ಹೊರಗುತ್ತಿಗೆ ವಾಹನ ಬಳಕೆಗೆ ಸರ್ಕಾರ ಬ್ರೇಕ್
Team Udayavani, Sep 7, 2018, 6:00 AM IST
ಬೆಂಗಳೂರು: ವಿಧಾನಸೌಧ-ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಇಲಾಖಾ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹೊರಗುತ್ತಿಗೆ ಆಧಾರದ ಮೇಲೆ ವಾಹನ ಬಳಕೆ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.
ಇಲಾಖಾ ಮುಖ್ಯಸ್ಥರು ಹಾಗೂ ಹಿರಿಯ ಆಧಿಕಾರಿಗಳು ಮನೆಯಿಂದ ಕಚೇರಿ, ಕಚೇರಿಯಿಂದ ಮನೆಗೆ ಬರಲು ಹೊರಗುತ್ತಿಗೆ ಆಧಾರದಲ್ಲಿ ವಾಹನ ಬಳಕೆ ಮಾಡುತ್ತಿದ್ದು ಅದರ ವೆಚ್ಚ ವಾರ್ಷಿಕವಾಗಿ ಕೋಟ್ಯಂತರ ರೂ. ಮುಟ್ಟುತ್ತಿದೆ.
ಜತೆಗೆ ಆ ರೀತಿ ಹೊರಗುತ್ತಿಗೆ ಆಧಾರದಲ್ಲಿ ಪಡೆದ ಕಾರು ಅಧಿಕಾರಿಗಳ ಕುಟುಂಬ ಸದಸ್ಯರು ಸ್ವಂತ ಕೆಲಸಕ್ಕೆ ಬಳಕೆ ಮಾಡುತ್ತಿರುವುದೂ ಪತ್ತೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಓಲಾ, ಉಬರ್ ನಂತಹ ಖಾಸಗಿ ಟ್ಯಾಕ್ಸಿ ಬಳಕೆ ಮಾಡಿದರೆ ಮನೆಯಿಂದ ಕಚೇರಿ ಹಾಗೂ ಕಚೇರಿಯಿಂದ ಮನೆಗೆ ಇಂತಿಷ್ಟು ಕಿ.ಮೀ. ಎಂದು ನಮೂದಾಗುವುದರಿಂದ ದುರುಪಯೋಗಕ್ಕೆ ಕಡಿವಾಣ ಹಾಕಬಹುದು.
ಸರ್ಕಾರಿ ಕಚೇರಿಗಳಿಗೆ ಹೊರಗುತ್ತಿಗೆಯಡಿ ವಾಹನ ಒದಗಿಸುವ “ಮಾಫಿಯಾ’ ನಿಯಂತ್ರಣ ಮಾಡಬಹುದು ಎಂಬ ಉದ್ದೇಶ ಇದರ ಹಿಂದಿದೆ.
ಅಧಿಕಾರಿಗಳು ಕಚೇರಿ ವೇಳೆ ಸಂದರ್ಭದಲ್ಲಿ ತುರ್ತು ಕಾರ್ಯ ನಿಮಿತ್ತ ಸಂಚರಿಸಬೇಕಾದರೆ ಇಲಾಖೆಯ ಕಾರು ಬಳಕೆ ಮಾಡಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ.ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಬಳಕೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಆಗುತ್ತಿರುವ ಹೆಚ್ಚಿನ ಆರ್ಥಿಕ ಹೊರೆ ತಪ್ಪಿಸಲು ಓಲಾ, ಉಬರ್ ಮುಂತಾದ ಖಾಸಗಿ ಟ್ಯಾಕ್ಸಿ ಬಳಕೆ ಬಗ್ಗೆ ಪರಿಶೀಲಿಸಿ. ಈ ಸಂಬಂಧ ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡುವಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವನೆ
ಈ ಹಿಂದೆ ಹೊಸ ವಾಹನ ಖರೀದಿಗೆ ಇಲಾಖಾ ಮುಖ್ಯಸ್ಥರಿಗೆ ಇಲಾಖೆಗಳಲ್ಲಿ ನಿಗದಿಪಡಿಸಿದ್ದ ಆರ್ತಿಕ ಮಿತಿಯ ದರ 6.50 ಲಕ್ಷ ರೂ. (ತೆರಿಗೆ ಹೊರತುಪಡಿಸಿ) ನಿಂದ 9 ಲಕ್ಷ ರೂ. (ಎಕ್ಸ್ ಷೋ ರೂಂ ದರ), ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿ ಶ್ರೇಣಿ ಅಧಿಕಾರಿಗಳಿಗೆ 9 ಲಕ್ಷ ರೂ.ನಿಂದ 14 ಲಕ್ಷ ರೂ.ಗೆ ಪರಿಷ್ಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದರ ಜತೆಗೆ ಇಲಾಖಾ ಮುಖ್ಯಸ್ಥರು ಸಾಕಷ್ಟು ಕಾರುಗಳನ್ನು ಅನಗತ್ಯವಾಗಿ ಹೊರಗುತ್ತಿಗೆ ಆಧಾರದ ಮೇಲೆ ಪಡೆದು ಬಳಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಅಗತ್ಯ ಇರುವ ಕಡೆ ಸಂಚರಿಸಲು ಹಾಗೂ ಮನೆಯಿಂದ ಕಚೇರಿ ಹಾಗೂ ಕಚೇರಿಯಿಂದ ಮನೆಗೆ ಸಂಚರಿಸಲು ಓಲಾ, ಉಬರ್‌ನಂತರ ಖಾಸಗಿ ಸಂಸ್ಥೆಗಳ ವಾಹನ ಬಳಕೆಗೆ ಚಿಂತನೆ ನಡೆಸಲಾಗಿದೆ.ಈ ಮಧ್ಯೆ, ಸರ್ಕಾರಿ ಅಧಿಕಾರಿಗಳಿಗೆ ನಗರ ಪ್ರದೇಶಗಳಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಒದಗಿಸುವ ಹಾಗೂ ಅವುಗಳ ಬಳಕೆ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆ ನಿಷೇಧ
*ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಜಾರಿ ನಿಟ್ಟಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯ, ಸರ್ಕಾರದಿಂದ ಅನುದಾನ ಪಡೆಯುವ ಯಾವುದೇ ಸಂಸ್ಥೆಗಳಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ (ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಾಟಲ್) ನೀರಿನ ಬಳಕೆ/ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಸಭೆ, ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ರಹಿತ ಲೋಟಗಳಲ್ಲಿ ಸರಬರಾಜು ಮಾಡಬೇಕು. 20 ಲೀಟರ್ ಮೇಲ್ಪಟ್ಟ ಕ್ಯಾನ್‌ಗಳಲ್ಲಿ ನೀರು ತಂದು ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
– ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.