ಆರೋಪಿತ ಐವರು ಅಧಿಕಾರಿಗಳಿಗೆ ಕ್ಲೀನ್‌ಚಿಟ್
Team Udayavani, Oct 26, 2018, 12:30 PM IST
ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಕಾಯ್ದೆಗಳಿಗೆ ವಿರುದ್ಧವಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ ಆರೋಪ ಹೊತ್ತಿದ್ದ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್‌ಚಿಟ್ ನೀಡಿದೆ.
ಪ್ರಕರಣ ಸಂಬಂಧ ಅರಣ್ಯ ಇಲಾಖೆಯ ಐವರು ಅಧಿಕಾರಿಗಳ ವಿರುದ್ಧ (ಪ್ರಸ್ತುತ ನಾಲ್ವರು ನಿವೃತ್ತರಾಗಿದ್ದಾರೆ) ಇಲಾಖಾ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು, ಅವರನ್ನು ದೋಷಮುಕ್ತಗೊಳಿಸಿದ್ದರೂ ವರದಿ ಒಪ್ಪದೆ ಮತ್ತೆ 2016ರಲ್ಲಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಸರ್ಕಾರ, ಇದೀಗ ಹಿಂದಿನ ಇಲಾಖಾ ವಿಚಾರಣೆ ವರದಿ ಆಧರಿಸಿ ದೋಷಮುಕ್ತಗೊಳಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕನಕಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಕೆ.ಡಿ.ಶ್ರೀನಿವಾಸಯ್ಯ, ಬಿ.ವಿ.ನಾಗರಾಜೇಗೌಡ, ಸಿದ್ದೇಗೌಡ (ಎಲ್ಲರೂ ನಿವೃತ್ತರು), ವಲಯ ಅರಣ್ಯಾಧಿಕಾರಿ ಟಿ.ಎಂ.ರವಿಕುಮಾರ್ ಹಾಗೂ ವನಪಾಲಕ ಎಂ.ಶಿವಾಜಿರಾವ್ (ನಿವೃತ್ತ) ವಿರುದ್ಧ ಅರಣ್ಯ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂ ಸಿ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದ ಆರೋಪವಿತ್ತು.
ಪ್ರಕರಣವೇನು?: ಅಕ್ರಮ ಗಣಿಗಾರಿಕೆ ಕುರಿತಂತೆ 2006ರಲ್ಲಿ ಆಗಿನ ಹಿರಿಯ ಐಎಫ್ಎಸ್ ಅಧಿಕಾರಿ ಯು.ವಿ.ಸಿಂಗ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ ಕನಕಪುರ ತಾಲೂಕಿನಲ್ಲಿ ಮೀಸಲು ಅರಣ್ಯದೊಳಗೆ ಸುಮಾರು 99 ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸುಮಾರು 90 ಗುತ್ತಿಗೆದಾರರು ಅರಣ್ಯ ಪ್ರದೇಶದಿಂದ 100 ಮೀಟರ್ ವ್ಯಾಪ್ತಿಯಲ್ಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ, ಅಕ್ರಮ ಗಣಿಗಾರಿಕೆ ವಿರುದ್ಧ ಸಾಕಷ್ಟು ಹೋರಾಟಗಳೂ ನಡೆದಿದ್ದವು.
ಈ ಮಧ್ಯೆ ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ ಸರ್ಕಾರದ ಅಸ್ತಿಗೆ ಧಕ್ಕೆ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳಾದ ಕೆ.ಡಿ.ಶ್ರೀನಿವಾಸಯ್ಯ, ಬಿ.ವಿ.ನಾಗರಾಜೇಗೌಡ, ಸಿದ್ದೇಗೌಡ, ಟಿ.ಎಂ.ರವಿಕುಮಾರ್, ಎಂ.ಶಿವಾಜಿರಾವ್ ವಿರುದ್ಧ ಜಂಟಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.
ಅದರಂತೆ ವಿಚಾರಣೆ ನಡೆಸಿದ್ದ ವಿಚಾರಾಣಾಧಿಕಾರಿಗಳು, ಐವರು ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪಗಳು ಸಾಬೀತಾಗಿಲ್ಲ ಎಂದು ನಿರ್ಣಯಕ್ಕೆ ಬಂದು 2016ರ ಜೂ.24ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಪರಾಮರ್ಷಿಸಿದ ಸರ್ಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕವಾದ ಸಾಕ್ಷ್ಯ, ಪುರಾವೆಗಳಿದ್ದರೂ ವಿಚಾರಣಾಧಿಕಾರಿಗಳು ಅವುಗಳನ್ನು ಪರಿಗಣಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿ ವರದಿಯನ್ನು ಒಪ್ಪಿರಲಿಲ್ಲ.
