ಬಿಎಂಟಿಸಿ ಕೈ ಸುಡುತ್ತಿದೆ ಫೀಡರ್ ಸೇವೆ
Team Udayavani, Jun 26, 2017, 11:25 AM IST
ಬೆಂಗಳೂರು: ಇತ್ತೀಚೆಗಷ್ಟೇ ಚಾಲನೆ ಸಿಕ್ಕ “ನಮ್ಮ ಮೆಟ್ರೋ’ದ ಹೊಸ ಮಾರ್ಗ ನಾಗಸಂದ್ರ-ಯಲಚೇನಹಳ್ಳಿ ಮಾರ್ಗಕ್ಕೆ ಬಿಎಂಟಿಸಿ ಸಂಪರ್ಕ ಸೇವೆ (ಮೆಟ್ರೋ ಮಾರ್ಗದ ಬಳಿಗೆ, ನಿಲ್ದಾಣದ ಬಳಿಗೆ ಜನರನ್ನು ತಲುಪಿಸುವ ಸೇವೆ) ನೀಡಿ ಕೈಸುಟ್ಟುಕೊಂಡಿದೆ. ಹೀಗಾಗಿ ಈ ಮಾರ್ಗದ ಫೀಡರ್ ಸೇವೆಯೂ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ 80ಕ್ಕೂ ಹೆಚ್ಚು ಸಂಪರ್ಕ ಬಸ್‌ಗಳು ಕಳೆದ ಒಂದು ವರ್ಷದಿಂದ ಕಾರ್ಯಾಚರಣೆ ಮಾಡುತ್ತಿವೆ. ಇವುಗಳಿಂದ ನಿತ್ಯ ಪ್ರತಿ ಕಿ.ಮೀ.ಗೆ 15 ರೂ. ನಷ್ಟ ಬಿಎಂಟಿಸಿಗೆ ಆಗುತ್ತಿದೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಇದರ ಎರಡೂವರೆಪಟ್ಟು ಅಂದರೆ ಪ್ರತಿ ಕಿ.ಮೀ. 40 ರೂ. ಹೊರೆ ಆಗುತ್ತಿದೆ.
ಜೂನ್ 18ರಿಂದ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಮೆಟ್ರೋ ಸಂಚಾರ ಆರಂಭವಾಯಿತು. ಜೂನ್ 19ರಿಂದಲೇ ಮಾರ್ಗದುದ್ದಕ್ಕೂ 86 ಅನುಸೂಚಿ (ಶೆಡ್ಯುಲ್)ಗಳನ್ನು ನಿಯೋಜಿಸಲಾಗಿದೆ. ಈ ಸೇವೆಗಳನ್ನು ಆರಂಭಿಸುವ ಮುನ್ನ ಬಿಎಂಟಿಸಿ ತಜ್ಞರ ತಂಡವಲ್ಲದೆ, ಎರಡು ಪ್ರತ್ಯೇಕ ಸಂಸ್ಥೆಗಳಿಂದಲೂ ಅಧ್ಯಯನ ಮಾಡಲಾಗಿದೆ.
ಅದರ ವರದಿ ಆಧರಿಸಿಯೇ ಮಾರ್ಗಗಳನ್ನು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ಇದಕ್ಕಾಗಿಯೇ ಮಿನಿ ಬಸ್‌ಗಳನ್ನು ಕೂಡ ಖರೀದಿಸಿದೆ. ಆದಾಗ್ಯೂ ಮೆಟ್ರೋ ನಿಲ್ದಾಣಗಳಿಗೆ ಬರುವ ಜನ ಈ ಮೆಟ್ರೋ-ಬಸ್ ಸಂಪರ್ಕ ಸೇವೆಗಳತ್ತ ಮುಖಮಾಡುತ್ತಿಲ್ಲ. ಇದು ಬಿಎಂಟಿಸಿಗೆ ತಲೆನೋವಾಗಿದೆ.
