ಎನ್‌ಜಿಟಿ ಒಪ್ಪಿಗೆ ನಿರೀಕ್ಷೆಯಲ್ಲಿ 1500 ಬಸ್ ಖರೀದಿ
Team Udayavani, Dec 28, 2018, 11:34 AM IST
ಬೆಂಗಳೂರು: ಬಿಎಂಟಿಸಿಗೆ 1,500 ಬಸ್‌ಗಳ ನೇರ ಖರೀದಿ ಹಾಗೂ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಜ.9ರಂದು ಪ್ರಕರಣ ವಿಚಾರಣೆಗೆ ಬರಲಿದೆ. ಆದರೆ ಎನ್‌ಜಿಟಿ ಒಪ್ಪಿಗೆ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಬಿಎಂಟಿಸಿಯಲ್ಲಿ 6,600 ಬಸ್‌ಗಳಿದ್ದು, ನಿತ್ಯ 5,500 ಬಸ್‌ಗಳು ಸಂಚರಿಸುತ್ತಿವೆ. ನಗರದಲ್ಲಿ 80 ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ಬಿಎಂಟಿಸಿಯ 5000 ಬಸ್‌ಗಳಿಂದ ವಾಯು ಮಾಲಿನ್ಯ ಹೆಚ್ಚಾಗುತ್ತದೆ ಎಂಬ ವಾದ ಸರಿಯಲ್ಲ. ಬಿಎಂಟಿಸಿಯಲ್ಲಿ ಹಳೆಯ ಬಸ್‌ಗಳೇ ಹೆಚ್ಚಾಗಿವೆ. ವಾಯು ಮಾಲಿನ್ಯ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ವರ್ಷದಲ್ಲಿ 4,800 ಮಂದಿ ಶ್ವಾಸಕೋಶದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರು, ಸ್ಥಳೀಯ ಶಾಸಕರು, ನಾಗರಿಕ ಸೇವಾ ಸಂಸ್ಥೆಗಳು, ಪರಿಸರ ತಜ್ಞರ ಸಹಯೋಗದಲ್ಲಿ, ಖಾಸಗಿ ವಾಹನ ಬಳಕೆಯಿಂದಾಗುವ ತೊಂದರೆ, ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿದ್ದರಷ್ಟೇ ಹೊಸ ವಾಹನ ನೋಂದಣಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಏಕಾಏಕಿ ಜಾರಿಗೊಳಿಸಿದರೆ ಜನರಿಗೂ ತೊಂದರೆಯಾಗಬಹುದು. ಹಾಗಾಗಿ ಜಾಗೃತಿ ಮೂಲಕ ಅನಿವಾರ್ಯತೆ ಅರ್ಥಮಾಡಿಸಿ ನಂತರ ಜಾರಿಗೊಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಿಯಾ ಯೋಜನೆ ರಚಿಸಬೇಕಿದೆ ಎಂದು ತಿಳಿಸಿದರು.
ಬಸವನಗುಡಿ, ಹನುಮಂತನಗರಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸಲು, ತಿರುವು ಪಡೆಯಲು ಸಾಧ್ಯವಾಗದಂತೆ ಕಾರುಗಳನ್ನು ರಸ್ತೆಗಳಲ್ಲಿ ನಿಲ್ಲಿಸಲಾಗಿರುತ್ತದೆ. ಹಾಗಾಗಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಬಹುಮಹಡಿ ಪಾರ್ಕಿಂಗ್ ತಾಣಗಳ ಬದಲಿಗೆ ಚಿಕ್ಕ ನಿವೇಶನಗಳಲ್ಲೇ ಪರಿಣಾಮಕಾರಿಯಾಗಿ ಯಾಂತ್ರಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವತ್ತ ಬಿಬಿಎಂಪಿ ಗಮನ ಹರಿಸಬೇಕು ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.