ಗೌರಿ ಕೊಲ್ಲಲು ಕಲಾಸಿಪಾಳ್ಯದಲ್ಲೇ ಬುಲೆಟ್ ಖರೀದಿ
Team Udayavani, Jun 2, 2018, 12:06 PM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಕಲಾಸಿಪಾಳ್ಯದಲ್ಲೇ ಗುಂಡು ಖರೀದಿಸಿದ್ದರು ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಹಿಂದೂ ಹಾಗೂ ಹಿಂದೂ ದೇವತೆಗಳ ಬಗ್ಗೆ ಗೌರಿ ಲಂಕೇಶ್ ಹೇಳಿಕೆಗಳಿಂದ ಆಕ್ರೋಶಗೊಂಡಿದ್ದ ಪ್ರವೀಣ್ ಮತ್ತು ನವೀನ್ ಕುಮಾರ್, ವಿಜಯನಗರ ಮುಖ್ಯರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಬಿಬಿಎಂಪಿ ಉದ್ಯಾನವನದಲ್ಲಿ ಕೊಲೆಗೆ ಸಂಚು ರೂಪಿಸಿದ್ದರು. 2017ರ ಜೂನ್‌ನಲ್ಲಿ ಮನೋಹರ್ ಯವಡೆಯನ್ನು, ಅಮೋಲ್ ಕಾಳೆ ಬೆಳಗಾವಿಯ ಸ್ವೀಕಾರ್ ಹೋಟೆಲ್‌ಗೆ ಕರೆಸಿಕೊಂಡು ಗೌರಿ ಲಂಕೇಶ್ ಚಲನವಲನಗಳ ಬಗ್ಗೆ ನಿಗಾ ಇಡಲು ಸೂಚಿಸಿದ್ದ ಎಂದು ಆರೋಪಿಗಳು ಹೇಳಿಕೆ ದಾಖೀಲಿಸಿದ್ದಾರೆ.
ಸನಾತನ ಸಂಸ್ಥೆ ಜತೆ ನಂಟು: ನವೀನ್ ಕುಮಾರ್‌ಗೆ ಗೋವಾದ ಸನಾತನ ಸಂಸ್ಥೆ ಜತೆ ಒಡನಾಟ ಇತ್ತು ಎನ್ನುವುದಕ್ಕೆ ಪೂರಕವಾದ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಖುದ್ದು ನವೀನ್ ಪತ್ನಿ ರೂಪಾ ಕೂಡ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.
2017ರಲ್ಲಿ ಶಿವಮೊಗ್ಗದ ಒಂದು ಕಾರ್ಯಕ್ರಮದಲ್ಲಿ ಸನಾತನ ಧರ್ಮ ಸಂಸ್ಥೆಯವರನ್ನು ನವೀನ್ ನನಗೆ ಪರಿಚಯ ಮಾಡಿಸಿದ್ದರು. ರಾಜ್ಯ ರಾಘರಾಗಿನಿ ಸಂಸ್ಥೆಯ ಭವ್ಯಕ್ಕ, ವಕೀಲರಾದ ದಿವ್ಯಕ್ಕ, ಸನಾತನದ ಮೋಹನ್‌ಗೌಡ, ಮಂಗಳೂರು ಚಂದ್ರು, ರಮಾನಂದ ಅವರುಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಎರಡು ವರ್ಷಗಳ ಬಳಿಕ ಮದ್ದೂರಿನಲ್ಲಿ ಹಿಂದೂ ಯುವ ಸೇನೆ ಸಂಘಟನೆ ಕಟ್ಟಿಕೊಂಡು ಸಂಚಾಲಕರಾಗಿದ್ದರು.
ಮದ್ದೂರಿನ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಸನಾತನ ಸಂಸ್ಥೆಯ ಧರ್ಮ ಶಿಕ್ಷಣ ಎಂಬ ಕಾರ್ಯಕ್ರಮ ಮಾಡಿದ್ದರು. ಮೈಸೂರಿನ ದಸರಾ ಹಬ್ಬದ ವಾರಕ್ಕೆ ಮೊದಲು ಸನಾತನ ಸಂಸ್ಥೆಯ ಒಬ್ಬರು ನಾಯಕರು ನಮ್ಮ ಮನೆಗೆ ಬಂದಿದ್ದು, ನಮ್ಮ ಮನೆಯಲ್ಲೇ ಉಳಿದಿದ್ದರು. ಅವರ ಹೆಸರು ಏನೆಂದು ಕೇಳಿದ್ದಕ್ಕೆ, ಸನಾತನ ಸಂಸ್ಥೆಯ ಅಣ್ಣ ಎಂದಿದ್ದರು. ಗೋವಾದಲ್ಲಿ ನಡೆದ ಧರ್ಮ ಶಿಕ್ಷಣ ಸಂಸ್ಥೆಗೆ ಕೆಲವರನ್ನು ಮಾತ್ರ ಆರಿಸಿದ್ದಾರೆ, ಅದರಲ್ಲಿ ನಾನೂ ಒಬ್ಬ. ನಾನು ಅಲ್ಲಿಗೆ ಹೋಗುತ್ತೇನೆ ಎಂದಿದ್ದರು.
