ಉಪಚುನಾವಣೆ: ಸಿದ್ದು-ಬಿಎಸ್‌ವೈಗೆ ಪ್ರತಿಷ್ಠೆ ಕಣ
Team Udayavani, Apr 1, 2017, 11:58 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ನಂತರದ ಜಿದ್ದಾಜಿದ್ದಿನ ಕಾಳಗ ಎಂದೇ ಬಿಂಬಿತವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶದ ಮೇಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಭವಿಷ್ಯ ನಿಂತಿದೆಯಾ?
ಎರಡೂ ಕ್ಷೇತ್ರಗಳ ಚುನಾವಣಾ ಅಖಾಡದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಅದರಲ್ಲೂ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ಉಪಚುನಾವಣೆಗಳನ್ನು “ಪ್ರತಿಷ್ಠೆ’ಯಾಗಿ ತೆಗೆದುಕೊಂಡಿರುವುದನ್ನು ನೋಡಿದರೆ ಇಂಥದೊಂದು ಅನುಮಾನ ಎದುರಾಗುತ್ತದೆ.
ಅದರಲ್ಲೂ ನಂಜನಗೂಡು ಕ್ಷೇತ್ರದ ಚುನಾವಣೆಯಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಅಥವಾ ಶ್ರೀನಿವಾಸಪ್ರಸಾದ್ ಹಾಗೂ ಸಿದ್ದರಾಮಯ್ಯ ನಡುವಿನ ಸಮರ ಎಂಬಂತೆ ಬಿಂಬಿತವಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೂಮ್ಮೆ “ಜಾತಿ’ ಜಾಗೃತವಾಗಿದೆ.
ಈ ಎರಡೂ ಕ್ಷೇತ್ರಗಳ ಚುನಾವಣಾ ಫಲಿತಾಂಶದಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ ಅಥವಾ ಪ್ರತಿಪಕ್ಷ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಯಾರೇ ಗೆದ್ದರೂ ಅವರ ಅಧಿಕಾರಾವಧಿ ಅಲ್ಪಾಯುಷ್ಯ. ಆದರೂ, ಫಲಿತಾಂಶದ ಪರಿಣಾಮದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ದಿಗಿಲುಗೊಂಡಿವೆ.
ಇದೇ ಸಿದ್ದರಾಮಯ್ಯ ಅವರು 2005ರಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಜೆಡಿಎಸ್ ತ್ಯಜಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಾಮುಂಡೇಶ್ವರಿ (ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ) ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಿಸಿದ್ದರು. ಆಗ, ಶ್ರೀನಿವಾಸಪ್ರಸಾದ್, ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದರು.
ಇದೀಗ ಅದೇ ಶ್ರೀನಿವಾಸಪ್ರಸಾದ್ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಕಾಂಗ್ರೆಸ್ ಬಿಟ್ಟು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪ ಚುನಾವಣೆ ಎದುರಿಸುತ್ತಿದ್ದಾರೆ. ಇಡೀ ಸಂಪುಟವೇ ಬಂದು ಕ್ಷೇತ್ರದಲ್ಲಿ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ಕೊಟ್ಟಿದ್ದಾರೆ.
ಹೀಗಾಗಿ, ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಲೇ ಇಡೀ ಸಂಪುಟದ ಜತೆ ಠಿಕಾಣಿ ಹೂಡಿದ್ದಾರೆ. ಅವರಿಗೂ ಮುಂಚೆ ಠಿಕಾಣಿ ಹೂಡಿದ್ದ ಬಿ.ಎಸ್.ಯಡಿಯೂರಪ್ಪ, ನನ್ನ ಶಕ್ತಿ ತೋರಿಸುತ್ತೇನೆ ಎಂದು ಗರ್ಜಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಎರಡೂ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಅವರಂತೆ ತಲೆಕೆಡಿಸಿಕೊಂಡಿಲ್ಲ ನಿಜ. ಆದರೆ, ಬಿಜೆಪಿ ಹೈಕಮಾಂಡ್ ಅಂತೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಒಂದು ರೀತಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಗ್ನಿಪರೀಕ್ಷೆ ಕೂಡ ಹೌದು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಟಾರ್ಗೆಟ್‌ನೊಂದಿಗೆ ಅಧಿಕಾರಕ್ಕೆ ಹಿಡಿದೇ ತೀರುತ್ತೇನೆ ಎಂದು ಛಲ ತೊಟ್ಟಿರುವ ಯಡಿಯೂರಪ್ಪ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದು ಹೈಕಮಾಂಡ್‌ಗೆ ತಮ್ಮ ತಾಕತ್ತು ತೋರಿಸುವುದು ಅವರ ಉದ್ದೇಶ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಯಡಿಯೂರಪ್ಪ ಆತ್ಮವಿಶ್ವಾಸಕ್ಕೆ ಲಿಂಗಾಯಿತ ಮತದಾರರು ಹೆಚ್ಚಾಗಿರುವುದು ಕಾರಣ.
