ಸಿಎಎ ಗೊಂದಲ ನಿವಾರಣೆಗೆ ಸಮಾವೇಶ
Team Udayavani, Dec 23, 2019, 3:08 AM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕುರಿತು ರಾಷ್ಟ್ರಾದ್ಯಂತ ಸೃಷ್ಟಿಯಾಗಿರುವ ವಿವಾದ ಕುರಿತು ಉಂಟಾಗಿರುವ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ನಗರದ ಕೆಲ ಮುಸ್ಲಿಂ ಸಂಘಟನೆಗಳು “ರಾಷ್ಟ್ರ ಶಾಂತಿ ಹಾಗೂ ಕೋಮುಸೌಹಾರ್ದತೆ’ ಕಾರ್ಯಕ್ರಮ ಆಯೋಜಿಸಿವೆ. ಈ ನಡುವೆಯೂ ಕೆಲ ಕಿಡಿಗೇಡಿಗಳು ಪರಿಸ್ಥಿತಿ ದುರುಪಯೋಗ ಪಡಿಸಿಕೊಳ್ಳಬಹುದಾದ ಮಾಹಿತಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಹೊಸ ಕಾಯ್ದೆಗಳ ಕುರಿತು ಇತ್ತೀಚೆಗೆ ಮುಸ್ಲಿಂ ಸಂಘಟನೆ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಗೊಂದಲ ನಿವಾರಿಸಿಕೊಂಡಿದ್ದಾರೆ. ಆದರೂ ಮುಸ್ಲಿಂ ಸಮುದಾಯದಲ್ಲಿ ಕೆಲ ಗೊಂದಲಗಳಿವೆ ಎಂದು ಹೇಳಲಾಗಿದೆ. ಈ ಕುರಿತು ಖುದ್ದು ನಗರದ 35 ಸಂಘಟನೆಗಳ ವತಿಯಿಂದ ಪುಲಕೇಶಿನಗರದಲ್ಲಿರುವ ಖುದ್ದೂಸ್ ಸಾಬ್ ಈದ್ಗಾ ಮೈದಾನ (ಖಾದ್ರಿಯ ಮಸೀದಿ-ಹಜ್‌ಕ್ಯಾಂಪ್)ದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಕೆಲವೊಂದು ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಬೆಳಗ್ಗೆ 11 ಗಂಟೆಯಿಂದ ಒಂದು ಗಂಟೆವರೆಗೆ ನಡೆಯಲಿದೆ. ಅಂದಾಜು ಒಂದು ಲಕ್ಷ ಮಂದಿ ಸೇರುವ ಸಾಧ್ಯತೆಯಿದೆ. ಈ ಸಂಬಂಧ ಸಮಾವೇಶಕ್ಕೆ ಭಾರಿ ಪೊಲೀಸ್ ಬಂದ್‌ಬಸ್ತ್ ನಿಯೋಜಿಸಲಾಗಿದೆ. ಹಾಗೆಯೇ ಮಿಲ್ಲರ್ಸ್ ರಸ್ತೆ, ನಂದಿ ದುರ್ಗ ರಸ್ತೆ ಸೇರಿ ಕೆಲವೊಂದು ಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದರಿಂದ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಈ ಬಗ್ಗೆ ದೃಶ್ಯ, ಮುದ್ರಣ ಹಾಗೂ ಎಫ್ಎಂಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಆಯುಕ್ತರು ಹೇಳಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಎಲ್ಲ ಮಸೀದಿಗಳಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿರುವುದರಿಂದ ನಗರದ ನಾನಾ ಕಡೆಗಳಿಂದ ಸಮುದಾಯದವರು ಆಗಮಿಸಲಿದ್ದಾರೆ. ಎಲ್ಲಿಯೂ ರ್ಯಾಲಿ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಕೆಲವರು ಗುಂಪು-ಗುಂಪಾಗಿ ಬರಲಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 53 ಕೆಎಸ್‌ಆರ್‌ಪಿ, 60 ಸಿಎಆರ್ ತುಕಡಿಗಳು, 40 ಮಂದಿ ಎಸಿಪಿಗಳು, ಸಂಚಾರ ಸೇರಿ ಎಲ್ಲ ಡಿಸಿಪಿಗಳು, ಸಿಸಿಬಿ, ಸಿಎಸ್‌ಬಿ ಸಿಬ್ಬಂದಿ, ಸುಮಾರು 80 ಮಂದಿ ಇನ್ಸ್‌ಪೆಕ್ಟರ್, 100 ಮಂದಿ ಪಿಎಸ್‌ಐ ಹಾಗೂ ಹೆಚ್ಚುವರಿಯಾಗಿ ಎರಡು ಸಿಐಎಸ್‌ಎಫ್ ತುಕಡಿ (200 ಮಂದಿ) ಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮದ ಸುತ್ತ-ಮುತ್ತ ಸುಮಾರು ಒಂದು ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ನಿಯಂತ್ರಣ ಕೊಠಡಿ ಮಾತ್ರವಲ್ಲ, ಸ್ಥಳದಲ್ಲೇ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ, ಆ್ಯಂಬುಲೆನ್ಸ್‌ಗಳು ಇರಲಿವೆ ಎಂದು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ: ಆದಾಗ್ಯೂ ಯಾರಾದರೂ ಪರಿಸ್ಥಿತಿ ಲಾಭ ಪಡೆದುಕೊಂಡು ಶಾಂತಿಗೆ ಭಂಗ ಉಂಟು ಮಾಡಿದರೆ, ಯಾವುದೇ ಕಾರಣಕ್ಕೂ ಸುಮ್ಮ ನಿರುವುದಿಲ್ಲ. ಅಂತಹ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ. ಅಂತಹ ಘಟ ನೆಗೆ ಆಯೋಜಕರನ್ನೇ ಹೊಣೆಗಾರಿಕೆ ಮಾಡಲಾ ಗು ವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಆಯೋಜಕರೇ ತಿಳಿಸಿರು ವಂತೆ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿcಸುವುದಿಲ್ಲ. ಸಮುದಾ ಯ ದವರು ಸ್ವಯಂ ಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವಾಸನೆ ಕೊಟ್ಟಿದ್ದಾರೆ. ಹೀಗಾಗಿ ಯಾರು ಒತ್ತಾಯ ಪೂರ್ವಕವಾಗಿ ಅಂಗಡಿ ಮುಚ್ಚಿಸುವಂತಿಲ್ಲ. ಎಂದಿನಂತೆ ಅಂಗಡಿ, ಶಾಲಾ-ಕಾಲೇಜು,ಬ್ಯಾಂಕ್, ವ್ಯಾಪಾರ-ವಹಿವಾಟು ನಡೆಯಲಿದೆ. ಹಾಗೆಯೇ 144 ಸೆಕ್ಷನ್ ಹಿಂಪಡೆಯಲಾಗಿದ್ದು, ಮದ್ಯಮಾರಾಟ, ಇಂಟರ್‌ನೆಟ್ ಸೇವೆ ಎಂದಿನಂತೆ ಇರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ
ಬೆಂಗಳೂರು: ರಾಜ್ಯದಲ್ಲಿ ಸಹಜ ಪರಿಸ್ಥಿತಿಯಿದ್ದು, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಭಾನುವಾರ ವಿಧಾನಸೌಧದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಗಲಭೆಯಿಂದಾಗಿ ಮಂಗಳೂರಿನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಅದನ್ನು ಈಗ ಸಡಿಲಿಸಿದ್ದೇವೆ. ಮಂಗಳೂರು ಸಂಪೂರ್ಣ ಶಾಂತವಾಗಿದೆ ಎಂದು ತಿಳಿಸಿದರು. ರಾಜ್ಯದೆಲ್ಲೆಡೆ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದ್ದು, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಮಂಗಳೂರಿನಲ್ಲಿ ಗಲಭೆ ಸಂದರ್ಭದಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ತಲಾ 10 ಲಕ್ಷ ರೂ.ಘೋಷಣೆ ಮಾಡಿದ್ದಾರೆ ಎಂದರು.
