ಹಸಿಕಸ ಸಂಗ್ರಹ ಟೆಂಡರ್ ರದ್ದು
Team Udayavani, Feb 26, 2020, 3:10 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಹಸಿಕಸ ಸಂಗ್ರಹ ಮಾಡುವ ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಮಾಡುವಂತೆ ಮೇಯರ್ ಎಂ.ಗೌತಮ್‌ಕುಮಾರ್ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿದ್ದಾರೆ.
ಹಲವು ವರ್ಷಗಳಿಂದ ಕಸ ವಿಲೇವಾರಿಗೆ ಟೆಂಡರ್ ಆಗಿರಲಿಲ್ಲ. ಈ ಮಧ್ಯೆ ಮಾಜಿ ಮೇಯರ್ ಗಂಗಾಂಬಿಕೆ ಅವರು ಹಸಿಕಸ ವಿಲೇವಾರಿಗೆ ಪ್ರತ್ಯೇಕ ಟೆಂಡರ್ ಕರೆದಿದ್ದರು. ಇದಕ್ಕೆ ಕೌನ್ಸಿಲ್ ಸಭೆಯಲ್ಲೂ ಅನುಮೋದನೆ ಪಡೆದು, ಅಂದಾಜು 40 ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿತ್ತು. ಇಷ್ಟಾದರೂ ಒಂದು ವರ್ಷದಿಂದ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಆಗಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವುದರಿಂದ ನಗರದಲ್ಲಿ ಕಸ ವಿಂಗಡಣೆಯಲ್ಲಿ ಆಗುತ್ತಿರುವ ಲೋಪಕ್ಕೆ ಕಡಿವಾಣ ಬೀಳಲಿದೆ ಎಂದು ಆಶಿಸಲಾಗಿತ್ತು. ಹಸಿಕಸವನ್ನು ಪ್ರತಿ ದಿನ ಸಂಗ್ರಹಿಸಲು ಹಾಗೂ ಒಣ ಕಸವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಸಂಗ್ರಹ ಮಾಡುವುದು ಎಂದು ನಿರ್ಧರಿಸಲಾಗಿತ್ತು.
ಈ ನಡುವೆ ಮೇಯರ್ ಅವರು ಹಳೆಯ ಟೆಂಡರ್ ರದ್ದು ಮಾಡಿ ಪುನಃ ಹೊಸದಾಗಿ ಟೆಂಡರ್ ಕರೆಯಲು ಸೂಚನೆ ನೀಡಿದ್ದು, ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಒಮ್ಮೆಗೆ ಸಂಗ್ರಹಿಸುವಂತೆ ಟೆಂಡರ್ ಕರೆಯಲು ಸೂಚನೆ ನೀಡಿದ್ದಾರೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆಂಡರ್ ಬದಲಾವಣೆಯಿಂದ ಏನಾಗಲಿದೆ: ಕಸ ಸಂಗ್ರಹ ಮತ್ತು ವಿಲೇವಾರಿಯನ್ನು ವಾರ್ಡ್ ಮಟ್ಟದಲ್ಲಿ ಮಾಡದೆ, ವಲಯವಾರು ಮಾಡುವಂತೆ ಮೇಯರ್ ಸೂಚನೆ ನೀಡಿದ್ದಾರೆ. ಹೀಗಾಗಿ, ಟೆಂಡರ್ ಮಾದರಿಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಬೇಕಾಗುತ್ತದೆ. ಕಸ ನಿರ್ವಹಣೆ ಬೈಲಾದಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಅಲ್ಲದೆ, ಇಷ್ಟು ದೊಡ್ಡ ಮೊತ್ತಕ್ಕೆ ಅಲ್ಪಾವಧಿ ಟೆಂಡರ್ ಕರೆಯಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದ ಟೆಂಡರ್ ಅನ್ನೇ ಕರೆಯಬೇಕು.
