ಸಮಗ್ರ ಅಭಿವೃದ್ಧಿಗೆ ಬಿಜೆಪಿ ಆದ್ಯತೆ:ಅನಂತಕುಮಾರ್ ಭರವಸೆ
Team Udayavani, Apr 26, 2018, 12:04 PM IST
ಬೆಂಗಳೂರು: ನದಿ ತಟದ ನಗರವಾಗಿ ಬೆಂಗಳೂರನ್ನು ರೂಪಿಸುವುದು, ನಗರ ಸೂಕ್ಷ್ಮ ಪ್ರದೇಶ ಕಾಯ್ದಿರಿಸುವಿಕೆ, “ನಗರ ಅಭಿವೃದ್ಧಿ ಸೂಚ್ಯಂಕ’ ಆಧಾರಿತ ಬೆಳವಣಿಗೆ, ಬಿಎಂಟಿಸಿ- ಮೆಟ್ರೊ- ಸಬ್‌ಅರ್ಬನ್ ರೈಲು ಸೇವೆ ಒಟ್ಟುಗೂಡಿಸಿದ ವ್ಯವಸ್ಥೆ ರಚನೆ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಪರಿಕಲ್ಪನೆಗಳನ್ನು ಬಿಜೆಪಿ ಸರ್ಕಾರ ಬಂದ ನಂತರ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಭರವಸೆ ನೀಡಿದರು. ಬಿಜೆಪಿಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ನವ ಭಾರತಕ್ಕಾಗಿ ನವ ಬೆಂಗಳೂರು’ ಅಭಿಯಾನದಲ್ಲಿ ನಾನಾ ಕ್ಷೇತ್ರದ ತಜ್ಞರೊಂದಿಗೆ ಸುಮಾರು ಎರಡು ಗಂಟೆ ಸಂವಾದ ನಡೆಸಿದ ಅವರು ಬೆಂಗಳೂರಿನ ಅಭಿವೃದ್ಧಿ ಕುರಿತಂತೆ ವಿಸ್ತೃತವಾಗಿ ಚರ್ಚಿಸಿದರು. ಪ್ರಸ್ತಾವಿಕ ಮಾತನಾಡಿದ ಅವರು, ಪರಿಣಾಮಕಾರಿ ನಗರಾಡಳಿತಕ್ಕೆ ಪಾರದರ್ಶಕ, ಪ್ರಾಮಾಣಿಕ ಕಾರ್ಯ ನಿರ್ವಹಣೆ ಜತೆಗೆ ಜನರ ಪಾಲುದಾರಿಕೆ ಮುಖ್ಯ. ಆದರೆ ಸದ್ಯ ಅದು ಬೆಂಗಳೂರಿನಲ್ಲಿ ಕಾಣುತ್ತಿಲ್ಲ. ಬಿಬಿಎಂಪಿ, ಬಿಡಿಎ ಸೇರಿದಂತೆ ಇತರೆ ಸಂಸ್ಥೆಗಳಿಗೆ ದೂರದೃಷ್ಟಿ ಇಲ್ಲ, ಜನಪರ ಕಾಳಜಿಯೂ ಕಾಣುತ್ತಿಲ್ಲ. ಸದ್ಯದ ಶೋಷಿಸುವ ವ್ಯವಸ್ಥೆಗೆ ಬದಲಾಗಿ ಪೋಷಿಸುವ ಆಡಳಿತ ಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು ನೀಡುವ ಸಲಹೆಗಳನ್ನು ಮುಂದೆ ಸರ್ಕಾರ ಬಂದಾಗ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಸಂವಾದ ನಿರ್ವಹಿಸಿದರು. ಸಂವಾದದ ಸಂಕ್ಷಿಪ್ತ ವಿವರ ಹೀಗಿದೆ.
ಅಯ್ಯಪ್ಪ ಮಾಸಂಗಿ (ಜಲ ಸಾಕ್ಷರತಾ ಪ್ರತಿಷ್ಠಾನದ ಸ್ಥಾಪಕ)
ಬೆಂಗಳೂರಿಗೆ ನೀರಿನ ಸಮಸ್ಯೆ, ಮಳೆ ಸಮಸ್ಯೆಯೇ ಇಲ್ಲ. ಆದರೆ ಸಮಸ್ಯೆಯಿರುವುದು ಸಾರ್ವಜನಿಕರು, ಅಧಿಕಾರಿಗಳು, ರಾಜಕಾರಣಿಗಳ ಮನೋಭಾವದಲ್ಲಿ. 2 ಲಕ್ಷ ಬತ್ತಿದ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಆದರೆ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಲು ಮುಂದಾದರೆ ಸಾಕಷ್ಟು ಸಮಸ್ಯೆಗಳಿವೆ. ವಾಸ್ತವಿಕ ವೆಚ್ಚ ಒಂದು ಲಕ್ಷ ರೂ. ಇದ್ದರೆ 10 ಲಕ್ಷ ರೂ.ಗೆ ಪ್ರಸ್ತಾವ ಸಲ್ಲಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. 2-3 ಲಕ್ಷ ರೂ. ವೆಚ್ಚದ ಯೋಜನೆಗಳಿಗೆ 50 ಲಕ್ಷ ರೂ. ವೆಚ್ಚದ ಪ್ರಸ್ತಾವ ಸಲ್ಲಿಸಿ ಎನ್ನುತ್ತಾರೆ.
