ಬದಲಾಗಿರುವ ಭಾರತ ಇನ್ನಷ್ಟು ಬದಲಾಗಬೇಕಿದೆ
Team Udayavani, Apr 15, 2019, 3:00 AM IST
ಬೆಂಗಳೂರು: ಅಭಿವೃದ್ಧಿ, ವಿಶ್ವಮನ್ನಣೆ, ಭದ್ರತಾ ವಿಚಾರಗಳಲ್ಲಿ ಐದು ವರ್ಷಗಳ ಹಿಂದೆ ಇದ್ದ ಭಾರತಕ್ಕೂ, ಇಂದು ನಿಮ್ಮ ಕಣ್ಣ ಮುಂದೆ ಇರುವ ಭಾರತಕ್ಕೂ ಹೋಲಿಕೆ ಮಾಡಿ. ನಂತರ ಬದಲಾಗಿರುವ ಹಾಗೂ ಮತ್ತಷ್ಟು ಬದಲಾಗಬೇಕಿರುವ ಭಾರತಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ.
ಚಿಂತಕರ ಚಾವಡಿ ವತಿಯಿಂದ ನಗರದ ಎಸ್.ಜೆ.ಆರ್.ಸಿ.ಕಾಲೇಜಿನಲ್ಲಿ ಹಮ್ಮಿಕೊಂದಿದ್ದ ಯುವ ಮತದಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಭಾರತ ಐತಿಹಾಸಿಕವಾಗಿ ಬದಲಾವಣೆಯತ್ತ ಸಾಗುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರವೇ ತುಂಬಿತ್ತು. ಬೇಳೆ ಕಾಳುಗಳ ದರ ಗಗನಕ್ಕೇರಿದ್ದವು.
ಆದರೆ, ಇಂದು ಪರಿಸ್ಥಿತಿ ಸುಧಾರಿಸಿದೆ. ಭದ್ರತೆ, ವಿಜ್ಞಾನ ತಂತ್ರಜ್ಞಾನ ಸೇರಿ ವಿವಿಧ ವಿಚಾರಗಳಲ್ಲಿ ವಿಶ್ವದ ನಾನಾ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಮುಂದೆ ಇನ್ನಷ್ಟು ಬದಲಾಗಬೇಕಿದ್ದು, ಆ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆ ಅತ್ಯಂತ ಮುಖ್ಯವಾಗಿದೆ. ಬಿಜೆಪಿ ನೀಡುತ್ತಿರುವ “ಮಾದರಿ ಆಡಳಿತ’ ಮುಂದುವರಿಯಬೇಕೋ ಅಥವಾ ಇಲ್ಲಿಗೆ ನಿಲ್ಲಬೇಕೊ ಎಂಬುದನ್ನು ಶಿಕ್ಷಿತ, ಪ್ರಜ್ಞಾವಂತ ಯುವ ಮತದಾರರು ನಿರ್ಣಯಿಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಸಮಸ್ಯೆಗಳು ಮತ್ತೆ ಮರುಕಳಿಸುತ್ತವೆ ಎಂಬ ಕಾರಣಕ್ಕಾಗಿ ಯಾವುದೇ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳುವುದಿಲ್ಲ. ಹೀಗಾಗಿಯೇ, ಸದೃಢ ಭಾರತ ನಿರ್ಮಾಣಕ್ಕೆ ಭವಿಷ್ಯದ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಉದಾಹರಣೆ ಸ್ವತ್ಛತೆ ವಿಚಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಕಂಡ ಕನಸನ್ನು ಸಾಕಾರಗೊಳಿಸಲು 2015 ಆ.15ರಂದು ಸ್ವತ್ಛ ಭಾರತಕ್ಕೆ ಕರೆ ಕೊಟ್ಟರು.
ಆ ಯೋಜನೆಯ ಫಲವಾಗಿ ಗಾಂಧೀಜಿಯವರ 150ನೇ ಹುಟ್ಟುಹಬ್ಬಕ್ಕೆ ಭಾರತ “ಬಹಿರ್ದೆಸೆ ಮುಕ್ತರಾಷ್ಟ್ರ’ವಾಗುತ್ತಿದೆ. ಅಂತೆಯೇ, 2022ರ ವೇಳೆಗೆ ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷವಾಗಲಿದ್ದು, ಆ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನು ವಸತಿ ಸೌಕರ್ಯ ಹೊಂದಿರಬೇಕು ಹಾಗೂ ಭಾರತವನ್ನು “ಗುಡಿಸಲು ಮುಕ್ತರಾಷ್ಟ್ರ’ ಮಾಡಬೇಕೆಂಬ ಯೋಜನೆ ಹಾಕಿಕೊಂಡಿದ್ದಾರೆ.
ಇನ್ನು, ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುವ (2047)ವೇಳೆಗೆ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಹಣೆಪಟ್ಟಿಯಿಂದ ಹೊರ ಬಂದು, ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಬೇಕೆಂಬ ಕನಸು ಕಂಡಿದ್ದಾರೆ ಎಂದು ತಿಳಿಸಿದರು.
