ಗೃಹ ಸಚಿವರ ಸುಗಮ ಸಂಚಾರಕ್ಕಾಗಿ ಆ್ಯಂಬುಲೆನ್ಸ್ ತಡೆದ ನಗರ ಪೊಲೀಸರು!
Team Udayavani, May 9, 2017, 12:18 PM IST
ಬೆಂಗಳೂರು: ತಮ್ಮನ್ನೂ ಸೇರಿದಂತೆ ಯಾವುದೇ ರಾಜಕಾರಣಿಗಳ ಸಂಚಾರ ಸಂದರ್ಭದಲ್ಲಿ ಆ್ಯಂಬುಲೆನ್ಸ್ ವಾಹನಗಳನ್ನು ತಡೆ ಹಿಡಿಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಅದೇಶ ನೀಡಿದ್ದಾರೆ. ಆದಾಗ್ಯೂ ವಿಐಪಿಗಳು, ಸಚಿವರು ಸಂಚರಿಸುವಾಗ ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆ್ಯಂಬುಲೆನ್ಸ್‌ಗಳನ್ನು ತಡೆಯುವ ಕೆಲಸ ಮುಂದುವರಿದಿದೆ.
ಸೋಮವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿದ್ದ ವಾಹನವನ್ನು ಸಿಗ್ನಲ್ ಫ್ರೀ ರಸ್ತೆಯ ಮೂಲಕ ಸಾಗುವಂತೆ ಮಾಡುವಲ್ಲಿ ತಲ್ಲೀನರಾ ಗಿದ್ದ ಪೊಲೀಸರು, ಮಹಿಳೆಯನ್ನು ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ತಡೆದು ನಿಲ್ಲಿಸಿಧ ಘಟನೆ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೃಹ ಸಚಿವರು, ವಾಪಸ್ ಹೋಗುವಾಗ ಕ್ವೀನ್ಸ್ ರಸ್ತೆಯ ಟ್ರಾಫಿಕ್ ಸಿಗ್ನಲ್ ಬಳಿ ಎಲ್ಲ ವಾಹನಗಳನ್ನು ಕೆಲ ಹೊತ್ತು ನಿಲ್ಲಿಸಲಾಯಿತು. ಇದೇ ವೇಳೆ ಮಹಿಳೆ ಯೊಬ್ಬರನ್ನು ಫ್ರೆಜರ್‌ಟೌನ್‌ನಿಂದ ಮಹಾವೀರ್ ಜೈನ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕೂಡ ಸಂಚಾರ ದಟ್ಟಣೆ ನಡುವೆ ಸಿಲುಕಿಕೊಂಡಿತ್ತು.
ಆ್ಯಂಬುಲೆನ್ಸ್‌ನ ಸೈರನ್ ಕೂಗಿಕೊಳ್ಳುತ್ತಿದ್ದರೂ ಸಂಚಾರ ಪೊಲೀಸರು ಕ್ಯಾರೆ ಎನ್ನದೆ, ಸುಮಾರು 10 ನಿಮಿಷಗಳ ಕಾಲ ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ನಿಲ್ಲುವಂತೆ ಮಾಡಿದರು. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಪೊಲೀಸರ ಬಳಿ ಪರಿಪರಿಯಾಗಿ ಮನವಿ ಮಾಡಿದರು ಸಹ ಸ್ಪಂದಿಸಲಿಲ್ಲ ಎಂದು ಆರೋಪಿಸಲಾಗಿದೆ.
“ಇನ್ಮುಂದೆ ಆ್ಯಂಬುಲೆನ್ಸ್ ತಡೀಬೇಡಿ’
ಬೆಂಗಳೂರು: ಇನ್ಮುಂದೆ ಮುಖ್ಯಮಂತ್ರಿ ಸಹಿತ ಗಣ್ಯ ವ್ಯಕ್ತಿಗಳ ಪ್ರಯಾಣದ ವೇಳೆ ಅವರ ವಾಹನಕ್ಕೆ ದಾರಿ ಮಾಡಿಕೊಡಲು ಆ್ಯಂಬುಲೆನ್ಸ್‌ಗಳನ್ನು ಸಂಚಾರ ಪೊಲೀಸರು ತಡೆಯುವಂತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳ ಪ್ರಯಾಣ ವೇಳೆ ಸಂಚಾರ ಪೊಲೀಸರು ಆ್ಯಂಬುಲೆನ್ಸ್‌ಗಳನ್ನು ತಡೆಯುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ನೂತನ ಆದೇಶ ಹೊರಡಿಸಿದ್ದಾರೆ.
