ಮತ್ತೆ ಬಿಜೆಪಿ ಪದಾಧಿಕಾರಿಗಳ ಪಟ್ಟಿ ವಿವಾದ?
Team Udayavani, Feb 7, 2017, 3:45 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ್ತಕ್ಕೆ ಕಾರಣವಾದ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ವಿಚಾರದಲ್ಲಿ ಪಕ್ಷ ಇನ್ನೂ ಕ್ರಮ ಕೈಗೊಳ್ಳದೇ ಇರುವುದು ಮತ್ತೆ ವಿವಾದಕ್ಕೆ ಕಾರಣವಾಗುವ ಲಕ್ಷಣ ಕಾಣಿಸಿಕೊಂಡಿದ್ದು, ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲು ಅಸಮಾಧಾನಿತ ಮುಖಂಡರು ಫೆ. 11ರ ಗಡುವು ವಿಧಿಸಿದ್ದಾರೆ.
ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಸೇರಿದಂತೆ ಪಕ್ಷದಲ್ಲಿ ಉದ್ಭವವಾಗಿರುವ ಗೊಂದಲಗಳನ್ನು ಬಗೆಹರಿಸುವ ಕುರಿತು ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರನ್ನೊಳಗೊಂಡ 24 ಮಂದಿಯ ತಂಡ ಎಂಟು ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿ ಬದಲಾವಣೆಗೆ ಸಂಬಂಧಿಸಿದಂತೆ ಫೆ. 11ರೊಳಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದೆ.
ಈ ವಿಚಾರವನ್ನು ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಗಮನಕ್ಕೂ ತಂದಿದೆ. ಆದರೆ, ಅಸಮಾಧಾನಿತರು ನೀಡಿರುವ ಗಡುವಿನೊಳಗೆ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾಗುವುದು ಕಷ್ಟಸಾಧ್ಯವಾಗಿದೆ. ಪಟ್ಟಿ ಪರಿಷ್ಕರಣೆಯಾಗದೇ ಇದ್ದರೂ ಆ ಪ್ರಕ್ರಿಯೆ ಆರಂಭಿಸುವ ಉದ್ದೇಶದಿಂದ ಮುಖಂಡರು ಈ ಗಡುವು ನೀಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದು, ಅದನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ, ಇದಕ್ಕೆ ಯಡಿಯೂರಪ್ಪ ನಿರಾಕರಿಸಿದ್ದು ಭಿನ್ನಮತಕ್ಕೆ ಕಾರಣವಾಯಿತು. ಒಟ್ಟು 35 ಜಿಲ್ಲಾ ಘಟಕಗಳ ಪೈಕಿ ಶಿವಮೊಗ್ಗದ ಎಸ್.ರುದ್ರೇಗೌಡ, ಮೈಸೂರು ಸಿಟಿ- ಡಾ.ಬಿ.ಎಚ್.ಮಂಜುನಾಥ್, ಮೈಸೂರು ಗ್ರಾಮೀಣ- ಮಾಜಿ ಸಚಿವ ಎಂ.ಶಿವಣ್ಣ, ಚಾಮರಾಜನಗರ- ಕೆ.ಆರ್.ಮಲ್ಲಿಕಾರ್ಜುನಪ್ಪ, ಹಾಸನ- ಎಚ್.ಯೋಗಾ ರಮೇಶ್, ಹಾವೇರಿ- ಶಿವರಾಜ್ ಸಜ್ಜನ್, ಬೀದರ್- ಡಾ.ಶೈಲೇಂದ್ರ ಬಿ.ಬೆಲ್ದಾಳೆ, ಬಳ್ಳಾರಿ- ಎಸ್.ಗುರುಲಿಂಗನಗೌಡ, ದಾವಣಗೆರೆ- ಯಶವಂತರಾವ್ ಜಾಧವ್, ತುಮಕೂರು- ಜಿ.ಬಿ. ಜ್ಯೋತಿ ಗಣೇಶ್ ಅವರನ್ನು ಕೈಬಿಟ್ಟು ಬೇರೆಯವರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.