ಮಂಗಳೂರು ಗಲಭೆಗೂ ಮುನ್ನ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಯು.ಟಿ. ಖಾದರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿ ಯಲ್ಲಿದೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಯಾವ ಸ್ವರೂಪದ ತನಿಖೆ ನಡೆಸಬೇಕು ಎಂಬು ದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಜನವರಿಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂಬ ವರದಿಯ ಬಗ್ಗೆ ಕಿಡಿಕಾರಿದ ಅವರು, ಇದೆಲ್ಲವೂ ಊಹಾಪೋಹ. ಈ ಸಂಬಂಧ ಕೇಂದ್ರದಿಂದ ಯಾವುದೇ ಸೂಚನೆ ಇನ್ನೂ ಬಂದಿಲ್ಲ. ಹೀಗಿದ್ದರೂ, ರಾಜ್ಯದಲ್ಲಿ ಜನವರಿಯಿಂದ ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳುವುದು ಸರಿಯಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿ ವಿಚಾರದಲ್ಲಿ ಕೆಲವರು ತಮ್ಮದೆ ಆದ ಗೊಂದಲ ಸೃಷ್ಟಿಸಿ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಸುಗಮ ಸಂಚಾರಕ್ಕೆ ಮಾರ್ಗ ಬದಲಾವಣೆ
ಬೆಂಗಳೂರು: ನಗರದ 35 ಮುಸ್ಲಿಂ ಸಂಘಟನೆಗಳು ಸೋಮವಾರ ಪುಲಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯ ಖುದ್ದೂಸ್‌ಸಾಬ್ ಈದ್ಗಾ ಮೈದಾನ(ಖಾದ್ರಿಯ ಮಸೀದಿ-ಹಜ್‌ಕ್ಯಾಂಪ್)ದಲ್ಲಿ ರಾಷ್ಟ್ರ ಶಾಂತಿ ಹಾಗೂ ಕೋಮುಸೌಹಾರ್ದತೆ ಕಾರ್ಯಕ್ರಮ ಆಯೋಜಿಸಿದ್ದು, ನಗರದ ವಿವಿಧೆಯಿಂದ ಸಮುದಾಯದವರು ವಾಹನಗಳು ಹಾಗೂ ಕಾಲ್ನಡಿಗೆಯಲ್ಲಿ ಆಗಮಿಸುವುದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೆಲವೆಡೆ ವಾಹನ ಸಂಚಾರ ನಿರ್ಬಂಧ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಿಲ್ಲರ್ಸ್ ರಸ್ತೆ(ಕಂಟೋನ್ಮೆಂಟ್ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್‌ವರೆಗೆ) ಮತ್ತು ನಂದಿ ದುರ್ಗ ರಸ್ತೆ (ಹಜ್ ಕ್ಯಾಂಪ್‌ನಿಂದ ಜಯಮಹಲ್ ಜಂಕ್ಷನ್‌ವರೆಗೆ) ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು: ಸುಲ್ತಾನ್‌ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು, ದಿಣ್ಣೂರು ಮುಖ್ಯ ರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಆರ್.ಟಿ.ನಗರ ಮುಖ್ಯರಸ್ತೆ, ಗುಂಡುರಾವ್ ಮನೆ ಜಂಕ್ಷನ್, ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ ಎಡತಿರುವು ಪಡೆದು ನಗರದ ಕಡೆ ಸಂಚರಿಸಬಹುದು.
ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು, ಹಳೇ ಉದಯ ಟಿವಿ ಜಂಕ್ಷನ್ ಎಡ ತಿರುವು ಪಡೆದು ಕೊಡವ ಸಮಾಜ-ಮೌಂಟ್‌ಕಾರ್ಮಲ್ ಜಂಕ್ಷನ್‌ನಲ್ಲಿ ಬಲ ತಿರುವು ಮೂಲಕ ಪ್ಯಾಲೆಸ್ ಗುಟ್ಟಹಳ್ಳಿ ಮೂಲಕ ಚಲಿಸಬೇಕು. ಯಶವಂತಪುರ ಕಡೆಯಿಂದ ಶಿವಾಜಿನಗರ ಕಡೆ ಬರುವ ವಾಹನಗಳು ಮೇಖ್ರೀವೃತ್ತದಲ್ಲಿ ಬಲ ತಿರುವು ವಡೆದು ಬೆಂಗಳೂರು ಬಳ್ಳಾರಿ ರಸ್ತೆ-ಪ್ಯಾಲೆಸ್ ಗುಟ್ಟಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೋಗಬೇಕು. ಯಲಹಂಕ ಕಡೆಯಿಂದ ಆರ್.ಟಿ.ನಗರದ ಮೂಲಕ ಶಿವಾಜಿನಗರದ ಕಡೆಗೆ ಸಂಚರಿಸುವ ವಾಹನಗಳು, ಹೆಬ್ಟಾಳ ಪಿಎಸ್-ಬೆಂಗಳೂರು ಬಳ್ಳಾರಿ ರಸ್ತೆ-ಮೇಖ್ರೀ ವೃತ್ತ-ಪ್ಯಾಲೆಸ್ ಗುಟ್ಟಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸಂಚರಿಸಬಹುದು.
ನಾಗವಾರ-ಥಣಿಸಂದ್ರ, ಬಾಣಸವಾಡಿ, ಕೆ.ಆರ್.ಪುರ, ಹಳೇ ವಿಮಾನ ನಿಲ್ದಾಣ ರಸ್ತೆ ಮತ್ತು ಹಲಸೂರು, ಹೊಸೂರು ಹಾಗೂ ಬೆನ್ನೇರುಘಟ್ಟ ರಸ್ತೆ, ಕೆಂಗೇರಿ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ,ಸ ವಿಜಯನಗರ, ಮಾಗಡಿ ರಸ್ತೆ, ಚಿಕ್ಕುಪೇಟೆ ಮತ್ತು ಸಿಟಿ ಮಾರ್ಕೆಟ್, ಟೌನ್‌ಹಾಲ್, ವಿಜಯನಗರ, ರಾಜಾಜಿನಗರ, ಅಂಜನಾಪುರ, ವಸಂತಪುರ ಮತ್ತು ಕನಕಪುರ ರಸ್ತೆ ಮಾರ್ಗವಾಗಿ ಬರುವವರಿಗೂ ಕೆಲವೊಂದು ನಿರ್ದಿಷ್ಟ ಮಾರ್ಗಗಳನ್ನು ಸೂಚಿಸಲಾಗಿದ್ದು, ಸ್ಥಳದಲ್ಲಿರುವ ಸಂಚಾರ ಪೊಲೀಸರು ಸೂಚನೆ ಮತ್ತು ಸಲಹೆಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೈಕ್ ರ್ಯಾಲಿ ಮಾರ್ಗ: ಗೀತಾ ಜಂಕ್ಷನ್-ಪುಟ್ಟಣ ಜಂಕ್ಷನ್ ಎಡ ತಿರುವು-ಜಯನಗರ 9ನೇ ಮುಖ್ಯರಸ್ತೆ-ಸಿಂಡಿಕೇಟ್ ಬ್ಯಾಂಕ್ ಜಂಕ್ಷನ್ ಎಡ ತಿರುವು ಪಡೆದು-ಆನೆ ಬಂಡೆ ರಸ್ತೆ-ಸೌತ್ ಎಂಡ್ ವೃತ್ತ-ಆರ್‌ವಿ. ರಸ್ತೆ-ಮಿನರ್ವ ವೃತ್ತ-ಜೆ.ಸಿ. ರಸ್ತೆ, ಭಾರತ್ ಜಂಕ್ಷನ್, ಶಿವಾಜಿ ವೃತ್ತ, ಟೌನ್‌ಹಾಲ್-ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ ಕಾವೇರಿ ಚಿತ್ರಮಂದಿರ ಮೂಲಕ ಮೇಖ್ರೀ ವೃತ್ತದಲ್ಲಿ ಬಲ ತಿರುವು ಪಡೆದು ಜಯಮಹಲ್ ರಸ್ತೆ ಮೂಲಕ ನಂದಿದುರ್ಗಾ ಜಂಕ್ಷನ್ ಬಳಿ ಇಳಿದು ನಂದಿದುರ್ಗಾ ರಸ್ತೆ ಮೂಲಕ ಸಮಾರಂಂಭ ಸ್ಥಳಕ್ಕೆ ನಡೆದುಕೊಂಡು ಬರುವುದು ಹಾಗೂ ವಾಹನಗಳನ್ನು ಜಯಮಹಲ್ ರಸ್ತೆ ಮೂಲಕ ಟಿ.