ಸಮ್ಮಿಶ್ರ ಸರ್ಕಾರಕ್ಕೆ ಆಪತ್ತಿಲ್ಲ;  ಸಿದ್ದರಾಮಯ್ಯ ಜತೆ ಮುನಿಸಿಲ್ಲ


Team Udayavani, Aug 30, 2018, 6:00 AM IST

hd-interview.jpg

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು, ಆತಂಕ ಎದುರಾಗದು. ಐದು ವರ್ಷಗಳ ಕಾಲ ಈ ಸರ್ಕಾರ ಸುಭದ್ರವಾಗಿರಲಿದೆ. ರಾಹುಲ್‌ಗಾಂಧಿ ಹಾಗೂ ಸಿದ್ದರಾಮಯ್ಯನವರ ಆಶಯವೂ ಇದೇ ಆಗಿದೆ…

ಸವಾಲುಗಳ ನಡುವೆಯೂ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ಶತದಿನೋತ್ಸವ ಪೂರೈಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಸ್ಪಷ್ಟ ನುಡಿಗಳು.

ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನ ನೀಡಿ ಅವರು, ನೂರು ದಿನದ ಆಡಳಿತದಲ್ಲಿ ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾ ನನಗೆ ಅತ್ಯಂತ ತೃಪ್ತಿ ನೀಡಿದ ಕೆಲಸ.  ಕೊಡಗಿನಲ್ಲಿ ಸಂಭವಿಸಿದ ದುರಂತ ತೀವ್ರ ನೋವು ಕೊಟ್ಟ ಘಟನೆ. ಕೊಡಗು ಪುನರ್‌ನಿರ್ಮಾಣಕ್ಕೆ  ಸಂಕಲ್ಪ ತೊಟ್ಟಿದ್ದೇನೆ ಎಂದರು.

ನೂರು ದಿನದ ಆಡಳಿತದ ಬಗ್ಗೆ ನಿಮ್ಮ ಅನಿಸಿಕೆಯೇನು?
ನೂರು ದಿನಗಳಲ್ಲಿ ನಾನು ಎಲ್ಲವನ್ನೂ ಮಾಡಿ ಬಿಟ್ಟಿದ್ದೇನೆ ಎಂದು ಹೇಳುವುದಿಲ್ಲ. ಆದರೆ, ರಾಜ್ಯದ ಸಮಸ್ಯೆಗಳನ್ನು ಅರಿತು ಬಗೆಹರಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದೇನೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ರಾಜ್ಯದ ಜನತೆಯ ಆಶೋತ್ತರ ಈಡೇರಿಕೆಯ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಕೇಂದ್ರ ಸರ್ಕಾರದ ಸಹಕಾರವನ್ನೂ ಪಡೆದು ಅಭಿವೃದ್ಧಿಗೆ ಪ್ರಯತ್ನಿಸಿದ್ದೇನೆ. ಈ ಸರ್ಕಾರ ಸೆಪ್ಟೆಂಬರ್‌ 1 ರಿಂದ ಮತ್ತಷ್ಟು ಅಗ್ರೆಸ್ಸಿವ್‌ ಆಗಿ ಕೆಲಸ ಮಾಡಲಿದೆ.

ಅಗ್ರೆಸ್ಸಿವ್‌ ಎಂದರೆ ಹೇಗೆ?
 ಶಿಕ್ಷಣ, ಆರೋಗ್ಯ, ವಸತಿ, ನಗರ ಹಾಗೂ ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಪ್ರಗತಿಯ ಪಂಚಸೂತ್ರದೊಂದಿಗೆ  ನನ್ನ  ಕಲ್ಪನೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದೇನೆ. 

ರೈತರ ಸಾಲಮನ್ನಾದಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದರು ಎಂಬ ಆರೋಪ ಇದೆಯಲ್ಲಾ?
ರೈತರ ಸಾಲಮನ್ನಾ ನಮ್ಮ ಬದ್ಧತೆ ಮತ್ತು ಆದ್ಯತೆ. ಆದರೆ, ಅದರಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿಲ್ಲ. ಸಾಕಷ್ಟು ಲೆಕ್ಕಾಚಾರ ಮಾಡಿ ಆರ್ಥಿಕ ತಜ್ಞರ ಸಲಹೆ-ಸೂಚನೆ ಪಡೆದು ಸುದೀರ್ಘ‌ವಾಗಿ ಚರ್ಚಿಸಿಯೇ ತೀರ್ಮಾನ ಕೈಗೊಂಡಿದ್ದೇನೆ. ಕಾಂಗ್ರೆಸ್‌ ಪಕ್ಷದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ.  ಸಂಪನ್ಮೂಲ ಕ್ರೂಢೀಕರಣಕ್ಕೂ ಅಷ್ಟೇ ಒತ್ತು ಕೊಟ್ಟಿದ್ದೇನೆ. ಈ ವರ್ಷ ಕೆಲವು ಬಿಗಿ ಕ್ರಮಗಳಿಂದ 3 ಸಾವಿರ ಕೋಟಿ ರೂ. ಅಬಕಾರಿ ತೆರಿಗೆ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ.

