ಕೋವಿಡ್ ವಾರಿಯರ್ ಗಳನ್ನು ಗುರುತಿಸಿ ಗೌರವಿಸಿ: ಸುಪ್ರೀತ್ ಕೌರ್
Team Udayavani, Jul 11, 2021, 6:46 PM IST
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ತಂದೆ, ತಾಯಿ, ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟು ವಾರಿಯರ್‍ಗಳಂತೆ ಕಾರ್ಯ ನಿರ್ವಹಿಸಿದ ವೈದ್ಯರು, ಶೂಶ್ರೂಷಾ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಕೌರ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿದರು. ಕೋವಿಡ್ ಸಂಕಷ್ಟದ ನಡುವೆಯೂ ಕರ್ತವ್ಯ ನಿರ್ವಹಿಸಿದ ಸಫಾಯಿ ಕರ್ಮಚಾರಿಗಳ ಕಾರ್ಯ ಶ್ಲಾಘನೀಯ. ರಕ್ಷಾ ಬಂಧನ ಸಪ್ತಾಹದಲ್ಲಿ ಸಫಾಯಿ ಕರ್ಮಚಾರಿಗಳನ್ನು ಪರಿಚಯಿಸಿ ಸನ್ಮಾನ ಮಾಡಿ. ಅವುಗಳ ವಿಡಿಯೋ ಮಾಡಿ ಅದನ್ನು ಜನರಿಗೆ ತಲುಪಿಸಿ ಎಂದು ತಿಳಿಸಿದರು.
ಫೇಸ್‍ಬುಕ್, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಿ. ಕೋವಿಡ್ ಸಂದರ್ಭದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಬಳಸಿ ಜನರನ್ನು ತಲುಪಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮನೆ ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮವಾಗಿ ಕೆಲಸ ನಡೆದಿದೆ. ಕಾಂಗ್ರೆಸ್ ಪಕ್ಷದ ಸರಕಾರವಿದ್ದಾಗ ಹಲವು ಜಿಲ್ಲೆಗಳಿಗೆ ಕನಿಷ್ಠ ಸಂಖ್ಯೆಯ ಮನೆಗಳನ್ನು ಮಂಜೂರು ಮಾಡಲಾಗುತ್ತಿತ್ತು. ಆದರೆ, ಬಿಜೆಪಿ ಸರಕಾರವು ಪ್ರತಿಯೊಬ್ಬರಿಗೂ ಸೂರು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಇದರ ಪ್ರಯೋಜನ ನೈಜ ಫಲಾನುಭವಿಗೆ ಸಿಗುವಂತೆ ನಾವು ನೋಡಿಕೊಳ್ಳಬೇಕಿದೆ ಎಂದರು. ಅಲ್ಲದೆ, ಬಿಜೆಪಿ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದು ಆಶಿಸಿದರು.
ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ಮಹಿಳಾ ಮೋರ್ಚಾದ ಸದಸ್ಯರು ಮತ್ತು ಪದಾಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಸ್ಪರ್ಧೆ ಮತ್ತು ಅಸೂಯೆ ಬೇಡ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರು ತಿಳಿಸಿದ್ದಾಗಿ ಹೇಳಿದರು.
ಕೇಂದ್ರ ಸರಕಾರ ಜಾರಿಗೊಳಿಸಿದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಜನ್‍ಧನ್ ಯೋಜನೆ, ಮಾತೃವಂದನಾ ಯೋಜನೆ ಮೊದಲಾದವುಗಳ ಕುರಿತು ಜಾಗೃತಿ ಮೂಡಿಸಲು ತಿಳಿಸಿದ್ದಾರೆ ಎಂದರು.
ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‍ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ ಅವರು ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.