ಉಪ ಚುನಾವಣೆ ಸೋಲು: ಬಿಜೆಪಿ ಆತ್ಮಾವಲೋಕನ
Team Udayavani, Apr 15, 2017, 10:24 AM IST
ಬೆಂಗಳೂರು: ಒಡಿಶಾದ ಭುವನೇಶ್ವರದಲ್ಲಿ ಶನಿವಾರದಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಲಿಗೆ ಈ ಸಭೆ ಹೆಚ್ಚು ಮಹತ್ವದ್ದಾಗಿದೆ.
ಕಳೆದ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ನಡೆದ ಪಂಚ ರಾಜ್ಯಗಳ ಚುನಾವಣೆ ಮತ್ತು ಈಗ ನಡೆದಿರುವ ಉಪ ಚುನಾವಣೆ ಫಲಿತಾಂಶದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದೆ. ಸಹಜವಾಗಿಯೇ ಈ ವೇಳೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಬಗ್ಗೆಯೂ ಗಂಭೀರ ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಐದರಲ್ಲಿ ಗೆಲುವು ಸಾಧಿಸಿದೆಯಾದರೂ ಕರ್ನಾಟಕದ ಎರಡೂ ಕ್ಷೇತ್ರಗಳಲ್ಲಿ ಸೋಲುತ್ತದೆ ಎಂಬುದನ್ನು ರಾಷ್ಟ್ರೀಯ ನಾಯಕರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ರಾಜ್ಯದ ಸೋಲನ್ನು ಅವರು ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯಕಾರಿಣಿ ವೇಳೆ ಈ ಕುರಿತು ಸ್ವಲ್ಪ ಹೆಚ್ಚು ಚರ್ಚೆ ನಡೆಯಬಹುದು ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ನಾಯಕರಿಗೆ ವರದಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಅವರ ಪಾಲಿಗೆ ಶನಿವಾರ ಮತ್ತು ಭಾನುವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸ್ವಲ್ಪ ಮಟ್ಟಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಏಕೆಂದರೆ, ಈ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ವರಿಷ್ಠರು ಯಡಿಯೂರಪ್ಪಅವರಿಗೆ ವಹಿಸಿದ್ದರು.ಅಷ್ಟೇ ಅಲ್ಲ, ಮತದಾನಕ್ಕೆ ಮುನ್ನ ಪಕ್ಷದ ರಾಜ್ಯ ಘಟಕ ನೀಡಿದ ವರದಿಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತ ಫಲಿತಾಂಶ ಬಂದಿರುವುದರಿಂದ ಬಿಎಸ್ ವೈ ಅದಕ್ಕೆ ಕಾರಣಗಳನ್ನು ನೀಡಬೇಕಾಗಿದೆ.
ಈ ಮಧ್ಯೆ ಯಡಿಯೂರಪ್ಪ ಅವರನ್ನು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆ ಕಾರ್ಯತಂತ್ರ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಿದೆ. ಆದರೆ ಉಪ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ರೂಪಿಸಿದ ಕಾರ್ಯತಂತ್ರ ವಿಫಲವಾಗಿರುವುದರಿಂದ 2018ರಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಎಲ್ಲಿ ಲೋಪವಾಗಿದೆ, ಅದಕ್ಕೆ ಕಾರಣಗಳೇನು, ಯಾವ ರೀತಿ ಅದನ್ನು ಸರಿಪಡಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಗೆ ಹೊಸ ರೀತಿಯ ಕಾರ್ಯತಂತ್ರ ರೂಪಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ರಾಜ್ಯದಿಂದ ವರದಿ ಕೇಳುವ ಸಾಧ್ಯತೆ ಇದೆ.
ಇದನ್ನು ಮೊದಲೇ ನಿರೀಕ್ಷಿಸಿರುವ ಬಿಎಸ್‌ವೈ ಗುರುವಾರದಿಂದಲೇ ತಮ್ಮ ಆಪ್ತರೊಂದಿಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿ ಸೋಲಿನ ಕಾರಣ ಮತ್ತು ಇರುವ ಸಮಸ್ಯೆಗಳ ಸಮೇತ ವರದಿ ಸಿದ್ಧಪಡಿಸಿದ್ದು, ರಾಜ್ಯದ ವಿಚಾರ ಪ್ರಸ್ತಾಪವಾದಾಗ ಅದನ್ನು ರಾಷ್ಟ್ರೀಯ ನಾಯಕರಿಗೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ನಾಯಕತ್ವಕ್ಕೆ ತೊಂದರೆ ಇಲ್ಲ
ಉಪ ಚುನಾವಣೆಯಲ್ಲಿ ಗೆಲ್ಲುವ ಭರವಸೆಯೊಂದಿಗೆ ಬೀಗುತ್ತಿದ್ದ ಸಂದರ್ಭದಲ್ಲಿ ಎರಡೂ ಕ್ಷೇತ್ರಗಳಲ್ಲಿ ಆಘಾತಕಾರಿ ಸೋಲು ಅನುಭವಿಸಿದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಾಯಕತ್ವಕ್ಕೇನೂ ಸಮಸ್ಯೆ ಉಂಟಾಗದು. ಕೇವಲ ಎರಡು ಕ್ಷೇತ್ರಗಳಲ್ಲಿ ಪಕ್ಷ ಸೋತಿತು ಎಂಬ ಕಾರಣಕ್ಕೆ ಅವರ ನಾಯಕತ್ವವನ್ನು ಪ್ರಶ್ನಿಸುವ ಸಾಧ್ಯತೆಯಿಲ್ಲ. ಆದರೆ,ಅವರ ಏಕಪಕ್ಷೀಯ ನಿರ್ಧಾರಗಳು ಮತ್ತು ತಮ್ಮ ಆಪ್ತರಿಗೆ ಮಾತ್ರ ಸಂಘಟನೆಯಲ್ಲಿ ಆದ್ಯತೆ ನೀಡುವ ಪ್ರಕ್ರಿಯೆಗೆ ತಡೆ ಬೀಳುವ ಸಾಧ್ಯತೆ ಇದೆ. ಜತೆಗೆ ಪಕ್ಷದ ರಾಷ್ಟ್ರೀಯ ನಾಯಕರು, ಅದರಲ್ಲೂ ಮುಖ್ಯವಾಗಿ ಅಮಿತ್ ಶಾ ಸ್ವಲ್ಪ ಹೆಚ್ಚು ಮಧ್ಯಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.