ಪ್ಯಾಂಟ್ ಬಿಚ್ಚುತ್ತೇನೆ ಎಂದವನ ಸೆರೆ
Team Udayavani, Oct 3, 2018, 12:20 PM IST
ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಎದುರು ಪ್ಯಾಂಟ್ ಬಿಚ್ಚಲು ಯತ್ನಿಸಿ ಅಸಭ್ಯ ವರ್ತನೆ ತೋರಿದ ಆರೋಪ ಸಂಬಂಧ ಜೆ.ಜೆ.ನಗರದ ಮಯೂಬ್ (28) ಎಂಬಾತನನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುರಿತ ವಿವರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಸಂತ್ರಸ್ತ ಯುವತಿ, ಆರೋಪಿ ಆಟೋ ಚಾಲಕ ಮಯೂಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಕೋರಿದ್ದರು. ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಮಯೂಬ್‌ನನ್ನು ಬಂಧಿಸಿ ಐಪಿಸಿ 354 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜತೆಗೆ, ಠಾಣಾ ಜಾಮೀನು ಆಧಾರದಲ್ಲಿ ಬಿಡುಗಡೆಗೊಳಿಸಿದ್ದಾರೆ. ಆರೋಪಿ ಅವಿವಾಹಿತನಾಗಿದ್ದು, ಬಾಡಿಗೆ ಆಟೋ ಓಡಿಸಿಕೊಂಡಿದ್ದಾನೆ. ಆತನ ಪೂರ್ವಪರ ಪರಿಶೀಲಿಸಿದ್ದು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ದಾಖಲೆಯಿಲ್ಲ ಎಂದು ಅಧಿಕಾರಿ ಹೇಳಿದರು.
ಕೋಪದಲ್ಲಿ ಪ್ಯಾಂಟ್ ಬಿಚ್ಚಲು ಹೋದೆ: “ಸೆ.30ರಂದು ಸಂಜೆ 5.25ರ ಸುಮಾರಿಗೆ ಗರುಡಾ ಮಾಲ್‌ನಿಂದ ಬಂದ ಯುವತಿ ಸಿಗರೇಟ್ ಸೇದಿಕೊಂಡು ಆಟೋ ಪಕ್ಕದಲ್ಲಿಯೇ ಹೋದಳು. ಈ ವೇಳೆ ನಮ್ಮ ಕಡೆ ನೋಡಿ ಫುಟ್‌ಪಾತ್‌ನಲ್ಲಿ ಆಟೋ ನಿಲ್ಲಿಸಿದ್ದಾರೆ. ಸ್ವಲ್ಪವೂ ವಿವೇಚನೆ ಇಲ್ಲ ಎಂದು ಬೈದುಕೊಂಡಳು.
ಇದರಿಂದ ಕೋಪ ಬಂದು, ಬೈದಿದ್ದಕ್ಕೆ ಕಾರಣ ಕೇಳಿದೆ. ಇದೇ ವಿಚಾರಕ್ಕೆ ಆಕೆಯೇ ಜಗಳ ಮುಂದುವರಿಸಿದಳು. ಮೊಬೈಲ್ ತೆಗೆದು ರೆಕಾರ್ಡ್ ಮಾಡುತ್ತೇನೆ ಎಂದು ಪ್ರಚೋದಿಸಿದಳು. ಕೋಪದಲ್ಲಿ ಪ್ಯಾಂಟ್ ಬಿಚ್ಚಲು ಮುಂದಾದೆ, ಕ್ಷಮಿಸಿ,’ ಎಂದು ಆಟೋ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿ ಹೇಳಿದರು.
ಏನಿದು ಘಟನೆ?: ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿರುವ ಸಂತ್ರಸ್ತ ಯುವತಿ, “ಫುಟ್‌ಪಾತ್ ಮೇಲೆ ಆಟೋ ನಿಲ್ಲಿಸಿಕೊಂಡಿದ್ದ ಚಾಲಕನೊಬ್ಬ ನನ್ನನ್ನು ಅಸಭ್ಯವಾಗಿ ನೋಡಿದಲ್ಲದೆ, ನನ್ನ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ. ಇದನ್ನು ನಾನು ಆಕ್ಷೇಪಿಸಿದೆ.
ಇದಕ್ಕೆ ಕೋಪಗೊಂಡ ಆತ ನನ್ನನ್ನು ಅವಾಚ್ಯವಾಗಿ ನಿಂದಿಸಿದ. ಪ್ಯಾಂಟ್ ಬಿಚ್ಚಿ ಕುಣಿಯುತ್ತೇನೆ ಏನೀಗ ಎಂದು ಹೇಳಿದ. ಈತನ ವರ್ತನೆಯನ್ನು ನನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಅಲ್ಲೆ ಇದ್ದ ಸಂಚಾರ ಪೊಲೀಸ್ ಸಿಬ್ಬಂದಿಗೆ ತೋರಿಸಿದೆ. ಆ ವೇಳೆಗಾಗಲೇ ಆತ ಸ್ಥಳದಿಂದ ಕಾಲ್ಕಿತಿದ್ದ’ ಎಂದು ಆರೋಪಿಸಿದ್ದರು.