ರೈತರ ಸಾಲ ಮನ್ನಾದಿಂದ ನಿಜಕ್ಕೂ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುವುದಿಲ್ಲವೇ?
ಒಮ್ಮೆಲೆ 40 ಸಾವಿರ ಕೋಟಿ ರೂ. ಹೊರೆ ಬೀಳುವುದಿಲ್ಲ. ಸಹಕಾರಿ ಬ್ಯಾಂಕ್‌ಗಳ ಸಾಲ ಡಿಸಿಸಿ ಬ್ಯಾಂಕ್‌ಗಳಿಂದ ಚುಕ್ತಾ ಮಾಹಿತಿ ಸಲ್ಲಿಕೆ ನಂತರ ಪಾವತಿಸಬೇಕಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ನಾಲ್ಕು ವರ್ಷ ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು. ಅದೆಲ್ಲವನ್ನೂ ಲೆಕ್ಕ ಮಾಡಿಯೇ ಘೋಷಣೆ ಮಾಡಿದ್ದೇನೆ. ಸಾಲಮನ್ನಾ ಮಾಡಿದ್ದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹೀಗಾಗಿ ಟೀಕಿಸುತ್ತಿದ್ದಾರೆ.

ಪಂಚಸೂತ್ರದಡಿ ಕಾರ್ಯನಿರ್ವಹಣೆ ಹೇಗೆ?
ಮೊಟ್ಟ ಮೊದಲಿಗೆ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಾಂತಿಕಾರಕ ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಎಲ್ಲ ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ. ಡೊನೇಷನ್‌ ಕೊಟ್ಟು ಓದಿಸುವ ಕಷ್ಟ ನಿವಾರಣೆಯಾಗಬೇಕು. ಎರಡನೆಯದಾಗಿ ಆರೋಗ್ಯ ವಲಯದ ಬಗ್ಗೆ  ಒತ್ತು ನೀಡಲಾಗುವುದು. ವಸತಿ ವಿಚಾರದಲ್ಲಿ  ಪ್ರತಿ ಬಡ ಕುಟುಂಬಕ್ಕೂ ಸೂರು ಕಲ್ಪಿಸುವುದು ನನ್ನ ಆದ್ಯತೆ ಆ ನಿಟ್ಟಿನಲ್ಲಿ ನನ್ನದೇ ಆದ ನೀಲನಕ್ಷೆ ರೂಪಿಸಿದ್ದೇನೆ.  

ನಗರ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರದ ಕಾರ್ಯಕ್ರಮಗಳೇನು? 
ಗ್ರಾಮೀಣ ಹಾಗೂ ನಗರ ಪ್ರದೇಶದ ಅಭಿವೃದ್ಧಿಗೆ ಸಮಾನ ಒತ್ತು ನೀಡಿ ಕೈಗಾರಿಕೆ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಬಹುಗ್ರಾಮ ಹಾಗೂ ಶುದ್ಧ ಕುಡಿಯುವ ನೀರು ಯೋಜನೆಯ ವ್ಯತ್ಯಾಸ ಸರಿಪಡಿಸಲಾಗುವುದು. ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳು, ನಗರಸಭೆ-ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ಸಂಚಾರ ದಟ್ಟಣೆ ನಿವಾರಣೆ ಹಾಗೂ ಸುಗಮ ಸಂಚಾರಕ್ಕೆ ಸಿಗ್ನಲ್‌ ಫ್ರೀ ಕಾರಿಡಾರ್‌, ಬಡವರಿಗೆ ವಸತಿ ಯೋಜನೆಗಳಿಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು. ವ್ಯವಸ್ಥಿತ ನಗರ ಯೋಜನೆಗೆ ಒತ್ತು ನೀಡಲಾಗುವುದು. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಕೈಗಾರಿಕೆ ವಲಯ ಸ್ಥಾಪನೆ ಸೇರಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ದಿನ ಆಯುಷ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲಾ?
ಹೇಳಿಕೊಳ್ಳಲಿ. ಆದರೆ, ಸರ್ಕಾರ ಬೀಳಿಸುವ ಕನಸು ನನಸಾಗುವುದಿಲ್ಲ. ಏಕೆಂದರೆ ಅಂತಹ ಯಾವುದೇ ವೈಮನಸ್ಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಆಗಿಯೇ ಇಲ್ಲ. ಮುಂದೆಯೂ ಆಗಲ್ಲ. 

