ಕಾವೇರಿ: ಕಾನೂನು ಹೋರಾಟ ಅಗತ್ಯ; ದೇವೇಗೌಡ
Team Udayavani, Feb 27, 2018, 6:10 AM IST
ಬೆಂಗಳೂರು: ಕಾವೇರಿ ವಿಚಾರದಲ್ಲಿ ನ್ಯಾಯಾಲಯ ತೀರ್ಪಿಗೆ ದೊಡ್ಡದಾಗಿ ಸಂತೋಷ ಪಡುವಂತಿಲ್ಲ. ಹೆಚ್ಚುವರಿ ನೀರಿಗಾಗಿ ಕಾನೂನು ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ತೀರ್ಪಿನಿಂದ ಅನ್ಯಾಯವಾಗಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಮೂರು ಕೋಟಿ ಜನರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಪ್ರಾಣತ್ಯಾಗಕ್ಕೂ ನಾನು ಸಿದ್ಧ ಎಂದು ಹೇಳಿದರು.
ಮಾಜಿ ಅಡ್ವೋಕೇಟ್ ಜನರಲ್‌ಗಳಾದ ಉದಯಹೊಳ್ಳ, ಪ್ರೊ.ರವಿವರ್ಮಕುಮಾರ್ ಸೇರಿದಂತೆ ಕಾನೂನು ತಜ್ಞರೇ ನಮಗೆ 40 ಟಿಎಂಸಿ ಹೆಚ್ಚುವರಿ ನೀರು ಕೊಡಬೇಕಿತ್ತು ಎಂದು ಹೇಳಿದ್ದಾರೆ. ಆದರೆ, ನಮ್ಮ ರಾಜ್ಯ ಸರ್ಕಾರ ಸಂತೃಪ್ತಿ ಭಾವ ವ್ಯಕ್ತಪಡಿಸಿದೆ. ನಾವು ಸುಮ್ಮನಾದರೆ ಮುಂದಿನ ಪೀಳಿಗೆ ಕಷ್ಟ ಆನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಮುಂದೆ ಏನು ಮಾಡಲಿದೆ? ಏನು ತಯಾರಿ ಮಾಡಿಕೊಂಡಿದೆ? ಎಂಬುದರ ಬಗ್ಗೆ ಜನತೆ ಮುಂದೆ ತಿಳಿಸಬೇಕು. ನಾನೇನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪೂರ್ಣ ಪ್ರಮಾಣದ ನ್ಯಾಯ ದೊರೆತಿಲ್ಲ. ಇದರ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಮುಂದೇನು ಮಾಡಬೇಕು ಎಂಬುದು ಬಿಟ್ಟು ಯಾತ್ರೆಗಳಲ್ಲಿ ಮುಳುಗಿವೆ. ಇವರಿಗೇನು ಹೇಳ್ಳೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬರು 10 ಪರ್ಸೆಂಟ್ ಕಮೀಷನ್ ಎಂದರೆ, ಮತ್ತೂಬ್ಬರು 90 ಪರ್ಸೆಂಟ್ ಕಮೀಷನ್ ಅಂತಾರೆ. ಇವರ ಆರೋಪ-ಪ್ರತ್ಯಾರೋಪದ ನಡುವೆ ಕಾವೇರಿ ವಿಚಾರದಲ್ಲಿ ಆಗಿರುವ ಅನ್ಯಾಯ ಯಾರಿಗೂ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
2007 ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವಿಶೇಷ ಅರ್ಜಿ ಸಲ್ಲಿಸಿದ್ದರಿಂದ ಇಂದು ಈ ತೀರ್ಪು ಬಂದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ, ನಾನು ಬಾಯಿ ಬಡಿದುಕೊಂಡರೂ ಯಾರೂ ಕೇಳಲಿಲ್ಲ. ದೇವೇಗೌಡರ ಮಾತು ಯಾರೂ ಕೇಳಬೇಡಿ ಎಂದು ಕಾಂಗ್ರೆಸ್ ನಾಯಕರೇ ಹೇಳಿದರು. ಕಾವೇರಿ ವಿಚಾರದಲ್ಲಿ ಸರಿಯಾದ ನಿಲುವು ತೆಗೆದುಕೊಳ್ಳದಿದ್ದರೆ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದೆ ಎಂದು ಹೇಳಿದರು.
