ಮತ್ತೇರಿ ಮೈ ಮುಟ್ಟಿದ ಇಬ್ಬರ ಸೆರೆ
Team Udayavani, Jan 2, 2020, 3:09 AM IST
ಬೆಂಗಳೂರು: ಪೊಲೀಸರ ಸರ್ಪಗಾವಲಿನ ನಡುವೆಯೂ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲದಲ್ಲಿ ನಡೆದ ಹೊಸವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ನಾಲ್ಕೈದು ಘಟನೆಗಳು ನಡೆದಿವೆ. ಈ ಸಂಬಂಧ ಅಶೋಕನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಮಿಳುನಾಡು ಮೂಲದ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರನ್ನು ವಶಕ್ಕೆ ತನಿಖೆ ಮುಂದುವರಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅತಿಕ್(20) ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿವಕುಮಾರ್(30) ಬಂಧಿತರು. ರಾಮು ಮತ್ತು ಸಿದ್ದು ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಅತಿಕ್ ಕೃಷ್ಣಗಿರಿಯಲ್ಲಿ ಪದವಿ ವಿದ್ಯಾರ್ಥಿಯಾಗಿದ್ದು, ಮತ್ತು ಆತನ ಸ್ನೇಹಿತ ಸಂಭ್ರಮಾಚರಣೆಗೆಂದೆ ಮಂಗಳವಾರ ರಾತ್ರಿ ನಗರಕ್ಕೆ ಬಂದು ಬ್ರಿಗೇಡ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈತ ಯುವತಿಯೊಬ್ಬಳ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಅದಕ್ಕೆ ಆಕ್ರೋಶಗೊಂಡ ಆಕೆ ಚಪ್ಪಲಿಯಿಂದ ಹೊಡೆದಿದ್ದಳು. ಶಿವಕುಮಾರ್ ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ತಡರಾತ್ರಿ 1.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆ ಕೂಗಿಕೊಂಡಾಗ ಸ್ಥಳದಲ್ಲಿದ್ದ ಮಹಿಳಾ ಪೊಲೀಸರು ಆರೋಪಿಯನ್ನು ತಡೆದು ಪ್ರಶ್ನಿಸಿದ್ದಾರೆ. ಸಿಬ್ಬಂದಿ ಜತೆಯೂ ಕೆಟ್ಟದಾಗಿ ನಡೆದುಕೊಂಡಿದ್ದಾನೆ.
ಇತರೆ ಇಬ್ಬರು ಆರೋಪಿಗಳೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯರನ್ನು ಮನಬಂದಂತೆ ಮುಟ್ಟಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಸದ್ಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಡಿಯೋದಲ್ಲಿರುವ ಸಂತ್ರಸ್ತೆಯರನ್ನು ಪತ್ತೆ ಹಚ್ಚಿ, ಅವರ ಹೇಳಿಕೆಯನ್ನಾಧರಿಸಿ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
ಮೈ ಮುಟ್ಟಿದವನಿಗೆ ಚಪ್ಪಲಿ ಸೇವೆ: ಒಪೆರಾ ಜಂಕ್ಷನ್ ಹೌಸ್‌ನಲ್ಲಿ ಎದುರಿನಿಂದ ಬಂದ ಕಿಡಿಗೇಡಿಯೊಬ್ಬ ಯುವತಿ ಮೈಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಆತನನ್ನು ಹಿಡಿದ ಯುವತಿ, ಸ್ಥಳದಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಹಿಂಬದಿ ಮುಟ್ಟಿದ ಕಿಡಿಗೇಡಿಗೆ ಯುವತಿ ಹಾಗೂ ಅವರ ಸ್ನೇಹಿತರು ಧೇರ್ಮದೇಟು ನೀಡಿದ್ದಾರೆ.
ಸ್ನೇಹಿತರ ಜತೆಗಿದ್ದ ಯುವಕನೊಬ್ಬ, ಬ್ರಿಗೇಡ್ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ಯುವತಿಗೆ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿ ಕಿರಿಕಿರಿ ಉಂಟು ಮಾಡಿದ್ದು, ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೆ, ಈ ಘಟನೆ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ವೇಳೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದರು.
