ಕಾರು ಬಾಡಿಗೆ ಪಡೆದು ವಂಚಿಸಿದವ ಸೆರೆ
Team Udayavani, Nov 4, 2018, 11:47 AM IST
ಬೆಂಗಳೂರು: ಮಾಸಿಕ 30 ಸಾವಿರ ರೂ. ಬಾಡಿಗೆ ನೀಡುವುದಾಗಿ ಹೇಳಿ ವಿವಿಧ ಮಾದರಿಯ ಕಾರುಗಳನ್ನು ಬಾಡಿಗೆಗೆ ಪಡೆದು ಹಣವನ್ನೂ ಕೊಡದೆ, ವಾಹನವನ್ನು ಹಿಂದಿರುಗಿಸದೆ ವಂಚಿಸುತ್ತಿದ್ದ ಖಾಸಗಿ ಟ್ರಾವೆಲ್ಸ್ ಮ್ಯಾನೇಜರ್‌ನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಚೇತನ್ ಕುಮಾರ್ (25) ಬಂಧಿತ. ಈತನಿಂದ 1.50 ಕೋಟಿ ರೂ. ಮೌಲ್ಯದ ವಿವಿಧ ಕಂಪನಿಯ 24 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ 20ಕ್ಕೂ ಹೆಚ್ಚು ಮಂದಿಗೆ ಮಾಸಿಕ 30 ಸಾವಿರ ರೂ. ಬಾಡಿಗೆ ನೀಡುವುದಾಗಿ ಹೇಳಿ ವಾಹನಗಳನ್ನು ಪಡೆದು ಪರಾರಿಯಾಗುತ್ತಿದ್ದ.
ಕೆಲ ದಿನಗಳ ಬಳಿಕ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಕಾರು ಮಾಲೀಕ ಸುನಿಲ್ ಕುಮಾರ್ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ಮಲ್ಲತಹಳ್ಳಿಯಲ್ಲಿ ವಾಸವಾಗಿದ್ದ. ಕಲಾಸಿಪಾಳ್ಯದ ರುಕ್ಕಮ್ಮ ಟಾವೆಲ್ಸ್‌ನಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿದ್ದ. ಈ ವೇಳೆ ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ತಮ್ಮ ಕಾರುಗಳ ಒಪ್ಪಂದ ಮಾಡಿಕೊಂಡಿದ್ದ ಚಾಲಕ ಸುನಿಲ್‌ಕುಮಾರ್ ಎಂಬುವವರನ್ನು ಪರಿಚಯಿಸಿಕೊಂಡಿದ್ದಾನೆ.
ಬಳಿಕ ಮಾಸಿಕ 15 ರಿಂದ 30 ಸಾವಿರ ರೂ. ಬಾಡಿಗೆ ಕೊಡುವುದಾಗಿ ಹೇಳಿ ಸುನಿಲ್ ಅವರ ನಾಲ್ಕು ಕಾರುಗಳನ್ನು ಬಾಡಿಗೆ ಪಡೆದುಕೊಂಡಿದ್ದ. ಅನುಮಾನ ಬಾರದಂತೆ ಮೂರು ತಿಂಗಳ ಬಾಡಿಗೆ ಪಾವತಿಸಿದ್ದಾನೆ. ಬಳಿಕ ಅವರ ಸ್ನೇಹಿತರಿಗೂ ಈ ವಿಚಾರ ತಿಳಿಸುವಂತೆ ಹೇಳಿ, ಸುನಿಲ್ ಕುಮಾರ್ ಅವರ ಕೆಲ ಸ್ನೇಹಿತರನ್ನು ಪರಿಚಯಿಸಿಕೊಂಡು, 20ಕ್ಕೂ ಹೆಚ್ಚು ವಾಹನ ಬಾಡಿಗೆ ಪಡೆದಿದ್ದ. ಕೆಲ ತಿಂಗಳ ಬಳಿಕ ಕಾರು ಮಾಲೀಕರ ಸಂಪರ್ಕಕ್ಕೆ ಸಿಗದೆ, ವಾಹನಗಳನ್ನು ಬೇರೆಡೆ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಅಸಲಿ ದಾಖಲೆ ಪಡೆಯುತ್ತಿದ್ದ: ಕಾರು ಬಾಡಿಗೆ ಪಡೆಯುವ ವೇಳೆಯೇ ಹೊರ ರಾಜ್ಯಗಳಲ್ಲಿರುವ ಶಿರಡಿ, ತಿರುಪತಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಹೋಗಬೇಕಿದೆ ಎಂದು ಹೇಳಿ ಮಾಲೀಕರಿಂದ ವಾಹನಗಳ ಅಸಲಿ ದಾಖಲೆಗಳನ್ನೇ ಪಡೆಯುತ್ತಿದ್ದ. ನಂತರ ಬೆಂಗಳೂರಿನ ಕಮ್ಮನಹಳ್ಳಿ, ಲಗ್ಗೆರೆ, ಪೀಣ್ಯ ಭಾಗಗಳಲ್ಲಿ 7 ವಾಹನಗಳನ್ನು ಅಡಮಾನ ಇಟ್ಟಿದ್ದ.
ಇನ್ನುಳಿದ 15 ವಾಹನಗಳನ್ನು ಮೈಸೂರಿನ ಖಾಸಗಿ ಟ್ರಾವೆಲ್ಸ್ ಮಾಲೀಕರಾದ ರೋಷನ್ ಮತ್ತು ನಾಗೇಂದ್ರ ಎಂಬುವರಿಗೆ ಮಾರಾಟ ಮಾಡಿದ್ದ. ಎರಡು ಕಾರುಗಳನ್ನು ಚಿಕ್ಕಬಳ್ಳಾಪುರ, ಕನಕಪುರ ಭಾಗಗಳಲ್ಲಿ ಅಡ ಇಟ್ಟು ಪರಾರಿಯಾಗಿದ್ದ. ಈ ವಂಚನೆ ಪ್ರಕರಣ ಸಂಬಂಧ ರಚನೆಯಾಗಿದ್ದ ವಿಶೇಷ ತನಿಖಾ ತಂಡ ತಾಂತ್ರಿಕ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೋಜಿನ ಜೀವನ: ಬೆಂಗಳೂರಿಗೆ ಬಂದ ದಿನದಿಂದಲೇ ಮೋಜಿನ ಜೀವನಕ್ಕೆ ಮಾರು ಹೋಗಿದ್ದ ಆರೋಪಿ, ಟ್ರಾವೆಲ್ಸ್‌ನಲ್ಲಿ ಕೊಡುತ್ತಿದ್ದ ಸಂಬಳ ಸಾಲದೆ ಈ ರೀತಿಯ ವಂಚನೆಗೆ ಇಳಿದಿದ್ದಾನೆ. ಈ ಮೂಲಕ ಬಂದ ಹಣದಿಂದ ಆರೋಪಿ ಮೋಜಿನ ಜೀವನ ನಡೆಸುತ್ತಿದ್ದು, ವಂಚಿಸಿದ ಕಾರುಗಳಲ್ಲೇ ಗೋವಾ, ಕೇರಳ ಹಾಗೂ ರಾಜ್ಯದ ಇತರೆ ಪ್ರವಾಸಿ ತಾಣಗಳಲ್ಲಿ ಹೋಗಿ ಮೋಜು-ಮಸ್ತಿ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