯಾರದ್ದು ಎಂದು ಪ್ರಶ್ನಿಸಿದ್ದಾರೆ.
ಅಂಗಡಿಯಲ್ಲಿದ್ದ ಸತೀಶ್ ತಮ್ಮದೇ ಎಂದಿದ್ದಾರೆ. ದಾಖಲೆ ತೋರಿಸಿ ಎಂದಾಗ ಒಂದು ಬೈಕ್‌ನ ದಾಖಲೆ ತೋರಿಸಿದ ಸತೀಶ್ ಇನ್ನೊಂದು ಬೈಕ್ ಸರ್ವಿಸ್‌ಗೆ ಬಿಡಲಾಗಿತ್ತು. ಹೀಗಾಗಿ ದಾಖಲ ಮನೆಯಲ್ಲಿವೆ ಎಂದಿದ್ದಾರೆ. ಈ ವೇಳೆ ಸತೀಶ್ ಒಂದು ಕೈಯಲ್ಲಿ ಅಂಗಡಿ ಎದುರಿನ ಕಂಬಿ ಹಿಡಿದುಕೊಂಡು ಮತ್ತೂಂದು ಕೈಯನ್ನು ಜೇಬಿನಲ್ಲಿ ಹಾಕಿಕೊಂಡು ಪಿಎಸ್‌ಐಗೆ ಉತ್ತರಿಸುತ್ತಿದ್ದರು.
ಇದರಿಂದ ಆಕ್ರೋಶಗೊಂಡ ಪಿಎಸ್‌ಐ “ನನ್ನ ಎದುರೇ ಜೇಬಿಗೆ ಕೈ ಹಾಕಿಕೊಂಡು ಮಾತನಾಡುತ್ತಿಯಾ’ ನಿಂದಿಸಿದ್ದಾರೆ. ಇದಕ್ಕೆ ಸತೀಶ್, ನಾನು ಡಯಾಲಿಸಿಸ್ ರೋಗಿ ಕೈ ನಡುಗುತ್ತವೆ, ಹೀಗಾಗಿ ಜೇಬಿನಲ್ಲಿ ಕೈ ಹಾಕಿಕೊಂಡಿದ್ದೇನೆ ಎಂದು ಮನವಿ ಮಾಡಿದರೂ, ಪಿಎಸ್‌ಐ ಸುಳ್ಳು ಹೇಳುತ್ತಿಯಾ ಎಂದು ಹಲ್ಲೆ ನಡೆಸಿದ್ದಾರೆ.
ಪುತ್ರನ ಮೇಲೂ ಹಲ್ಲೆ: ಇದನ್ನು ಕಂಡ ಪುತ್ರ ಸಾಮ್ಸನ್ ಅಂಗಡಿಯಿಂದ ಹೊರಬಂದು ತಂದೆ ಸ್ಥಿತಿ ವಿವರಿಸಿ, ಹಲ್ಲೆ ನಡೆಸದಿರಲು ಮನವಿ ಮಾಡಿದ್ದಾನೆ. ಇನ್ನಷ್ಟು ಕೋಪಗೊಂಡ ಮುರಳಿ ಈತನ ಮೇಲೂ ಹಲ್ಲೆ ನಡೆಸಿದ್ದಾರೆ. ಠಾಣೆಗೆ ಕರೆದೊಯ್ದು ತಂದೆ-ಮಗನ ಮೇಲೆ ಲಾಠಿ ಪ್ರಹಾರ ಮಾಡಿದ್ದು, ಪರಿಣಾಮ ಬಾಸುಂಡೆಗಳು ಬಿಂದಿವೆ. ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದಾರೆ.
ವಿಚಾರ ತಿಳಿದು ಠಾಣೆಗೆ ಹೋದ ಸತೀಶ್ ಪತ್ನಿ, ಸಂಬಂಧಿಕರ ಜತೆ ಕೂಡ ಪಿಎಸ್‌ಐ ಮುರಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆಕೆಯನ್ನೂ ಮುರಳಿ ಬೆದರಿಸಿ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಂದೆ-ಮಗ ಗುರುವಾರ ದಸಂಸ ಸಂಘಟನೆ ಜೊತೆಗೂಡಿ ಅಧಿಕಾರಿ ಅಮಾನತಿಗೆ ಪ್ರತಿಭಟನೆ ನಡೆಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಜಪ್ತಿ ಮಾಡಿದ ಬೈಕ್‌ಗಳನ್ನು ಬಿಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಹಲ್ಲೆ ಆಗಿಲ್ಲ. ಆದರೂ ಘಟನೆ ಕುರಿತು ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
-ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಿಭಾಗ
ಪಿಎಸ್‌ಐ ಮುರಳಿ ದೌರ್ಜನ್ಯದ ವಿರುದ್ಧ ಸಂಘಟನೆಯಿಂದ ಆರೋಪಿತ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಲಾಗಿದೆ.
-ವೇದಮಾಣಿಕ್ಯಂ, ದಲಿತ ಸಂಘಟನೆ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.