ಎಚ್‌ಡಿಕೆಗೆ ಪತ್ರ ಬರೆದು ಬಿಎಸ್‌ವೈ ಆಕ್ರೋಶ
Team Udayavani, Jun 8, 2018, 6:25 AM IST
ಬೆಂಗಳೂರು: ಹೆಲಿಕಾಪ್ಟರ್ ಬಳಕೆಗೆ 13.50 ಲಕ್ಷ ರೂ.ವೆಚ್ಚ ಮಾಡಿದ್ದಾರೆಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶಗೊಂಡಿದ್ದು, ಬಹಿರಂಗ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ನಿಯೋಜಿತ
ಮುಖ್ಯಮಂತ್ರಿಯಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ, ಪ್ರವಾಸದ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದು, ಲಿಂಗೈಕ್ಯರಾಗಿದ್ದ ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಡಾ.ಮಹಂತ ಶಿವಯೋಗಿ ಅವರಿಗೆ ಅಂತಿಮ ಗೌರವ ಸಲ್ಲಿಸಲು ಹೋಗಿದ್ದೆ. ನಂತರ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಒಬ್ಬ ರೈತನ ಮನೆಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದೆ.
ಆದರೆ, ಈ ಬಗ್ಗೆ ಹಗುರವಾಗಿ ಮಾತನಾಡಿರುವುದು ನನಗೆ ಅತ್ಯಂತ ಖೇದ ತಂದಿದೆ. ನಾನು ಈಗಲೂ ನನ್ನ ಪ್ರವಾಸದ ವೆಚ್ಚವನ್ನು ಭರಿಸಲು ಸಿದಟಛಿನಿದ್ದೇನೆ ಎಂದು ಹೇಳಿದ್ದಾರೆ.
ಪತ್ರದ ಸಾರಾಂಶ: ಒಬ್ಬ ಜಬಾಬ್ದಾರಿಯುತ ರಾಜಕಾರಣಿಯಾಗಿ ಮತ್ತು ಆ ಸಮಯದಲ್ಲಿ ಉಸ್ತುವಾರಿ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ತಿಳಿದುಕೊಂಡು ಅಂದು ನಾನು ಇಳಕಲ್ಲಿಗೆ ಹೋಗಿದ್ದೆ.
ಸಮಯ, ಸಂದರ್ಭಗಳ ಸೂಕ್ಷ್ಮವನ್ನು ತಿಳಿದುಕೊಳ್ಳದೆ, ಒಬ್ಬ ರೈತನಿಗೆ ಮತ್ತು ಧರ್ಮಗುರುಗಳಿಗೆ ಅಂತಿಮ ನಮನ ಸಲ್ಲಿಸಿದ್ದ ವಿಷಯವನ್ನು, ತಾವು ದುಂದುವೆಚ್ಚ ಎನ್ನುವುದಕ್ಕೆ ಬಳಸಿಕೊಂಡಿರುವುದು ಸರಿಯೇ? ತಾವು ಮುಖ್ಯಮಂತ್ರಿಗಳ ಸ್ಥಾನದಲ್ಲಿ ಕುಳಿತು, ಜನರನ್ನು ದಾರಿ ತಪ್ಪಿಸುವಂತಹ,ಇಂತಹ ಅಸಂಬದ್ಧ ಹೇಳಿಕೆಯನ್ನು
ನೀಡುವುದು ಸರಿಯಲ್ಲ. ಅಂದಿನ, ಅನಿವಾರ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ಮುಖ್ಯಸ್ಥನಾಗಿ, ಅಧಿಕೃತವಾಗಿ
ಸರ್ಕಾರ ನೀಡಿದ ವ್ಯವಸ್ಥೆಯನ್ನು ನಾನು ಬಳಸಿಕೊಂಡಿದ್ದೇನೆ. ಆದರೆ, ಇದನ್ನು ತಮ್ಮ ಹೆಚ್ಚುಗಾರಿಕೆಯನ್ನು ವ್ಯಕ್ತಪಡಿಸಲು ತಾವು ಉದಾಹರಿಸಿದ್ದು ನನಗೆ ನೋವನ್ನುಂಟು ಮಾಡಿದೆ.
ವೈಯಕ್ತಿಕವಾಗಿ ತಮಗೆ ಸ್ವಾಮೀಜಿಗಳ ಬಗ್ಗೆ ಗೌರವವಿಲ್ಲದೆ ಇರಬಹುದು. ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೆರೆ ಸ್ವಾಮೀಜಿಗಳಿಗೆ ಅಗೌರವ ತೋರುವ ಮಾತುಗಳನ್ನಾಡಿದ್ದೀರಿ. ಈಗ ಮತ್ತೋರ್ವ ಸ್ವಾಮೀಜಿಗಳ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ವಿಷಯವನ್ನು ದುಂದುವೆಚ್ಚ ಎನ್ನುವಂತೆ ಮಾತನಾಡಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದೀರಿ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕಳೆದ ಎರಡು ವಾರಗಳಿಂದ ತಮ್ಮ ಸಚಿವ ಸಂಪುಟದ ರಚನೆಗಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನೆಲ್ಲಾ ರಾಜ್ಯದ ಜನ ಗಮನಿಸುತ್ತಿದ್ದಾರೆ. ರಾಜಕೀಯ ಮೇಲಾಟ ಮತ್ತು ಅಧಿಕಾರಕ್ಕಾಗಿ ಹಗ್ಗ-ಜಗ್ಗಾಟದಲ್ಲಿಯೇ ಕಾಲ ಕಳೆಯುತ್ತಿದ್ದು,ಆಡಳಿತ ಯಂತ್ರವೇ ನಿಂತು ಹೋಗಿದೆ.
ಜನರನ್ನು ಕೇಳುವವರೇ ಇಲ್ಲವಾಗಿದೆ.
ಆದರೆ, ಇದಕ್ಕಿಂತಲೂ ತಮ್ಮ ವೈಯಕ್ತಿಕ ಹೆಚ್ಚುಗಾರಿಕೆಯನ್ನು ತೋರ್ಪಡಿಸಲು ಸ್ವಾಮೀಜಿಗಳ ಅಂತ್ಯಸಂಸ್ಕಾರದ ಭೇಟಿಯನ್ನು ದುಂದುವೆಚ್ಚ ಎನ್ನುವ ತಮ್ಮ ಕುಚೋದ್ಯದ, ದುರಹಂಕಾರದ ಹೇಳಿಕೆಗಳನ್ನು ನಿಲ್ಲಿಸಿ. ಇಂತಹ ಕೀಳುಮಟ್ಟದ ಹೇಳಿಕೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಅದಕ್ಕೆ, ರಾಜಕೀಯ ಇಚ್ಛಾಶಕ್ತಿ ಬೇಕು. ರೈತರ ಸಾಲ ಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿ.
ಬಿ.ಎಸ್.ಯಡಿಯೂರಪ್ಪ ಅವರಿಂದ ಹಣ ಪಡೆಯುವಷ್ಟು ದರಿದ್ರ ನಮ್ಮ ಸರ್ಕಾರಕ್ಕಿಲ್ಲ.ನಾನು ಅವರಿಗೆ ಖರ್ಚನ್ನು ವಾಪಸ್ ಕೊಡಿ ಎಂದೂ ಕೇಳಿಲ್ಲ. ಆದರೆ, ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡಿದ್ದ ಕ್ರಮಗಳ ಕುರಿತು ವಿವರಿಸುವಾಗ ಉದಾಹರಣೆ ಕೊಟ್ಟಿದ್ದೆ ಅಷ್ಟೇ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.