ಮನಸು ಬದಲಿಸಿ ಮತ ಹಾಕಿದರೆ ಇತಿಹಾಸ ಸೃಷ್ಟಿ!
ಸುದ್ದಿ ಸುತ್ತಾಟ
Team Udayavani, Apr 15, 2019, 3:00 AM IST
ಮತದಾನ ಪ್ರಮಾಣದಲ್ಲಿ ಬೆಂಗಳೂರು ಹಿಂದೆ ಬೀಳಲು ಪ್ರಮುಖ ಕಾರಣ, ಸಾಕಷ್ಟು ಜಾಗೃತಿ ನಡುವೆಯೂ ಮತದಾರರಲ್ಲಿ ಹಲವು ಗೊಂದಲಗಳು ಉಳಿದಿರುವುದು. ಹೀಗಾಗಿ, ತಾವು ಮತ ಚಲಾಯಿಸಲಿರುವ ಮತಗಟ್ಟೆ ಯಾವುದು? ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದೇ? ವೋಟರ್ ಸ್ಲಿಪ್ ಇನ್ನೂ ಸಿಕ್ಕಿಲ್ಲ. ಏನು ಮಾಡೋದು? ಮತಗಟ್ಟೆಗೆ ಹೋಗುವ ಮಾರ್ಗ ಯಾವುದು? ಇಂತಹ ಹಲವು ಪ್ರಶ್ನೆಗಳಿಗೆ ಈ ಬಾರಿಯ “ಸುದ್ದಿ ಸುತ್ತಾಟ’ ಮಾರ್ಗದರ್ಶನ ನೀಡಲಿದೆ.
ಬೆಂಗಳೂರು: ರಾಜ್ಯದ ಒಟ್ಟಾರೆ ಮತದಾರರಲ್ಲಿ ಶೇ.17ರಿಂದ 18ರಷ್ಟು ಮತದಾರರು ರಾಜಧಾನಿಯಲ್ಲೇ ಇದ್ದಾರೆ. ಮತಗಟ್ಟೆಗಳ ಸಂಖ್ಯೆ, ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಸಿಬ್ಬಂದಿ ಸಂಖ್ಯೆಗೆ ಹೋಲಿಸಿದರೆ ಬೆಂಗಳೂರು ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸುಶಿಕ್ಷಿತರನ್ನು ಒಳಗೊಂಡಿರುವ ಸಿಲಿಕಾನ್ ಸಿಟಿ, ಮತದಾನ ಪ್ರಮಾಣದಲ್ಲಿ ಮಾತ್ರ ಉಳಿದೆಲ್ಲ ನಗರಗಳಿಗಿಂತ ಹಿಂದೆ ಉಳಿದಿದೆ. ಇದು ಎಲ್ಲರಿಗೂ ಯಕ್ಷಪ್ರಶ್ನೆ ಆಗಿದೆ!
ನಗರದಲ್ಲಿ ಏ.18ರಂದು ನಡೆಯುವ ಪ್ರಜಾತಂತ್ರ ಹಬ್ಬದ ಯಶಸ್ಸಿಗಾಗಿ ಬಸ್ ಚಾಲಕ, ಕಾನ್‌ಸ್ಟೆಬಲ್, ಶಿಕ್ಷಕರಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿನ ಸುಮಾರು 25 ಸಾವಿರಕ್ಕೂ ಅಧಿಕ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಮತದಾರರನ್ನು ಖರೀದಿಸಲು ಅವಕಾಶ ನೀಡದಂತೆ ಕಳೆದ ಒಂದು ತಿಂಗಳಿಂದ ಹಗಲು-ರಾತ್ರಿ ದುಡಿಯುತ್ತಿದ್ದಾರೆ.
ರಜಾ-ಮಜಾ ಇಲ್ಲದೆ, ಕೆಲವರು ಕುಟುಂಬದಿಂದಲೂ ತಾತ್ಕಾಲಿಕವಾಗಿ ದೂರ ಇದ್ದು, ಈ ಕೆಲಸದಲ್ಲಿ ನಿರತರಾಗಿದ್ದಾರೆ. ಮತ ಚಲಾಯಿಸುವ ಮೂಲಕ ಅವರೆಲ್ಲರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ಸಮಯ ಇದು. ಹಾಗಾಗಿ ಎಂದಿನ ನಿರಾಸಕ್ತಿ ತೋರಿಸದೆ, ಬೆಂಗಳೂರು ಮತದಾನದಲ್ಲೂ ಮುಂಚೂಣಿಯಲ್ಲಿ ನಿಲ್ಲಬೇಕು.