ರಿಮೋಟ್ ಕಂಟ್ರೋಲ್ ಪ್ರಧಾನಿಯಲ್ಲ: ನಮ್ಮ ಪ್ರಧಾನಿ ಮೋದಿಜಿ ಯಾರ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಸಂದರ್ಭಕ್ಕೆ ತಕ್ಕಂತೆ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಅದಕ್ಕೆ ಸೂಕ್ತ ಉದಾಹರಣೆ ಪುಲ್ವಾಮಾ ದಾಳಿಗೆ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ಎಚ್ಚರಿಗೆ ಕೊಟ್ಟಿದ್ದು. ಇತ್ತೀಚಿನ ಪುಲ್ವಾಮಾ ದಾಳಿಯಂತೆಯೇ 2008ರಲ್ಲಿ ಮುಂಬೈ ಮೇಲೆ ಉಗ್ರ ದಾಳಿಯಾಗಿ ವಿದೇಶಿಯರು ಸೇರಿ ಅನೇಕರು ಸಾವಿಗೀಡಾಗಿದ್ದರು.
ಆ ವೇಳೆ, ಸೇನೆಯು ಪ್ರತಿದಾಳಿಗೆ ಸಿದ್ಧವಾಗಿದ್ದರೂ, ಅಂದಿನ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕಿ, ಭದ್ರತಾ ವಿಚಾರದಲ್ಲಿ ಭಾರತವನ್ನು ಇತರ ದೇಶಗಳು ಟೀಕಿಸುವಂತೆ ಮಾಡಿತ್ತು. ಆದರೆ, ಇಂದು ಸೇನೆಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಹಕ್ಕನ್ನು ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ವಿಫಲ: ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಅರ್ಹ ರೈತರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ 73 ಲಕ್ಷ ರೈತರಿದ್ದು, ಇವರಲ್ಲಿ ಈ ಯೋಜನೆಗೆ 62 ಲಕ್ಷ ರೈತರು ಅರ್ಹರಾಗಿದ್ದಾರೆ. ಆದರೆ, ರೈತರ ನೋಂದಣಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ವಿಳಂಬ ಮಾಡಿರುವುದರಿಂದ ಕೇವಲ 12 ಸಾವಿರ ರೈತರು ಇಲ್ಲಿಯವರೆಗೆ ನೋಂದಣಿಯಾಗಿದ್ದಾರೆ ಎಂದರು.
15 ಲಕ್ಷ ರೂ. ಕೊಡುತ್ತೇನೆ ಎಂದು ಯಾರೂ ಹೇಳಿಲ್ಲ: ಸಂವಾದ ಸಂದರ್ಭದಲ್ಲಿ “ಬಡವರ ಖಾತೆಗೆ 15 ಲಕ್ಷ ರೂ.ಜಮೆ ಮಾಡುತ್ತೇವೆಂಬ ಆಶ್ವಾಸನೆಯನ್ನು ಇನ್ನೂ ಮೋದಿಯವರು ಈಡೇರಿಸಿಲ್ಲ ಎಂದು ಯುವತಿಯೊಬ್ಬಳು ಪ್ರಶ್ನಿಸಿದಳು.
ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮಮನ್, ಕಳೆದ ಬಾರಿ ಚುನಾವಣೆಯ ಪ್ರಣಾಳಿಕೆಯಲ್ಲಿ 15 ಲಕ್ಷ ರೂ.ಕೊಡುತ್ತೇವೆಂದು ಮೋದಿ ಹೇಳಿಲ್ಲ. ಜತೆಗೆ, ಈ ಕುರಿತು ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ, ಕಪ್ಪು ಹಣಕ್ಕೆ ಕಡಿವಾಣ ಬಿದ್ದಾಗ ಪ್ರತಿಯೊಬ್ಬರಿಗೂ 15 ಲಕ್ಷ ರೂ.ವರೆಗೆ ದೊರೆಯಲಿದೆ ಎಂದು ವಿಶ್ಲೇಷಿಸಿದರು. ಆದರೆ, ಕಾಂಗ್ರೆಸ್ ಈ ಹೇಳಿಕೆಯನ್ನು ತಿರುಚಿದೆ ಎಂದರು.
ರಫೆಲ್ ಒಪ್ಪಂದ ಕುರಿತು ವ್ಯರ್ಥ ಆರೋಪ: ರಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರವಾಗಿಲ್ಲ ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಸಿಐಜಿ ವರದಿ ನೀಡಿದೆ. ಆದರೆ, ಕಾಂಗ್ರೆಸ್‌ನವರು ಅದನ್ನೇ ಪುನಃ ಆರೋಪಿಸುತ್ತಾ ದೆವ್ವ ಹಿಡಿದವರಂತಾಡುತ್ತಿದ್ದಾರೆ. ಇದರ ಬದಲು ಕಾಂಗ್ರೆಸ್ ಆಡಳಿತದಲ್ಲಾದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಾಗೂ 2ಜಿ ಹಗರಣದ ಕುರಿತು ಮಾತನಾಡಲಿ.
ರಕ್ಷಣಾ ಇಲಾಖೆಯನ್ನು ಮಧ್ಯಮ ವರ್ಗದ ಸಾಮಾನ್ಯ ಮಹಿಳೆ ನಿರ್ವಹಣೆ ಮಾಡುತ್ತಿರುವುದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಜತೆಗೆ, ಮೋದಿ ಅವರು ರಕ್ಷಣಾ ಇಲಾಖೆಯಿಂದ ದಲ್ಲಾಳಿಗಳನ್ನು ದೂರ ಇಟ್ಟಿರುವುದು ಕಾಂಗ್ರೆಸ್‌ನವರಿಗೆ ಸಾಕಷ್ಟು ಬೇಸರ ತಂದಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.