ಬಿಜೆಪಿ ಮುಖಂಡ ಕದಿರೇಶ್ ಅಂತ್ಯಸಂಸ್ಕಾರ
Team Udayavani, Feb 9, 2018, 11:28 AM IST
ಬೆಂಗಳೂರು: ಬಿಜೆಪಿ ಮುಖಂಡ, ರೌಡಿಶೀಟರ್ ಕದಿರೇಶ್ ಅಂತ್ಯಸಂಸ್ಕಾರ ಗುರುವಾರ ಮೈಸೂರು ರಸ್ತೆಯ ಗುಡ್ಡದಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕದಿರೇಶ್ ಮರಣೋತ್ತರ ಪರೀಕ್ಷೆ ಮುಕ್ತಾಯದ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಬಳಿಕ ಅಂಜನಪ್ಪ ಗಾರ್ಡ್‌ನಲ್ಲಿರುವ ಬಿಜೆಪಿ ಕಚೇರಿ ಎದುರು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ಶೆಟ್ಟರ್, ಸಂಸದ ಪಿ.ಸಿ.ಮೋಹನ್. ಶಾಸಕ ವಿಜಯ ಕುಮಾರ್, ಹಾಗೂ ಪಾಲಿಕೆ ಬಿಜೆಪಿ ಸದಸ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
ಅನಂತರ ಅಂಜನಪ್ಪ ಗಾರ್ಡ್‌ನಿಂದ ಗುಡ್ಡದಹಳ್ಳಿಯ ಹಿಂದೂ ರುದ್ರಭೂಮಿವರೆಗೆ ಮೆರವಣಿಗೆ ನಡೆಸಿದ್ದು, ಸಾವಿರಾರು ಮಂದಿ ಬೆಂಬಲಿಗರು, ಬಿಜೆಪಿ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕದಿರೇಶ್ ಪತ್ನಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್, ಮಕ್ಕಳು ಹಾಗೂ ಸಂಬಂಧಿಕರು ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸಿದರು.
ಕದಿರೇಶ್ ಹಂತಕರ ಪತ್ತೆಗೆ ರಚನೆಯಾಗಿರುವ ನಾಲ್ಕು ಪೊಲೀಸ್ ವಿಶೇಷ ತಂಡ ಹಂತಕರಿಗಾಗಿ ಹುಡುಕಾಟ ನಡೆಸುತ್ತಿದೆ. ಇದುವರೆಗೂ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಪಶ್ಚಿಮ ವಲಯದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.