ಗ್ರಾಮೀಣ ಸೊಗಡಿಗೆ ಮನಸೋತ ಮಕ್ಕಳು
Team Udayavani, Nov 13, 2017, 12:53 PM IST
ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಮಕ್ಕಳ ಹಬ್ಬದ 2ನೇ ದಿನವಾದ ಭಾನುವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಅತ್ಯಂತ ಸಡಗರದಲ್ಲಿ ಗ್ರಾಮೀಣ ಕ್ರೀಡೆಗಳ ಸವಿ ಸವಿದದ್ದು ವಿಶೇಷ.
ನಗರ ಪ್ರದೇಶದಲ್ಲಿ ಬೆಳೆದ ಚಿಣ್ಣರಿಗೆ ಎತ್ತಿನ ಗಾಡಿ ಗೊತ್ತು. ಆದರೆ, ಅದರಲ್ಲಿ ಸವಾರಿ ಮಾಡಿದ ಅನುಭವವಿಲ್ಲ. ಅಂತೆಯೇ ಜಟಕಾ ಕುದುರೆ ನೋಡಿದ್ದರೂ ಒಮ್ಮೆಯೂ ಕೂಡ ಅದರ ಮೇಲೇರಿಲ್ಲ ಎಂಬ ಕೊರಗು. ಮಕ್ಕಳ ಹಬ್ಬದಲ್ಲಿ ಉಚಿತವಾಗಿ ಎತ್ತಿನಗಾಡಿ, ಜಟಕಾ ಬಂಡಿ ಸವಾರಿ ವ್ಯವಸ್ಥೆ ಇದ್ದು, ಸಿಕ್ಕ ಅವಕಾಶವನ್ನು ನಾ ಮುಂದು, ತಾ ಮುಂದು ಎನ್ನುವಂತೆ ಬಳಸಿಕೊಂಡು ಹಿರಿ ಹಿರಿ ಹಿಗ್ಗುತ್ತಿದ್ದ ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ.
ಇನ್ನೊಂದೆಡೆ ಕಬ್ಬನ್‌ಪಾರ್ಕ್‌ನ ರಸ್ತೆಯೊಂದರಲ್ಲಿ ಗ್ರಾಮೀಣ ಬದುಕೇ ತೆರೆದುಕೊಂಡಿತ್ತು. ಅಲ್ಲಿ ತೆಂಗಿನ ಗರಿಗಳಿಂದ ಗುಡಿಸಿಲು ಹಾಕಿಕೊಂಡು, ಹಾವು-ಏಣಿ ಆಟ, ಕಣಿ ಹೇಳುವುದು, ಚೌಕಾಬಾರ, ಚನ್ನೇಮಣೆ ಇತ್ಯಾದಿ ಆಟಗಳನ್ನು ಆಡಿಸುವ ವ್ಯವಸ್ಥೆ ಗಮನ ಸೆಳೆಯಿತು. ಲಗೋರಿ, ಗಿಲ್ಲಿದಾಂಡು, ಹಗ್ಗಜಗ್ಗಾಟ, ಬುಗುರಿ ಆಡಿಸುವುದು, ಕುಸ್ತಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಮತ್ತು ಗ್ರಾಮೀಣ ಕಲೆಗಳ ರಸದೌತಣ ಕಬ್ಬನ್‌ಪಾರ್ಕ್‌ನಲ್ಲಿ ಮಕ್ಕಳಿಗೆ ಉಣಬಡಿಸಲಾಯಿತು.
ಬೆಳಗಿನಿಂದಲೇ ಜನಸಾಗರ ಹರಿದು ಬರುತ್ತಿತ್ತು. ಹಲವರು ಲೋಟಸ್ ಟೆಂಪಲ್‌ನ ದರ್ಶನ ಪಡೆದು, ತಾಜ್‌ಮಹಲ್ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಅಣಬೆ ಬೇಸಾಯ, ನಗರದ ಜನ ಮನೆಯಲ್ಲೇ ಪಾಟ್‌ಗಳಲ್ಲಿ ಸೊಪ್ಪು-ತರಕಾರಿ ಬೆಳೆಯುವ ಬಗ್ಗೆ ಅರಿವು ಮೂಡಿಸುವ ತಾರಸಿ ತೋಟದ ಬಗ್ಗೆ ಮಾಹಿತಿ, ಜಾನಪದ ಕಲೆಗಳ ಮಾಹಿತಿ ಮಳಿಗೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು.
