Sthree toilet: ಸದ್ದಿಲ್ಲದೆ ಸ್ತ್ರೀ ಶೌಚಾಲಯ ಬಂಡಿ ಕಣ್ಮರೆ
Team Udayavani, Mar 26, 2024, 10:31 AM IST
ಬೆಂಗಳೂರು: ಹತ್ತು ಲಕ್ಷಕ್ಕೂ ಹೆಚ್ಚು ಕಿ.ಮೀ. ಸಂಚರಿಸಿ ಗುಜರಿ ಸೇರಿದ್ದ ಬಸ್‌ಗಳನ್ನು ಬಿಎಂಟಿಸಿಯು “ಭೋಜನ ಬಂಡಿ’ ಮೂಲಕ ಮರುಪರಿಚಯಿಸಲು ಮುಂದಾಗಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ. ಆದರೆ, ನಾಲ್ಕು ವರ್ಷಗಳ ಹಿಂದೆಯೇ ಗುಜರಿ ಬಸ್‌ಗಳಿಗೆ ಹೈಟೆಕ್ ಸ್ಪರ್ಶ ನೀಡಿ “ಸ್ತ್ರೀ ಶೌಚಾಲಯ’ವಾಗಿ ಪರಿವರ್ತಿಸುವ ಪ್ರಯೋಗ ನಡೆದಿತ್ತು. ಈಗ ಆ ಯೋಜನೆಯೇ “ಗುಜರಿ’ಗೆ ಸೇರಿದೆ.
ಯುವತಿಯರಿಗೆ, ತಾಯಂದಿರಿಗೆ ಸುಲಭ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅನುಪಯುಕ್ತ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಹೈಟೆಕ್ “ಸ್ತ್ರೀ ಶೌಚಾಲಯ’ ನಿರ್ಮಿಸಲಾಗಿತ್ತು. ಇದರಲ್ಲಿ ಭಾರತೀಯ ಮತ್ತು ವಿದೇಶಿ ಮಾದರಿ ಶೌಚಾಲಯ ಗಳು ಮಾತ್ರವಲ್ಲದೇ, ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಯಂತ್ರ, ಇನ್ಸಿನೇರೇಟರ್, ಮಗುವಿಗೆ ಡೈಪರ್ ಬದಲಿಸುವ ಸ್ಥಳ, ಕೈತೊಳೆಯುವ ವಾಶ್ ಬೇಸಿನ್‌ಗಳು, ಸಂವೇದಕ ದೀಪಗಳು, ಸಂಪೂರ್ಣ ಸೌರವಿದ್ಯುತ್ ವ್ಯವಸ್ಥೆ ಕೂಡ ಅಳವಡಿಸಲಾಗಿತ್ತು. ಇದೆಲ್ಲದರಿಂದ ಎಲ್ಲರ ಗಮನವನ್ನೂ ಸೆಳೆದಿದ್ದ “ಸ್ತ್ರೀ ಶೌಚಾಲಯ ಬಂಡಿ’ ಸದ್ದಿಲ್ಲದೆ ಮೂಲೆಸೇರಿದೆ.
ಈ ಯೋಜನೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆ ಅಡಿ ಜಾರಿಗೊಳಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ಗುಜರಿ ಬಸ್‌ನ್ನು ಒಟ್ಟು 12 ಲಕ್ಷ ರೂ.ನಲ್ಲಿ “ಸ್ತ್ರೀ ಶೌಚಾಲಯ’ವನ್ನಾಗಿ ರೂಪಿಸಲಾಗಿತ್ತು. ಇಡೀ ಬಸ್ ಅನ್ನು ಗುಲಾಬಿ ಬಣ್ಣದಿಂದ ಆಕರ್ಷಿತವಾಗಿಸಿ, 2020ರ ಆಗಸ್ಟ್‌ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇದಕ್ಕೆ ಚಾಲನೆ ದೊರಕಿತ್ತು. ತದನಂತರ ದಾವಣಗೆರೆ ಬಸ್ ನಿಲ್ದಾಣದಲ್ಲಿಯೂ ಪ್ರಾರಂಭಿಸಲಾಗಿತ್ತು.
