ಬೆಂಗಳೂರಿಗಾಗಿ ಬಿಜೆಪಿ ಪ್ರತ್ಯೇಕ ಪ್ರಣಾಳಿಕೆ
Team Udayavani, May 9, 2018, 12:55 PM IST
ಬೆಂಗಳೂರು: ಬೆಂಗಳೂರಿಗಾಗಿಯೇ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ನವ ಬೆಂಗಳೂರಿಗಾಗಿ ವಿಶೇಷ ಶಾಸನ ರೂಪಿಸಲಾಗುವುದು ಹಾಗೂ ಜನರ ಕೈಗೇ ನಗರದ ಆಡಳಿತ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಪ್ರತಿ ವರ್ಷ ತನ್ನ ಸಾಧನಾ ವರದಿಯನ್ನೂ ಜನರ ಮುಂದಿಡಲಾಗುವುದು ಎಂದು ವಾಗ್ಧಾನ ಮಾಡಿದೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಮಾಜಿ ಸಚಿವರಾದ ಆರ್. ಅಶೋಕ್, ಎಸ್. ಸುರೇಶ್‌ಕುಮಾರ್, ಶಾಸಕ ಡಾ.ಅಶ್ವತ್ಥ್ನಾರಾಯಣ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಗರಕ್ಕಾಗಿ ರೂಪಿಸಲಾಗುವ “ಬೆಂಗಳೂರು ಮಹಾನಗರ ಪ್ರಾದೇಶಿಕ ಆಡಳಿತ ಕಾಯ್ದೆ’ ಅಡಿ ಯೋಜನಾ ಸಮಿತಿ ರಚಿಸಲಾಗುವುದು. ಕಾನೂನು ಉಲ್ಲಂ ಸಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ.
ರಾಣಿ ಚೆನ್ನಮ್ಮ ಪಡೆ: ಲೈಂಗಿಕ ದೌರ್ಜನ್ಯ, ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳಿಂದ ನಗರದ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದ್ದು, ಇದನ್ನು ದೂರ ಮಾಡುವ ನಿಟ್ಟಿನಲ್ಲಿ ರಾಣಿ ಚೆನ್ನಮ್ಮ ಪಡೆ ರಚಿಸಲಾಗುವುದು. ಸೂಕ್ಷ್ಮ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಸೂಚಿಸಲಾಗಿದೆ.
ಆರೋಗ್ಯಕ್ಕೆ ವಿಶೇಷ ಒತ್ತು ನೀಡಲಾಗಿದ್ದು, “ಆಯುಷ್ಮಾನ್ ಭಾರತ’ದ ಮಾದರಿಯಲ್ಲಿ “ಆಯುಷ್ಮಾನ್ ಬೆಂಗಳೂರು’ ರೂಪಿಸಲಾಗುವುದು. ಇದರಡಿ ದಿನದ 24 ಗಂಟೆ ಕಾರ್ಯನಿರ್ವಹಿಸುವ 28 ಸ್ಮಾರ್ಟ್ ಕ್ಲಿನಿಕ್‌ಗಳು ಮತ್ತು 10 ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಈ ಮೂಲಕ ಇದರಡಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲಾಗುವುದು. ಪ್ರಾಥಮಿಕ ಆರೋಗ್ಯ ಸೇವೆಗಾಗಿ “ಆಯುಷ್ಮಾನ್ ಕ್ಲಿನಿಕ್’ ತೆರೆಯಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ “ಆರೋಗ್ಯ ಬುಲೆಟಿನ್’ ಪ್ರಕಟಿಸಲಾಗುವುದು.
ಕಾನೂನಾತ್ಮಕ ಹಕ್ಕು: ನಗರದ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕರೂ ತೊಡಗಿಕೊಳ್ಳಲು ಪ್ರತಿ ವಾರ್ಡ್ ಸಮಿತಿಯಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ಕಲ್ಪಿಸಲಾಗುವುದು. ಅಷ್ಟೇ ಅಲ್ಲ, ಈ ವಾರ್ಡ್ ಸಮಿತಿಗಳು ಮತ್ತು ನಾಗರಿಕರಿಗೆ ಕಾನೂನಾತ್ಮಕ ಹಕ್ಕು ಕಲ್ಪಿಸಲಾಗುವುದು. ಬಿಬಿಎಂಪಿ, ಜಲಮಂಡಳಿ, ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳ ಸೇವೆಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ತಂದು, ನಾಗರಿಕ ಸೇವಾ ಕೇಂದ್ರ ತೆರೆಯಲಾಗುವುದು.