ಆದರೆ, ಗುಂಡ್ಲುಪೇಟೆಯಲ್ಲಿ ದಿವಂಗತ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಪತ್ನಿಯೇ ಚುನಾವಣೆಗೆ ಸ್ಪರ್ಧಿಸಿದ್ದು ಆವರೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಆದರೂ ಲಿಂಗಾಯಿತ ಸಮುದಾಯ ನನ್ನ ನಾಯಕತ್ವಕ್ಕೆ ಬೆಂಬಲ ಸೂಚಿಸಬಹುದು ಎಂಬುದು ಯಡಿಯೂರಪ್ಪ ಲೆಕ್ಕಾಚಾರ. ಅದಕ್ಕಾಗಿ ಸಾಕಷ್ಟು ತಂತ್ರಗಾರಿಕೆ ಸಹ ಮಾಡಿದ್ದಾರೆ.
ಈ ಮಧ್ಯೆ, ಗುಂಡ್ಲುಪೇಟೆ ಉಪ ಚುನಾವಣೆ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿ ಜತೆಗೆ ಭಾವನಾತ್ಮಕ ವಿಚಾರವೂ ತಳಕು ಹಾಕಿಕೊಂಡಿದೆ. ಮಹದೇವಪ್ರಸಾದ್ ಪತ್ನಿ ಗೀತಾ ಅವರು, ಯಡಿಯೂರಪ್ಪ ಅವರು ನೀವು ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ನನಗೆ ಹೇಳಿದ್ದರು. ತಂದೆ ಸಮಾನರಾಗಿ ಈ ಮಾತು ಹೇಳುತ್ತಿದ್ದೇನೆ ಎಂದೂ ಹೇಳಿದ್ದರು ಎಂಬ “ಬಾಂಬ್ ಸಿಡಿಸಿ’ ಪೇಚಿಗೆ ಸಿಲುಕಿಸಿದ್ದಾರೆ.
ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಲ್ಲಿ ದಲಿತ ಹಾಗೂ ಹಿಂದಳಿದ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಪ್ರಮುಖವಾಗಿ ಕಣ್ಣಿಟ್ಟಿದೆ. ಶ್ರೀನಿವಾಸಪ್ರಸಾದ್ ದಲಿತ ಸಮುದಾಯದ ಪ್ರಭಾವಿ ನಾಯಕರೂ ಆಗಿರುವುದರಿಂದ ಆದಷ್ಟು ಅ ಸಮುದಾಯದ ಮತ ಕಾಂಗ್ರೆಸ್ ಕಡೆ ಸೆಳೆದರೆ ಲಾಭವಾಗಬಹುದು.