ಆ ವೇಳೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದ ಶ್ರುತಿ “ಸ್ತ್ರೀ ಶೌಚಾಲಯ’ಕ್ಕೆ ಭೇಟಿ ನೀಡಿದಾಗ, ನಿತ್ಯ ಹಲವು ಮಂದಿ ಮಹಿಳೆಯರು ಬಸ್ ನಿಲ್ದಾಣಗಳಿಗೆ ಆಗಮಿಸುತ್ತಾರೆ. ಆದ್ದರಿಂದ ಪ್ರತ್ಯೇಕ ಶೌಚಾಲಯಗಳ ಅವಶ್ಯಕತೆ ಅನಿವಾರ್ಯ. ಈ ಹೈಟೆಕ್ ಮಾದರಿಯ ಸ್ತ್ರೀ ಶೌಚಾಲಯಗಳನ್ನು ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳು ಸೇರಿ ವಿವಿಧ ಸ್ಥಳಗಳಲ್ಲಿ ಸ್ಥಾಪಿಸುವುದಾಗಿ ತಿಳಿಸಿದ್ದರು. ಆದರೆ ಮಹಿಳೆಯರು ಈ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳದ ಕಾರಣ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ಸಂಸ್ಥೆಯು ಕೈಬಿಟ್ಟಿತು ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಗುಜರಿ ಈಗ ಭೋಜನಾ ಬಂಡಿ:
ಸ್ತ್ರೀ ಹೈಟೆಕ್ ಶೌಚಾಲಯದ ಮುಂದುವರಿದ ಭಾಗವಾಗಿ ಬಿಎಂಟಿಸಿಯು ಗುಜರಿ ಬಸ್‌ಗಳಿಂದ ಬಸ್‌ಗಳನ್ನು “ಭೋಜನ ಬಂಡಿ’ ಎಂಬ ಎರಡು ಪ್ರಾಯೋಗಿಕ ಕ್ಯಾಂಟೀನ್‌ಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ. ಸಂಸ್ಥೆಯಲ್ಲಿ 10 ಲಕ್ಷ ಕಿ.ಮೀ.ಗೂ ಹೆಚ್ಚು ಕಾರ್ಯಾಚರಣೆ ಮಾಡಿ ಗುಜರಿ ಸೇರಿರುವ ಬಸ್‌ಗಳನ್ನು ಒಂದೊಂದಾಗಿ ಭೋಜನ ಬಂಡಿಗಳನ್ನಾಗಿ ಮಾರ್ಪಡಿಸುವುದಾಗಿ ಸಂಸ್ಥೆ ತಿಳಿಸುತ್ತಿದೆ. ಇದರಲ್ಲಿ ಕುಳಿತುಕೊಳ್ಳಲು ಆರಾಮದಾಯಕ ಆಸನಗಳು ಮತ್ತು ಟೇಬಲ್, ಫ್ಯಾನ್, ಕೈತೊಳೆಯಲು ವಾಶ್‌ಬೇಸಿನ್, ಚಾವಣಿ ಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಕೈಗೆಟಕುವ ದರದಲ್ಲಿ ತಿಂಡಿ, ಊಟ ಮಾಡಬಹುದಾಗಿದೆ. ನಗರದ ಹೃದಯಭಾಗಗಳಲ್ಲೇ ಬಿಎಂಟಿಸಿ ನಿಲ್ದಾಣಗಳಲ್ಲಿ ಸ್ವಂತ ಜಾಗಗಳಿವೆ. ಮುಂಬರುವ ದಿನಗಳಲ್ಲಿ ಅಲ್ಲೆಲ್ಲ ಇವುಗಳನ್ನು ಪರಿಚಯಿಸಲು ಅವಕಾಶ ಇದೆ. ಆ ಮೂಲಕ ಭವಿಷ್ಯದಲ್ಲಿ ಇದನ್ನು “ಬ್ರ್ಯಾಂಡ್’ ಆಗಿ ಪರಿವರ್ತಿಸಬಹುದು. ಆದರೆ, ಈ ನಿಟ್ಟಿನಲ್ಲಿ ಸಂಸ್ಥೆ ಮನಸ್ಸು ಮಾಡಬೇಕಷ್ಟೇ. ಇಲ್ಲವಾದರೆ, ಈ ಯೋಜನೆಯೂ ಸ್ತ್ರೀ ಶೌಚಾಲಯದಂತೆ ಆರಂಭಿಕ ಉತ್ಸಾಹ ತೋರಿಸಿ, ನಂತರ ಸದ್ದಿಲ್ಲದೆ ಮೂಲೆಗುಂಪಾಗುವ ಸಾಧ್ಯತೆಗಳಿವೆ.
– ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.