Bitcoin case: ತನಿಖೆ ಬಿಟ್ ಕಾಯಿನ್ ತಿಂದ ಅಧಿಕಾರಿಗಳು
Team Udayavani, Jan 26, 2024, 3:06 PM IST
ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ತನಿಖೆಯಲ್ಲಿ ಅಕ್ರಮ ಎಸಗಿರುವ ಬೆಂಗಳೂರಿನ ಆಡುಗೋಡಿ ಟಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ. ಎಂ.ಪ್ರಶಾಂತ್ ಬಾಬು ಹಾಗೂ ಖಾಸಗಿ ಕಂಪನಿಯ ಸೈಬರ್ ಪರಿಣಿತ ಕೆ.ಎಸ್.ಸಂತೋಷ್ ಕುಮಾರ್‌ನನ್ನು ವಿಶೇಷ ತನಿಖಾ ದಳದ (ಎಸ್ ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.
ಸಿಐಡಿ ವಿಭಾಗದಲ್ಲಿರುವ ಎಸ್‌ಐಟಿ ತಂಡದ ತನಿಖಾಧಿಕಾರಿ ಕೆ.ರವಿ ಶಂಕರ್ ನೀಡಿದ ದೂರಿನ ಆಧಾರದ ಮೇಲೆ ಎಚ್ ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಪ್ರೈ.ಲಿ.ನ ಸಿಇಒ ಕೆ.ಎಸ್. ಸಂತೋಷ್ ಕುಮಾರ್(ಎ1), ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ (ಎ2), ಚಂದ್ರಾಧರ್ (ಎ3), ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು (ಎ4), ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಕೆ.ಪೂಜಾರ್ (ಎ5) ವಿರುದ್ಧ ಸಿಐಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಂಧನಕ್ಕೊಳಗಾಗಿರುವ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸಂತೋಷ್ ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಸಿಐಡಿ ಅಧಿಕಾರಿಗಳ ಮನವಿ ಪುರಸ್ಕರಿಸಿದ ನ್ಯಾಯಾಲಯವು ಬಂಧಿತರನ್ನು ಜ.31ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಬಿಟ್‌ಕಾಯಿನ್ ಪ್ರಕರಣದಲ್ಲಿ ಆರು ತಿಂಗಳು ಕಳೆದಿದ್ದರೂ ಎಸ್‌ಐಟಿ ತಂಡವು ಇದುವರೆಗೆ ಒಬ್ಬರನ್ನೂ ಬಂಧಿಸಿರಲಿಲ್ಲ. 1.83 ಲಕ್ಷ ರೂ. ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿರುವ ಮಾಹಿತಿ ಸಿಕ್ಕಿದೆ. ಆರೋಪಿತ ತನಿಖಾಧಿಕಾರಿಗಳ ಉಳಿದ ಅಕ್ರಮಗಳ ಬಗ್ಗೆ ಎಸ್ ಐಟಿ ತಂಡ ಕೆದಕಲು ಶುರುಮಾಡಿದೆ.
ಸಿಐಡಿ ತನಿಖೆಯಲ್ಲಿ ಪತ್ತೆಯಾದ ಅಕ್ರಮಗಳ ವಿವರ: ಆರೋಪಿ ಸಂತೋಷ್ 2020ರ ಡಿ.30, 31 ಹಾಗೂ 2021 ಜ.6ರಂದು ತನ್ನ ಕಚೇರಿಯಲ್ಲಿ ರಾಬಿನ್ ಖಂಡೇಲ್‌ವಾಲ್‌ನ ಕ್ರಿಪ್ಟೋ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿ, ತನ್ನ ಕ್ರಿಪ್ಟೋ ವ್ಯಾಲೆಟ್‌ಗಳಿಗೆ ಸುಮಾರು 1,83,624 ರೂ. ಮೌಲ್ಯದ ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ. ಇತ್ತ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಾಧರ್ ಈ ಅಕ್ರಮಕ್ಕೆ ಸಹಕರಿಸಿದ್ದರು. 2020 ಡಿ.27 ರಂದು ಆರೋಪಿ ರಾಬಿನ್‌ನಿಂದ ವಶಪಡಿಸಿಕೊಂಡಿದ್ದ ಒನ್‌ಪ್ಲಸ್ 5ಟಿ ಮೊಬೈಲ್ ಅನ್ನು ಲಕ್ಷ್ಮೀಕಾಂತಯ್ಯ 2020 ಡಿ.30ರಂದು ಅನಧಿಕೃತವಾಗಿ ಬಳಸಿಕೊಂಡಿದ್ದರು. 2021ರ ಜ.5ರಂದು ರಾಬಿನ್ ಅನುಪಸ್ಥಿತಿಯಲ್ಲಿ ಪ್ರಶಾಂತ್ ಬಾಬು ಸೂಚನೆ ಮೇರೆಗೆ ಸಂತೋಷ್‌ನ ಕಚೇರಿಯ ಸಹಾಯಕ ಸಿಬ್ಬಂದಿಗಳು ಜಿಸಿಐಡಿ ಕಚೇರಿಯಲ್ಲೇ ಆರೋಪಿ ಶ್ರೀಕಿ ಹಾಗೂ ರಾಬಿನ್ ನ ಕೆಲವು ಕ್ರಿಪ್ಟೋ ವ್ಯಾಲೆಟ್‌ನ ಇ-ಮೇಲ್ ಐಡಿಗಳ ಬ್ಯಾಂಕ್ ಖಾತೆಗಳ ಯೂಸರ್ ನೇಮ್, ಪಾಸ್‌ವರ್ಡ್‌ಗಳನ್ನು ಯಾವುದೇ ದಾಖಲಾತಿ ಗಳಲ್ಲಿ ನಮೂದಿಸದೇ, ನ್ಯಾಯಾಲಯದ ಅನುಮತಿ ಪಡೆಯದೇ, ಪಂಚನಾಮೆ ಜರುಗಿಸದೇ ಅಕ್ರಮವಾಗಿ ಬದಲಾಯಿಸಿದ್ದರು.