ವಿ.ಟವರ್ ಬಳಿ ಇರುವ ಅರಮನೆ ಮೈದಾನದ ಅಮಾನುಲ್ಲಾ ಖಾನ್ ಗೇಟ್‌ಮೂಲದ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಮೆರವಣಿಗೆ: ಜಾಲಹಳ್ಳಿ, ಪೀಣ್ಯ, ಯಶವಂತಪುರ, ರಾಜಾಜಿನಗರ ಮತ್ತು ಮಲ್ಲೇಶ್ವರ ಸಂಚಾರ ಠಾಣೆ ವ್ಯಾಪ್ತಿಗಳಲ್ಲಿ ಮರವಣಿಗೆ ನಡೆಯಲಿದ್ದು, ನಿರ್ದಿಷ್ಟ ಮಾರ್ಗಗಳನ್ನು ಸೂಚಿಸಲಾಗಿದೆ. ಅದೇ ಮಾರ್ಗದ ಮೂಲಕ ಮೆರವಣಿಗೆ ಸಾಗಲಿದೆ.
ವಿವಿಧ ಸಂಘಟನೆಗಳಿಂದ ಟೌನ್‌ಹಾಲ್ ಬಳಿ ಪ್ರತಿಭಟನೆ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಸಂವಿಧಾನ ಬಾಹಿರ ಎಂದು ಆರೋಪಿಸಿ ಪುರಭವನ ಮುಂಭಾಗ ಸಿಪಿಎಂ ಹಾಗೂ ಇತರೆ ಕೆಲ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಪೌರತ್ವ ಕಾಯಿದೆ ಹಾಗೂ ಎನ್‌ಆರ್‌ಸಿ ಧರ್ಮಾಧಾರಿತವಾಗಿವೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಇಲಾಖೆಯ ಅನುಮತಿ ಮೇರೆಗೆ ಸಂಜೆ ಆರು ಗಂಟೆಯವರೆಗೂ ಪ್ರತಿಭಟನೆ ನಡೆಸಿದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು, ಯಾವುದೇ ಕಾನೂನು ಬಾಹಿರ ಘಟನೆ ನಡೆದಿಲ್ಲ ಎಂದು ಎಂದು ಪೊಲೀಸರು ತಿಳಿಸಿದರು.
ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಜಯಮಹಲ್ ರಸ್ತೆ ಚಾಮರ ಮಂಟಪ, ಫನ್ ವರ್ಡ್ ಸ್ನೋಸಿಟಿ, ಸರ್ಕಸ್ ಮೈದಾನ, ಅಮಾನುಲ್ಲಾ ಖಾನ್ ಮೈದಾನ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡ ಲಾಗಿದೆ. ಜತೆಗೆ ಪೂರ್ವ, ಈಶಾನ್ಯ, ಆಗ್ನೇಯ ಭಾಗಗಳಿಂದ ದಂಡು ರೈಲ್ವೆ ನಿಲ್ದಾಣದ ಮೂಲಕ ಸಭೆಗೆ ಆಗಮಿಸುವ ಸಾರ್ವಜ ನಿಕರು ದಂಡು ರೈಲ್ವೆ ನಿಲ್ದಾಣದ ಮುಂಭಾಗದ ಪೇ ಮತ್ತು ಪಾರ್ಕಿಂಗ್ ಸ್ಥಳದಲ್ಲಿ, ಟ್ಯಾಕ್ಸಿ ಸ್ಟಾಂಡ್ ಹಾಗೂ ಕೊಡವ ಸಮಾಜದ ಎದುರು ಮೈದಾನದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.