ಕಾವೇರಿ ಬಗ್ಗೆ ತಮಿಳುನಾಡಿನ ಡಿಎಂಕೆ-ಎಐಎಡಿಎಂಕೆ ಜತೆಗೂಡಿ ರಾಜ್ಯದ ಹಿತಾಸಕ್ತಿಗೆ ರಸ್ತೆಗಿಳಿದಿವೆ. ಆದರೆ, ನಮ್ಮ ರಾಜ್ಯದಲ್ಲಿ ಏನಾಗಿದೆ? ರಾಜ್ಯದಿಂದ 17 ಬಿಜೆಪಿ ಸಂಸದರನ್ನು ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರೆಲ್ಲರೂ ಹೋಗಿ ರಾಜ್ಯದ ಪರ ನಿಲ್ಲಬೇಕಲ್ಲವೇ? ಒಮ್ಮೆ ಕೇಂದ್ರ ಸಚಿವ ಅನಂತಕುಮಾರ್ ಅವರ ಬಳಿ ನಾನು ಕಾವೇರಿ ಬಗ್ಗೆ ಪ್ರಸ್ತಾಪಿಸಿದಾಗ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಾಳೆ ಬರುತ್ತೇನೆ ಎಂದು ಹೇಳಿದ್ದರು. ಆದರೆ, ಮರುದಿನ ಬರಲೇ ಇಲ್ಲ ಎಂದರು.
ಕಾಂಗ್ರೆಸ್‌ನವರು ರಾಹುಲ್‌ಗಾಂಧಿಯವರನ್ನು ಕರೆದುಕೊಂಡು ಬಂದು ಯಾತ್ರೆ ಮಾಡಿಸುತ್ತಿದ್ದಾರೆ. ಮಾಡಿಸಲಿ ನಾನು ಬೇಡ ಎನ್ನಲ್ಲ. ರಾಜಕೀಯವಾಗಿ ಟೀಕಿಸುವುದೂ ಇಲ್ಲ. ಆದರೆ, ಕಾವೇರಿ ಅನ್ಯಾಯದ ಬಗ್ಗೆ ಏನು ಮಾಡಿದ್ದೀರಿ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ತೀರ್ಪಿನಲ್ಲಿ ಅಚ್ಚುಕಟ್ಟು ಪ್ರದೇಶ ಹೆಚ್ಚು ಮಾಡಿಕೊಳ್ಳುವಂತಿಲ್ಲ. ಹೊಸ ಯೋಜನೆ ಪ್ರಾರಂಭಿಸುವಂತಿಲ್ಲ ಎಂಬೆಲ್ಲಾ ಅಂಶಗಳಿವೆ. ಸೂಕ್ಷ್ಮವಾಗಿ ಗಮನಿಸಿ ಕಾನೂನು ತಜ್ಞರ ಜತೆ ಚರ್ಚಿಸಿ ಹೆಜ್ಜೆ ಇಡಬೇಕಿದೆ.ಹಿಂದೊಮ್ಮೆ ಕಾವೇರಿ ವಿಚಾರದಲ್ಲಿ ನಾನು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾಗ ಕೇಂದ್ರ ಸರ್ಕಾರ ಮಣಿಯಲಿಲ್ಲವೇ ಎಂದು ಹೇಳಿದರು.
ನಿರ್ವಹಣಾ ಪ್ರಾಧಿಕಾರದಿಂದ ತೊಂದರೆಯಾಗದು ಎಂದು ಕೆಲವರು ಹೇಳುತ್ತಾರೆ. ಪ್ರಾಧಿಕಾರ ಯಾವ ಕಾಯ್ದೆಯಡಿ ಮಾಡ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ತುಂಗಭದ್ರಾ ಜಲಾಶಯ ನೀರು ಬಳಕೆ ವಿಚಾರದಲ್ಲಿ ಆಗಿರುವುದು ಬೇರೆ ಪ್ರಾಧಿಕಾರ, ಕಾವೇರಿ ವಿಚಾರದಲ್ಲಿ ಆಗುವುದು ಬೇರೆ ಎಂಬುದು ಗೊತ್ತಿರಲಿ ಎಂದು ತಿಳಿಸಿದರು.
ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ವಿಧಾನಪರಿಷತ್ ಸದಸ್ಯರಾದ ರಮೇಶ್‌ಬಾಬು, ಮನೋಹರ್, ಟಿ.ಎ.ಶರವಣ, ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.