ಪಟ್ಟಿಯಲ್ಲಿ ಹೆಸರು ಖಾತ್ರಿಪಡಿಸಿಕೊಳ್ಳಿ: ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಕಾರ್ಡ್ ಇರಲಿ ಇಲ್ಲದಿರಲಿ, ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೆಸರು ಇದ್ದರೆ, ನಿಮ್ಮ ಮತದಾನ ಕೂಡ ಖಾತ್ರಿಯಾದಂತೆ.
http://ceokarnataka.kar.nic.inಗೆ ಹೋಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಖಾತ್ರಿಪಡಿಸಿಕೊಳ್ಳಬಹುದು. ಅಥವಾ ಹೊಸ ಮತದಾರರ ಗುರುತಿನ ಚೀಟಿ ಹಿಂದೆ ಕೆಳಭಾಗದಲ್ಲಿ ಬಲಗಡೆ ಮೂಲೆಯಲ್ಲಿ ಮತಗಟ್ಟೆ ಸಂಖ್ಯೆ ಮತ್ತು ಮತದಾರರ ಕ್ರಮ ಸಂಖ್ಯೆ ಇರುತ್ತದೆ. ಅದನ್ನು ಆಧರಿಸಿಯೂ ಖಚಿತಪಡಿಸಿಕೊಳ್ಳಬಹುದು. ಅಥವಾ KAEPIC <space> ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಟೈಪ್ ಮಾಡಿ, ಮೊ: 97319 79899 ಇಲ್ಲಿಗೆ ಎಸ್‌ಎಂಎಸ್ ಮಾಡಿ ತಿಳಿಯಬಹುದು.
“ಕ್ಯು’ ಇಲ್ಲದೆ ಮತ ಹಾಕಿ: ಸಾಮಾನ್ಯವಾಗಿ ಮತಗಟ್ಟೆಗೆ ಹೋದಾಗ, ಮತದಾರರ ಹೆಸರು ಆಧರಿಸಿ ಪಟ್ಟಿಯಲ್ಲಿ ಹುಡುಕುತ್ತಾರೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದ್ದರಿಂದ ನೇರವಾಗಿ ಕ್ರಮ ಸಂಖ್ಯೆ ಹೇಳಿದರೆ ಸಾಕು, ಅದರಿಂದ ಹುಡುಕಾಟ ತಪ್ಪುತ್ತದೆ. ಸಮಯ ಉಳಿತಾಯ ಆಗುತ್ತದೆ. ಒಬ್ಬ ವ್ಯಕ್ತಿ ಮತ ಚಲಾಯಿಸಲು 2 ನಿಮಿಷ ಹಿಡಿಯುತ್ತದೆ. ಹತ್ತು ಜನ ಇದ್ದರೆ, 15ರಿಂದ 20 ನಿಮಿಷ ಸಾಕಾಗುತ್ತದೆ. ಆದರೆ, ಹೆಸರು ಆಧರಿಸಿ ಹುಡುಕಾಟ ನಡೆಸುವುದರಿಂದ ಅದೇ ಹತ್ತು ಜನ ಮತ ಹಾಕಲು 1 ಗಂಟೆ ತೆಗೆದುಕೊಳ್ಳುತ್ತದೆ.