ಏಳು ವರ್ಷಗಳ ಹಿಂದೆ ಬುಲೆಟ್ ಖರೀದಿಸಿದ್ದ: ಏಳೆಂಟು ವರ್ಷಗಳ ಹಿಂದೆ ಕಲಾಸಿಪಾಳ್ಯದ ಸಿಟಿ ಗನ್ ಹೌಸ್‌ನಲ್ಲಿ ನವೀನ್‌ಕುಮಾರ್ 3,500 ರೂ.ಗೆ ಏರ್‌ಗನ್ ಬುಲೆಟ್ ಖರೀದಿಸಿದ್ದ. ಬಳಿಕ ನಿಜವಾದ ಗನ್ ಕೊಡುವಂತೆ ಕೇಳಿದ್ದ. ಗನ್ ಹೌಸ್‌ನ ಸೈಯದ್ ಶಬ್ಬೀರ್ ಲೈಸೆನ್ಸ್ ತೋರಿಸುವಂತೆ ಕೇಳಿದ್ದರು. ನನ್ನ ಬಳಿ ಲೈಸೆನ್ಸ್ ಇಲ್ಲ ಎಂದು ನವೀನ್ ಹೇಳಿದ್ದ. ಆಗ ಕನಿಷ್ಠ ಬುಲೆಟ್‌ಗಳನ್ನಾದರೂ ಕೊಡಿ, ಲಾಕೆಟ್ ಮಾಡಿಕೊಳ್ಳಲು ಬೇಕು ಎಂದು ಕೇಳಿದ್ದ. ಲೈಸೆನ್ಸ್ ಇಲ್ಲದೆ ಬುಲೆಟ್‌ಗಳನ್ನೂ ಕೊಡುವುದಿಲ್ಲ ಎಂದು ಶಬ್ಬೀರ್ ಹೇಳಿದ್ದರು.
ಆ ದಿನ ವಾಪಸಾದ ನವೀನ್, ಮತ್ತೂಂದು ದಿನ ಬಂದು ಒತ್ತಾಯಿಸಿದ್ದಕ್ಕೆ ಸ್ನೇಹಿತ ಅಮ್ಜದ್ ಎನ್ನುವವನಿಂದ 18 ಜಿವಂತ ಬುಲೆಟ್‌ಗಳನ್ನು ತಂದು 3 ಸಾವಿರ ರೂ.ಗೆ ನವೀನ್‌ಗೆ ಮಾರಾಟ ಮಾಡಿರುವುದಾಗಿ ಸೈಯ್ಯದ್ ಶಬ್ಬೀರ್ ಹೇಳಿಕೆ ನೀಡಿದ್ದಾರೆ. ಆ ನಂತರ ಇದೇ ಶಬ್ಬೀರ್, ನವೀನ್‌ನನ್ನು ಗುರುತು ಹಿಡಿದಿದ್ದಾನೆ. ಆದರೆ, ಇದೇ ಬುಲೆಟ್‌ಗಳಿಂದ ಗೌರಿ ಹತ್ಯೆಯಾಗಿದೆ ಎಂಬುದನ್ನು ತನಿಖಾಧಿಕಾರಿಗಳು ಉಲ್ಲೇಖೀಸಿಲ್ಲ.
ಪಿಸ್ತೂಲ್ ಪೂಜೆ ಮಾಡಿದ್ದರು: “ದಸರಾ ಹಬ್ಬಕ್ಕೆ ಮೊದಲು 2-3 ತಿಂಗಳ ಹಿಂದೆ ಒಂದು ಪಿಸ್ತೂಲ್ ತಂದು ತೋರಿಸಿದ್ದು, ಇದು ಡಮ್ಮಿ. ವರ್ಕ್ ಆಗುವುದಿಲ್ಲ ಎಂದು ಒಳಗಡೆ ಲಾಕರ್‌ನಲ್ಲಿ ಇಟ್ಟಿದ್ದರು. ದಸರಾ ಹಬ್ಬದ ದಿನ ಪಿಸ್ತೂಲ್ ಇಟ್ಟು ಪೂಜೆ ಮಾಡಿ ಸೂಜಿಯಿಂದ ಚುಚ್ಚಿಕೊಂಡು ಒಂದು ಹನಿ ರಕ್ತ ಅರ್ಪಣೆ ಮಾಡಿ ಜೈ ಭಾರತ ಮಾತೆ ಎಂದು ಹೇಳಿದ್ದರು.
ಅಲ್ಲದೆ, ಬೇರೆ ರೀತಿಯ ಬುಲೆಟ್ ಮತ್ತು ಪಿಸ್ತೂಲ್ ಹಾಗೂ ಇತರೆ ಗುಂಡುಗಳನ್ನು ನನಗೆ ತೋರಿಸಿದ್ದರು. ಅದೇ ಮೊದಲ ಬಾರಿಗೆ ಪಿಸ್ತೂಲ್ ಮತ್ತು ಬೆಲೆಟ್ ನೋಡಿದ್ದೆ,’ ಎಂದು ನವೀನ್ ಪತ್ನಿ ರೂಪಾ ಹೇಳಿಕೆ ನೀಡಿರುವುದಾಗಿ ಎಸ್‌ಐಟಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.