ಅನಂತಕುಮಾರ್: ಬೆಂಗಳೂರಿನ ಮಳೆ ನೀರಿನ ಹರಿಕಾರರೆನಿಸಿದ ನಾಡಪ್ರಭು ಕೆಂಪೇಗೌಡರು, 500 ವರ್ಷಗಳ ಹಿಂದೆಯೇ 1,400 ಕೆರೆಗಳನ್ನು ನಿರ್ಮಿಸಿ ನೀರು ಸಂಗ್ರಹಕ್ಕೆ ಆದ್ಯತೆ ನೀಡಿದ್ದರು. ಬಿಜೆಪಿಯು ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಲಿದೆ. ಶಾಲೆ, ಕಾಲೇಜುಗಳಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿಗೆ ಒತ್ತು ನೀಡಲಾಗುವುದು.
ಎಸ್.ವಿಶ್ವನಾಥ್: (ಜಲತಜ್ಞರಾದ ಬಯೋ-ಮಿ ಸಲೂಷನ್ಸ್ ಸಿಇಒ)
ನಿತ್ಯ 1,400 ದಶಲಕ್ಷ ಲೀಟರ್ ನೀರು ಪಂಪ್ ಮಾಡುವ ಜಲಮಂಡಳಿ ಬಳಿ ಅರ್ಹ ತಜ್ಞರೇ ಇಲ್ಲ. ಜಲಮಂಡಳಿಯು 20ನೇ ಶತಮಾನಕ್ಕೆ ರೂಪುಗೊಂಡಿದ್ದರೆ ಸಮಸ್ಯೆ 21ನೇ ಶತಮಾನದ್ದಾಗಿದೆ. ವೃಷಭಾವತಿ, ದಕ್ಷಿಣ ಪಿನಾಕಿನಿ ನದಿಗಳಲ್ಲಿ ಇಂದು ಕೊಳಚೆ ನೀರು ಹರಿಯುತ್ತಿದೆ. ಹಾಗಾಗಿ ಸಂಸ್ಥೆಗಳನ್ನು ಬಲವರ್ಧನೆಗೊಳಿಸಿ ನದಿಗಳನ್ನು ಉಳಿಸುವತ್ತ ಗಮನಹರಿಸಬೇಕು. ಅನಂತಕುಮಾರ್: ಬೆಂಗಳೂರಿನಲ್ಲಿ ಏಳು ನದಿಗಳಿದ್ದವು ಎನ್ನಲಾಗಿದ್ದು, ಅರ್ಕಾವತಿ ಬತ್ತಿದ್ದರೆ ವೃಷಭಾವತಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ನದಿಗಳ ಪುನರುಜ್ಜೀವನ ಬಹಳ ಮುಖ್ಯ. ಬೆಂಗಳೂರನ್ನು ನದಿತಟದ ನಗರವನ್ನಾಗಿಸುವ ಚಿಂತನೆಯಿದ್ದು, ಬಿಜೆಪಿ ಸರ್ಕಾರದಲ್ಲಿ ಅದನ್ನು ಜಾರಿಗೊಳಿಸಲಾಗುವುದು.
