ಬಾವುಟ ನವನವೀನ; ಕೇಂದ್ರ ಸರ್ಕಾರಕ್ಕೆ ಶಿಫಾರಸಿಗೆ ಸಿಎಂ ತೀರ್ಮಾನ
Team Udayavani, Mar 9, 2018, 6:00 AM IST
ಬೆಂಗಳೂರು: ಹಳದಿ, ಬಿಳಿ, ಕೆಂಪು ವರ್ಣ ಹಾಗೂ ರಾಜ್ಯ ಸರ್ಕಾರದ ಲಾಂಛನ ಹೊಂದಿರುವ ತ್ರಿವರ್ಣ ಧ್ವಜಕ್ಕೆ ಅಧಿಕೃತ ನಾಡಧ್ವಜವಾಗಿ ಕಾನೂನಿನ ಮಾನ್ಯತೆ ನೀಡಿ ನಾಡಿಗೆ ಪ್ರತ್ಯೇಕ ಧ್ವಜ ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕನ್ನಡ ನಾಡಿಗೆ ಪ್ರತ್ಯೇಕ ನಾಡಧ್ವಜ ಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ನೇಮಿಸಿದ್ದ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರೊಂದಿಗೆ ಗುರುವಾರ ಸಭೆ ನಡೆಸಿ ಎಲ್ಲರ ಒಪ್ಪಿಗೆಯ ಮೇರೆಗೆ ನಾಡಧ್ವಜ ಅಂತಿಮಗೊಳಿಸಿದರು.
ಧ್ವಜದ ಬಣ್ಣ ಸಂಯೋಜನೆ
ಹಳದಿ, ಬಿಳಿ ಮತ್ತು ಕೆಂಪು, ಮಧ್ಯದಲ್ಲಿ ನೀಲಿ ಬಣ್ಣದ ರಾಜ್ಯದ ಲಾಂಛನ
ಬಣ್ಣಗಳ ಸಂಕೇತ ಹೀಗಿವೆ
ಹಳದಿ: ಧನಾತ್ಮಕತೆ ಮತ್ತು ಸಂಭ್ರಮ
ಬಿಳಿ:ಶಾಂತಿಯ ಸಂಕೇತ
ಕೆಂಪು: ಧೈರ್ಯ, ಶೌರ್ಯ, ಸ್ವಾಭಿಮಾನ
ರಾಜ್ಯದ ಲಾಂಛನ: ಸರ್ಕಾರದ ಅಧಿಕೃತ ಧ್ವಜದ ಸಂಕೇತ
ಬದಲಾವಣೆಗೆ ಕಾರಣ ?
ಸಾಹಿತಿ ಹಾಗೂ ಪತ್ರಕರ್ತ ಪಾಟಿಲ್ ಪುಟ್ಟಪ್ಪ ಪ್ರತ್ಯೇಕ ನಾಡಧ್ವಜ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಪ್ರಮುಖ ಅಂಶಗಳು
– ಪ್ರತ್ಯೇಕ ನಾಡ ಧ್ವಜ ವಿನ್ಯಾಸ ರಚನೆಗೆ 2017ರ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಸಮಿತಿ ರಚನೆ
– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆ
– ಕಾನೂನು ಇಲಾಖೆ ಕಾರ್ಯದರ್ಶಿ
– ಸಂಸದೀಯ ಇಲಾಖೆ ಕಾರ್ಯದರ್ಶಿ
– ಗೃಹ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ
– ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
– ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
– ಹಂಪಿ ವಿವಿ ರಿಜಿಸ್ಟ್ರಾರ್
– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು
ಧ್ವಜ ವಿನ್ಯಾಸ ರಚನೆ
– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು
– ನಾಲ್ಕು ಮಾದರಿಯ ಧ್ವಜಗಳ ವಿನ್ಯಾಸ ರಚನೆ
– ಸಮಿತಿಯಿಂದ ಮೂರು ಬಣ್ಣಗಳು ಹಾಗೂ ರಾಜ್ಯ ಲಾಂಛನವುಳ್ಳ ಧ್ವಜ ಆಯ್ಕೆ
ಧ್ವಜದ ಇತಿಹಾಸ
– ಕನ್ನಡ ಹೋರಾಟಗಾರ ಮ. ರಾಮಮೂರ್ತಿಯಿಂದ ಧ್ವಜ ರಚನೆ
– ಹಳದಿ ಕೆಂಪು ಬಣ್ಣದ ಧ್ವಜ
– ಕನ್ನಡ ಪಕ್ಷದ ಅಧಿಕೃತ ಧ್ವಜವೆಂದು ತೀರ್ಮಾನ
– ಕನ್ನಡ ಹೋರಾಟಕ್ಕೆ ಅಧಿಕೃತವಾಗಿ ಬಳಕೆ
ದೇಶದ 2ನೇ ರಾಜ್ಯ
– ಜಮ್ಮು ಮತ್ತು ಕಾಶ್ಮೀರ್ ನಂತರ ಪ್ರತ್ಯೇಕ ನಾಡ ಧ್ವಜ ಹೊಂದುತ್ತಿರುವ ರಾಜ್ಯ ಕರ್ನಾಟಕ.
ಕೇಂದ್ರದ ಒಪ್ಪಿಗೆ ಬಾಕಿ
– ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ತಿರಸ್ಕೃರಿಸಿದರೆ, ಪ್ರತ್ಯೇಕ ಧ್ವಜಕ್ಕೆ ಮಾನ್ಯತೆ ಇಲ್ಲ.