ನಂತರ ವರದಿ ಒಪ್ಪದಿರುವ ಅಂಶವನ್ನು ದಾಖಲಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು- 1957ರ ನಿಯಮ 11ಎ(2)ರ ಅನ್ವಯ ಆರೋಪಿತ ಅಧಿಕಾರಿಗಳಿಗೆ ಸಮಜಾಯಿಷಿ ನೀಡಲು ಅವಕಾಶ ನೀಡಿ ಕಾರಣ ಕೇಳಿ ಸರ್ಕಾರ ನೋಟಿಸ್ ಜಾರಿ ಮಾಡಿತ್ತು.
ಇದಕ್ಕೆ ಉತ್ತರಿಸಿದ್ದ ಅಧಿಕಾರಿಗಳು, ತಮ್ಮ ಮೇಲಿನ ಆರೋಪ ನಿರಾಕರಿಸಿ ಮತ್ತು ವಿಚಾರಣಾಧಿಕಾರಿಗಳ ವರದಿಯನ್ನು ಯತಾವತ್ತಾಗಿ ಒಪ್ಪಿಕೊಂಡು ತಮ್ಮನ್ನು ಆರೋಪಮುಕ್ತಗೊಳಿಸುವಂತೆ ಕೋರಿದ್ದರು. ಇದನ್ನು ವಿಶ್ಲೇಷಿಸಿದ ಸರ್ಕಾರ, ಸಹಜ ನ್ಯಾಯ ತತ್ವದ ಆಧಾರದಡಿ ಮತ್ತೂಮ್ಮೆ ಆರೋಪಿತ ಅಧಿಕಾರಿಗಳ ಅಹವಾಲನ್ನು ಖುದ್ದಾಗಿ ಆಲಿಸಿತ್ತು. ಬಳಿಕ ಈ ಎರಡೂ ಹೇಳಿಕೆಗಳ ಆಧಾರದ ಮೇಲೆ ಜಂಟಿ ಇಲಾಖಾ ವಿಚಾರಣಾ ವರದಿಯಂತೆ ಐವರನ್ನೂ ದೋಷಮುಕ್ತಗೊಳಿಸಿ 2018ರ ಅ.23ರಂದು ಆದೇಶ ಹೊರಡಿಸಿದೆ.
ಅನುಮಾನಕ್ಕೆ ಎಡೆಮಾಡಿರುವ ಅಂಶಗಳು: ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ವರದಿ ನೀಡಿದ ಇಲಾಖಾ ವಿಚಾರಣಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕವಾದ ಸಾಕ್ಷ್ಯ, ಪುರಾವೆಗಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು 2016ರಲ್ಲಿ ನಿರ್ಧಾರಕ್ಕೆ ಬಂದು ವಿಚಾರಣಾಧಿಕಾರಿಗಳ ವರದಿ ಒಪ್ಪದ ಸರ್ಕಾರ, ನಂತರ ಆ ಸಾಕ್ಷ್ಯ, ಪುರಾವೆಗಳನ್ನು ಏಕೆ ಪರಿಗಣಿಸಿಲ್ಲ.
ಕೇವಲ ಆರೋಪಿತರು ನೀಡಿದ ಲಿಖೀತ ಹೇಳಿಕೆ ಮತ್ತು ಖುದ್ದು ಹಾಜರಾಗಿ ನೀಡಿದ ಹೇಳಿಕೆಗಳನ್ನು ಆಧರಿಸಿ ಇದೀಗ ಅವರನ್ನು ದೋಷಮುಕ್ತಗೊಳಿಸಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ರೀತಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸುವ ಮೂಲಕ ಕನಕಪುರ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂಬ 2012ರಲ್ಲಿ ನೀಡಿದ್ದ ವರದಿಯನ್ನು ಸಾಬೀತುಪಡಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನವೂ ಕಾಣಿಸಿಕೊಂಡಿದೆ.
ಏಕೆಂದರೆ, ಕನಕಪುರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಆರೋಪದ ಬಗ್ಗೆ 2012ರಲ್ಲಿ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ, ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಆಗಿನ ಬಿಜೆಪಿ ಸರ್ಕಾರ ವರದಿ ಒಪ್ಪಿರಲಿಲ್ಲ. ಅಷ್ಟೇ ಅಲ್ಲ, ಸನಾವುಲ್ಲಾ ಅವರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಮಾಡದೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಗಿನ ಆರಣ್ಯ ಸಚಿವರು ಹೇಳಿದ್ದರು. ನಂತರ ಸರ್ಕಾರ ಬದಲಾಗಿ ವರದಿ ಮೂಲೆಗುಂಪಾಗಿತ್ತು.
* ಪ್ರದೀಪ್‌ಕುಮಾರ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.