ಶ್ರೀನಿವಾಸಪ್ರಸಾದ್ ಬಗ್ಗೆ ಲಿಂಗಾಯಿತ ಸಮುದಾಯದಲ್ಲಿ ಮೊದಲಿನಿಂದಲೂ ಅಸಮಾಧಾನ ಇರುವುದು ತಮಗೆ ಲಾಭವಾಗಬಹುದು. ಒಂದೊಮ್ಮೆ ನಂಜನಗೂಡಿನಲ್ಲಿ ಲಿಂಗಾಯಿತ ಮತದಾರರು ಬಿಜೆಪಿಯತ್ತ ಹೋದರೂ ಅಹಿಂದ ವರ್ಗ ತಮ್ಮ ಕೈ ಹಿಡಿಯಬಹುದು. ಗುಂಡ್ಲುಪೇಟೆಯಲ್ಲಿ ಗೀತಾ ಅವರಿಗೆ ಅವರದೇ ಸಮುದಾಯ ಹಾಗೂ ಇತರೆ ವರ್ಗಗಳ ಅನುಕಂಪದ ಮತಗಳ ಜತೆ ಅಹಿಂದ ಮತ ಬಂದರೆ ಸಾಕು ಎಂಬ ಲೆಕ್ಕಾಚಾರ ಇವರದು.
ಜಾತಿವಾರು ಜನನಾಯಕರು
ಉಪ ಚುನಾವಣೆಯಲ್ಲಿ ಜಾತಿವಾರು ಮತದಾರರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಆಯಾ ಜಾತಿಯ ನಾಯಕರಿಗೆ ಹೋಬಳಿವಾರು, ಜಿಲ್ಲಾ ಪಂಚಾಯಿತಿ, ಕ್ಷೇತ್ರಾವಾರು ಉಸ್ತುವಾರಿ ವಹಿಸಲಾಗಿದೆ. ಕಾಂಗ್ರೆಸ್‌ಗೆ ಅಹಿಂದ ವರ್ಗದ ಮತ ಪಡೆಯಲು ರಣತಂತ್ರ ರೂಪಿಸಿರುವ ಸಿದ್ದರಾಮಯ್ಯ, ದಲಿತರ ಮತ ಪಡೆಯಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಲಿಂಗಾಯಿತರ ಮತ ಪಡೆಯಲು ಎಂ.ಬಿ.ಪಾಟೀಲ್, ನೇಕಾರರ ಮತ ಪಡೆಯಲು ಉಮಾಶ್ರೀ,
ಒಕ್ಕಲಿಗರ ಮತ ಪಡೆಯಲು ಡಿ.ಕೆ.ಶಿವಕುಮಾರ್‌ಗೆ ಹೊಣೆಗಾರಿಕೆ ನೀಡಿದ್ದಾರೆ.
ಅದೇ ರೀತಿ , ಬಿಜೆಪಿಯಲ್ಲಿ ಲಿಂಗಾಯಿತರ ಮತ ಪಡೆಯಲು ಖುದ್ದು ಬಿ.ಎಸ್.ಯಡಿಯೂರಪ್ಪ ಮುಂದಾಳತ್ವ ವಹಿಸಿದ್ದು, ದಲಿತರ ಮತ ಪಡೆಯಲು ಗೋವಿಂದ ಕಾರಜೋಳ, ಶ್ರೀರಾಮುಲು, ಒಕ್ಕಲಿಗರ ಮತ ಪಡೆಯಲು ಆರ್.ಅಶೋಕ್, ಸಿ.ಟಿ.ರವಿ, ಹಿಂದುಳಿದವರ ಮತ ಪಡೆಯಲು ಈಶ್ವರಪ್ಪ, ಬಿ.ಜೆ.ಪುಟ್ಟಸ್ವಾಮಿ…ಹೀಗೆ ಜಾತಿವಾರು ಜನನಾಯಕರನ್ನು ಎರಡೂ ಕ್ಷೇತ್ರಗಳಲ್ಲಿ ನಿಯೋಜಿಸಲಾಗಿದೆ.
ಬಿಜೆಪಿ ಸೋತರೆ….?
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿದರೆ ರಾಜ್ಯದಲ್ಲಿ ಬಿಜೆಪಿ ಅಲೆ ಇಲ್ಲ, ನರೇಂದ್ರಮೋದಿ ಅಲೆಯೂ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಜತೆಗೆ ಎಸ್.ಎಂ.ಕೃಷ್ಣ, ಶ್ರೀನಿವಾಸಪ್ರಸಾದ್ ಸೇರಿ ಪ್ರಭಾವಿ ನಾಯಕರು ಬಂದರೂ ಬಿಜೆಪಿಗೆ ಬಲ ಬಂದಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ಹೀಗಾಗಿ, ಬಿಜೆಪಿಗೆ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅನಿವಾರ್ಯತೆ.
