ಮುರಳಿ ಆರಾಧನೆಗೆ ಜನಮನ ಸಜ್ಜು
Team Udayavani, Aug 14, 2017, 12:04 PM IST
ಬೆಂಗಳೂರು: ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಕೊಂಡಾಡುವ ಶ್ರೀಕೃಷ್ಣ ಜನ್ಮಾಷ್ಟಮಿಯು ಇಂದು ಮತ್ತು ನಾಳೆ (ಆ.14 ಮತ್ತು15) ನಗರದಾದ್ಯಂತ ವೈಭವದಿಂದ ನಡೆಯಲಿದೆ. ದೇವಸ್ಥಾನದಲ್ಲಿ ಕೃಷ್ಣಪೂಜೆಯಾದರೇ, ಸಂಘಸಂಸ್ಥೆಗಳಿಂದ ಮುದ್ಧುಕೃಷ್ಣ, ರಾಧಾಕೃಷ್ಣ, ಮೊಸರು ಕುಡಿಕೆ ಒಡೆಯುವುದು ಹೀಗೆ ನಾನಾ ರೀತಿಯ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ, ಭಜನೆ, ಪ್ರವಚನ ಇತ್ಯಾದಿ ನೆರವೇರಲಿದೆ.
ಬಹುತೇಕ ಮನೆಗಳಲ್ಲಿ ರೂಢಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಕೃಷ್ಣನ ಮೂರ್ತಿ ಕೂರಿಸಿ, ಆತನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಕಜ್ಜಾಯ ಹೀಗೆ ಬಗೆ ಬಗೆಯ ತಿನಿಸುಗಳ ನೈವೆದ್ಯ ಮಾಡಲಿದ್ದಾರೆ. ಮನೆ ಮುಂದೆ ರಂಗೋಲಿ ಹಾಕುವುದು, ಮುತ್ತೈದೆಯರಿಗೆ ಅರಸಿನ ಕುಂಕುಮ ನೀಡುವುದು, ಮಕ್ಕಳಿಗೆ ಪ್ರಸಾದ ವಿತರಣೆಯೂ ನಡೆಯಲಿದೆ.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ಮಂದಿರ, ಇಂದಿರಾನಗರ ಶ್ರೀಕೃಷ್ಣ ದೇವಸ್ಥಾನ, ಶ್ರೀ ಪೂರ್ಣಪ್ರಜ್ಞಾ ವಿದ್ಯಾಪೀಠ, ಪುತ್ತಿಗೆ ಮಠದ ಗೋವರ್ಧನ ಪೀಠ, ಚಿಕ್ಕಲಾಲ್‌ಬಾಗ್‌ನ ತುಳಸಿವನಂ ಸೇರಿದಂತೆ ನಗರದ ಶ್ರೀ ಕೃಷ್ಣ ದೇವಸ್ಥಾನ, ಮಠಗಳಲ್ಲಿ ಧಾರ್ಮಿಕ ವಿಧಿ ವಿಧಾನ ಮತ್ತು ಅದ್ಧೂರಿಯ ಕಾರ್ಯಕ್ರಮದೊಂದಿಗೆ ಎರಡು ದಿನಗಳ ಕೃಷ್ಣಜನ್ಮಾಷ್ಟಮಿ ಸಂಪನ್ನಗೊಳ್ಳಲಿದೆ.
ಇಸ್ಕಾನ್ ದೇವಸ್ಥಾನದಲ್ಲಿ ಎರಡು ದಿನಗಳು ನಿರಂತವಾಗಿ ಶ್ರೀ ಕೃಷ್ಣ ದೇವರ ಸಂಕೀರ್ತನೆ, ಹಾಡು, ಭಜನೆಯ ಜತೆ ಜತೆಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಮೆರವಣಿಗೆ ನಡೆಯಲಿದೆ. ಚಿಕ್ಕಲಾಲ್‌ಬಾಗ್‌ನ ತುಳಸಿವನಂನಲ್ಲಿ ಅಷ್ಟೋತ್ತರ ರಜತ ಕಳಶಾಭಿಷೇಕ, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕೃಷ್ಣ ಗುರುರಾಜ ಸನ್ನಿಧಿಯಲ್ಲಿ 1,500 ವೈದಿಕರಿಂದ ಕೋಟಿ ತುಳಸಿ ನಾಮಾರ್ಚನೆ ನಡೆಯಲಿದೆ.
