ಉಗ್ರ ಹೇಳಿಕೆ ವಿರೋಧಿಸಿ ಬಿಜೆಪಿ ಜೈಲ್ ಭರೋ
Team Udayavani, Jan 14, 2018, 11:42 AM IST
ಯಲಹಂಕ: ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಉಗ್ರರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶನಿವಾರ ಜೈಲ್ ಭರೋ ಚಳುವಳಿ ನಡೆಸಿದರು.
ಇಲ್ಲಿನ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ಭಜರಂಗದಳ ಕಾರ್ಯಕರ್ತರು, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಬಹತೇಕ ಮುಖ್ಯಂತ್ರಿಗಳು ಆರ್‌ಎಸ್‌ಎಸ್ ಕಾರ್ಯಕರ್ತರು.
ಸಂಘಪರಿವಾರದ ಕಾರ್ಯಕರ್ತರೆಲ್ಲ ಉಗ್ರರು ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇವರನ್ನೆಲ್ಲ ಬಂಧಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಸಮಾಜ ಒಡೆಯುವ ಹೇಳಿಕೆ ನೀಡಬಾರದು. ತಮ್ಮ “ಉಗ್ರ’ ಹೇಳಿಕೆ ಬಗ್ಗೆ ತಕ್ಷಣ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು.
ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. ಈ ವೇಳೆ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಯಲಹಂಕ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಯಣ್ಣ, ಕಾರ್ಯಾಧ್ಯಕ್ಷ ಡಾ.ಶಶಿಕುಮಾರ್,ಬಿಬಿಎಂಪಿ ಮಾಜಿ ಸದಸ್ಯ ಮುನಿರಾಜು ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.