ಮತಗಟ್ಟೆ ಹುಡುಕಾಟ ಹೇಗೆ?: ವೋಟರ್ ಸ್ಲಿಪ್ (ಮತದಾರರ ಚೀಟಿ)ನಲ್ಲಿ ಮತದಾರರ ಕ್ರಮ ಸಂಖ್ಯೆ ಹಾಗೂ ಮತಗಟ್ಟೆ ಸಂಖ್ಯೆ ಇರುತ್ತದೆ. ಅದರ ಹಿಂಭಾಗದಲ್ಲಿ ಆ ಮತಗಟ್ಟೆ ಎಲ್ಲಿದೆ ಎಂಬುದನ್ನು ನಕ್ಷೆ ಮೂಲಕ ನೀಡಲಾಗಿರುತ್ತದೆ. ವೋಟರ್ ಸ್ಲಿಪ್ ಇಲ್ಲದಿದ್ದರೆ, ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದ “ಚುನಾವಣಾ ಆ್ಯಪ್’ ಅನ್ನು ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು. ಅಥವಾ ಸಹಾಯವಾಣಿ 1950ಗೆ ಕರೆ ಮಾಡಿ ಕ್ರಮಸಂಖ್ಯೆ ಹೇಳಿದರೆ, ಅಲ್ಲಿಂದಲೂ ಮತಗಟ್ಟೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಪರ್ಯಾಯ ಗುರುತಿನ ಚೀಟಿ: ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಕೇಂದ್ರ/ರಾಜ್ಯ ಸರ್ಕಾರಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಪತ್ರ, ಎಂ-ನರೇಗಾ ಜಾಬ್ ಕಾರ್ಡ್, ಪಾನ್ ಕಾರ್ಡ್, ಭಾವಚಿತ್ರ ಇರುವ ಪಿಂಚಣಿ ದಾಖಲಾತಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರ ಇರುವ ಪಾಸ್‌ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿದ ಆರೋಗ್ಯ ವಿಮಾ ಕಾರ್ಡ್, ಆರ್‌ಜಿಐ ಅಡಿ ಎನ್‌ಪಿಆರ್ ನೀಡಿರುವ ಸ್ಮಾರ್ಟ್ ಕಾರ್ಡ್, ಸಂಸದ/ ಶಾಸಕ/ ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಬಳಸಬಹುದು.
ಇವುಗಳಿಗೆ ನಿರ್ಬಂಧ
-ಮೊಬೈಲ್ ಬಳಕೆ.
-ಯಾವುದೇ ಪಕ್ಷದ ಚಿಹ್ನೆ ಅಥವಾ ಬಣ್ಣ ಪ್ರತಿಬಿಂಬಿಸುವ ಬಟ್ಟೆ.
-ವಯೋವೃದ್ಧರನ್ನು ಮತಗಟ್ಟೆವರೆಗೆ ಕರೆತರಲು ಮಾತ್ರ ಅವಕಾಶ. ಮತಯಂತ್ರದವರೆಗೆ ಬರುವಂತಿಲ್ಲ.
ಮತದಾನ ಕೇಂದ್ರದಲ್ಲಿನ ಸೌಲಭ್ಯಗಳು
-ವಿಕಲಚೇತನ ಮತದಾರರ ಅನುಕೂಲಕ್ಕೆ ರ್‍ಯಾಂಪ್, ವ್ಹೀಲ್ ಚೇರ್, ಉಚಿತ ಕ್ಯಾಬ್ ವ್ಯವಸ್ಥೆ.
-ಮಂದ ದೃಷ್ಟಿ ಉಳ್ಳವವರಿಗೆ ಭೂತಗಾಜಿನ ಸೌಲಭ್ಯ.
-ಇವಿಎಂ ಯಂತ್ರಗಳಲ್ಲಿ ಬ್ರೈಲ್ ಲಿಪಿ ಅಳವಡಿಕೆ.
-ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ, ಶೌಚಾಲಯ ಸೌಲಭ್ಯ.
-ಅಂಧರಿಗೆ ಬ್ರೈಲ್ ಲಿಪಿಯಲ್ಲಿ ಮಾದರಿ ಬ್ಯಾಲೆಟ್ ಪ್ರದರ್ಶನ.
ವೋಟರ್ ಸ್ಲಿಪ್ ತಲುಪಿಸುವುದೇ ಸವಾಲು: ನಗರದಲ್ಲಿರುವ ಮತದಾರ ಮನೆಗೆ “ವೋಟರ್ ಸ್ಲಿಪ್’ (ಮತದಾರರ ಚೀಟಿ) ಜತೆಗೆ ಕೈಪಿಡಿಯನ್ನೂ ತಲುಪಿಸುವುದಾಗಿ ಚುನಾವಣಾ ಆಯೋಗ ಹೇಳಿದೆಯಾದರೂ ಬಿಬಿಎಂಪಿಗೆ ಇದು ದೊಡ್ಡ ಸವಾಲಾಗಿದೆ.