ಮಂಗಳಮುಖಿಯರ ರಂಪಾಟ: ಎಂ.ಜಿ.ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರು ಮಂಗಳಮುಖಿಯರು ಯುವಕ, ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದಲ್ಲದೆ, ಪೊಲೀಸರ ಜತೆಯೂ ಅನುಚಿತವಾಗಿ ನಡೆದುಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ಯುವಕ-ಯುವತಿಯರ ಕೆನ್ನೆ ಸವರಿ, ಕೆಲವರನ್ನು ತಬ್ಬಿಕೊಳ್ಳಲು ಮುಂದಾಗಿದ್ದರು. ಒಂದು ಹಂತದಲ್ಲಿ ಯುವಕನೊಬ್ಬನನ್ನು ತಬ್ಬಿಕೊಳ್ಳಲು ಯತ್ನಿಸಿ, ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಅದನ್ನು ಕಂಡ ಪೊಲೀಸ್ ಸಿಬ್ಬಂದಿ, ಈ ರೀತಿ ವರ್ತಿಸಬಾರದು ಎಂದು ಬುದ್ಧಿ ಹೇಳಿದಕ್ಕೆ ಅವರ ಜತೆಯೇ ಅನುಚಿತವಾಗಿ ವರ್ತಿಸಿದ್ದಾರೆ. ಪೊಲೀಸರು ಗದರಿದಾಗ ಸಿಬ್ಬಂದಿ ಕಾಲಿಗೆ ಬೀಳಲು ಮುಂದಾದರು. ನಂತರ ಪೊಲೀಸ್ ಸಿಬ್ಬಂದಿಯೇ ಮನವೊಲಿಸಿ ಕಳುಹಿಸಿದರು.
ಟೆರೇಸ್ ಏರಿ ಸೆಲ್ಫಿ: ಹೊಸ ವರ್ಷ ಆಚರಣೆ ಹುರುಪಿನಲ್ಲಿದ್ದ ಯುವಕನೊಬ್ಬ, ಮದ್ಯದ ಅಮಲಿನಲ್ಲಿ ಎಂ.ಜಿ.ರಸ್ತೆಯ ಬಹುಮಹಡಿ ಕಟ್ಟಡದ ಟೆರೇಸ್ ಮೇಲೇರಿ ಸೆಲ್ಫಿ ತೆಗೆದುಕೊಂಡು ಕೆಲಕಾಲ ಆತಂಕದ ವಾತವರಣ ಸೃಷ್ಟಿಸಿದ್ದಾನೆ. ಸಾರ್ವಜನಿಕರು ಕೆಳಗೆ ಇಳಿಯುವಂತೆ ಕೂಗಿಕೊಂಡರೂ ಇಳಿದಿಲ್ಲ. ಪೊಲೀಸರು ಸೂಚಿಸಿದರೂ ಕ್ಯಾರೆ ಎನ್ನಲಿಲ್ಲ. ನಂತರ ಕಟ್ಟಡದಲ್ಲಿದ್ದ ಇತರೆ ಯುವಕರು ಆತನನ್ನು ಅಲ್ಲಿಂದ ಕರೆದೊಯ್ದರು.
ಆತಂಕ ಸೃಷ್ಟಿಸಿದ ಬ್ಯಾಗ್: ಸಂಭ್ರಮಾಚರಣೆ ನಡುವೆ ಚರ್ಚ್‌ಸ್ಟ್ರೀಟ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಆಂತಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಕೆಲ ಹೊತ್ತು ಆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದರು. ಬಳಿಕ ಬಾಂಬ್ ನಿಷ್ಕ್ರಿàಯ ದಳ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಖಾಲಿ ಟಿಫಿನ್ ಬಾಕ್ಸ್ ಪತ್ತೆಯಾಗಿದೆ. ಬಳಿಕ ಪೊಲೀಸರು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ವಾತಾವರಣ ತಿಳಿಗೊಳಿಸಿದರು.
