ಒಣ ತ್ಯಾಜ್ಯ ಸಂಗ್ರಹಿಸಲು ಸಿಎನ್‌ಜಿ ವಾಹನ
Team Udayavani, Dec 16, 2019, 11:23 AM IST
ಬೆಂಗಳೂರು: ನಗರದ ತ್ಯಾಜ್ಯ ಸಂಗ್ರಹದಲ್ಲಿ “ಪರಿಸರ ಸ್ನೇಹಿ’ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ಬಿಬಿಎಂಪಿ, ಈ ನಿಟ್ಟಿನಲ್ಲಿ ಸಿಎನ್‌ಜಿ ಆಧಾರಿತ ವಾಹನಗಳನ್ನು ರಸ್ತೆಗಿಳಿಸಲು ಉದ್ದೇಶಿಸಿದೆ.
ಈ ಸಂಬಂಧ ಬಿಬಿಎಂಪಿಯು, ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್-ಗೇಲ್) ಜತೆ ಕೈಜೋಡಿಸಲಿದ್ದು, ಪ್ರಾಯೋಗಿಕವಾಗಿ “ಕಾರ್ಪೊರೇಟ್ -ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್) ಅಡಿ ಗೇಲ್ ಒಂದು ಕೋಟಿ ರೂ. ವೆಚ್ಚದಲ್ಲಿ ಒಣತಾಜ್ಯ ಸಂಗ್ರಹಿಸಲು ಸಿಎನ್‌ಜಿ (ಘನೀಕೃತ ನೈಸರ್ಗಿಕ ಅನಿಲ) ಆಧಾರಿತ ವಾಹನಗಳನ್ನು ನೀಡಲು ಸಮ್ಮತಿಸಿದೆ. ಮೂಲಗಳ ಪ್ರಕಾರ ಗೇಲ್ ಸಂಸ್ಥೆಯು ಈ ಮಾದರಿಯ ಹತ್ತಕ್ಕೂ ಹೆಚ್ಚು ವಾಹನಗಳನ್ನು ಪೂರೈಸಲು ಮುಂದಾಗಿದೆ. ಹಲವು ಹಂತಗಳಲ್ಲಿ ಈ ಸಿಎನ್‌ಜಿ ವಾಹನ ನೀಡಲು ಗೇಲ್ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಮೂರರಿಂದ ನಾಲ್ಕು ವಾಹನಗಳು ಎರಡು-ಮೂರು ತಿಂಗಳಲ್ಲಿ ರಸ್ತೆಗಿಳಿಯಲಿವೆ. ಈ ಹಿಂದೆ ಬಿಎಂಟಿಸಿ ಸಿಎನ್‌ಜಿ ಬಸ್‌ಗಳನ್ನು ಪರಿಚಯಿಸಲು ಉದ್ದೇಶಿಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿದೆ. ಅಂದುಕೊಂಡಂತೆ ಯಶಸ್ವಿಯಾದರೆ, ಈ ವಾಹನಗಳನ್ನು ಪರಿಚಯಿಸುತ್ತಿರುವ ಮೊದಲ ಸ್ಥಳೀಯ ಸಂಸ್ಥೆ ಎಂಬ ಅಗ್ಗಳಿಕೆಗೂ ಪಾಲಿಕೆ ಪಾತ್ರವಾಗಲಿದೆ.