ಆ್ಯಂಬುಲೆನ್ಸ್ ತಡೆಯುವ ಸಂಚಾರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದ್ದು, ಈ ಕುರಿತು ಮೇ 5 ರಂದು ಎಲ್ಲ ಡಿಸಿಪಿ, ಎಸಿಪಿಗಳಿಗೆ ಸುತ್ತೋಲೆ ಸಹ ನೀಡಲಾಗಿದೆ. ದಟ್ಟಣೆ ನಡುವೆ ಆ್ಯಂಬುಲೆನ್ಸ್ ಸಂಚರಿಸುವುದು ಕಷ್ಟವಾಗುತ್ತಿದೆ. ವಿವಿಐಪಿ ವಾಹನಗಳ ಸುಗಮ ಸಂಚಾರಕ್ಕೆ ಆ್ಯಂಬುಲೆನ್ಸ್ ತಡೆಯುವುದು ಬೇಡ. ಗಣ್ಯರು ಸಂಚರಿಸುವಾಗ ಯಾವುದೇ ರೋಗಿಗಳಿರುವ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸಿಲುಕಿದರೆ ಕೂಡಲೇ ಪರಿಶೀಲಿಸಿ,
ಆ್ಯಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡಬೇಕು. ಈ ವೇಳೆ ಗಣ್ಯರ ವಾಹನಗಳು ನಿಧಾನವಾಗಿ ಚಲಿಸುವಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. ಇಡೀ ರಸ್ತೆಯನ್ನೇ ಬಂದ್ ಮಾಡಿ ವಾಹನಗಳ ಸಂಚಾರ ತಡೆಯಬಾರದು. ಈ ಬಗ್ಗೆ ಎಲ್ಲ ವಲಯಗಳ ಎಸಿಪಿ ಮತ್ತು ಡಿಸಿಪಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ. ನಿಯಮ ಪಾಲಿಸದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಸೈರನ್ ಶಬ್ದ ಜೋರಿರಲಿಲ್ಲ!
ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿ ಗೃಹ ಸಚಿವ ಡಾ ಜಿ. ಪರಮೇಶ್ವರ ಹೋಗುವಾಗ ಆ್ಯಂಬುಲೆನ್ಸ್ ತಡೆದ ಪ್ರಕರಣದ ಕುರಿತು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಶೋಭಾರಾಣಿ ಸ್ಪಷ್ಟನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ವಿಶ್ವನಾಥ್‌ನನ್ನು ವಿಚಾರಣೆ ನಡೆಸಲಾಗಿದ್ದು, ಓಮ್ನಿ ಕಾರಿನ (ಆ್ಯಂಬುಲೆನ್ಸ್) ಸೈರನ್ ಶಬ್ಧ ಜೋರಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಸೈರನ್ ಶಬ್ಧ ಸಂಚಾರ ಪೊಲೀಸರಿಗೆ ಕೇಳಿಸಿಲ್ಲ.
ಕೊನೆಗೆ ಆ್ಯಂಬುಲೆನ್ಸ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಹೋಗಿ ಜಾಗ ಬಿಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದರು. ಇನ್ನು ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದು, ಆ್ಯಂಬುಲೆನ್ಸ್‌ನಲ್ಲಿ ಮಹಿಳಾ ರೋಗಿಯೊಬ್ಬರು ಇದ್ದರು. ಶುಗರ್ ಹೆಚ್ಚಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಹೃದಯಾಘಾತವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಶೋಭಾರಾಣಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.