ನಗರದಲ್ಲಿ ಸುಮಾರು 88 ಲಕ್ಷ ಮತದಾರರಿದ್ದು, ಅವರಿಗೆ ಮತದಾರರ ಚೀಟಿ ತಲುಪಿಸುವ ಬೂತ್‌ಮಟ್ಟದ ಅಧಿಕಾರಿಗಳು 8,514. ಅಲ್ಲದೆ, ಇರುವ ಕಾಲಾವಕಾಶ ಕೇವಲ ಮೂರು ದಿನಗಳು. ಈ ಅಲ್ಪಾವಧಿಯಲ್ಲಿ ಬೆಂಗಳೂರಿನಂತಹ ನಗರದಲ್ಲಿ ನಿತ್ಯ ಸರಾಸರಿ 350 ಮತದಾರರನ್ನು ಭೇಟಿ ಮಾಡಿ, ಸ್ಲಿಪ್ ತಲುಪಿಸುವುದು ಅಕ್ಷರಶಃ ಸವಾಲಾಗಿದೆ. ಹಾಗಾಗಿ, ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯವುದು ಅನುಮಾನ ಎನ್ನಲಾಗುತ್ತಿದೆ.
ವೋಟರ್ ಸ್ಲಿಪ್‌ನ ಉಪಯೋಗವೇನು?: ಮತದಾನ ದಿನದಂದು ಮತದಾರರು ತಮ್ಮ ಹಕ್ಕು ಚಲಾಯಿಸಲು ಈ ವೋಟರ್ ಸ್ಲಿಪ್ ತೋರಿಸಿಯೇ ಮತಗಟ್ಟೆ ಒಳಗೆ ಪ್ರವೇಶ ಪಡೆಯಬೇಕಾಗುತ್ತದೆ. ಈ ಸ್ಲಿಪ್ ಇದ್ದರೆ ಸಾಕು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ನಡೆಯುತ್ತದೆ. ಇದರಲ್ಲಿ ಮತದಾರರ ಫೋಟೋ, ಎಪಿಕ್ ನಂಬರ್ ಸಹಿತ ಸಂಪೂರ್ಣ ಮಾಹಿತಿ ಇರುವುದರಿಂದ ವಂಚನೆಗೆ ಅವಕಾಶ ಇರುವುದಿಲ್ಲ. ಈ ದೃಷ್ಟಿಯಿಂದ ಇದು ಹೆಚ್ಚು ಮಹತ್ವ ಹೊಂದಿದೆ.
ಸಮಸ್ಯೆ ಏನು?: ಬೆಂಗಳೂರಿನಂತಹ ಮಹಾನಗರದಲ್ಲಿ ನಿತ್ಯ ಅಬ್ಬಬ್ಟಾ ಎಂದರೆ 80ರಿಂದ 100 ಮತದಾರರನ್ನು ಸಂಪರ್ಕಿಸಲು ಮಾತ್ರ ಸಾಧ್ಯ. ಏಕೆಂದರೆ, ಬಹುತೇಕರು ಹಗಲು ಮನೆಯಲ್ಲಿ ಇರುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಮಾತ್ರ ಲಭ್ಯ ಇರುತ್ತಾರೆ. ಈ ಅವಧಿಯಲ್ಲೇ ಸಂಪರ್ಕಿಸಬೇಕು.
ಹಲವು ಮನೆಗಳಲ್ಲಿ ನಾಯಿಗಳ ಹಾವಳಿ, ಇನ್ನು ಕೆಲವರು ಮನೆಯಲ್ಲಿದ್ದರೂ ಬಾಗಿಲು ತೆಗೆಯುವುದಿಲ್ಲ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಂತೂ ಬೂತ್‌ಮಟ್ಟದ ಅಧಿಕಾರಿಗಳನ್ನು ಒಳಗೆ ಕೂಡ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ನಿಜವಾಗಿಯೂ ಇದೊಂದು ಸವಾಲು ಎಂದು ಚುನಾವಣಾ ಕರ್ತವ್ಯದಲ್ಲಿರುವ ಬಿಬಿಎಂಪಿ ಅಧಿಕಾರಿ “ಉದಯವಾಣಿ’ಗೆ ತಿಳಿಸಿದರು.