ಹೊಸ ಟೆಂಡರ್ ಕರೆದು ಅಂತಿಮ ಮಾಡಲು ಮತ್ತು ಹೊಸ ಗುತ್ತಿಗೆದಾರರ ದಾಖಲೆ ಪರಿಶೀಲನೆ ಮಾಡಿ, ಕೌನ್ಸಿಲ್‌ನಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಇದೆಲ್ಲ ಸುದೀರ್ಘ ಪ್ರಕ್ರಿಯೆಯಾಗಿದೆ. ಈ ಮಧ್ಯೆ ಹೈಕೋರ್ಟ್ ಸಹ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವಂತೆ ಸೂಚನೆ ನೀಡಿದ್ದು, ಕಗ್ಗಂಟಾಗುವ ಸಾಧ್ಯತೆ ಇದೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಯಾರೇ ಇದ್ದರೂ ಕ್ರಮ ಖಚಿತ
ಬೆಂಗಳೂರು: ಗುತ್ತಿಗೆದಾರನ ಹೆಸರಿನಲ್ಲಿ ಅಧಿಕಾರಿಗಳೇ ನಕಲಿ ಬ್ಯಾಂಕ್ ಖಾತೆ ತೆರೆದು, 4.15 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ, ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತ ನಾಡಿ, 4.15 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಬಿಎಂಟಿಎಫ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ರೋಪಿ ಗಳಿಂದ 3.86 ಕೋಟಿ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಎಂಟಿ ಎಫ್ನಿಂದಲೇ ಸೂಕ್ತ ತನಿಖೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಉನ್ನತ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ಅಧಿಕಾರಿಗಳು ಹಂಪಿನಗರದ ಜನತಾ ಕೋ-ಆಪರೇಟಿವ್ ಬ್ಯಾಂಕ್‌ನ ಮ್ಯಾನೇಜರ್, ಗುತ್ತಿಗೆದಾರ ಮಂಜುನಾಥ್ ಹಾಗೂ ಸಂಘಟನೆ ಒಂದರ ಮುಖಂಡ ನಲ್ಲಪ್ಪ ಎಂಬವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಇವರು ತಲೆಮರಿಸಿಕೊಂಡಿದ್ದು, ಬಿಎಂಟಿಎಫ್ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ವಾಸುದೇವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಬಿಬಿಎಂಪಿಯ ಮಾಜಿ ಮೇಯರ್ ಒಬ್ಬರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಎಂಟಿಎಫ್ ಅಧಿಕಾರಿಗಳು ಮಾಜಿ ಮೇಯರ್ ಸಂಬಂಧಿಕರ ವಿಚಾರಣೆ ನಡೆಸಿದ್ದು, ಅವರ ಬ್ಯಾಂಕ್ ಖಾತೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ವಾರ್ಡ್ ಮರು ವಿಂಗಡಣೆ ವರದಿ
ಬೆಂಗಳೂರು: ವಾರ್ಡ್ ಮರು ವಿಂಗಡಣೆ ವರದಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರ ಕರಡು ಪ್ರಕಟಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮರು ವಿಂಗಡಣೆ ವಿವರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೆಲವು ವಿವರಣೆ ಕೇಳಿದೆ. ಸಾರ್ವಜನಿಕರ ಆಕ್ಷೇಪಣೆ ಪಡೆದ ಬಳಿಕ ಸರ್ಕಾರವೇ 198 ವಾರ್ಡ್‌ಗಳಿಗೆ ಮೀಸಲಾತಿ ಹಂಚಿಕೆ ಮಾಡಿ ಪ್ರಕಟಿಸಲಿದೆ ಎಂದು ಹೇಳಿದರು.
ವಾರ್ಡ್ ಮರು ವಿಂಗಡಣೆಯಲ್ಲಿ ನಗರದ ಕೇಂದ್ರ ಭಾಗದ ವಾರ್ಡ್ ಸಂಖ್ಯೆ ಕಡಿಮೆಯಾಗಿ ಹೊರ ವಲಯದಲ್ಲಿ ಸಂಖ್ಯೆ ಹೆಚ್ಚಾಗಲಿವೆ. ಆದರೆ, ವಾರ್ಡ್ ಗಳ ಸಂಖ್ಯೆ198 ಮೀರುವುದಿಲ್ಲ. 2011ರ ಜನಗಣತಿಯ ಜನಸಂಖ್ಯೆಗೆ ಅನುಗುಣವಾಗಿ ಮರು ವಿಂಗಡಣೆ ಮಾಡಲಾಗಿದೆ. 2011ರಲ್ಲಿ ನಗರದಲ್ಲಿ 84 ಲಕ್ಷ ಜನಸಂಖ್ಯೆ ಇದ್ದು, ಪ್ರತಿ ವಾರ್ಡ್‌ಗೆ ಸುಮಾರು 42 ಸಾವಿರ ಮಂದಿಯಂತೆ ಹಂಚಿಕೆ ಮಾಡಲಾಗಿದೆ.
ಹೊರ ವಲಯದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿರುವುದರಿಂದ ಒಂದೆರಡು ವಾರ್ಡ್‌ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು. ಇನ್ನು ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಾರ್ಡ್ ಮರು ವಿಂಗಡಣೆ ಕುರಿತು ಸರ್ಕಾರಕ್ಕೆ ಕೆಲವು ನಿರ್ದೇಶನ ನೀಡಿದೆ. ಮಾ.4ರಂದು ವಿಚಾರಣೆ ನಡೆಯಲಿದೆ ಎಂದು ವಿವರಿಸಿದರು.
ಪ್ರತ್ಯೇಕ ಹಸಿ ಕಸ ಸಂಗ್ರಹಕ್ಕೆ ಮೇಯರ್ ಮೌಖೀಕ ಸೂಚನೆ ನೀಡಿದ್ದಾರೆ. ಈ ಸಂಬಂಧ ಮೇಯರ್ ಹಾಗೂ ಆಯುಕ್ತರು ಲಿಖೀತ ಆದೇಶ ನೀಡಿದರೆ, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
-ರಂದೀಪ್, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.