ಚಕ್ರವ್ಯೂಹದಲ್ಲಿ ಸಿಲುಕಿದರೇ ಸಿಎಂ?
Team Udayavani, Apr 23, 2018, 6:15 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್-ಬಿಜೆಪಿ ಸೇರಿ ಖೆಡ್ಡಾಗೆ ಬೀಳಿಸುವ ತಂತ್ರ ಹೆಣೆಯಿತಾ? ಇದರ ಮುನ್ಸೂಚನೆ ಅರಿತೇ ಸುರಕ್ಷಿತ ಕ್ಷೇತ್ರ ಹುಡುಕಿ ಬಾದಾಯಿಯತ್ತ ಹೋಗುವ ಅನಿವಾರ್ಯತೆ ಎದುರಾಯ್ತಾ? ಚಕ್ರವ್ಯೂಹದಲ್ಲಿ ಸಿಲುಕಿಹಾಕಿಕೊಳ್ಳುವ ಸ್ಥಿತಿಗೆ ತಲುಪಿದ್ರಾ ಸಿದ್ದರಾಮಯ್ಯ?
ಚಾಮುಂಡೇಶ್ವರಿಯಲ್ಲಿ ವಿರೋಧಿಗಳೆಲ್ಲಾ ಒಗ್ಗೂಡಿದ್ದರಿಂದ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ಅಗ್ನಿಪರೀಕ್ಷೆಗೆ ಮುಂದಾಗುವ ಅನಿವಾರ್ಯತೆ ಎದುರಾಯ್ತಾ?ಇಂಥದ್ದೊಂದು ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದು, ಸಿದ್ದರಾಮಯ್ಯನವರು ನಿಂತ ನೆಲೆಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲದೆ ಆತಂಕಗೊಂಡರಾ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.
ಚಾಮುಂಡೇಶ್ವರಿ ಉಪ ಚುನಾವಣೆಯಂತಹ ಕಠಿಣ ಹೋರಾಟದ ಸಂದರ್ಭದಲ್ಲೇ ನನಗೆ ಒಕ್ಕಲಿಗ ಸಮುದಾಯ ಶೇ.32 ರಷ್ಟು ಮತ ಕೊಟ್ಟಿತ್ತು ಎಂದು ಪದೇ ಪದೆ ಹೇಳುತ್ತಿದ್ದ ಸಿದ್ದರಾಮಯ್ಯ ಅದೇ ಧೈರ್ಯದ ಮೇಲೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆಗೆ ತೀರ್ಮಾನಿಸಿದ್ದರು. ಆರು ತಿಂಗಳ ಹಿಂದೆಯೇ ಘೋಷಿಸಿ ಹಲವಾರು ಬಾರಿ ಕ್ಷೇತ್ರದಲ್ಲಿ ಓಡಾಡಿ ಮತದಾರರ ನಾಡಿಮಿಡಿತ ನೋಡಿದ್ದರು. ಆದರೆ, ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ “ಒಳ ಒಪ್ಪಂದ’ದ ಏಟು ಯಾವ ಪರಿ ಇರಬಹುದು ಎಂಬ ಅಂದಾಜು ಸಿಕ್ಕಿದ್ದರಿಂದಲೇ ಬಾದಾಮಿ “ಸುರಕ್ಷಿತ’ ಎಂದು ಹೊರಟಿದ್ದಾರೆ.
ಆದರೆ, ಅಲ್ಲಿಯೂ ಸಿದ್ದರಾಮಯ್ಯ ಮಣಿಸಲು ಬಿಜೆಪಿ-ಜೆಡಿಎಸ್ ತನ್ನೆಲ್ಲಾ ಪಟ್ಟುಗಳನ್ನು ಹಾಕುವುದು ನಿಶ್ಚಿತ. ಅಲ್ಲಿ ಸಹ ಬಿಜೆಪಿ ಹಾಗೂ ಜೆಡಿಎಸ್ ಪ್ರಬಲ ಅಭ್ಯರ್ಥಿಗಳನ್ನೇ ಅಖಾಡಕ್ಕಿಳಿಸಿ ಸಿದ್ದರಾಮಯ್ಯ ಅವರಿಗೆ “ಟಕ್ಕರ್’ ನೀಡಲು ಸಜ್ಜಾಗಿವೆ. ಹೀಗಾಗಿ, ಚಾಮುಂಡೇಶ್ವರಿಯೂ ಸುಲಭವಲ್ಲ, ಬಾದಾಮಿಯೂ ಸಿದ್ದರಾಮಯ್ಯ ಅಂದುಕೊಂಡಷ್ಟು ಸಲೀಸಲ್ಲ ಎಂಬಂತಾಗಿದೆ.
ಇದೂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆದರೆ, ಸದ್ಯಕ್ಕೆ ಬೇರೆ ಮಾರ್ಗವೇ ಇಲ್ಲ. ಏಕೆಂದರೆ ಜೆಡಿಎಸ್-ಬಿಜೆಪಿಯಷ್ಟೇ ಅಲ್ಲ ಸ್ವಪಕ್ಷ ಕಾಂಗ್ರೆಸ್ ಸಹಿತ ಸಿದ್ದರಾಮಯ್ಯ ವಿರೋಧಿಗಳೆಲ್ಲಾ ಏಕಕಾಲದಲ್ಲಿ ಒಟ್ಟಾಗಿ “ಗೆರಿಲ್ಲಾ’ ದಾಳಿ ನಡೆಸುತ್ತಿದ್ದಾರೆ. ಚಾಮುಂಡೇಶ್ವರಿ ಉಪ ಚುನಾವಣೆಗಿಂತ ಕಠಿಣ ಸವಾಲು ಮತ್ತೂಮ್ಮೆ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಎದುರಾಗಿದ್ದು, ಈಜಿ ದಡ ಸೇರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಏಕೆಂದರೆ, ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಹಾಗೂ ಅವರ ಸೋಲು-ಗೆಲುವು ಕೇವಲ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಪ್ರಶ್ನೆ ಮಾತ್ರ ಅಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ನ ಭವಿಷ್ಯದ ಪ್ರಶ್ನೆಯೂ ಹೌದು.ಇನ್ನೊಂದು ವರ್ಷದಲ್ಲಿ ಎದುರಾಗುವ ಲೋಕಸಭೆ ಚುನಾವಣೆ ಕಾಂಗ್ರೆಸ್‌ಗೆ ನಿಜವಾಗಿಯೂ ಅಗ್ನಿಪರೀಕ್ಷೆಯಾಗಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಸಹಜವಾಗಿ ರಾಜ್ಯದ ಮಟ್ಟಿಗೆ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ, ಸಿದ್ದರಾಮಯ್ಯ ಅವರದು ಮುಳ್ಳಿನ ಮೇಲಿನ ನಡಿಗೆಯೇ ಆಗಿದೆ.
“ಶಸ್ತ್ರ ಸಜ್ಜಿತ’ ದಾಳಿ
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದ ಎಚ್.ವಿಶ್ವನಾಥ್, ಕಾಂಗ್ರೆಸ್‌ನಲ್ಲಿ ಅವರ ಪರ ಗಟ್ಟಿಯಾಗಿ ಧ್ವನಿ ಎತ್ತಿದ್ದ ಶ್ರೀನಿವಾಸಪ್ರಸಾದ್ ಇದೀಗ ವಿರೋಧಿ ಪಾಳಯ ಸೇರಿಸಿಕೊಂಡಿದ್ದಾರೆ. ಸಾಲದು ಎಂಬುದಕ್ಕೆ ಲಿಂಗಾಯತ ಸಮುದಾಯದ ರೇವಣಸಿದ್ದಯ್ಯ ಅವರೂ ಜತೆಗೂಡಿ ಸಿದ್ದರಾಮಯ್ಯ ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ. ಒಂದು ಕಡೆ ಬಿ.ಎಸ್.ಯಡಿಯೂರಪ್ಪ, ಮತ್ತೂಂದು ಕಡೆ ಎಚ್.ಡಿ.ಕುಮಾರಸ್ವಾಮಿ “ಶಸ್ತ್ರಸಜ್ಜಿತ’ ದಾಳಿಯಲ್ಲಿ ತೊಡಗಿದ್ದಾರೆ. ಎಲ್ಲೇ ಹೋದರೂ ನಾವು ಬಿಡುವುದಿಲ್ಲ. ಸೋಲಿಸಿಯೇ ಸಿದ್ಧ ಎಂದು ಬೆನ್ನತ್ತಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಅವರು “ಚಕ್ರವ್ಯೂಹ’ದಲ್ಲಿ ಸಿಲುಕಿಹಾಕಿಕೊಂಡರಾ? ಅಥವಾ ಸಿಲುಕಿ ಹಾಕಿಸಿಲಾಗಿದೆಯಾ? ಎಂಬ ಪ್ರಶ್ನೆಗಳು ಮೂಡಿವೆ.
ಚಾಮುಂಡೇಶ್ವರಿ “ಮಹಿಮೆ’
ಸಿದ್ದರಾಮಯ್ಯ ಜನತಾಪಕ್ಷ ಹಾಗೂ ಜೆಡಿಎಸ್‌ನಲ್ಲಿದ್ದಾಗ 1989 ರಲ್ಲಿ ಎಂ.ರಾಜಶೇಖರಮೂರ್ತಿ (ಕಾಂಗ್ರೆಸ್) ಹಾಗೂ 1999 ರಲ್ಲಿ ಎ.ಎಸ್.ಗುರುಸ್ವಾಮಿ (ಕಾಂಗ್ರೆಸ್) ವಿರುದ್ಧ ಸೋಲು ಅನುಭವಿಸಿದ್ದರು. 2004 ಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 90,727 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರೇವಣ್ಣಸಿದ್ದಯ್ಯ ವಿರುದ್ಧ ಗೆಲುವು ಸಾಧಿಸಿದ್ದರು. 2006 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 1,15,512 ಮತ ಪಡೆದು ಜೆಡಿಎಸ್‌ನ ಶಿವಬಸಪ್ಪ ಅವರ ವಿರುದ್ಧ 257 ಮತಗಳ ಪ್ರಯಾಸ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ನಂತರ ವರಣಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದರು. 2008 ರಲ್ಲಿ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ನ ಸತ್ಯನಾರಾಯಣ ಗೆಲುವು ಸಾಧಿಸಿದ್ದರು. 2013 ರಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ 7103 ಮತಗಳ ಅಂತರದಿಂದ ಗೆದ್ದಿದ್ದರು.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.