ಕಾಲುವೆ ಒತ್ತುವರಿ ತೆರವು ಪುನರಾರಂಭ
Team Udayavani, Jun 12, 2018, 11:45 AM IST
ಬೆಂಗಳೂರು: ಮಳೆಗಾಲದಲ್ಲಿ ಉಂಟಾಗುತ್ತಿರುವ ಅನಾಹುತಗಳ ತಡೆಗಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಸೋಮವಾರ ನಗರ ಪ್ರದಕ್ಷಿಣೆ ನಡೆಸಿದ ಪರಮೇಶ್ವರ್, ಕಗ್ಗದಾಸಪುರ ಹಾಗೂ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರೆ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ರಾಜಕಾಲುವೆ ಒತ್ತುವರಿಯಿಂದಾಗಿ ಸಂಭವಿಸುವ ಮಳೆ ಅನಾಹುತದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಭೂಮಾಪನ ಇಲಾಖೆ ಹೆಚ್ಚುವರಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಭೂಮಾಪಕರ ಮೂಲಕ ಕಾಲುವೆಗಳ ಮ್ಯಾಪಿಂಗ್ ಮಾಡಿಕೊಡುವಂತೆ ತಿಳಿಸಲಾಗಿದೆ. ಸರ್ವೇ ಮುಗಿದ ಕೂಡಲೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೆಂಪೇಗೌಡರು ಬೆಂಗಳೂರಿನಲ್ಲಿ 350ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಇಂದು ಕೆಲವೇ ಕೆರೆ ಉಳಿದಿದ್ದು, ಕೊಳಚೆ ನೀರು ಹರಿದು ಅವುಗಳೂ ಕಲುಷಿತಗೊಳ್ಳುತ್ತಿವೆ. ಹೀಗಾಗಿ ಕೆರೆಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಸ್ಥಳೀಯ ಸಂಸ್ಥೆಗಳ ಮೂಲಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜತೆಗೆ ಕೆರೆಗಳ ಮಲಿನಕ್ಕೆ ಕಾರಣರಾದವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಹೆಚ್ಚು ಅನುದಾನ ಬೇಕು: ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಈಗಾಗಲೇ ಬಿಡಿಎ ಯೋಜನೆ ರೂಪಿಸಿದ್ದು, ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. 2017-18ನೇ ಸಾಲಿನಲ್ಲಿ ಕೆರೆಗಳ ಅಭಿವೃದ್ಧಿಗೆ ಸರ್ಕಾರ 20 ಕೋಟಿ ರೂ. ಹಾಗೂ ಬಿಬಿಎಂಪಿಯಿಂದ 10 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ 3 ತಿಂಗಳಲ್ಲಿ ನಗರದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸೂಚನೆ: ಮೇಯರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕಗ್ಗದಾಸಪುರ ಕೆರೆಗೆ ಭೇಟಿ ನೀಡಿದ ಪರಮೇಶ್ವರ್, ಕೆರೆಯಲ್ಲಿ ಜೊಂಡು ಬೆಳೆದಿರುವುದು, ಕೊಳಚೆ ನೀರು ಹರಿಯುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಕೆರೆಯ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೊರೆ ಸಮಸ್ಯೆ ಶೀಘ್ರ ಪರಿಹರಿಸಿ: ಬೆಳ್ಳಂದೂರು ಕೆರೆ ಪರಿಶೀಲಿಸಿದ ಅವರು, ನೊರೆ ಸಮಸ್ಯೆ ಪರಿಹಾರಕ್ಕಾಗಿ ಕೈಗೊಂಡ ಯೋಜನೆಗಳ ಕುರಿತು ಮಾಹಿತಿ ಕೇಳಿದರು. ಅದಕ್ಕೆ ಉತ್ತರಿಸಿದ ಬಿಡಿಎ ಆಯುಕ್ತ ರಾಕೇಶ್‌ಸಿಂಗ್, ಕೆರೆ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಲ್ಲಿ 5 ಬಾರಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕೆರೆ ನೀರಿನಲ್ಲಿನ ರಾಸಾಯನಿಕ ಅಂಶ ಕಾರಣವಲ್ಲ ಎಂಬುದು ವರದಿಯಿಂದ ಬಯಲಾಗಿದೆ. ಕೆರೆ ಸುತ್ತ ಬೆಳೆದಿರುವ ಹುಲ್ಲು ಕಟಾವಿಗೆ ಬಂದವರು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂಬ ಮಾತುಗಳಿವೆ. ಆ ಹಿನ್ನೆಲೆಯಲ್ಲಿ ಕೆರೆ ಪ್ರದೇಶದ ಕಣ್ಗಾವಲಿಗೆ ಮಾರ್ಷಲ್‌ಗಳನ್ನು ನೇಮಿಸಿ, ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಸ್ವಾಮಿ ಮೊದಲು ಸಂಬಳ ಕೊಡಿ: ಕಗ್ಗದಾಸಪುರ ಕೆರೆ ಪರಿಶೀಲನೆ ಮುಗಿಸಿ ಬೆಳ್ಳಂದೂರು ಕೆರೆ ಕಡೆಗೆ ತೆರಳುತ್ತಿದ್ದ ಡಿಸಿಎಂ ಪರಮೇಶ್ವರ್, ರಸ್ತೆ ಬದಿಯಿದ್ದ ಪೌರಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಪೌರ ಕಾರ್ಮಿಕರು, “ಸ್ವಾಮಿ 5 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಹೀಗಾದರೆ ನಾವು ಜೀವನ ನಡೆಸುವುದಾದರೂ ಹೇಗೆ? ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಪಾವತಿಗೂ ಕಷ್ಟವಾಗಿದೆ. ಮೊದಲು ಸಂಬಳ ಕೊಡಿ ಸ್ವಾಮಿ’ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಪರಮೇಶ್ವರ್, ಶೀಘ್ರವೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜಕಾಲುವೆ ಮಾರ್ಗ ಬದಲು- ಆರೋಪ: ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಅಪಾರ್ಟ್‌ಮೆಂಟ್‌ವರೆಗೆ ರಾಜಕಾಲುವೆ ನಿರ್ಮಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಕಾಲುವೆ ನೀರು ರೈತರ ಜಮೀನುಗಳಿಗೆ ಹರಿಯುತ್ತಿದ್ದು, ನೀರು ಹರಿಯುತ್ತಿರುವ ಜಾಗವನ್ನೇ ರಾಜರಾಲುವೆ ಎಂದು ಬಿಂಬಿಸಲು ಅಧಿಕಾರಿಗಳು ಹೊರಟಿದ್ದಾರೆ ಎಂದು ಬೆಳ್ಳಂದೂರು ನಿವಾಸಿ ಶ್ರೀನಿವಾಸ್, ಉಪಮುಖ್ಯಮಂತ್ರಿಗಳಿಗೆ ದೂರು ನೀಡಿದರು.
ಡಿಸಿಎಂ ಸ್ವಾಗತಿಸಿದ ನೊರೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸೋಮವಾರ ನಗರ ಪ್ರದಕ್ಷಿಣೆ ನಡೆಸಿದ ವೇಳೆ ಹಲವೆಡೆ ಕಾರ್ಯಕರ್ತರು ಹೂವಿನ ಹಾರ ಹಾಕಿ, ಹೂಗುತ್ಛ ನೀಡಿ ಸ್ವಾಗತಿಸಿದರು. ಆದರೆ, ಬೆಳ್ಳಂದೂರು ಕೆರೆ ಪರಿವೀಕ್ಷಣೆ ವೇಳೆ ಜೋರಾಗಿ ಬೀಸಿದ ಗಾಳಿಗೆ ಮೇಲೆದ್ದ ನೊರೆ ಪರಮೇಶ್ವರ್ ಅವರ ಮೈಮೇಲೆ ಬಿತ್ತು. ಇದು ಸ್ಥಳೀಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಯ ತೀವ್ರತೆಯನ್ನು ಪರಿಚಯಿಸಿದಂತ್ತಿತ್ತು. ಕೂಡಲೇ ನೊರೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.