ಗಮನ ಸೆಳೆದ ಜನಪದ ನೃತ್ಯಗಳು: ಬಾಲಭವನದಲ್ಲಿ ನಡೆಯುತ್ತಿರುವ ರಸಪ್ರಶ್ನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೋವಾ, ಗುಜರಾತ್, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ 15ಕ್ಕೂ ಹೆಚ್ಚು ಬಾಲಭವನದ ಮಕ್ಕಳು ಕೂಡ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಸಂತಸಪಟ್ಟರು.
ಗೊರವರ ಕುಣಿತ, ಡೊಳ್ಳು ಕುಣಿತ, ಪುರುಷರ ನಗಾರಿ, ಭರತನಾಟ್ಯ, ಸಂಬಾಳ ವಾದನ, ಕಂಸಾಳೆ, ಕೋಲಾಟ, ಸಮೂಹ ನೃತ್ಯ ಹಾಗೂ ಗಾಯನ, ಮಹಿಳಾ ಪುರವಂತಿಕೆ, ಯಕ್ಷಗಾನ, ಪಟ ಕುಣಿತ, ವೀರಗಾಸೆ, ಕರಡಿ ಮಜಲು, ಚೌಡಿಕೆ ಪದ, ತಮಟೆ ವಾದನ, ಡಫ್ ನೃತ್ಯ ಹಾಗೂ ಬ್ಯಾರಿ ಹಾಡುಗಳು, ಮೊಹರಂ ಕುಣಿತ, ಜಗ್ಗಲಿಗೆ ಹೀಗೆ ನಾನಾ ಕಲೆಗಳು ಮೆಚ್ಚುಗೆ ಪಡೆದವು.
ಭಾನುವಾರದ ಪ್ರಮುಖ ಆಕರ್ಷಣೆ: ಪುಟಾಣಿ ರೈಲು, ಬ್ರೇಕ್ ಡ್ಯಾನ್ಸ್ ಯುನಿಟ್‌ಗಳಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಬುರ್ಜು ಗೋಡೆ ಹತ್ತಲು ಮಕ್ಕಳು ಸಾಲಾಗಿ ಸಾಗುತ್ತಿದ್ದರು. ಬಾಲಭವನ ಸಭಾಂಗಣದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆಯಿತ್ತು. ಸೈನ್ಸ್ ಪಾರ್ಕ್‌ನಲ್ಲಿ ಜನರೇ ತುಂಬಿದ್ದರು. ಸೇನೆಯು ಪ್ರದರ್ಶನಕ್ಕಿಟ್ಟ ಹಲವು ಯುದ್ಧ ಆಯುಧಗಳನ್ನು ಸ್ಪರ್ಶಿಸಿ ಪುಳಕಗೊಂಡ ಚಿಣ್ಣರು, ಸೈನಿಕರಿಗೆ ಸೆಲ್ಯೂಟ್ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಎಲ್ಲ ಗೇಟ್‌ಗಳೂ ಸಂಚಾರಕ್ಕೆ ಮುಕ್ತ: ಮಕ್ಕಳ ಹಬ್ಬದ ಹಿನ್ನೆಲೆಯಲ್ಲಿ ನ.11ರಿಂದ 14ರವರೆಗೆ ಕಬ್ಬನ್‌ಪಾರ್ಕ್‌ನ ಎಂಟು ಗೇಟ್‌ಗಳನ್ನು ಬಂದ್ ಮಾಡಬೇಕೆಂಬ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಲ್ಲಿಸಿತ್ತು. ಆದರೆ, ಸಂಚಾರ ಪೊಲೀಸರು ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂಬ ನೆಪವೊಡ್ಡಿ ವಾಹನಗಳ ನಿರ್ಬಂಧಕ್ಕೆ ಅದಕ್ಕೆ ಅವಕಾಶ ನೀಡಿಲ್ಲ.
ಈ ಹಿನ್ನೆಯಲ್ಲಿ ಸೋಮವಾರ ಎಂ.ಜಿ.ರಸ್ತೆಯಿಂದ ಬಾಲಭವನ ಕಡೆಗೆ ಬರುವ ಗೇಟ್ ಮಾತ್ರ ಬಂದ್ ಆಗಲಿದೆ. ಉಳಿದಂತೆ ಹೈಕೋರ್ಟ್ ಗೇಟ್, ಎಂಎಸ್ ಬಿಲ್ಡಿಂಗ್ ಗೇಟ್, ಕೆ.ಆರ್.ಸರ್ಕಲ್ ಗೇಟ್, ಹಡ್ಸನ್ ಸರ್ಕಲ್ ಗೇಟ್, ಯುಬಿ ಸಿಟಿ ಗೇಟ್, ಪ್ರಸ್‌ಕ್ಲಬ್ ಗೇಟ್‌ಗಳು ವಾಹನ ಸಂಚಾರಕ್ಕೆ ಮುಕ್ತವಾಗಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.