ಕಾಂಗ್ರೆಸ್ ಸೋತರೆ…?
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಜತೆಗೆ ರಾಜ್ಯದಲ್ಲಿ ಸಾಲು ಸಾಲಾಗಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಶಕ್ತಿ ಕುಸಿದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಇದ್ದು, ಅದು ಸುಳ್ಳು ಎಂಬುದನ್ನು ಫಲಿತಾಂಶದ ಮೂಲಕ ಸಾಬೀತುಪಡಿಸಬೇಕಿದೆ. ರಾಜ್ಯದಲ್ಲಿ ಯಾವ ಕಾಂಗ್ರೆಸ್ ನಾಯಕರು ಚುನಾವಣೆ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೋ ಇಲ್ಲವೋ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಸಂಪೂರ್ಣ ತಲೆಕೆಡಿಸಿಕೊಂಡಿದ್ದಾರೆ. ಸೋತರೆ ಸಿದ್ದರಾಮಯ್ಯನವರಿಗೆ ವೈಯಕ್ತಿಕವಾಗಿ ಮುಖಭಂಗ. ಹೀಗಾಗಿ, ಸವಾಲಿಗೆ ಪ್ರತಿ ಸವಾಲು ಎಂಬಂತೆ ಜೆಡಿಎಸ್ ಸ್ಪರ್ಧೆಗೆ ಇಳಿಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದೇ ಪಕ್ಷದ ಅಭ್ಯರ್ಥಿಯಾಗಲು ಹೊರಟ್ಟಿದ್ದ ಕಳಲೆ ಕೇಶವಮೂರ್ತಿಯನ್ನು ಆಪರೇಷನ್ ಹಸ್ತ ಮಾಡಿ ಚುನಾವಣೆಗೆ ತಂದು ನಿಲ್ಲಿಸಿದ್ದಾರೆ.
ಜೆಡಿಎಸ್ ಜಾಣ ನಡೆ
ಉಪ ಚುನಾವಣೆ ಮಟ್ಟಿಗೆ ಸ್ಪರ್ಧೆ ಮಾಡದಿರುವ ತೀರ್ಮಾನ ಕೈಗೊಂಡಿರುವ ಜೆಡಿಎಸ್‌ನದು ಜಾಣ ನಡೆ. ಕಾಂಗ್ರೆಸ್-ಬಿಜೆಪಿ ಅಬ್ಬರದಲ್ಲಿ ಸ್ಪರ್ಧೆ ಮಾಡಿ ಹಣ, ಸಮಯ ಎರಡೂ ವ್ಯರ್ಥ ಮಾಡಿಕೊಂಡು ನಿರೀಕ್ಷಿತ ಮತಗಳಿಕೆ ಮಾಡದಿದ್ದರೆ ಅದು ಮುಂದಿನ ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಅದಕ್ಕಿಂತ ತಟಸ್ಥವಾಗಿರುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ. ಜೊತೆಗೆ ಜೆಡಿಎಸ್ ಕಣದಿಂದ ಹೊರಗೆ ಉಳಿದಿರುವುದು ಕಾಂಗ್ರೆಸ್‌ಗೆ ಲಾಭ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಕಾಂಗ್ರೆಸ್‌ಗಿಂತ ಬಿಜೆಪಿಯ ವೇಗಕ್ಕೆ ಬ್ರೇಕ್ ಹಾಕುವ ತೀರ್ಮಾನಕ್ಕೆ ಬದಂತಿರುವ ಜೆಡಿಎಸ್ ಸ್ಪರ್ಧೆ ಅನಗತ್ಯ ಎಂಬ ಸಬೂಬು ನೀಡಿ ಕಣಕ್ಕಿಳಿದಿಲ್ಲ. ಇದು ಸಿದ್ದರಾಮಯ್ಯ-ದೇವೇಗೌಡರ ನಡುವಿನ ಮಾತುಕತೆ ಫಲ ಎಂಬ ಮಾತುಗಳೂ ಇವೆ.
– ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.