ಹೆಸರಿಗೆ ಬಸ್ ನಿಲ್ದಾಣ; ಕಸ ವಿಂಗಡಣೆಗೆ ಪ್ರಶಸ್ತ ತಾಣ!
Team Udayavani, Nov 29, 2019, 10:40 AM IST
ಬೆಂಗಳೂರು: ಅದು ಹೆಸರಿಗೆ ಬಸ್ ನಿಲ್ದಾಣ. ಆದರೆ ಅಲ್ಲಿ ಬಸ್‌ಗಳು ನಿಲ್ಲುವುದಿಲ್ಲ. ಪ್ರಯಾಣಿಕರೂ ಅದರ ಹತ್ತಿರ ಸುಳಿಯುವುದಿಲ್ಲ. ಬದಲಿಗೆ ನಗರದ ತ್ಯಾಜ್ಯ ವಿಲೇವಾರಿಮಾಡುವ ವಾಹನಗಳು ತಂಗುತ್ತವೆ!
-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಹೆಬ್ಟಾಳ ಪಶುವೈದ್ಯಕೀಯ ಕಾಲೇಜು ಬಳಿಯ ಎರಡೂ ಬದಿಯ ಬಸ್ ನಿಲ್ದಾಣಗಳು ಈಗ ಅಕ್ಷರಶಃ ತ್ಯಾಜ್ಯ ವಿಂಗಡಣಾ ಘಟಕವಾಗಿ ಮಾರ್ಪಟ್ಟಿವೆ. ಈ “ಘಟಕ’ಗಳಿಗೆ ಹೊಂದಿಕೊಂಡ ಕಾಲೇಜು, ಶಾಲೆ, ಇಂದಿರಾ ಕ್ಯಾಂಟೀನ್, ಪ್ರಯೋಗಾ ಲಯ, ಬೇಕರಿಗೆಲ್ಲಾ ಕಸದ ಘಾಟು ರಾಚುತ್ತಿದ್ದು, ಸ್ಥಳೀಯರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಸ್ಥಳೀಯರು ಮತ್ತು ಬಿಬಿಎಂಪಿ ಕೋರಿಕೆಯ ಮೇರೆಗೆ ನಾಲ್ಕಾರು ಬಸ್‌ಗಳು ಏಕಕಾಲದಲ್ಲಿ ನಿಲ್ಲುವಷ್ಟು ಜಾಗವನ್ನು ಕಲ್ಪಿಸಲಾಗಿದೆ. ಬಿಎಂಟಿಸಿ ಆರಂಭದಲ್ಲಿ ಬಸ್ ಗಳ ನಿಲುಗಡೆ ಕೂಡ ಮಾಡುತ್ತಿತ್ತು. ಆದರೆ, ದಿನ ಕಳೆದಂತೆ ಅಲ್ಲಿ ಬಸ್‌ಗಳ ಜಾಗವನ್ನು ಕಸ ಸಾಗಿಸುವ ವಾಹನಗಳು ಆಕ್ರಮಿಸಿಕೊಂಡವು. ತ್ಯಾಜ್ಯದ ವಾಸನೆಯಿಂದ ಅಲ್ಲಿಗೆ ಪ್ರಯಾಣಿಕರು ಬರಲು ಹಿಂದೇಟು ಹಾಕುತ್ತಿದ್ದರು. ಈಗ ಅಲ್ಲಿ ಪ್ರಯಾಣಿಕರೂ ಬರುವುದಿಲ್ಲ; ಬಸ್‌ಗಳೂ ನಿಲ್ಲುವುದರಿಂದ. ಇದಕ್ಕಾಗಿ 200 ಮೀ. ದೂರದಲ್ಲಿರುವ ತಂಗುದಾಣದಲ್ಲಿ ಜನ ಬಸ್ ಏರುವಂತಾಗಿದೆ.