ನಿಮ್ಮ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲಾ?
ಖಂಡಿತ ಇಲ್ಲ. ಅವೆಲ್ಲವೂ ಊಹಾಪೋಹ. ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಎಲ್ಲೂ ಏನೂ ಮಾತನಾಡಿಲ್ಲ. ಹಾಸನದಲ್ಲಿ ಅವರ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನೂ ಸಹ ಕೆಲವು ವೇಳೆ ಹೇಳಿದ ಮಾತುಗಳಿಗೆ ಬೇರೆ ರೀತಿಯ ಅರ್ಥ ನೀಡಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ಕೆಲವರು ಬಿಂಬಿಸುತ್ತಿರುವಂತೆ ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ರೀತಿಯ ಗುದ್ದಾಟ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಪ್ರಬಲ ಕಾರಣವಿದೆ. ರಾಷ್ಟ್ರ ಮಟ್ಟದಲ್ಲೇ ಚರ್ಚೆ ನಡೆದು ಬಿಜೆಪಿ ದೂರ ಇಡಲು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ರಚನೆ ಮಾಡಿದ್ದೇವೆಯೇ ವಿನಃ ಇಲ್ಲಿ ಅಧಿಕಾರ ದಾಹದಿಂದ ಅಲ್ಲ.

ಸಮನ್ವಯ ಸಮಿತಿ ಸಭೆ ಯಾಕೆ ಸೇರುತ್ತಿಲ್ಲ?
ಸಮನ್ವಯ ಸಮಿತಿಯಲ್ಲಿ ಚರ್ಚಿಸಬೇಕಾದ ತುರ್ತು ವಿಷಯಗಳು ಇರಲಿಲ್ಲ. ಜತೆಗೆ ಪ್ರವಾಹ ಸೇರಿ ಹಲವು ವಿದ್ಯಮಾನಗಳು ನಡೆದ ಕಾರಣ ಸರ್ಕಾರ ಪರಿಹಾರ ಕಾರ್ಯಗಳಲ್ಲಿ ತೊಡಗಿತ್ತು. ಹೀಗಾಗಿ ತಡವಾಯಿತು. ಇದೀಗ ಆ.31ರಂದು ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ.

ಸಮನ್ವಯ ಸಮಿತಿಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಗೆ ಬರಲಿವೆ?
ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಸಮನ್ವಯ ಸಮಿತಿಯು ಸರ್ಕಾರ ಸುಸೂತ್ರವಾಗಿ ಮುನ್ನಡೆಯಲು ಬೇಕಾದ ನಿರ್ಧಾರ ಕೈಗೊಳ್ಳಲಿದೆ. ಹಿಂದೆ ಅಲ್ಲಿ ಕೈಗೊಂಡ ನಿರ್ಧಾರ ಈಗಾಗಲೇ ಜಾರಿ ಮಾಡಲಾಗಿದೆ.

ನಿಜಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇಲ್ಲವಾ?
ಖಂಡಿತ ಇಲ್ಲ.  ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು, ಆತಂಕ ಎದುರಾಗುವುದಿಲ್ಲ. ಐದು ವರ್ಷಗಳ ಕಾಲ ಈ ಸರ್ಕಾರ ಸುಭದ್ರವಾಗಿರಲಿದೆ. ಸಿದ್ದರಾಮಯ್ಯ ಅವರ ಆಶಯವೂ ಇದೇ ಆಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಒಂದು ಅವಕಾಶ ಕೊಟ್ಟಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡಲಾಗುವುದು. 

ನೀವು ಸಿದ್ದರಾಮಯ್ಯ ಮುಖಾಮುಖೀಯಾಗುತ್ತಿಲ್ಲವಲ್ಲಾ?
ಸಮನ್ವಯ ಸಮಿತಿಯಲ್ಲಿ ಮುಖಾಮುಖೀಯಾಗುತ್ತೇವಲ್ಲ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರ ಸಲಹೆ-ಸೂಚನೆ ಮಾರ್ಗದರ್ಶನ ಪಡೆಯಲಾಗುತ್ತಿದೆ. ನಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನಗಳೂ ಇಲ್ಲ. ಆದರೆ, ನಮ್ಮ ಹೇಳಿಕೆಗಳಿಗೆ ಬೇರೆ ಬೇರೆ ಸ್ವರೂಪ ನೀಡಲಾಗುತ್ತಿದೆ. 

