ಚಾಮುಂಡೇಶ್ವರಿ ದರ್ಶನ ಪಡೆಯಲು ಹರಿದುಬಂದ ಭಕ್ತಸಾಗರ
Team Udayavani, Jul 21, 2018, 1:13 PM IST
ಮೈಸೂರು: ಚುಮುಚುಮು ಚಳಿ, ತಂಗಾಳಿ, ತುಂತುರು ಮಳೆ ನಡುವೆಯೂ ಸರದಿಯಲ್ಲಿ ನಿಂತು, ದುರ್ಗೆ ಸ್ಮರಿಸಿದ ಭಕ್ತರು, ಅಧಿದೇವತೆ ಐತಿಹಾಸಿತ ಚಾಮುಂಡೇಶ್ವರಿಯ ದರ್ಶನ ಪಡೆದ ಭಕ್ತರು ಪುನೀತರಾದರು.
ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಸ ಪ್ರಾಯವಾಗಿರುವ ನಾಡದೇವತೆ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ಮೈಸೂರು ನಗರ, ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳ ಅಸಂಖ್ಯಾತ ಭಕ್ತರು ಬೆಳಗಿನಿಂದಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ದೇವಿ ದರ್ಶನ ಪಡೆದರು. ಆಷಾಢದ ಮೊದಲ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿತು. ಮಹಿಳೆಯರು, ಮಕ್ಕಳು, ವಯೋವೃದ್ಧರು, ನವದಂಪತಿಯರು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದರು.
ಬೆಳಗಿನ ಜಾವದಲ್ಲೇ ಪೂಜೆ ಆರಂಭ: ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಗೆ ಬೆಳಗಿನ ಜಾವ 3.30ರಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಗ್ಗೆ 3.30ರಿಂದ 5.30ರವರೆಗೆ ಮಹಾನ್ಯಾಸ ಪೂರ್ವಕ, ಕರ್ಪೂರ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಅರ್ಚನೆ ಮಹಾಮಂಗಳಾರತಿ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 5.30ಕ್ಕೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಅದಾದ ಬಳಿಕ ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ, ಸಂಜೆ 6ರಿಂದ 7.30 ರವರೆಗೆ ಪ್ರದೋಷಕಾಲ ಅಭಿಷೇಕ, ರಾತ್ರಿ 8.30ಕ್ಕೆ ಮಹಾ ಮಂಗಳಾರತಿ ನೆರವೇರಿಸಿ ರಾತ್ರಿ 11 ಗಂಟೆವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ವಿಶೇಷ ಅಲಂಕಾರ: ಪ್ರತಿ ಆಷಾಢ ಶುಕ್ರವಾರದ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಮೊದಲ ಶುಕ್ರವಾರ ದಂದು ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಗುಲಾಬಿ, ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ, ಕೆಂಪು ಕಣಗಲೆ, ಕೆಂಡಸಂಪಿಗೆ ಸೇರಿದಂತೆ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಕೇವಲ ದೇವಸ್ಥಾನ ಮಾತ್ರವಲ್ಲದೆ ಬೆಟ್ಟದ ನಂದಿ ವಿಗ್ರಹ ಮತ್ತು ಮಹಿಷಾಸುರನಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಉಚಿತ ಬಸ್ ವ್ಯವಸ್ಥೆ: ಪ್ರತಿವರ್ಷದಂತೆ ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗಾಗಿ ಖಾಸಗಿ ವಾಹನ ನಿರ್ಬಂಧಿಸಲಾಗಿತ್ತು. ಹೀಗಾಗಿ ಎಂದಿನಂತೆ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಮುಂಜಾನೆ 2 ಗಂಟೆಯಿಂದಲೇ ಹೆಲಿಪ್ಯಾಡ್ ನಿಂದ ಬಸ್ ಸಂಚಾರ ಆರಂಭಗೊಂಡಿತ್ತು. ಇನ್ನೂ ಕೆಲ ಭಕ್ತರು ಮೆಟ್ಟಿಲು ಸೇವೆಯೊಂದಿಗೆ ಬೆಟ್ಟ ಹತ್ತಿದರು.
ಬಿಗಿ ಪೊಲೀಸ್ ಭದ್ರತೆ: ದೇವಿ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಲಲಿತ್‌ಮಹಲ್ ಹೆಲಿಪ್ಯಾಡ್, ಚಾಮುಂಡಿಬೆಟ್ಟದ ಪಾದ, ಚಾಮುಂಡಿಬೆಟ್ಟದ ಮೇಲೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ, ಅಶ್ವಾರೋಹಿ ದಳದ ಸಿಬ್ಬಂದಿ ಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ದಾಸೋಹಕ್ಕೆ ಜನಸಾಗರ: ದೇವಸ್ಥಾನದ ಪಕ್ಕದಲ್ಲೇ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಿತ್ತು. ದೇವಿ ದರ್ಶನ ಪಡೆದ ಭಕ್ತರು ದಾಸೋಹಕ್ಕೂ ಸರದಿಯಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ 7.30ರಿಂದ 10.30ರವರೆಗೆ ಉಪ್ಪಿಟ್ಟು, ಪೊಂಗಲ್, 10.30ರಿಂದ 4.30ರವರೆಗೆ ಬಿಸಿಬೇಳೆ ಬಾತ್, ಹಪ್ಪಳ, ಅನ್ನಸಾಂಬರ್, ಮೊಸರು, ಬಾದಾಮಿ ಬರ್ಫಿ ಜತೆಗೆ 2 ಕೋಸಂಬರಿ ವಿತರಿಸಲಾಯಿತು. ಸಂಜೆ 4.30ರಿಂದ 10 ಗಂಟೆವರೆಗೆ ಕೇಸರಿಬಾತ್, ಉಪ್ಪಿಟ್ಟಿನ ಜತೆಗೆ 10ಸಾವಿರ ಲಡ್ಡು ನೀಡಲಾಯಿತು. ಇದಲ್ಲದೆ ಅನೇಕ ಭಕ್ತರು ತಮ್ಮ ವಾಹನಗಳಲ್ಲಿ ತಂದ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.