ಕನ್ನಡಿಗರ ಆಶಯಕ್ಕೆ ಸ್ಪಂದಿಸಿ, ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ರಚನೆಯಾಗಿದೆ. ಸರ್ಕಾರದ ಐತಿಹಾಸಿಕ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಸಂಪುಟದಲ್ಲಿಯೂ ಒಪ್ಪಿಗೆ ದೊರೆತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕನ್ನಡ ನಾಡಿಗೆ ಪ್ರತ್ಯೇಕ ಧ್ವಜ ಬೇಕೆಂಬ ನಾಡಿನ ಜನರ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಈ ಸಮಿತಿಯ ಸದಸ್ಯನಾಗಿದ್ದು ನನಗೆ ಹೆಮ್ಮೆಯಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂಬುವುದು ನನ್ನ ಆಶಯ
– ಮನು ಬಳಿಗಾರ, ಕಸಾಪ ಅಧ್ಯಕ್ಷ
ರಾಜ್ಯ ಸರ್ಕಾರ ಒಂದು ತೀರ್ಮಾನ ಮಾಡಿದೆ ಎಂದ ಮೇಲೆ ನಾವು ಒಪ್ಪಿಕೊಳ್ಳಲೇಬೇಕು. ಸರ್ಕಾರ ಅಧಿಕೃತ ನಾಡಧ್ವಜ ರಚನೆ ಮಾಡಿದರೂ, ಹೋರಾಟಗಾರರು ನಮ್ಮ ಹೋರಾಟಕ್ಕೆ ಹಳದಿ-ಕೆಂಪು ಬಣ್ಣದ ಧ್ವಜವನ್ನೇ ಬಳಸುತ್ತೇವೆ.
– ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ.
ಪ್ರತೇಕ ಧ್ವಜ ನಮ್ಮ ಕನ್ನಡಿಗರ ಅಸ್ಮಿತೆಯ ಸಂಕೇತ. ಇದು ಒಂದು ರೀತಿಯ ಭಾವನಾತ್ಮಕವಾದ ಅಗತ್ಯ ಕೂಡ ಹೌದು. ಈ ಬಗ್ಗೆ ಸರ್ಕಾರ ಒಂದು ನಿಲುವು ತೆಗೆದುಕೊಂಡಿರುವುದು ಶ್ಲಾಘನೀಯ. ಈ ಧ್ವಜವನ್ನು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಳ್ಳಬೇಕು.
– ಸಿದ್ದಲಿಂಗಯ್ಯ, ಕವಿ.
ಕನ್ನಡಕ್ಕೆ ಪ್ರತ್ಯೇಕ ನಾಡಧ್ವಜ ಮಾಡಲು ತೀರ್ಮಾನ ಮಾಡಿದ ಒಂದು ಚರಿತ್ರಾರ್ಹ ಸಂದರ್ಭಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಸರ್ಕಾರದ ತೀರ್ಮಾನವನ್ನು ನಾವು ಎಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಂಡಿದ್ದೇವೆ. ಈಗ ರಾಜ್ಯ ಸರ್ಕಾರ ಆದಷ್ಟು ಬೇಗ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
– ಹಂಪ ನಾಗರಾಜಯ್ಯ, ಸಾಹಿತಿ.
ರಾಜ್ಯ ಸರ್ಕಾರ ಸಮಿತಿ ರಚಿಸಿ ಅಧಿಕೃತ ಧ್ವಜ ರಚನೆ ಮಾಡಿದ್ದನ್ನು ನಾವು ಒಪ್ಪಿಕೊಂಡಿದ್ದೇವೆ. ನಮಗೆ ಕನ್ನಡದ ಧ್ವಜದ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ನಮ್ಮ ಹೋರಾಟಗಳಲ್ಲಿ ನಮ್ಮ ಧ್ವಜವನ್ನೇ ಬಳಸುತ್ತೇವೆ. ರಾಜ್ಯೋತ್ಸವದ ಸಂದರ್ಭದಲ್ಲಿ ನಾಡ ಧ್ವಜ ಹಾರಿಸುತ್ತೇವೆ.
– ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ
ಅನಿವಾರ್ಯವಾಗಿ ರಾಜ್ಯ ಸರ್ಕಾರದ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ. ಈಗಿರುವ ಧ್ವಜ ಬಿಟ್ಟು ಮತ್ತೂಂದು ಮಾಡುವ ಅಗತ್ಯವಿರಲಿಲ್ಲ. ನಾವು ನಮ್ಮ ಹೋರಾಟಕ್ಕೆ ನಮ್ಮದೇ ಧ್ವಜ ಬಳಸುತ್ತೇವೆ.ರಾಜ್ಯೋತ್ಸವದ ದಿನ ಸರ್ಕಾರಿ ಧ್ವಜ ಹಾರಿಸುತ್ತೇವೆ.
– ಪ್ರವೀಣ್ ಶೆಟ್ಟಿ, ಕರವೇ ಪ್ರತ್ಯೇಕ ಬಣದ ಮುಖಂಡ.
ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿತ್ತು. ಸಂವಿಧಾನ ಬದ್ಧ, ಸ್ವಾಯತ್ತತೆಗೆ ರಾಜ್ಯಕ್ಕೆ ಧ್ವಜ ಬೇಕು. ಅದಕ್ಕಾಗಿ ಪ್ರತ್ಯೇಕ ನಾಡಧ್ವಜದ ಬಗ್ಗೆ ಹೋರಾಟ ನಡೆಸಿದ್ದೆವು. ಯಾರೂ ಈ ಬಗ್ಗೆ ಅಪಸ್ವರವನ್ನು ಎತ್ತದೆ ಒಪ್ಪಿಗೆ ನೀಡಬೇಕು. ಸರ್ಕಾರದ ತೀರ್ಮಾನ ಸ್ವಾಗತಾರ್ಹ.
– ಕುಂ.ವೀರಭದ್ರಪ್ಪ, ಖ್ಯಾತ ಕಾದಂಬರಿಕಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.