ಇಸ್ಕಾನ್‌ನಲ್ಲಿ ಕೃಷ್ಣಲೀಲೋತ್ಸವ: ಇಸ್ಕಾನ್‌ನಲ್ಲಿ ಬೆಳಗ್ಗೆ 4.15 ಮಹಾಮಂಗಳಾರತಿ, ನಂತರ 7.15 ದೇವರಿಗೆ ಹೊಸ ಬಟ್ಟೆ, ಚಿನ್ನಾಭರಣ ಅಲಂಕಾರದ ನಂತರ ಸಿಂಗಾರ ಆರತಿ, ಅಷ್ಟೋತ್ತರ ಪೂಜೆ, ಬೆಳಗ್ಗೆಯಿಂದ ರಾತ್ರಿಯವರೆಗೆ ನಾಲ್ಕು ಬಗೆಯ ಅಭಿಷೇಕ, ರಾಜಬೋಗ ಆರತಿ ಮತ್ತು ಸಂಗೀತೋತ್ಸವ ಇರುತ್ತದೆ. ಇದೇ ಮೊದಲ ಬಾರಿಗೆ ಇಸ್ಕಾನ್ ವತಿಯಿಂದ ಅರಮನೆ ಮೈದಾನದಲ್ಲಿ ಕೃಷ್ಣಜನ್ಮಾಷ್ಟಮಿ ಹಮ್ಮಿಕೊಳ್ಳಲಾಗಿದೆ.
10 ಸಾವಿರ ಮಕ್ಕಳಿಗೆ ಹ್ಯಾರಿಟೇಜ್ ಹಬ್ಬ, ತಾಯಂದಿರಿಗೆ ವಾತ್ಸಲ್ಯ ಸ್ಪರ್ಧೆ, ಹರಿಹರಪುರ ಪ್ರಸಿದ್ಧ ತಂಡದಿಂದ 30 ಅಡಿ ರಂಗೋಲಿ, ಶ್ರೀಕೃಷ್ಣಬಲರಾಮರ ಉತ್ಸವ ಮೂರ್ತಿಗೆ ಅಭಿಷೇಕ, ವಿದ್ಯಾರ್ಥಿಗಳಿಂದ ಬ್ಯಾಂಡ್ ವಾದನ, ಮಡಿಕೆ ಒಡೆಯುವ ಸ್ಪರ್ಧೆಯ ಜತೆಗೆ 60 ಅಡಿಯ ವೇಣುಗೋಪಾಲ ಫೋಟೋ ಚಿತ್ರ ಪ್ರದರ್ಶನ ಇರುತ್ತದೆ.
2 ಲಕ್ಷ ಲಾಡು: ಉತ್ಸವದ ಅಂಗವಾಗಿ ಇಸ್ಕಾನ್‌ನಿಂದ 1 ಲಕ್ಷಮಂದಿಗೆ ಪ್ರಸಾದ ವಿತರಣೆಗೆ ಎರಡು ಲಕ್ಷ ಲಾಡು ಹಾಗೂ ಅಂದಾಜು 15 ಟನ್ ಸಿಹಿ ಪೊಂಗಲ್ ತಯಾರಿಸಿದೆ. ಭಕ್ತರಿಗೆ ಲಾಡು ಹಾಗೂ ಪೊಂಗಲ್ ವಿತರಣೆಯಾಗಲಿದ್ದು, ದೇವರ ದರ್ಶನಕ್ಕೆ ಬೇಕಾದ ಎಲ್ಲ ವ್ಯವಸ್ಥೆಯ ಜತೆಗೆ, ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.
ಇಸ್ಕಾನ್ ಸುತ್ತ ಸಂಚಾರ ಮಾರ್ಗ ಬದಲು
ಇಸ್ಕಾನ್ ಮಂದಿರದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯುವ ಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ.
ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಹಲವಾರು ಸ್ಥಳಗಳಿಂದ ಗಣ್ಯವ್ಯಕ್ತಿಗಳು, ಸಾರ್ವಜನಿಕರು, ಭಕ್ತಾದಿಗಳು ವಾಹನಗಳ ಮೂಲಕ ಆಗಮಿಸುವುದರಿಂದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸಂಚರಿಸುವ ನಿತ್ಯದ ವಾಹನಗಳ ಜತೆಗೆ ಇಸ್ಕಾನ್‌ಗೆ ಆಗಮಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚರಿಸುವ ಅನಿವಾರ್ಯತೆ ಇದೆ. ಹೀಗಾಗಿ ಆ.14 ಮತ್ತು 15ರಂದು ಸುಗಮ ಸಂಚಾರಕ್ಕಾಗಿ ಮತ್ತು ಸೂಕ್ತ ರೀತಿಯ ಸಂಚಾರ ಬಂದೋ ಬಸ್ತ್ ಮಾಡಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಂಡು ತಾತ್ಕಾಲಿಕವಾಗಿ ಇಸ್ಕಾನ್ ಮಂದಿರಕ್ಕೆ ಆಗಮಿಸುವ ವಾಹನಗಳ ನಿಲುಗಡೆ ವ್ಯವಸ್ಥೆ ಮತ್ತು ವಾಹನಗಳ ಸಂಚಾರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ತುಮಕೂರು ರಸ್ತೆ ಕಡೆಯಿಂದ-ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಮಾರಪ್ಪನಪಾಳ್ಯದಲ್ಲಿ ನೇರವಾಗಿ ಸಂಚರಿಸಿ-ಯಶವಂತಪುರ, ಬಿಎಚ್‌ಇಎಲ್, ಮಾರಮ್ಮ ಸರ್ಕಲ್-ಬೆಂಗಳೂರು ನಗರದ ಕಡೆ ಸಂಚರಿಸಬಹುದಾಗಿದೆ. ಇಸ್ಕಾನ್ ದೇವಾಲಯಕ್ಕೆ ಆಗಮಿಸುವ ವಾಹನಗಳಿಗೆ-ವಿವಿಐಪಿ ಪಾರ್ಕಿಂಗ್ ಇಸ್ಕಾನ್‌ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಹಾಲಕ್ಷಿ ಲೇಔಟ್, ಜ್ಯೂಸ್ ಫ್ಯಾಕ್ಟರಿ ಮೈದಾನದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಪೈಪ್‌ಲೈನ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ, ಮೆಟ್ರೋ ಕೆಳ ಭಾಗದ ರಸ್ತೆಯಲ್ಲಿ ನಾಲ್ಕು, ದ್ವಿಚಕ್ರ ವಾಹನಗ ನಿಲುಗಡೆಗೆ ಕಲ್ಪಿಸಲಾಗಿದೆ. ಎರಡು ದಿನಗಳು ಮಾತ್ರ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಗೆ ಎಲ್ಲಾ ಮಾದರಿಯ ವಾಹನ ಚಾಲಕರು ಮತ್ತು ಸವಾರರು ಈ ಮೇಲ್ಕಂಡ ರಸ್ತೆಯಲ್ಲಿ ಸಂಚರಿಸದೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ನಗರ ಪೊಲೀಸರು ಮನವಿ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಬ್ಬ
ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಇದಕ್ಕೂ ಮೊದಲು ಮಧ್ಯಾಹ್ನ 3 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳ ಕಲೆಗಳ ಪ್ರದರ್ಶನದೊಂದಿಗೆ ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆ ರವೀಂದ್ರ ಕಲಾಕ್ಷೇತ್ರ ತಲುಪಲಿದೆ. ಸಂಜೆ ನಾಲ್ಕು ಗಂಟೆಗೆ ಶ್ವೇತಾ ಪ್ರಭು ಮತ್ತು ಕಲಾ ತಂಡದಿಂದ ಸುಗಮ ಸಂಗೀತ ನಡೆಯಲಿದ್ದು. ಇದಾದ ಬಳಿಕ ಶ್ರೀಕೃಷ್ಣನ ಕುರಿತ ನೃತ್ಯ ರೂಪಕವನ್ನು ರಕ್ಷಾ ಜಯರಾಮ್ ತಂಡ ಪ್ರಸ್ತುತ ಪಡಿಸಲಿದೆ.
ಸಂಜೆ 5 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉಧಾ^ಟಿಸಲಿದ್ದು, ಕೇಂದ್ರ ಸಚಿವ ಅನಂತಕುಮಾರ್, ಸಚಿವರಾದ ಉಮಾಶ್ರೀ, ಕೆ.ಜೆ ಜಾರ್ಜ್, ಮೇಯರ್ ಪದ್ಮಾವತಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ಎನ್ ಮುನಿಕೃಷ್ಣ “ಶ್ರೀಕೃಷ್ಣನ ಜೀವನ ಹಾಗೂ ಸಂದೇಶ’ಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.