ಗಳಿಕೆಗಿಂತ ಕಳೆದುಕೊಳ್ಳುತ್ತಿರುವುದೇ ಜಾಸ್ತಿ: ಅತಿ ಉದ್ದದ ಮೆಟ್ರೋ ಹಸಿರು ಮಾರ್ಗದಲ್ಲಿ ಇಪಿಕೆಎಂ(ಪ್ರತಿ ಕಿ.ಮೀ.ಗೆ ಬರುವ ಆದಾಯದ ಪ್ರಮಾಣ) ಕೇವಲ 10 ರೂ. ಇದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಅಬ್ಬಬ್ಟಾ ಎಂದರೆ ದುಪಟ್ಟು ಆಗಬಹುದು. ಆದರೆ, ಸಾಮಾನ್ಯವಾಗಿ ಒಂದು ಬಸ್‌ನ ಸಿಪಿಕೆಎಂ (ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ) ಸರಾಸರಿ 50 ರೂ. ಇರುತ್ತದೆ. ಇಪಿಕೆಎಂ ಕೂಡ ಹೆಚ್ಚು-ಕಡಿಮೆ 40-50 ರೂ.ಗಳಾದರೂ ಇರಬೇಕಾಗುತ್ತದೆ. 20 ರೂ. ಬಂದರೆ ನಿಗಮಕ್ಕೆ ಭಾರಿ ನಷ್ಟು ಉಂಟಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ನಷ್ಟಕ್ಕೆ ಕಾರಣಗಳೇನು?: ಈಗಷ್ಟೇ ಈ ಸೇವೆಗಳು ಆರಂಭಗೊಂಡಿವೆ. ಪಿಕ್ ಅಪ್ ಆಗಲು ಇನ್ನೂ ಸಮಯ ಬೇಕಾಗಬಹುದು. ಸಾಮಾನ್ಯವಾಗಿ ಒಂದು ಮೆಟ್ರೋ ನಿಲ್ದಾಣದಿಂದ ಫೀಡರ್ ಸೇವೆಗಳು ಸರಾಸರಿ 5ರಿಂದ 10 ಕಿ.ಮೀ. ಆಸುಪಾಸಿನಲ್ಲೇ ಕಾರ್ಯಾಚರಣೆ ಮಾಡುತ್ತವೆ. ಹಾಗಾಗಿ, ಜನ ಕಾಲ್ನಡಿಗೆಯಲ್ಲಿ ಅಥವಾ ಸ್ವಂತ ವಾಹನಗಳಲ್ಲಿ ಬರುತ್ತಾರೆ. ಇದರಿಂದ ಪ್ರಯಾಣಿಕರ ಕೊರತೆ ಕಾಡುತ್ತಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಡಬಲ್ ಹೊಡೆತ: ಒಂದೆಡೆ ಮೆಟ್ರೋ ಮಾರ್ಗಗಳಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು, ಇದರಿಂದ ಆದಾಯದಲ್ಲಿ ಖೋತಾ ಆಗುತ್ತಿದೆ. ಮತ್ತೂಂದೆಡೆ ಅದೇ ಮೆಟ್ರೋಗೆ ಜನರನ್ನು ತಂದುಬಿಡುವ ಬಸ್‌ಗಳು ನಷ್ಟದಲ್ಲಿದ್ದರೂ ಸೇವೆ ನೀಡುವ ಅನಿವಾರ್ಯತೆಯಲ್ಲಿವೆ. ಇದರಿಂದಲೂ ಹೊರೆ ಬೀಳುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ದೆಹಲಿ ಮೆಟ್ರೋದಲ್ಲಿ ಹೇಗಿದೆ ವ್ಯವಸ್ಥೆ?: ದೆಹಲಿಯಲ್ಲೂ ಮೆಟ್ರೋ ನಿಲ್ದಾಣಗಳಿಗೆ ಬಸ್ ಸಂಪರ್ಕ ಸೇವೆ ಇದೆ. ಆದರೆ, ಅದನ್ನು ಸ್ವತಃ ದೆಹಲಿ ಮೆಟ್ರೋ ರೈಲು ನಿಗಮವೇ(ಡಿಎಂಆರ್‌ಸಿ) ನಿರ್ವಹಿಸುತ್ತಿದೆ. ಬಸ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆದು, ಅವುಗಳನ್ನು ತಮಗೆ ಅವಶ್ಯಕತೆ ಇರುವ ಅಥವಾ ಹೆಚ್ಚು ಬೇಡಿಕೆ ಇರುವ ಮಾರ್ಗಗಳಲ್ಲಿ ಡಿಎಂಆರ್‌ಸಿ ಕಾರ್ಯಾಚರಣೆ ಮಾಡಿಸುತ್ತದೆ. ಇದರಿಂದ ಅಲ್ಲಿನ ಸಾರಿಗೆ ನಿಗಮದ ಮೇಲೆ ಯಾವುದೇ ಹೊರೆಬೀಳುತ್ತಿಲ್ಲ.
ಅದೇ ಮಾದರಿಯನ್ನು ಬಿಎಂಆರ್‌ಸಿ ಕೂಡ ಅನುಸರಿಸಬಹುದು. ಸ್ವತಃ ಬಿಎಂಆರ್‌ಸಿಯು ಬಿಎಂಟಿಸಿಯಿಂದ ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಓಡಿಸಲಿ ಎಂಬುದು ತಜ್ಞರ ಅಭಿಪ್ರಾಯ. ಈಚೆಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಗೆ ಬರೆದ ಪತ್ರದಲ್ಲೂ ಇದನ್ನು ಉಲ್ಲೇಖೀಸಿದ್ದಾರೆ ಎನ್ನಲಾಗಿದೆ.
ಫೀಡರ್ ಸೇವೆ ಎಲ್ಲೆಲ್ಲಿ ಎಷ್ಟಿದೆ?
ಬೈಯಪ್ಪನಹಳ್ಳಿ-ಮೈಸೂರು ರಸ್ತೆ
– ಸಂಪರ್ಕ ಸೇವೆಗಳು: 80
– ಪ್ರತಿದಿನದ ಆರ್ಥಿಕ ಹೊರೆ: 2.50 ಲಕ್ಷ ರೂ.
ನಾಗಸಂದ್ರ-ಯಲಚೇನಹಳ್ಳಿ
– ಸಂಪರ್ಕ ಸೇವೆಗಳು: 86
– ಪ್ರತಿದಿನದ ಆರ್ಥಿಕ ಹೊರೆ: 5.60 ಲಕ್ಷ ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.