ಎಸ್.ಹರೀಶ್ (ಬಿ.ಪ್ಯಾಕ್ ಪ್ರತಿನಿಧಿ)
ಕೆರೆ, ಮಳೆ ನೀರು ಕಾಲುವೆ ಜಾಗಗಳಿಗೆ ಹೊಸ ಸರ್ವೆ ಸಂಖ್ಯೆ ನೀಡಿರುವುದರಿಂದ ಗೊಂದಲ ಹೆಚ್ಚಾಗಿದ್ದು, ಅಕ್ರಮ ನಡೆಯುತ್ತಿದೆ. ಕೆರೆ, ಕಾಲುವೆಗಳ ಹೊಸ ಸರ್ವೆ ಸಂಖ್ಯೆ ಜತೆಗೆ ಹಳೆಯ ಸರ್ವೆ ಸಂಖ್ಯೆಯನ್ನೂ ನಮೂದಿಸಿದರೆ ಸೂಕ್ತ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ ಸ್ಥಿತಿಗತಿಯೇ ಹೀನಾಯವಾಗಿದೆ. ಮೊದಲು ಅವರ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು
ಅನಂತಕುಮಾರ್: ಮಾನವ ಅಭಿವೃದ್ಧಿ ಸೂಚ್ಯಂಕ ಮಾದರಿಯಲ್ಲಿ ನಗರ ಅಭಿವೃದ್ಧಿ ಸೂಚ್ಯಂಕ ರೂಪಿಸಿ ಅಭಿವೃದ್ಧಿಪಡಿಸಬೇಕು. ಜತೆಗೆ ಪರಿಸರ ಸಂರಕ್ಷಣೆಗಾಗಿ “ನಗರ ಸೂಕ್ಷ ವಲಯ’ವನ್ನು ಗುರುತಿಸಿ ಸಂರಕ್ಷಿಸಲು ಆದ್ಯತೆ ನೀಡಬೇಕು. ಪೊಲೀಸರಿಗೆ ಹೆಚ್ಚಿನ ಕಾರ್ಯ ಒತ್ತಡವಿರುತ್ತದೆ. ಹೆಚ್ಚುವರಿ ಸಿಬ್ಬಂದಿ ನೇಮಕ, ಅಗತ್ಯ ಪರಿಕರ ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರ ಅನುದಾನ ನೀಡಲು ಸಿದ್ಧವಿದ್ದರೂ ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸದ ಕಾರಣ ಸಾಕಷ್ಟು ಅನುದಾನ ಕೈತಪ್ಪುತ್ತಿದೆ.
ಮಹಾಲಕ್ಷ್ಮೀ ಪಾರ್ಥಸಾರಥಿ (ಸಿಟಿಜನ್ ಆ್ಯಕ್ಷನ್ ಫೋರಂ ಮುಖ್ಯ ಕಾರ್ಯದರ್ಶಿ)
ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕು.
ಅನಂತಕುಮಾರ್: ಮಹಿಳಾ ಸುರಕ್ಷತೆಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ನೆರವು ಪಡೆಯಲು
ಅವಕಾಶವಿದೆ. ನಿರ್ಭಯಾ ನಿಧಿಯಡಿ ಬೆಂಗಳೂರಿನಾದ್ಯಂತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಲು
ಕೇಂದ್ರ ಸರ್ಕಾರ 250 ಕೋಟಿ ರೂ. ನೀಡಲು ಸಿದ್ಧವಿತ್ತು. ಆದರೆ ಈ ಕುರುಡು, ಕಿವುಡು ಕಾಂಗ್ರೆಸ್
ಸರ್ಕಾರ ಒಂದೂವರೆ ವರ್ಷದಿಂದ ಪ್ರಸ್ತಾವವನ್ನೇ ಸಲ್ಲಿಸಿಲ್ಲ. ಮಹಿಳಾ ಗಸ್ತು ವ್ಯವಸ್ಥೆ ಕಲ್ಪಿಸಿ ಎಂದರೂ
ಗಮನ ನೀಡಿಲ್ಲ. 20,000 ಮಹಿಳಾ ಸಿಬ್ಬಂದಿ ನೇಮಕ ಮಾಡಿಕೊಂಡು ಮಹಿಳಾ ಭದ್ರತೆಗೆ ಆದ್ಯತೆ
ನೀಡಬೇಕೆಂಬ ಸಲಹೆಗೂ ಸ್ಪಂದಿಸಿಲ್ಲ ಎಂದು ಕಿಡಿ ಕಾರಿದರು.
ಶ್ರೀಧರ ಪಬ್ಬಿಸೆಟ್ಟಿ (ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ)
ಬೆಂಗಳೂರು ಯೋಜಿತವಾಗಿ ಅಭಿವೃದ್ಧಿ ಹೊಂದುತ್ತಿಲ್ಲ. ಬಿಎಂಆರ್‌ಡಿಎ ಪ್ರದೇಶ 8000 ಚದರ ಕಿ.ಮೀ.ನಷ್ಟು ವಿಸ್ತಾರವಾಗಿದ್ದು, ಈಗಲೇ ಯೋಜಿತ ಬೆಳವಣಿಗೆಗೆ ಆದ್ಯತೆ ನೀಡದಿದ್ದರೆ “ಅಕ್ರಮ- ಸಕ್ರಮ’ ಅಲ್ಲಿಯೂ ವಿಸ್ತರಿಸಲಿದೆ. ನಗರದ ಕೆರೆ, ಕಾಲುವೆಗಳನ್ನು ಕಲುಷಿತಗೊಳಿಸುತ್ತಿರುವ ಜಲಮಂಡಳಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯತ್ವ ಪಡೆದಿರುವುದು ದುರದೃಷ್ಟಕರ.
