ಬಿಜೆಪಿ ಹ್ಯಾಟ್ರಿಕ್ ಗೆಲುವಿನಾಸೆ ತಡೆಯುವುದೇ ತ್ರಿಕೋನ ಸ್ಪರ್ಧೆ?
Team Udayavani, Apr 30, 2018, 12:31 PM IST
ಬೆಂಗಳೂರು: ದಶಕದಿಂದ ಬಿಜೆಪಿಯ ಭದ್ರಕೋಟೆ ಎನಿಸಿರುವ ಸರ್ ಸಿ.ವಿ.ರಾಮನ್ ನಗರ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ತ್ರಿಕ್ರೋನ ಸ್ಪರ್ಧೆ ಏರ್ಪಟ್ಟಿದೆ.
2008ರಲ್ಲಿ ವರ್ತೂರು ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಕ್ಷೇತ್ರವಾದ ನಂತರ ಸಿ.ವಿ.ರಾಮನ್‌ನಗರದಿಂದ ಎರಡು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ಎಸ್.ರಘು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪಿ.ರಮೇಶ್ ಹಾಗೂ ಕಾಂಗ್ರೆಸ್ ಟಿಕೆಟ್ ಪಡೆದಿರುವ ಬಿಬಿಎಂಪಿ ಹಾಲಿ ಮೇಯರ್ ಆರ್.ಸಂಪತ್‌ರಾಜ್ ಈ ಬಾರಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.
ಕ್ಷೇತ್ರದ ವ್ಯಾಪ್ತಿಗೆ ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಜೀವನ್‌ಭಿಮಾ ನಗರ, ಕೊನೇನ ಅಗ್ರಹಾರ ವಾರ್ಡ್‌ಗಳು ಬರಲಿದ್ದು, ಕಾಂಗ್ರೆಸ್‌ನ 2, ಬಿಜೆಪಿಯ 3 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದು, ಇಬ್ಬರೂ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಒಕ್ಕಲಿಗ, ರೆಡ್ಡಿ ಪ್ರಾಬಲ್ಯ: ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಸಿ.ವಿ.ರಾಮನ್‌ನಗರದಲ್ಲಿ ಅನ್ಯ ಭಾಷಿಕರು ಹೆಚ್ಚಾಗಿದ್ದಾರೆ. ಅದರಲ್ಲಿಯೂ ತಮಿಳು ಭಾಷಿಕರು, ಉಪ್ಪಾರ ಹಾಗೂ ಮುಸ್ಲಿಂ ಸಮುದಾಯದ 1 ಲಕ್ಷಕ್ಕೂ ಅಧಿಕ ಮತಗಳಿವೆ. ವಲಸಿಗರೊಂದಿಗೆ ಸರ್ಕಾರಿ ಇಲಾಖೆಗಳ ನೌಕರರು, ಎಲ್‌ಐಸಿ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕ್ಷೇತ್ರದಲ್ಲಿ 80 ಸಾವಿರದಷ್ಟಿರುವ ಒಕ್ಕಲಿಗರು ಹಾಗೂ ರೆಡ್ಡಿ ಸಮುದಾಯದವರು ಪ್ರಾಬಲ್ಯ ಹೊಂದಿದ್ದು, ಈ ಮತಗಳೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ.
ಕಳೆದ ಐದು ವರ್ಷಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯದಿದ್ದರೂ, ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಾಲೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿರುವುದು ಹಾಗೂ ನಿರಂತರವಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿರುವುದರಿಂದ ಕ್ಷೇತ್ರದ ಜನರು ಕೈಬಿಡುವುದಿಲ್ಲ ಎಂಬುದು ರಘು ಅವರ ವಿಶ್ವಾಸ.
ಇನ್ನು ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿರುವ ಹಾಗೂ ಕಾಂಗ್ರೆಸ್ ಟಿಕೆಟ್ ದೊರೆಯದೆ ಜೆಡಿಎಸ್ ಸೇರಿರುವ ರಮೇಶ್, ಸೋತರೂ ಕ್ಷೇತ್ರದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ತಮಗೆ ಮತ ನೀಡಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.
ಬಿಬಿಎಂಪಿ ಇತಿಹಾಸದಲ್ಲೇ ನಗರದ ಅಭಿವೃದ್ಧಿಗೆ ಯಾವುದೇ ಸರ್ಕಾರದ ನೀಡದಷ್ಟು ಅನುದಾನವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜತೆಗೆ ನಗರದ ಜನತೆಗೆ ಮೂಲ ಸೌಕರ್ಯ ಒದಗಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಜನರೆ ಈ ಬಾರಿ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಮೇಯರ್ ಸಂಪತ್‌ರಾಜ್ ಅವರದ್ದು.
ಕಳೆದ ಬಾರಿ ಹರಸಾಹಸ ಪಟ್ಟು ಟಿಕೆಟ್ ಗಿಟ್ಟಿಸಿಕೊಂಡು, ಬಿಜೆಪಿಯ ರಘು ವಿರುದ್ಧ ಕೇವಲ 7 ಸಾವಿರ ಮತಗಳ ಅಂತದಿಂದ ಸೋತ್ತಿದ್ದ ಪಿ.ರಮೇಶ್, ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ್ದಾರೆ. ಪರಿಣಾಮ ಕಾಂಗ್ರೆಸ್‌ನ ಮತಗಳು ರಮೇಶ್ ಹಾಗೂ ಸಂಪತ್‌ರಾಜ್ ನಡುವೆ ಹಂಚಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆಯಾ ಪಕ್ಷಗಳಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಗೆಲುವಿಗಾಗಿ ಬೆವರು ಹರಿಸುತ್ತಿದ್ದು, ಕ್ಷೇತ್ರದ ಪ್ರತಿಯೊಂದು ಬಡಾವಣೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿರುವ ದೇವಾಲಯ, ಚರ್ಚ್, ಮಸೀದಿಗಳಿಗೆ ಪಾದಯಾತ್ರೆ ಮೂಲಕ ಭೇಟಿ ನೀಡಿ ಆರ್ಶೀವದಿಸುವಂತೆ ಮನವಿ ಮಾಡುತ್ತಿದ್ದು, ಪ್ರತಿಪಕ್ಷದ ಅಭ್ಯಥಿಗಳ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದಾರೆ.
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.