ಯುವ ಮತದಾರರ ನೀರಸ ಪ್ರತಿಕ್ರಿಯೆ: 2011ರ ಜನಗಣತಿ ಪ್ರಕಾರ ನಗರದಲ್ಲಿ ಇರುವ ಯುವಕರ ಸಂಖ್ಯೆ 3.11 ಲಕ್ಷ. ಆದರೆ, ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆ 1.05 ಲಕ್ಷ. ಅಂದರೆ ಕೇವಲ ಶೇ.33.86!
2011ರಲ್ಲಿ 10 ಮತ್ತು 11 ವರ್ಷದ ಬಾಲಕ-ಬಾಲಕಿಯರು ಇಂದು ಕ್ರಮವಾಗಿ 18 ಮತ್ತು 19 ವರ್ಷ ತುಂಬಿದವರಾಗಿದ್ದಾರೆ. ಹಾಗಾಗಿ, ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಆದರೆ ಆ ವಯೋಮಾನದವರಿಂದ ಬಂದಿರುವ ಪ್ರತಿಕ್ರಿಯೆ ತೀರಾ ನೀರಸವಾಗಿದೆ.
ಅಲ್ಪ ಮತದಾನ ಪ್ರಮಾಣಕ್ಕೆ ಇತಿಹಾಸವೇ ಇದೆ!: ರಾಜಧಾನಿ ಬೆಂಗಳೂರಿನ ಶೇಕಡವಾರು ಕಡಿಮೆ ಮತದಾನದ ಟ್ರೆಂಡ್ ಈಗಿನದ್ದಲ್ಲ. ಇದಕ್ಕೊಂದು ಸುದೀರ್ಘ ಇತಿಹಾಸವಿದೆ. ಮೈಸೂರು ರಾಜ್ಯ ಇದ್ದ ಕಾಲದಿಂದಲೂ ಬೆಂಗಳೂರು ಈ “ಅಪಖ್ಯಾತಿ’ ಹೊತ್ತಿದೆ. 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಎರಡು ಕ್ಷೇತ್ರಗಳಿದ್ದವು.
ಬಳಿಕ 1957 ಮತ್ತು 1962ರಲ್ಲಿ ಬೆಂಗಳೂರು ಮತ್ತು ಬೆಂಗಳೂರು ನಗರ ಎಂಬ ಕ್ಷೇತ್ರಗಳಿದ್ದವು. 1967 ಮತ್ತು 71ರಲ್ಲಿ ಬೆಂಗಳೂರು ಒಂದೇ ಕ್ಷೇತ್ರವಾಗಿತ್ತು. ಪುನಃ 1977ರಿಂದ 2004ರವರೆಗೆ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಎಂಬ ಎರಡು ಕ್ಷೇತ್ರಗಳಾದವು. ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ 2009ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಹುಟ್ಟಿಕೊಂಡಿತ್ತು.
ಹಾಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಎಂಬ ಮೂರು ಲೋಕಸಭಾ ಕ್ಷೇತ್ರಗಳು ಬೆಂಗಳೂರು ರಾಜಧಾನಿ ವ್ಯಾಪ್ತಿಗೆ ಬರುತ್ತವೆ. ಈವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಅಥವಾ ಇದರ ವ್ಯಾಪ್ತಿಗೆ ಬರುವ ಲೋಕಸಭಾ ಕ್ಷೇತ್ರಗಳ ಶೇಕಡವಾರು ಮತದಾನ ಪ್ರಮಾಣ ಸರಾಸರಿ ಶೇ.42ರಿಂದ ಶೇ.58ರ ಅಸುಪಾಸಿನಲ್ಲೇ ಇದೆ.
1952ರಲ್ಲಿ ನಡೆದ ಮೊದಲ ಲೋಕಸಭೆ ನಾವಣೆ ವೇಳೆ ಮೈಸೂರು ರಾಜ್ಯದಲ್ಲಿ ಒಟ್ಟು 9 ಕ್ಷೇತ್ರಗಳಿದ್ದವು. ಆಗ ಒಟ್ಟಾರೆ ಮತದಾನ ಶೇ.71 ಆಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇ.45 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ.45 ಮತದಾನ ಆಗಿತ್ತು. ಮೊದಲ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 7.44 ಲಕ್ಷ ಮತದಾರರು ಇದ್ದರೆ, ಈಗ 88 ಲಕ್ಷ ಮತದಾರರು ಇದ್ದಾರೆ.