ಈ ಕುರಿತ ವಿವಾದ ಹೆಚ್ಚಾಗಿದ್ದೇ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟಿಕೊಳ್ಳಲು ಕಾರಣವಾಗಿತ್ತು. ನಂತರದಲ್ಲಿ ಭಿನ್ನಮತ ಹೆಚ್ಚಾಗಿ ಅದು ರಾಜ್ಯ ಕಾರ್ಯಕಾರಣಿಯಲ್ಲೂ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಕರೆಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬ್ರಿಗೇಡ್ ಗೊಂದಲಕ್ಕೆ ತೆರೆ ಎಳೆದರಲ್ಲದೆ, ಪಕ್ಷದ ಕೆಲವು ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬದಲಾವಣೆಗಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅರುಣ್ ಕುಮಾರ್ ಅವರನ್ನೊಳಗೊಂಡ ಸಮಿತಿ ರಚಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಆದರೆ, ಈ ಸಮಿತಿ ಇನ್ನೂ ಸಭೆ ಸೇರಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಆರಂಭಿಸಿಲ್ಲ. ಹೀಗಾಗಿ ಕೂಡಲೇ ಈ ಪ್ರಕ್ರಿಯೆ ಆರಂಭಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಉದ್ದೇಶದಿಂದ 24 ಮಂದಿ ಅಸಮಾಧಾನಿತ ಮುಖಂಡರು ಮತ್ತೆ ಪಕ್ಷದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಶಿವಮೊಗ್ಗ ಕೈಬಿಟ್ಟ ಈಶ್ವರಪ್ಪ: ಕೆ.ಎಸ್.ಈಶ್ವರಪ್ಪ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದ್ದು 2013ರಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ತಮ್ಮ ಸೋಲಿಗೆ ಕಾರಣವಾದ ಎಸ್.ರುದ್ರೇಗೌಡ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದು. ಆದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಶಿವಮೊಗ್ಗದಿಂದ ತಮಗೆ ಪಕ್ಷದ ಟಿಕೆಟ್ ಖಾತರಿಯಾಗುತ್ತಿದ್ದಂತೆ ರುದ್ರೇಗೌಡ ಅವರ ಬದಲಾವಣೆ ಬೇಡಿಕೆಯನ್ನು ಈಶ್ವರಪ್ಪ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಉಳಿದಂತೆ ಒಂಬತ್ತು ಜಿಲ್ಲೆಗಳ (ಮೈಸೂರು ಗ್ರಾಮೀಣ ಸೇರಿ) ಜಿಲ್ಲಾಧ್ಯಕ್ಷರ ಬದಲಾವಣೆ ಬೇಡಿಕೆಯನ್ನು ಅಸಮಾಧಾನಿತ ಮುಖಂಡರು ಮುಂದುವರಿಸಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಒಂದೆರಡು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲು ಮಾತ್ರ ಯಡಿಯೂರಪ್ಪ ಸಮ್ಮತಿಸುವ ಸಾಧ್ಯತೆ ಇದೆ.
ಹಿಂದುಳಿದ ವರ್ಗಗಳ ಸಂಘಟನೆ ಪ್ರಕ್ರಿಯೆ ಅರಂಭ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ದೂರವಾಗಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಛಾ (ಓಬಿಸಿ ಮೋರ್ಛಾ) ಸಂಘಟನೆ ಜವಾಬ್ದಾರಿ ವಹಿಸಿಕೊಂಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸೋಮವಾರ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಬ್ರಿಗೇಡ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದ ಬಳಿಕ ಇದೇ ಮೊದಲ ಬಾರಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ ಅವರು, ಬಿಜೆಪಿ ಓಬಿಸಿ ಮೋರ್ಛಾದ ಜಿಲ್ಲಾ ಮತ್ತು ತಾಲೂಕು ಸಮಾವೇಶಗಳನ್ನು ನಡೆಸುವ ಬಗ್ಗೆ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆಯಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಂಘಟನೆಯಲ್ಲಿ ತೊಡಗಿರುವ ಮತ್ತು ಕ್ರಿಯಾಶೀಲರಾಗಿರುವ ಹಿಂದುಳಿದ ಸಮುದಾಯದ ಮುಖಂಡರನ್ನು ಗುರುತಿಸಿ ಅವರ ವ್ಯಾಪ್ತಿಯಲ್ಲಿ ಮೋರ್ಛಾದ ಸಮಾವೇಶ ನಡೆಸಲು ಕ್ರಮ ಕೈಗೊಳ್ಳುವಂತೆ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಪಕ್ಷದಲ್ಲಿ ಎಲ್ಲಾ ಗೊಂದಲಗಲು ಬಗೆಹರಿದಿವೆ. ನಾನು ಮತ್ತು ಯಡಿಯೂರಪ್ಪ ಒಟ್ಟಾಗಿ ಬಂದು ಓಬಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತೇವೆ. ತಾವು ರಾಯಣ್ಣ ಬ್ರಿಗೇಡ್‌ನಿಂದ ದೂರವಾದ ಕಾರಣ ಓಬಿಸಿ ಸಮಾವೇಶಗಳನ್ನು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸಂಘಟಿಸಬೇಕು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರಿಗೆ ಸಲಹೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.