ಬೀಫ್ ಫೆಸ್ಟ್ ನಡೆಸಲು ನಗರ ಪೊಲೀಸರ ಅಸಮ್ಮತಿ
Team Udayavani, May 30, 2017, 12:38 PM IST
ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ “ಗೋ ಹತ್ಯೆ ನಿಷೇಧ’ಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಯೊಂದು ನಗರದ ಪುರಭವನ ಮುಂಭಾಗ ಸೋಮವಾರ ಸಂಜೆ “ಬೀಫ್ ಫೆಸ್ಟ್’ಗೆ ಕರೆ ನೀಡಿತ್ತಾದರೂ ನಗರ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ಮೂವ್‌ಮೆಂಟ್ ಬೆಂಗಳೂರು ಹೆಸರಿನ ಸಂಘಟನೆ, ಸಂಜೆ 5 ಗಂಟೆಗೆ ಪುರಭವನ ಮುಂಭಾಗ “ಬೀಫ್ ಫೆಸ್ಟ್’ (ಸಾರ್ವಜನಿಕವಾಗಿ ಗೋ ಮಾಂಸ ಸೇವನೆ ಉತ್ಸವ) ಆಯೋಜಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿತ್ತು. ಆದರೆ, ಕೇರಳದಲ್ಲಿ ಇಂಥದ್ದೇ ಘಟನೆ ನಡೆದು ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರ ಪೊಲೀಸರು, ಬೀಫ್ ಉತ್ಸವಕ್ಕೆ ಅವಕಾಶ ನೀಡುವುದಿಲ್ಲ ಎಂದು ಟ್ವಿಟ್ಟರ್ ಮೂಲಕವೇ ಸಂದೇಶ ರವಾನಿಸಿದರು. ಕೇಂದ್ರ ವಲಯ ಡಿಸಿಪಿ ಚಂದ್ರ ಗುಪ್ತ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದರು.
ಈ ಮಧ್ಯೆ, ಎಸ್‌ಎಫ್ಐ ಸೇರಿದಂತೆ ಕೆಲ ಸಂಘಟನೆಗಳು ಪುರಭವನದ ಮುಂಭಾಗ ಸೋಮವಾರ ಸಂಜೆ ಗೋಹತ್ಯೆ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿದವು. ಆದರೆ, ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಗೋ ರಕ್ಷಕ ಸಮಿತಿ, ಹಿಂದೂ ಜಾಗರಣ ಸಮಿತಿ ಸದಸ್ಯರು ಗೋ ಹತ್ಯೆ ನಿಷೇಧ ಪರ ಘೋಷಣೆ ಕೂಗಿದರು. ಈ ವೇಳೆ ಪರ-ವಿರೋಧ ಪ್ರತಿಭಟನೆ ಮಾಡಲು ಬಂದವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವೊಕೋಪಕ್ಕೆ ತಿರುಗುವ ಲಕ್ಷಣ ಗೋಚರಿಸಿತು. ಇದನ್ನು ಮನಗಂಡ ಪೊಲೀಸರು, ಎರಡೂ ಕಡೆಯವರನ್ನು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಿಜೆಪಿ, ಗೋ ರಕ್ಷಕ ಸಮಿತಿ, ಶ್ರೀರಾಮಸೇನೆ, ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಸೋಮವಾರ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ, ಬೀಪ್ ಫೆಸ್ಟ್ ಅಥವಾ ಸಾಮೂಹಿಕ ಗೋ ಮಾಂಸ ಸೇವನೆ ಮೂಲಕ ಪ್ರತಿಭಟಿಸುವವರಿಗೆ ಮತ್ತು ಕಾನೂನು ಬಾಹಿರ ಕೃತ್ಯ ನಡೆಸುವವರಿಗೆ ಅವಕಾಶ ಕೊಡಬಾರದು. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಮನವಿ ಮಾಡಿದರು.
ಅನುಮಾನಸ್ಪದ ವ್ಯಕ್ತಿಗಳ ಬಂಧನ
ಗೋ ಹತ್ಯೆ ನಿಷೇಧ ವಿರೋಧಿಸಿ ಕೆಲವು ಸಂಘಟನೆಗಳು ಸೋಮವಾರ ಸಂಜೆ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಸಿದ ವೇಳೆ ಪ್ರತಿಭಟನಾಕಾರರ ನಡುವೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಕೇರಳ ಮೂಲದ ಕೆಲ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ಸ್ಥಳದ ಬಳಿ ನಿಂತಿದ್ದ ವಾಹನಗಳಲ್ಲಿ ಈ ವ್ಯಕ್ತಿಗಳು ಇದ್ದರು ಎಂದು ಹೇಳಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪುರಭವನ ಸುತ್ತಮುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬೀಫ್ ಫೆಸ್ಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೆ ಅದೇ ಸಾಮಾಜಿಕ ಜಾಲತಾಣದಲ್ಲೇ ಸ್ಪಷ್ಟನೆ ನೀಡಿದ್ದೇವೆ. ಆಯೋಜನೆ ಕುರಿತು ನಮಗೆ ಯಾವುದೇ ಮನವಿ ಬಂದಿಲ್ಲ. ಟೌನ್‌ಹಾಲ್ ಎದುರು ಯಾವುದೇ ಕಾರ್ಯಕ್ರಮಕ್ಕೂ ನಾವು ಅವಕಾಶ ಕೊಟ್ಟಿಲ್ಲ.
-ಚಂದ್ರ ಗುಪ್ತಾ, ಡಿಸಿಪಿ ಕೇಂದ್ರ ವಿಭಾಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.