ಎಲ್ಲರಿಗೂ ಸೂರು: ಕೆಂಪೇಗೌಡ ವಸತಿ ಯೋಜನೆ ರೂಪಿಸಲು ಉದ್ದೇಶಿಸಿದ್ದು, ಇದರಡಿ ನಗರದ ಬಡತನ ರೇಖೆಗಿಂತ ಕೆಳಗಿರುವವರೆಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು. ನಗರದ ಎಲ್ಲ ವಾರ್ಡ್‌ಗಳಲ್ಲೂ ದಿನದ 24 ಗಂಟೆ ನೀರು ಪೂರೈಕೆ, ಕಸ ಸಮಸ್ಯೆಗೆ ಸಮರ್ಪಕ ನೀತಿ ಮತ್ತು ಕಾನೂನಿನ ಮೂಲಕ ತ್ವರಿತ ಪರಿಹಾರ, ನಗರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ www.bengaluru.gov ವೆಬ್‌ಸೈಟ್ ಆರಂಭಿಸಲಾಗುವುದು ಎನ್ನುವುದು ಸೇರಿದಂತೆ 19 ಪುಟಗಳ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ ಹರಿಸಲಾಗಿದೆ.
ಬಿಎಂಟಿಸಿ, “ನಮ್ಮ ಮೆಟ್ರೋ’ ಮತ್ತು ಉಪನಗರ ರೈಲು ಸೇವೆಯನ್ನು ಒಂದೇ ವೇದಿಕೆಯಲ್ಲಿ ತಂದು, ಉತ್ತಮ ಸೇವೆ ಕಲ್ಪಿಸಲು “ಬೆಂಗಳೂರು ಮಹಾನಗರ ಸಾರಿಗೆ ಪ್ರಾಧಿಕಾರ’ ರಚಿಸಲಾಗುವುದು. ಉಪನಗರ ರೈಲು ಯೋಜನೆ ತ್ವರಿತಗತಿಯಲ್ಲಿ ಸಾಗಲು “ಬಿ-ರೈಡ್’ ಅಸ್ತಿತ್ವಕ್ಕೆ ತರಲಾಗುವುದು ಎಂದು ಬಿಜೆಪಿಯು ಪ್ರಣಾಳಿಕೆಯಲ್ಲಿ ತಿಳಿಸಿದೆ.
“3ಜಿ’ಯಿಂದ ಮುಕ್ತ!: ನಗರವನ್ನು “3ಜಿ’ (ಗೂಂಡಾ, ಗುಂಡಿ ಮತ್ತು ಗಾರ್ಬೆಜ್)ಯಿಂದ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ಭರವಸೆ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅಪವಿತ್ರ ಮೈತ್ರಿಯಿಂದ ಬಿಬಿಎಂಪಿ ದುರಾಡಳಿತದಿಂದ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆ. ರಾಷ್ಟ್ರಮಟ್ಟದಲ್ಲಿ 2ಜಿ, ಸಿಜಿ (ಕೋಲ್ ಗೇಟ್) ಇರುವಂತೆಯೇ ನಗರವು “3ಜಿ’ಯಿಂದ ನಲುಗಿದೆ. ಈ ಸಮಸ್ಯೆಯಿಂದ ನಾಗರಿಕರಿಗೆ ಮುಕ್ತಿ ನೀಡುವ ಸಂಕಲ್ಪ ಬಿಜೆಪಿಯ ಮೊದಲ ಆದ್ಯತೆ ಆಗಲಿದೆ. ಈ ನಿಟ್ಟಿನಲ್ಲಿ ನಾಗರಿಕರ ಸಹಭಾಗಿತ್ವದಲ್ಲಿ ನಗರದ ಆಡಳಿತ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.
ಬಿಬಿಎಂಪಿ ಒಡೆಯಲು ಬಿಡೋಲ್ಲ: ಪ್ರಾಣ ಹೋದರೂ ಬೆಂಗಳೂರು ಒಡೆಯಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್ ರಾಜ್ಯ ದೊಡ್ಡದಿದೆ ಎಂದು ಒಡೆಯಲು ಆಗುತ್ತದೆಯೇ? ಯಾವುದೇ ಕಾರಣಕ್ಕೂ ಪಾಲಿಕೆ ಒಡೆಯಲು ಬಿಡುವುದಿಲ್ಲ. ಮೂರು-ನಾಲ್ಕು ಮೇಯರ್‌ಗಳು ಮತ್ತು ಅದಕ್ಕಿಂತ ಹೆಚ್ಚು ಆಯುಕ್ತರು ಇದ್ದರೂ ಒಬ್ಬರು ಸೂಪರ್ ಮೇಯರ್ ಇರಲೇಬೇಕಾಗುತ್ತದೆ. ಪ್ರಾಣ ಹೋದರೂ ಒಡೆಯಲು ಬಿಡುವುದಿಲ್ಲ ಎಂದು ಪುನರುತ್ಛರಿಸಿದರು. ಮೇಯರ್ ಅವಧಿ ವಿಸ್ತರಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಿಯಮ ಬದಲಾವಣೆ ಆಲೋಚನೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.