ಬಿಜೆಪಿ ಕಚೇರಿಯಲ್ಲಿ ದರ್ಶನಕ್ಕೆ ಜನಸಾಗರ
Team Udayavani, Nov 14, 2018, 11:52 AM IST
ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಾರ್ಯಾಲಯದ ಎದುರು ಜನ ಸಾಗರವೇ ಸೇರಿತ್ತು. ಲಾಲ್‌ಬಾಗ್ ಪಶ್ಚಿಮ ದ್ವಾರದ ಸಮೀಪದ ಅವರ ಮನೆಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಹೊರಟ ಪಾರ್ಥಿವ ಶರೀರದ ಮೆರವಣಿಗೆ 9.10ರ ಹೊತ್ತಿಗೆ ಬಿಜೆಪಿ ಕಚೇರಿ ತಲುಪಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ಮಾಜಿ ಉಪಮುಖ್ಯ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡರಾದ ಗೋವಿಂದ ಕಾರಜೋಳ, ವಿ.ಸುನಿಲ್ ಕುಮಾರ್ , ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಿದ್ದರು.
ಕೇಂದ್ರ ಸರ್ಕಾರದ ಸೇನಾ ಗೌರವದೊಂದಿಗೆ ಪಾರ್ಥಿವ ಶರೀರದ ಮೆರವಣಿಗೆ ಸೈನ್ಯದ ವಾಹನದಲ್ಲಿ ಮಿನರ್ವ ವೃತ್ತ, ಜೆ.ಸಿ.ರಸ್ತೆ, ಹಡ್ಸನ್ ವೃತ್ತ, ಮೈಸೂರ್ ಬ್ಯಾಂಕ್ ವೃತ್ತ, ಭಾರತ್ ಜಂಕ್ಷನ್ ಹಾಗೂ ಸಂಪಿಗೆ ರಸ್ತೆ ಮಾರ್ಗವಾಗಿ ಬಿಜೆಪಿ ಕಚೇರಿ ತಲುಪಿತ್ತು. ಈ ವೇಳೆಗೆ ಕಚೇರಿಯ ಸುತ್ತಲೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
ಪಾರ್ಥಿವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರತಿ ಸಾಲಿನಲ್ಲಿ ಹೋಗಲು ಬೇಕಾದ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಕಚೇರಿಯ ಎದುರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅನಂತಕುಮಾರ್ “ಅಮರ್ ರಹೇ’ ಎಂದು ಕೂಗುತ್ತಿದ್ದ ಜೈಕಾರ ಮುಗಿಲು ಮುಟ್ಟಿತ್ತು.
ಸುಮಾರು ಒಂದುಕಾಲುಗಂಟೆ ಬಿಜೆಪಿ ಕಾರ್ಯಾಲಯದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಿಜೆಪಿಯ ಹಿರಿಯ ಮುಖಂಡರು, ಶಾಸಕರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
ಮನ ಮೌನವಾಗಿದ್ದ ಕ್ಷಣ: ಹಿರಿಯ ನಾಯಕನ ಅಂತಿಮ ದರ್ಶನಕ್ಕಾಗಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಸಂಸದರು, ಕಾರ್ಯಕಾರಣಿ ಸದಸ್ಯರು ಹೀಗೆ ಪಕ್ಷದಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ನಾಯಕನ ಅಗಲಿಕೆಯ ಗೌರವಾರ್ಥ ಬಿಜೆಪಿ ಕಚೇರಿಯ ಎದುರು ಬಿಜೆಪಿ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು.
ಬಿಗಿ ಪೊಲೀಸ್ ಭದ್ರತೆ: ಬಿಜೆಪಿ ಕಾರ್ಯಾಲಯಕ್ಕೆ ಅನಂತ ಕುಮಾರ್ ಅವರ ಪಾರ್ಥಿವ ಶರೀರ ಬರುವ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಪ್ರಮುಖ ರಸ್ತೆ ಹಾಗೂ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಅಳವಡಿಸಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ಚೇತನ್ ರಾಥೋಡ್ ಅವರ ನೇತೃತ್ವದಲ್ಲಿ ಭದ್ರತ ಕಾರ್ಯ ಪರಿಶೀಲನೆಯೂ ನಡೆದಿತ್ತು.
ಅಂತಿಮ ದರ್ಶನ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ, ವಿಧಾನ ಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ವಿ.ಸುನಿಲ್‌ಕುಮಾರ್, ಲಾಲಾಜಿ ಆರ್.ಮೆಂಡೆನ್, ಸುಕುಮಾರ ಶೆಟ್ಟಿ, ಹರೀಶ್ ಪುಂಜಾ, ಸಂಜೀವ್ ಮಟ್ಟಂದೂರು, ರೂಪಾಲಿ ನಾಯಕ್ ಮೊದಲಾದ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಳಗಳ ಪ್ರಮುಖರು ಅಂತಿಮ ದರ್ಶನ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.