ಲಕ್ಷಾಂತರ ರೂ. ಉಳಿತಾಯ: ಘನೀಕೃತ ನೈಸರ್ಗಿಕ ಅನಿಲವನ್ನು ಸಿಎನ್‌ಜಿ ಎಂದು ಕರೆಯಲಾಗುತ್ತದೆ. ಡೀಸೆಲ್ ಆಧಾರಿತ ವಾಹನಗಳು ಉಗುಳುವ ಹೊಗೆ ಪರಿಸರಕ್ಕೆ ಅತ್ಯಂತ ಮಾರಕ. ಆದರೆ, ಸಿಎನ್‌ಜಿ ಯಾವುದೇ ಹಾನಿಕಾರಕ ಅಂಶಗಳನ್ನು ಹೊರಸೂಸುವುದಿಲ್ಲ. ಆಗ್ಗಾಗೆ ಆಗುತ್ತಿರುವ ಡಿಸೇಲ್ ದರ ಏರಿಕೆಯಿಂದ ಖರ್ಚು ಹೆಚ್ಚುತ್ತಲೇ ಇದೆ. ಜತೆಗೆ ನಿರ್ವಹಣೆ ವೆಚ್ಚ ಕೂಡ ಅಧಿಕ. ಆದರೆ, ಸಿಎನ್ ಜಿಯಲ್ಲಿ ಈ ಕಿರಿಕಿರಿ ಇರುವುದಿಲ್ಲ. ಡೀಸೆಲ್‌ಗೆ ಹೋಲಿಸಿದರೆ, ಮೈಲೇಜ್ ಕೂಡ ಅಧಿಕ. ಒಂದು ಸಿಎನ್‌ಜಿ ವಾಹನ ಬಳಸುವುದರಿಂದ ಬಿಬಿಎಂಪಿಗೆ ವಾರ್ಷಿಕವಾಗಿ 80,432 ರೂ. ಉಳಿತಾಯವಾಗಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ವಾಹನಗಳನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಸಿದರೆ ಕೋಟ್ಯಂತರ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಘನತ್ಯಾಜ್ಯ ನಿರ್ವಹಣೆ ಕಾಯ್ದೆ-2016ರ ಪ್ರಕಾರ ಕಡ್ಡಾಯವಾಗಿ ಒಣ, ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಬಿಬಿಎಂಪಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿದೆ. ಆದರೆ, ಇದಕ್ಕಾಗಿ ಪ್ರತ್ಯೇಕ ವಾಹನ ಬಳಸದಿರುವುದರಿಂದ ಬಹುತೇಕ ಸಲ ತ್ಯಾಜ್ಯ ಮಿಶ್ರವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಒಣತ್ಯಾಜ್ಯ ಸಂಗ್ರಹಕ್ಕೆ 565 ಆಟೋಗಳ ಅವಶ್ಯಕತೆ ಇದೆ.
ಟೆಂಡರ್ ರದ್ದುಪಡಿಸುವುದಿಲ್ಲ: ನಗರದಲ್ಲಿ ಇಂದೋರ್ ಮಾದರಿ ಅಳವಡಿಸಿಕೊಳ್ಳುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸುತ್ತಿದ್ದು, ಪ್ರತ್ಯೇಕ ಹಸಿತ್ಯಾಜ್ಯ ಸಂಗ್ರಹಣೆ ರದ್ದಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಯಾವುದೇ ಟೆಂಡರ್ ರದ್ದುಪಡಿಸುವ ಚಿಂತನೆ ಇಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತ್ಯೇಕವಾಗಿ ಹಸಿತ್ಯಾಜ್ಯ ಹಾಗೂ ಸ್ಯಾನೀಟರಿ ತ್ಯಾಜ್ಯ ಸಂಗ್ರಹಿಸುವ ಸಂಬಂಧ ಬಿಬಿಎಂಪಿ ಟೆಂಡರ್ ಆಹ್ವಾನಿಸಿ, ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು. ಆದರೆ, ಕೆಲವು ಗುತ್ತಿಗೆದಾರರು “ಟೆಂಡರ್ ಪ್ರಕ್ರಿಯೆಯಲ್ಲಿ ಮೀಸಲಾತಿ ನೀಡಿಲ್ಲ’ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಪ್ರಕರಣ ಇತ್ಯರ್ಥವಾಗಿದ್ದು, ಪಾಲಿಕೆ ಪರ ತೀರ್ಪು ಬಂದಿದೆ. ಹೀಗಾಗಿ, ಪ್ರತ್ಯೇಕ ಹಸಿತ್ಯಾಜ್ಯ ಸಂಗ್ರಹ ಹಾದಿ ಸುಗಮವಾಗಿದೆ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು ನಾಲ್ಕು ಸಾವಿರ ಆಟೋ ಟಿಪ್ಪರ್‌ಗಳು ಹಾಗೂ 500 ಕಾಂಪೋಸ್ಟರ್‌ಗಳಿಗೆ ಬಾಡಿಗೆ ರೂಪದಲ್ಲಿ ಜಿಪಿಎಸ್ ಯಂತ್ರ ಅಳವಡಿಸಿ ಸಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಸಿದ್ಧತೆ ನಡೆಸಿದೆ.
-ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.