ಕೃತ್ಯ ಎಸಗಲೆಂದೇ ಹೊಸ ಲ್ಯಾಪ್‌ಟಾಪ್ ಖರೀದಿ: ಪ್ರಶಾಂತ್ ಬಾಬು ಈ ಅಕ್ರಮ ಎಸಗಲೆಂದೇ 2020ರ ಡಿ.8ರಂದು 60 ಸಾವಿರ ರೂ. ಮೌಲ್ಯದ ಹೊಸ ಎಂಎಸ್‌ಐ ಲ್ಯಾಪ್‌ಟಾಪ್ ಖರೀದಿಸಿದ್ದರು. ಶ್ರೀಕಿ ವಶದಲ್ಲಿದ್ದಾಗ ತನಿಖಾಧಿಕಾರಿಗಳು ಆತನಿಗೆ ಈ ಲ್ಯಾಪ್‌ಟಾಪ್ ನೀಡಿ ಕೆಲವು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿಸಿದ್ದರು. ಜೊತೆಗೆ ಇತರೆ ಅಕ್ರಮ ಚಟುವಟಿಕೆ ಎಸಗಿರುವುದು ಸಿಐಡಿ ತಾಂತ್ರಿಕ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸಪೋರ್ಟ್ ಸೆಂಟರ್ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಪ್ರೈ. ಲಿ. ಕಚೇರಿಯಲ್ಲಿ ಈ ಎಂಎಸ್‌ಐ ಲ್ಯಾಪ್‌ಟಾಪ್‌ಗೆ ರಿಮೋಟ್ ಕನೆಕ್ಟ್ ಮಾಡಲಾಗಿತ್ತು. ಆ ವೇಳೆ ಆರೋಪಿ ಶ್ರೀಕಿ ತನ್ನ ಅಮೇಜಾನ್ ಸರ್ವರ್‌ಗಳಿಗೆ ಹಲವರು ಬಾರಿ ಭೇಟಿ ನೀಡಿದ್ದ. ಆದರೆ, ಅಮೇಜಾನ್ ಸರ್ವರ್ ನಲ್ಲಿರುವ ವ್ಯಾಲೆಟ್ ಫೈಲ್‌ಗಳ ಮಾಹಿತಿಯಾಗಲೀ, ವಿವರಗಳಾಗಲೀ ಪ್ರಕರಣದ ದಾಖಲಾತಿಗಳಲ್ಲಿ ನಮೂದಿಸದೇ ಸಾಕ್ಷ್ಯಗಳನ್ನು ಅಪಮೌಲ್ಯಗೊಳಿಸಿ ಬ್ಯಾಶ್ ಹಿಸ್ಟರಿಯನ್ನು ಕ್ಲಿಯರ್ ಮಾಡಿ ತನಿಖಾಧಿಕಾರಿಗಳು ಸಾಕ್ಷ್ಯ ನಾಶಪಡಿಸಿದ್ದರು.