ಅನಂತಕುಮಾರ್: ಹಿಂದಿನ “ಅಬೈಡ್’ ಕಾರ್ಯ ಸೂಚಿಯಡಿ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಅಗತ್ಯ ಎಂಬುದಾಗಿ ಶಿಫಾರಸು ಮಾಡಲಾಗಿತ್ತು. ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆಯಾಗುವ ವ್ಯವಸ್ಥೆ ಬರದಿದ್ದರೆ ನಿಯಂತ್ರಣ ಕಷ್ಟಸಾಧ್ಯ.
ನಳಿನಿ ಶೇಖರ್ (ಹಸಿರು ದಳ ಸಹ ಸ್ಥಾಪಕಿ) ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟ 2016ರ ಕಾಯ್ದೆ ಅತ್ಯುತ್ತಮವಾಗಿದೆ. ಪಾಲಿಕೆಯು ಹೊಸದಾಗಿ 7 ಘಟಕ ನಿರ್ಮಿಸಿದರೂ ಅಲ್ಲಿಗೆ ಕಸ ಹೋಗುತ್ತಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದ ಕಸವು ಆ ಕ್ಷೇತ್ರದ ವ್ಯಾಪ್ತಿಯೊಳಗೆ ವಿಲೇವಾರಿಯಾಗುವಂತಾಗಬೇಕು. ಅನಂತಕುಮಾರ್: ಶಾಲಾ ಹಂತದಲ್ಲೇ ನಾಗರಿಕ ಪ್ರಜ್ಞೆಯ ಬಗ್ಗೆ ಅರಿವು ಮೂಡಿಸಬೇಕು. ವೈಜ್ಞಾನಿಕ ಕಸ ವಿಲೇವಾರಿ, ಪೌರಕಾರ್ಮಿಕರ ಕಲ್ಯಾಣ, ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು.
ತಜ್ಞ ಜಿ.ಎಂ.ಇನಾಂದಾರ್: ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಮಾರಕವಾಗುತ್ತಿದೆ. ಪ್ಲಾಸ್ಟಿಕ್‌ಅನ್ನು ಉಷ್ಣ ವಿದ್ಯುತ್ ಘಟಕ, ಸಿಮೆಂಟ್ ಕಾರ್ಖಾನೆಗಳಲ್ಲಿ ಬಳಸಲು ಅವಕಾಶವಿದ್ದು,ಇದಕ್ಕೆ ಸಬ್ಸಿಡಿ ನೀಡಬೇಕು.
ಅನಂತಕುಮಾರ್: ಗ್ರೀನ್ ಪ್ಲಾಸ್ಟಿಕ್, ಪ್ಲಾಸ್ಟಿಕ್‌ನ ಪುನ ರ್ಬಳಕೆ, ವೈಜ್ಞಾನಿಕ ಸಂಸ್ಕರಣೆ ಸಂಬಂಧ ಸಂಶೋಧನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆರ್ಥಿಕ ಕಾರ್ಯಸಾಧು ಅಂಶಕ್ಕಿಂತ ಪರಿಸರಾತ್ಮಕವಾಗಿ ಕಾರ್ಯಸಾಧುವಾಗಿರುವ ಯೋಜನೆಗಳಿಗೆ ಆದ್ಯತೆ ನೀಡಬೇಕು.
ಸಂಜೀವ್ ದ್ಯಾಮನ್ನವರ್ (ಸಮೂಹ ಸಾರಿಗೆ ತಜ್ಞ)
ಸಮೂಹ ಸಾರಿಗೆಗೆ ಆದ್ಯತೆ ನೀಡಬೇಕು. ಕೇಂದ್ರ ಪ್ರದೇಶ ದಲ್ಲಿ ವಾಹನ ಪಾರ್ಕಿಂಗ್‌ಗೆ ದುಬಾರಿ ಶುಲ್ಕ
ವಿಧಿಸಬೇಕು. ಬೆಂಗಳೂರು ರೈಲು ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ ರಚನೆ ಬಗ್ಗೆ ಚಿಂತನೆ ನಡೆದಿದೆ.
ಜತೆಗೆ ಬಿಎಂಟಿಸಿ, ಮೆಟ್ರೋ ರೈಲು, ಸಬ್ ಅರ್ಬನ್ ರೈಲು ಸೇವೆ ಒಟ್ಟುಗೂಡಿಸಿ “ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆ’ ರಚಿಸಲು ಚಿಂತಿಸಲಾಗಿದೆ. ಬೆಂಗಳೂರು- ಮೈಸೂರು ಹಾಗೂ ಬೆಂಗಳೂರು- ತುಮಕೂರು- ದಾವಣಗೆರೆ ನಡುವೆ ರೈಲ್ವೆ ಕಾರಿಡಾರ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.