ಹಾಲಿನ ಮಾರಾಟದಲ್ಲಿ ಕುಸಿತ!: ನಗರದಿಂದ ಹೆಬ್ಟಾಳಕ್ಕೆ ತೆರಳುವ ಮಾರ್ಗದಲ್ಲಿನ ನಿಲ್ದಾಣಕ್ಕೆ ಹೊಂದಿಕೊಂಡು ಪಶುವೈದ್ಯಕೀಯ ಕಾಲೇಜು ಹಾಗೂ ಬೆಂಗಳೂರುವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರ ಕಚೇರಿ ಇದ್ದು, ಅಲ್ಲಿ ನಿತ್ಯ ನೂರಾರು ಜನ ವಾಯುವಿಹಾರಕ್ಕೆ ಬರುತ್ತಿದ್ದರು. ಹೀಗೆ ಬರುವವರು ಆವರಣದಲ್ಲಿನ ಬೇಕರಿ ಸಾಮಗ್ರಿಗಳು, ಹಾಲು, ತರಕಾರಿ ಖರೀದಿಸುತ್ತಿದ್ದರು. ಇದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.
ಆದರೆ, ಕಸದ ಸಮಸ್ಯೆಯಿಂದಾಗಿಯೇ ಜನ ಇತ್ತ ಮುಖಮಾಡುತ್ತಿಲ್ಲ. ಪರಿಣಾಮ ನಿತ್ಯ 150 ಲೀ. ಹಾಲು ಮಾರಾಟವಾಗುತ್ತಿದ್ದುದು, ಈಗ ಬರೀ 50 ಲೀ. ಮಾರಾಟ ಆಗುತ್ತಿದೆ. ತ್ಯಾಜ್ಯದ ಮೇಲೆ ಹಾರಾಡುವ ನೊಣ, ಸೊಳ್ಳೆ ಮತ್ತಿತರ ಕೀಟಗಳು ಬಂದು ಅಣತಿ ದೂರದಲ್ಲಿರುವ ಬೇಕರಿ ತಿನಿಸುಗಳ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಬೇಗ ಹಾಳಾಗುತ್ತಿವೆ. ಇದು ದೊಡ್ಡ ತಲೆನೋವಾಗಿದೆ ಎಂದು ಹೈನುಗಾರಿಕೆ ತಂತ್ರಜ್ಞಾನ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿ ಮನೋಜ್ ಬೇಸರ ವ್ಯಕ್ತಪಡಿಸುತ್ತಾರೆ. “ನಮ್ಮ ವಸತಿ ನಿಲಯದಲ್ಲಿ ನೂರು ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಡೇಂ ಯಿಂದ ಬಳಲುತ್ತಿದ್ದಾರೆ. ಈ ಮೊದಲು ಕ್ಯಾಂಪಸ್ ನಲ್ಲಿ 500ಕ್ಕೂ ಅಧಿಕ ವಾಯುವಿಹಾರಿಗಳು ಬರುತ್ತಿದ್ದರು. ಈಗ ಅದೂ ಕಡಿಮೆಯಾಗಿದೆ’ ಎಂದು ಹೈನುಗಾರಿಕೆ ತಂತ್ರಜ್ಞಾನ ವಿಭಾಗದ ಮತ್ತೂಬ್ಬ ವಿದ್ಯಾರ್ಥಿ ಲಕ್ಷಿತ್ ತಿಳಿಸುತ್ತಾರೆ.