ಶ್ರೀಕಿಯನ್ನು ಕೂಡಿ ಹಾಕಿದ್ದ ತನಿಖಾಧಿಕಾರಿಗಳು: ಬಿಟ್ ಕಾಯಿನ್ ಪ್ರಕರಣ ಸಂಬಂಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿಯಾಗಿದ್ದ ಆರೋಪಿ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ್ ಪ್ರಕರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇಲ್ ವಾಲ್‌ನನ್ನು 2020ರಲ್ಲಿ ಸಿಎಆರ್ ಅತಿಥಿ ಗೃಹ ಹಾಗೂ ಸಿಸಿಬಿ ಕಚೇರಿಯಲ್ಲಿ ಅಕ್ರಮವಾಗಿ ಅಕ್ರಮ ಬಂಧನದಲ್ಲಿರಿಸಿದ್ದರು. ಶ್ರೀಕಿ ಮತ್ತು ರಾಬಿನ್‌ನನ್ನು 2020ರ ಡಿಸೆಂಬರ್ ಹಾಗೂ 2021ರ ಜನವರಿಯಲ್ಲಿ ಹಲವಾರು ಬಾರಿ ಆನಧಿಕೃತವಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಖಾಸಗಿ ಸಂಸ್ಥೆ ಜಿಸಿಐಡಿ ಟೆಕ್ನಾಲಜೀಸ್ ಪ್ರೈ.ಲಿ.ಗೆ ತನಿಖಾಧಿಕಾರಿಗಳು ಕರೆದೊಯ್ದಿದ್ದರು. ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಪ್ರಕರಣಗಳಲ್ಲಿ ತಾಂತ್ರಿಕ ವಿಶ್ಲೇಷಣೆಗಾಗಿ ಆರೋಪಿ ಸಂತೋಷ್ ಕುಮಾರ್‌ನನ್ನು ತನಿಖಾಧಿಕಾರಿಗಳಿಗೆ ಪರಿಚಯಿಸಿದ್ದರು. ನಂತರ ತನಿಖೆಯಲ್ಲಿ ಸಂತೋಷ್‌ನನ್ನು ಬಳಸಿಕೊಳ್ಳಲಾಗಿತ್ತು.
ತನಿಖಾಧಿಕಾರಿಗಳಿಂದಲೇ ಸಾಕ್ಷ್ಯ ನಾಶ : 2021ರ ಜ.22ರಂದು ಶ್ರೀಕಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಲಭ್ಯ ಒದಗಿಸಿಕೊಟ್ಟು ಆತನನ್ನು ಸ್ವತಂತ್ರವಾಗಿ ಬಿಟ್ಟಿದ್ದ ಕಾರಣ ಆತ ತನ್ನ ಸ್ನೇಹಿತೆಗೆ ಈಮೇಲ್ ರವಾನಿಸಿದ್ದ. ಶ್ರೀಕಿ ವ್ಯಾಲೆಟ್‌ನಿಂದ ಸಂತೋಷ್ ಕುಮಾರ್ ವ್ಯಾಲೆಟ್‌ಗೆ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಳ್ಳಲು ತನಿಖಾಧಿಕಾರಿಗಳೇ ಅವಕಾಶ ಕಲ್ಪಿಸಿದ್ದಾರೆ. ಸಂತೋಷ್ ಕುಮಾರ್ ಹಾಗೂ ತನಿಖಾಧಿಕಾರಿಗಳು ತಾವು ಎಸಗಿರುವ ಅಕ್ರಮಗಳು ಬೆಳಕಿಗೆ ಬಂದರೆ ಮುಂದೆ ನಡೆಯಬಹುದಾದ ತನಿಖೆಗೆ ಸಾಕ್ಷ್ಯ ದೊರೆಯಬಾರದೆಂಬ ಉದ್ದೇಶದಿಂದಲೇ ಎಂಎಸ್‌ಐ ಲ್ಯಾಪ್‌ಟಾಪ್‌ನಲ್ಲಿ ಬ್ಯಾಶ್ ಹಿಸ್ಟರಿ ಡಿಲೀಟ್ ಮಾಡಿ, ಬಿಟ್ ಕಾಯಿನ್ ವರ್ಗಾವಣೆ ಮಾಡುವಾಗ ಮಿಕ್ಸರ್ ಬಳಸಿ ಸಾಕ್ಷ್ಯಧಾರ ನಾಶಪಡಿಸಿದ್ದಾರೆ.
ಏನಿದು ಬಿಟ್ ಕಾಯಿನ್ ಪ್ರಕರಣ? : 2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಈತ ಡಾರ್ಕ್‌ನೆಟ್‌ನಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿರುವುದು ಗೊತ್ತಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಲು ಹೋದಾಗ ಬಿಟ್ ಕಾಯಿನ್ ರೂವಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಸಿಕ್ಕಿಬಿದ್ದಿದ್ದ. ಶ್ರೀಕಿ ತನ್ನ ಸಹಚರರ ಜೊತೆ ಸೇರಿ ಸರ್ಕಾರಿ ವೆಬ್ ಸೈಟ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ಆ್ಯಪ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ದೋಚಿದ್ದರು ಎನ್ನಲಾಗಿದೆ.
ಹೆಚ್ಚಿನ ತನಿಖೆಗಾಗಿ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. 2023ರ ಜುಲೈನಲ್ಲಿ ಬಿಟ್‌ಕಾಯಿನ್ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಲಾಗಿತ್ತು. ಬಿಟ್‌ಕಾಯಿನ್ ಹಗರಣದಲ್ಲಿ ಇನ್ ಸ್ಪೆಕ್ಟರ್ ಹಾಗೂ ಖಾಸಗಿ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಪತ್ತೆಯಾದ ಸಾಕ್ಷ್ಯಾಧಾರದ ಮೇಲೆ ಎಸ್‌ಐಟಿ ತಂಡ ಇದರ ಜಾಲ ಭೇದಿಸುತ್ತಿದೆ. ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲು ಆಗುವುದಿಲ್ಲ. -ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.