ಲೋಕಸಭಾ ಚುನಾವಣಾ ಯಶಸ್ಸಿಗೆ 26 ಕಾರ್ಯಕ್ರಮ
Team Udayavani, Jan 14, 2019, 12:30 AM IST
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ವಿಶೇಷ ಸಭೆ ಭಾನುವಾರ ದೆಹಲಿಯಲ್ಲಿ ನಡೆದಿದ್ದು, ಚುನಾವಣೆಯಲ್ಲಿ ಯಶಸ್ಸು ಸಾಧಿಸಲು 26 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಜತೆಗೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 18 ಅಂಶದ ಕಾರ್ಯಕ್ರಮಗಳನ್ನು ನಡೆಸಿತ್ತು. ಈ ಬಾರಿ ಹೆಚ್ಚುವರಿಯಾಗಿ ಎಂಟು ಅಂಶಗಳನ್ನು ಸೇರ್ಪಡೆ ಮಾಡಿದ್ದು, ಮುಖ್ಯವಾಗಿ ಕೇಂದ್ರ ಸರ್ಕಾರದ ಸೌಲಭ್ಯಗಳು ತಲುಪಿರುವ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಸೆಳೆಯುವ ಕಾರ್ಯಕ್ಕೆ ಒತ್ತು ನೀಡುವಂತೆ ರಾಜ್ಯ ಬಿಜೆಪಿ ಜನಪ್ರತಿನಿಧಿಗಳಿಗೆ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮಧ್ಯಾಹ್ನ ಆಯೋಜನೆಯಾಗಿದ್ದ ವಿಶೇಷ ಸಭೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಉದ್ಘಾಟಿಸಿ ಮಾತನಾಡಿದರು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವು ಬಿಜೆಪಿಗೆ ಬಹುಮುಖ್ಯ ರಾಜ್ಯವಾಗಿದೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅವಕಾಶವಿದ್ದು, ಇಲ್ಲಿ ಸಾಧಿಸುವ ಯಶಸ್ಸು ದಕ್ಷಿಣ ಭಾರತದ ಇತರೆ ರಾಜ್ಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ರಾಜ್ಯದಲ್ಲಿ ಉತ್ತಮ ಸಾಧನೆ ತೋರಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಂಘಟಿತವಾಗಿ ಶ್ರಮಿಸುವ ಮೂಲಕ ಪಕ್ಷ ನೀಡುವ ಸೂಚನೆ ಪಾಲಿಸಬೇಕು ಎಂದು ಮುರಳೀಧರರಾವ್ ಸೂಚಿಸಿದರು ಎನ್ನಲಾಗಿದೆ.
20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ
ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಉದ್ದೇಶಿತ ಗುರಿಯಂತೆ ಸ್ಥಾನಗಳನ್ನು ಪಡೆಯಲು ಪೂರಕವಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಯಶಸ್ಸು ಸಾಧಿಸಲು ಕಾರ್ಯಕ್ರಮಪ್ರವೃತ್ತವಾಗಬೇಕು ಎಂದು ಕರೆ ನೀಡಿದರು ಎನ್ನಲಾಗಿದೆ.
ಹೊಸ ಕಾರ್ಯಕ್ರಮ
ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಗೊತ್ತುಪಡಿಸಿದ ದೇಶಾದ್ಯಂತ ಬೈಕ್‌ರ್ಯಾಲಿ ನಡೆಯಲಿದ್ದು, ರಾಜ್ಯದಲ್ಲೂ ದೊಡ್ಡ ಮಟ್ಟದಲ್ಲಿ ಬೈಕ್ ರ್ಯಾಲಿ ನಡೆಸಬೇಕು. ಪ್ರತಿ ಕಾರ್ಯಕರ್ತರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಶೇ.51ಕ್ಕಿಂತ ಹೆಚ್ಚು ಮತ ಗಳಿಸುವ ಸಂಕಲ್ಪ ಕೈಗೊಳ್ಳುವ ಕಾರ್ಯಕ್ರಮ ನಡೆಸಬೇಕು. ಒಬ್ಬ ಕಾರ್ಯಕರ್ತರಿಗೆ 10 ಮನೆಗಳ ಸಂಪರ್ಕ ಕಲ್ಪಿಸಿ ಅವರು ನಿರಂತರವಾಗಿ 10 ಕುಟುಂಬದೊಂದಿಗೆ ಸಂಪರ್ಕವಿಟ್ಟುಕೊಂಡು ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ತಿಳಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
“ಕಮಲ ಜ್ಯೋತಿ’ಗೆ ಆದ್ಯತೆ ನೀಡಿ
ಕಳೆದ ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ ನಾನಾ ಯೋಜನೆಗಳು ತಲುಪಿರುವ ಫಲಾನುಭವಿಗಳ ಮತಗಟ್ಟೆವಾರು ಮಾಹಿತಿಯನ್ನು ಕೇಂದ್ರದಿಂದಲೇ ಒದಗಿಸಲಿದ್ದು, ಅದರಂತೆ ಫಲಾನುಭವಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ತಮಗೆ ಸೌಲಭ್ಯ ಕಲ್ಪಿಸಿದ ಬಿಜೆಪಿಯನ್ನು ಬೆಂಬಲಿಸುವುದಾಗಿ ಗೊತ್ತುಪಡಿಸಿದ ದಿನ ಮನೆಯಲ್ಲಿ ದೀಪ ಬೆಳಗಿಸುವ ಕಮಲ ಜ್ಯೋತಿ ಕಾರ್ಯಕ್ರಮಕ್ಕೆ ವಿಶೇಷ ಆದ್ಯತೆ ನೀಡಬೇಕು. ಕಮಲ ಕಪ್ ಕಾರ್ಯಕ್ರಮದಡಿ ಸ್ಥಳೀಯವಾಗಿ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿ ಯುವಜನತೆಯನ್ನು ಸೆಳೆಯಬೇಕು ಎಂದು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಇತರರು ಪಾಲ್ಗೊಂಡಿದ್ದರು. ಅನಾರೋಗ್ಯ, ವೈಯಕ್ತಿಕ ಕಾರಣಗಳಿಂದ ಕೆಲ ಶಾಸಕರು, ಸಂಸದರು ಗೈರಾಗಿದ್ದರು ಎನ್ನಲಾಗಿದೆ.
ಸೋಮವಾರವೂ ಸಭೆ
ಸೋಮವಾರವೂ ದೆಹಲಿಯಲ್ಲಿ ರಾಜ್ಯ ಬಿಜೆಪಿ ಸಂಸದರು, ಶಾಸಕರ ಸಭೆ ಆಯೋಜನೆಯಾಗಿದೆ. ಬೆಳಗ್ಗೆ 11.30ಕ್ಕೆ ಸಭೆ ಆರಂಭವಾಗಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಬಳಿಕ ರಾಜ್ಯ ಲೋಕಸಭಾ ಕ್ಷೇತ್ರವಾರು ಶಾಸಕರು, ಪ್ರಮುಖರ ಸಭೆ ನಡೆಯಲಿದೆ. ಪಕ್ಷದ ಸಂಸದರು, ಶಾಸಕರು ಇಲ್ಲದ ಕಡೆ ಯಾವ ರೀತಿಯಲ್ಲಿ ಸಂಘಟನೆ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.