1957ರಲ್ಲಿ ನಡೆದ ಎರಡನೇ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶೇ.43 ಹಾಗೂ 1962ರಲ್ಲಿ ಬೆಂಗಳೂರು ನಗರ ಲೋಕಸಭಾ ಕ್ಷೇತ್ರದಲ್ಲಿ ಶೇ.68ರಷ್ಟು ಮತದಾನ ಆಗಿದ್ದು ಈವರೆಗಿನ ಕನಿಷ್ಠ ಮತ್ತು ಗರಿಷ್ಠ ಮತದಾನದ ಇತಿಹಾಸ.
ಲೋಕಸಭೆಯಲ್ಲಿ ಬೆಂಗಳೂರಿಗರ ಮತದಾನದ ಇತಿಹಾಸ
ಚುನಾವಣೆ ನಡೆದ ವರ್ಷ ಒಟ್ಟು ಪ್ರಮಾಣ ನಗರದ ಕ್ಷೇತ್ರಗಳಲ್ಲಿನ ಪ್ರಮಾಣ
1952 ಶೇ.71 ಬೆಂಗಳೂರು ಉತ್ತರ-ಶೇ.45
ಬೆಂಗಳೂರು ದಕ್ಷಿಣ-ಶೇ.45
1957 ಶೇ.57 ಬೆಂಗಳೂರು-ಶೇ.58.9
ಬೆಂಗಳೂರು ನಗರ-ಶೇ.43
1962 ಶೇ.59 ಬೆಂಗಳೂರು-ಶೇ.68
ಬೆಂಗಳೂರು ನಗರ-ಶೇ.55
1967 ಶೇ.62 ಬೆಂಗಳೂರು-ಶೇ.52
1971 ಶೇ.57 ಬೆಂಗಳೂರು-ಶೇ.45
1977 ಶೇ.63 ಬೆಂಗಳೂರು ಉತ್ತರ-ಶೇ.58
ಬೆಂಗಳೂರು ದಕ್ಷಿಣ-ಶೇ.64
1980 ಶೇ.57 ಬೆಂಗಳೂರು ಉತ್ತರ-ಶೇ.52
ಬೆಂಗಳೂರು ದಕ್ಷಿಣ-ಶೇ.51
1984 ಶೇ.65 ಬೆಂಗಳೂರು ಉತ್ತರ-ಶೇ.59
ಬೆಂಗಳೂರು ದಕ್ಷಿಣ-ಶೇ.57
1989 ಶೇ.67 ಬೆಂಗಳೂರು ಉತ್ತರ-ಶೇ.58
ಬೆಂಗಳೂರು ದಕ್ಷಿಣ-ಶೇ.56
1991 ಶೇ.54 ಬೆಂಗಳೂರು ಉತ್ತರ-ಶೇ.46
ಬೆಂಗಳೂರು ದಕ್ಷಿಣ-ಶೇ.45
1996 ಶೇ.60 ಬೆಂಗಳೂರು ಉತ್ತರ-ಶೇ.54
ಬೆಂಗಳೂರು ದಕ್ಷಿಣ-ಶೇ.55
1998 ಶೇ.64. ಬೆಂಗಳೂರು ಉತ್ತರ-ಶೇ.64
ಬೆಂಗಳೂರು ದಕ್ಷಿಣ-ಶೇ.58
1999 ಶೇ.67 ಬೆಂಗಳೂರು ಉತ್ತರ-ಶೇ.56
ಬೆಂಗಳೂರು ಉತ್ತರ-ಶೇ.54
2004 ಶೇ.65 ಬೆಂಗಳೂರು ಉತ್ತರ-ಶೇ.54
ಬೆಂಗಳೂರು ದಕ್ಷಿಣ-ಶೇ.49
2009 ಶೇ.58 ಬೆಂಗಳೂರು ಕೇಂದ್ರ-ಶೇ.44
ಬೆಂಗಳೂರು ಉತ್ತರ-ಶೇ.46
ಬೆಂಗಳೂರು ದಕ್ಷಿಣ-ಶೇ.44
2014 ಶೇ.67 ಬೆಂಗಳೂರು ಕೇಂದ್ರ-ಶೇ.55
* ರಫೀಕ್ ಅಹ್ಮದ್/ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.