ನೀವು ಪದೇ ಪದೇ ಕುರ್ಚಿಗೆ ಅಂಟಿಕೊಂಡಿಲ್ಲ, ಎಷ್ಟು ದಿನ ಇರ್ತೇನೋ ಗೊತ್ತಿಲ್ಲ ಎಂದು ಹೇಳುವುದೇಕೆ?
ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು  ಇದೆ ಎಂಬ ಅರ್ಥದಲ್ಲಿ ನಾನು ಹೇಳುತ್ತಿಲ್ಲ. ಸಹಜವಾಗಿ ನನಗೆ ಅಧಿಕಾರ ಮುಖ್ಯವಲ್ಲ. ಎಷ್ಟು ದಿನ ಇರುತ್ತೇನೋ ಅಷ್ಟು ದಿನ ಜನರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ.

ಮುಖ್ಯಮಂತ್ರಿಯಾಗಲು ಕೆಲವರು ಕಾಯುತ್ತಿದ್ದಾರೆ ಎಂದು ಹೇಳಿದ್ದೀರಲ್ಲಾ?
ಅದು ನಾನು ಸಿದ್ದರಾಮಯ್ಯ ಅವರನ್ನು ಕುರಿತು ಹೇಳಿದ್ದಲ್ಲ. ಬಿಜೆಪಿಯ ಯಡಿಯೂರಪ್ಪ ಕುರಿತು ಹೇಳಿದ್ದು.  ಸೆ.3 ರಂದು ಹೊಸ ಮುಖ್ಯಮಂತ್ರಿಯಾಗ್ತಾರೆ ಎಂದು ಚಾನೆಲ್‌ವೊಂದರಲ್ಲಿ ಪ್ರಸಾರವಾದ ಸುದ್ದಿ ಪ್ರಸ್ತಾಪಿಸಿ ಹೇಳಿದ್ದೆ. ಆದರೆ, ಅದಕ್ಕೂ ಬೇರೆ ಅರ್ಥ ಕಲ್ಪಿಸಲಾಯಿತು.

ನಾನ್ಯಾಕೆ ಬೇಡ ಎನ್ನಲಿ
 ಸಮ್ಮಿಶ್ರ ಸರ್ಕಾರ ಇವತ್ತು ಬೆಳಗ್ಗೆ ಬೀಳುತ್ತೆ, ರಾತ್ರಿ ಬೀಳುತ್ತೆ ಎಂದು ಹಲವರು ಕನಸು ಕಾಣುತ್ತಿದ್ದಾರೆ. ಅದರಿಂದ ಅವರಿಗೆ ಖುಷಿಯಾಗುವುದಾದರೆ ಆಗಲಿ, ನಾನ್ಯಾಕೆ ಬೇಡ ಎನ್ನಲಿ.  ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬಂದರೆ ನಾನು ಸಿದ್ಧ. ನನಗ್ಯಾವ ಅಜೆಂಡಾಗಳೂ ಇಲ್ಲ.  ರಾಜ್ಯದ ಅಭಿವೃದ್ಧಿಯೇ ನನ್ನ ಮೂಲ ಅಜೆಂಡಾ. ಬಿಜೆಪಿಯವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಬಹುದಿತ್ತು. ಆದರೆ, ಹಾಗೆ ಮಾಡಿಸಲಿಲ್ಲ.  

ಸಿದ್ದರಾಮಯ್ಯನವರ ಜತೆ ಭಿನ್ನಾಭಿಪ್ರಾಯವಿಲ್ಲ 
ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರ ಸಲಹೆ-ಸೂಚನೆ ಮಾರ್ಗದರ್ಶನ ಪಡೆಯಲಾಗುತ್ತಿದೆ.  ರಾಜ್ಯದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಬಜೆಟ್‌ ಹಾಗೂ ನಾನು ಮಂಡಿಸಿರುವ ಬಜೆಟ್‌ ಎರಡೂ ಬುನಾದಿಯಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಅವರು ರೂಪಿಸಿದ ಕಾರ್ಯಕ್ರಮಗಳೆಲ್ಲವನ್ನೂ ಮುಂದುವರಿಸಲಾಗಿದೆ. ನಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನಗಳೂ ಇಲ್ಲ. ಆದರೆ, ನಮ್ಮ ಹೇಳಿಕೆಗಳಿಗೆ ಬೇರೆ ಬೇರೆ ಸ್ವರೂಪ ನೀಡಲಾಗುತ್ತಿದೆ.

– ಎಸ್‌. ಲಕ್ಷ್ಮಿನಾರಾಯಣ
 

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Congress-Symbol

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.