ಹೊಸ ವರ್ಷಾಚರಣೆ ವೇಳೆ ಮದ್ಯ ಸೇವಿಸಿ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲದಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ಮಧ್ಯೆಯೂ ಕೆಲವೊಂದು ಲೈಂಗಿಕ ದೌರ್ಜನ್ಯದಂತಹ ಘಟನೆಗಳು ನಡೆದಿದ್ದು, ಆಕ್ರೋಶಗೊಂಡ ಯುವತಿಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಕೆಲವೆಡೆ ಪುಂಡರು ಸಾಮೂಹಿಕವಾಗಿ ಖಾರದ ಪುಡಿ ಎರಚಿ, ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಸ್ನೇಹಿತರು, ಸಂಬಂಧಿಕರ ಜತೆ ಹೊಸ ವರ್ಷಾಚರಣೇಗೆ ಆಗಮಿಸಿದ್ದ ಸುಮಾರು 30ಕ್ಕೂ ಅಧಿಕ ಯುತಿಯರು ಮದ್ಯದ ಅಮಲಿನಲ್ಲಿ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದರೆ, ಬ್ರಿಗೇಡ್ ಜಂಕ್ಷನ್‌ನಲ್ಲಿ ರಸ್ತೆ ಬದಿಯೇ ಯುವತಿಯೊಬ್ಬರು ನಿದ್ದೆಗೆ ಜಾರಿದ್ದರು. ಸಂಭ್ರಮಾಚರಣೆ ವೇಳೆ ಅಲ್ಲಲ್ಲಿ ತೆರೆದಿದ್ದ “ಸೇಫ್ಟಿ ಐಲ್ಯಾಂಡ್’ ಸಿಬ್ಬಂದಿ, ಮಲಗಿದ್ದ ಯುವತಿಯನ್ನು ಎಚ್ಚರಿಸಿ, ಕ್ಯಾಬ್ ಮಾಡಿ ಮನೆಗೆ ಕಳುಹಿಸಿದ್ದಾರೆ. ಮತ್ತೂಂದೆಡೆ ತಮ್ಮ ಸ್ನೇಹಿತರ ಜತೆ ಅರೆ ಪ್ರಜ್ಞಾಸ್ಥಿತಿಯಲ್ಲಿ ತಮ್ಮ ಕಾರುಗಳನ್ನು ಹುಡುಕಾಡುತ್ತಿದ್ದ ಯುವತಿಯರಿಗೆ ಅವರ ಕಾರುಗಳನ್ನು ಪತ್ತೆ ಹಚ್ಚಿಕೊಡಲಾಯಿತು.
ಆದರೆ, ಅವರಿಗೆ ಕಾರು ಚಾಲನೆಗೆ ಅವಕಾಶ ಕೊಡಲಿಲ್ಲ. ಅವರ ಸ್ನೇಹಿತರು ಅಥವಾ ಪೋಷಕರಿಗೆ ಮಾಹಿತಿ ನೀಡಿ ಕಳುಹಿಸಲಾಯಿತು. ಕೋರಮಂಗಲದಲ್ಲಿ ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಯುವತಿಯೊಬ್ಬರು ಒಬ್ಬರೇ ಓಡಾಡುತ್ತಿದ್ದುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ, ಯುವತಿಗೆ ಕೆಲ ಹೊತ್ತು ಸೇಫ್ಟಿ ಐಲ್ಯಾಂಡ್‌ನಲ್ಲಿ ಆಶ್ರಯ ನೀಡಿ, ಬಳಿಕ ಮನೆಗೆ ಕಳುಹಿಸಿದ್ದಾರೆ.
426 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲು: ಸಂಚಾರ ಪೊಲೀಸರ ಎಚ್ಚರಿಕೆ ನಡುವೆಯೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂ ಸಿದ ಆರೋಪದ ಮೇಲೆ 426 ಪ್ರಕರಣಗಳನ್ನು ದಾಖಲಿಸಿಕೊಂಡು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಆಯಕ್ತರು, ಪೂರ್ವ ಸಂಚಾರ ವಿಭಾಗದಲ್ಲಿ 99, ಪಶ್ಚಿಮ ವಿಭಾಗದಲ್ಲಿ 254, ಉತ್ತರ ವಿಭಾಗದಲ್ಲಿ 73 ಪ್ರಕರಣಗಳನ್ನು ದಾಖಲಿಸಿಕೊಂಡು, ವಾಹನಗಳ ಚಾಲಕರು ಮತ್ತು ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ್ದೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಇತರೆಡೆ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೋರಮಂಗಲದಲ್ಲಿ ಈ ಬಾರಿ ಹೆಚ್ಚು ಜನ ಸೇರಿದ್ದರು. ಆದರೂ ತಾಳ್ಮೆಯಿಂದ ಲಕ್ಷಾಂತರ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆಲವೆಡೆ ಸಣ್ಣ-ಪಟ್ಟ ಅಹಿತಕರ ಘಟನೆಗಳು ನಡೆದಿರುವುದು ಹೊರತುಪಡಿಸಿ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಘಟನಾ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ ಗಂಭೀರ ಸ್ವರೂಪದ ಘಟನೆಗಳು ನಡೆದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಯುವತಿ ಚಪ್ಪಲಿಯಲ್ಲಿ ಹೊಡೆದು ಯುವತಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಆ ಯುವಕ ಅಂತಹ ಕೃತ್ಯವನ್ನು ಜೀವನದಲ್ಲಿ ಮತ್ತೆಂದೂ ಮಾಡುವುದಿಲ್ಲ.
-ಭಾಸ್ಕರ್‌ರಾವ್, ನಗರ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.