ನಿವಾಸಿಗಳಿಗೆ ನೊಣ, ಸೊಳ್ಳೆ ಕಾಟ; ಬೆಳಿಗ್ಗೆ ಸರ್ವಿಸ್ ರಸ್ತೆಯುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆಯಲ್ಲೆಲ್ಲಾ ಹಸಿಕಸದ “ಲಿಚೆಟ್’ ಹರಿಯುತ್ತಿರುತ್ತದೆ. 11ರ ನಂತರ ವಾಹನಗಳ ಸಂಖ್ಯೆ ಕಡಿಮೆಯಾದರೂ ದುರ್ವಾಸನೆ ಕಡಿಮೆ ಆಗುವುದಿಲ್ಲ. ಕನಿಷ್ಠ ಅರ್ಧ ಕಿ.ಮೀ.ವರೆಗೂ ವ್ಯಾಪಿಸುವುದರಿಂದ ಆರ್.ಟಿ. ನಗರ, ಹೆಬ್ಟಾಳ ಕ್ವಾಟ್ರಸ್‌ಗೆ ಇದರ ವಾಸನೆ ಹಬ್ಬುತ್ತದೆ. ರಾತ್ರಿ ಸೊಳ್ಳೆ ಮತ್ತು ನೊಣಗಳ ಕಾಟವೂ ಇದೆ. ಒಟ್ಟಾರೆಈ ತ್ಯಾಜ್ಯ ನೆಮ್ಮದಿ ಕದಡುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಸಂಚಾರ ಪೊಲೀಸರಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಬೆಂಗಳೂರು ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಹೆಬ್ಟಾಳ ನಿವಾಸಿ ಪ್ರೊ.ರಾಮಕೃಷ್ಣ ರಾವ್ ಆರೋಪಿಸುತ್ತಾರೆ.
ಕ್ಯಾಂಟೀನ್ ಬಳಿ ಅವಕಾಶ ಸರಿ ಅಲ್ಲ : ಯಲಹಂಕದಿಂದ ನಗರಕ್ಕೆ ಆಗಮಿಸುವ ಮಾರ್ಗದಲ್ಲಿರುವ ಹೆಬ್ಟಾಳ ಪಶುವೈದ್ಯಕೀಯ ಕಾಲೇಜು ಎದುರಿನ ರಸ್ತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಿತ್ಯ ತಿಂಡಿ ಮತ್ತು ಊಟಕ್ಕೆ ನೂರಾರು ಜನ ಇಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಬರುತ್ತಾರೆ. ಅದರ ಪಕ್ಕದಲ್ಲೇ ತ್ಯಾಜ್ಯ ಹತ್ತಾರು ವಾಹನಗಳು ನಿಂತಿರುತ್ತವೆ. ವಾಸನೆ ಜತೆಗೆ ಆ ತ್ಯಾಜ್ಯದ ಮೇಲೆ ಕುಳಿತುಕೊಳ್ಳುವ ನೊಣ ಮತ್ತು ಸೊಳ್ಳೆಗಳು ಕ್ಯಾಂಟೀನ್ ಅಡಿಗೆ ಮೇಲೆ ಕುಳಿತುಕೊಳ್ಳಬಹುದು. ಗೊತ್ತಿಲ್ಲದೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕ್ಯಾಂಟೀನ್‌ಗೆ ಬರುವ ಬಹುತೇಕರು ಕೂಲಿಕಾರ್ಮಿಕರು. ಒಂದು ದಿನ ಆರೋಗ್ಯ ಸಮಸ್ಯೆಯಿಂದ ರಜೆ ಹಾಕಿದರೂ ದಿನದ ಕೂಲಿ ಹೋಗುತ್ತದೆ. ಆದ್ದರಿಂದ ತಕ್ಷಣ ಇದನ್ನು ತೆರವುಗೊಳಿಸಬೇಕು. ಯಾವುದೇಕಾರಣಕ್ಕೂ ಇಲ್ಲಿ ತ್ಯಾಜ್ಯ ವಿಂಗಡಣೆಗೆ ಅವಕಾಶ ನೀಡಬಾರದು ಎಂದು ನಿಯಮಿತವಾಗಿ ಇಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕ ರಾಜಾಜಿನಗರದ ನಿವಾಸಿ ರಾಜ್ ಕುಮಾರ್ ಒತ್ತಾಯಿಸುತ್ತಾರೆ.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.