ನಗರ ಕೇಂದ್ರದಲ್ಲಿ ಬಸ್ ಸೇವೆಗೆ ಕೊಕ್?
Team Udayavani, Aug 13, 2017, 11:21 AM IST
ಬೆಂಗಳೂರು: “ನಗರದ ನಾಲ್ಕೂ ಪ್ರವೇಶದ್ವಾರಗಳಿಂದ ಈಗಾಗಲೇ ಮೆಟ್ರೋ ಸೇವೆ ಇದೆ. ಹಾಗಾಗಿ, ನಗರದ ಸಂಚಾರದಟ್ಟಣೆ ತಗ್ಗಿಸಲು ಕೇಂದ್ರಭಾಗ ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸುವ ಅವಶ್ಯಕತೆ ಇದೆ’.
ನಮ್ಮ ಮೆಟ್ರೋ ಮೊದಲ ಹಂತ ನಗರದ ನಾಲ್ಕೂ ದಿಕ್ಕುಗಳಿಗೆ ಸಂಪರ್ಕ ಕಲ್ಪಿಸಿದ ಬೆನ್ನಲ್ಲೇ ಇಂತಹದ್ದೊಂದು ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪೂರಕವಾಗಿ ಸಂಚಾರದಟ್ಟಣೆಗೆ ಕಾರಣವಾಗಿರುವ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಗಂಭೀರ ಚಿಂತನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಹಾಗೂ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ನಗರಕ್ಕೆ ಮೆಟ್ರೋ ಸೇವೆ ಲಭ್ಯವಿದೆ. ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿದರೆ, ಅತಿ ಹೆಚ್ಚು ಬಸ್ ಕಾರ್ಯಾಚರಣೆ ಮಾಡುವುದು ಈ ಎರಡು ನಿಲ್ದಾಣಗಳಿಂದ ಮಾತ್ರ. ಮತ್ತೂಂದೆಡೆ ಬೈಯಪ್ಪನಹಳ್ಳಿ ಹಾಗೂ ಯಲಚೇನಹಳ್ಳಿಗೂ ಮೆಟ್ರೋ ಸಂಪರ್ಕ ಇದೆ. ಹೀಗಿರುವಾಗ, ಮೆಜೆಸ್ಟಿಕ್‌ನಲ್ಲಿರುವ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದ ಅಗತ್ಯ ಇದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ನಗರಾಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಚಿಂತನೆಯನ್ನೂ ನಡೆಸಿವೆ. ಸ್ವತಃ ಪೊಲೀಸ್ ಇಲಾಖೆ ಈ ಸಂಬಂಧದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಈ ಸಂಬಂಧ ಪ್ರತ್ಯೇಕ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೆಜೆಸ್ಟಿಕ್‌ನಲ್ಲಿ ಬಸ್‌ಗಳ ಸಂಚಾರ ಎಷ್ಟು?
ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ನಿತ್ಯ 2,700 ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಈ ಪೈಕಿ 2 ಸಾವಿರ ವೇಗದೂತ (ಕೆಂಪು ಬಸ್), 120 ವೋಲ್ವೋ, 75 ಸ್ಲಿàಪರ್, 150 ರಾಜಹಂಸ ಸೇರಿವೆ. ಹಾಗೂ ಮೆಜೆಸ್ಟಿಕ್‌ನ ಆನಂದರಾವ್ ವೃತ್ತದಲ್ಲಿ ಸುಮಾರು 480 ಹಾಗೂ ಧನ್ವಂತರಿ ಆಯುರ್ವೇದಿಕ್ ಕಾಲೇಜಿನಿಂದ 250ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಎರಡೂ ನಿಲ್ದಾಣಗಳು ಸ್ಥಳಾಂತರಗೊಂಡರೆ, ಈ ದಟ್ಟಣೆ ಬಹುತೇಕ ತಗ್ಗಲಿದೆ.
ಪ್ರಯಾಣಿಕರ ಹಿತದೃಷ್ಟಿಯಿಂದಲೂ ಇದು ಒಳ್ಳೆಯ ನಿರ್ಧಾರ. ಇದರಿಂದ ಮೆಟ್ರೋ ಉದ್ದೇಶವೂ ಸಾಕಾರಗೊಳ್ಳುತ್ತದೆ. ದೂರದ ಊರುಗಳಿಂದ ಬಸ್‌ಗಳಲ್ಲಿ ಬರುವ ಜನ, ಪ್ರವೇಶದ್ವಾರಗಳಲ್ಲೇ ಇಳಿದು, ಮೆಟ್ರೋ ಮೂಲಕ ನೇರವಾಗಿ ನಿಗದಿತ ಜಾಗಕ್ಕೆ ತೆರಳಬಹುದು. ಸಮಯ ವ್ಯಯ ಆಗುವುದಿಲ್ಲ ಹಾಗೂ ಸಂಚಾರದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಹಬ್ಬ-ಹರಿದಿನಗಳು, ಮಳೆಗಾಲದ ಸಂದರ್ಭಗಳಲ್ಲಂತೂ ಇದು ಹೆಚ್ಚು ಅನುಕೂಲ ಆಗಲಿದೆ ಎಂದು ಪ್ರಜಾಸಂಸ್ಥೆಯ ಸಂಜೀವ್ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ.
ಕೆಎಸ್‌ಆರ್‌ಟಿಸಿ ಸಿದ್ಧ
“ಖಾಸಗಿಯವರು ಸ್ಥಳಾಂತರಗೊಂಡರೆ, ತಾವೂ ಸ್ಥಳಾಂತರಿಸಲು ಸಿದ್ಧ. ಆದರೆ, ಕೆಎಸ್‌ಆರ್‌ಟಿಸಿ ಮಾತ್ರ ತೆರವುಗೊಳಿಸಿದರೆ, ಇದರಿಂದ ಖಾಸಗಿಯವರಿಗೆ ಮತ್ತಷ್ಟು ಇಂಬುಮಾಡಿಕೊಟ್ಟಂತಾಗುತ್ತದೆ. ಈ ಹಿಂದೆ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಮಾರ್ಗದ ಬಸ್‌ಗಳನ್ನು ಸ್ಥಳಾಂತರಿಸಿದಾಗ ಕೆಎಸ್‌ಆರ್‌ಟಿಸಿಗೆ ನಿತ್ಯ ಲಕ್ಷಾಂತರ ರೂ. ನಷ್ಟವಾಯಿತು. ಇದು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಹಾಗಾಗಿ, ಎರಡೂ ನಿಲ್ದಾಣಗಳನ್ನು ಒಮ್ಮೆಲೆ ಸ್ಥಳಾಂತರಿಸಿದರೆ, ನಮ್ಮ ತಕರಾರಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಪೊಲೀಸ್ ಇಲಾಖೆಗೆ ಬಿಟ್ಟಿದ್ದು; ಸಚಿವ
ಮಜೆಸ್ಟಿಕ್‌ನಲ್ಲಿರುವ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳ ಸ್ಥಳಾಂತರ ನಿರ್ಧಾರವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಂಚಾರದಟ್ಟಣೆ ಹಿನ್ನೆಲೆಯಲ್ಲಿ ಸ್ಥಳಾಂತರಗೊಳ್ಳಿ ಎಂದು ಸೂಚಿಸಿದರೆ, ಎರಡೂ ನಿಲ್ದಾಣಗಳು ಸ್ಥಳಾಂತರಗೊಳ್ಳಲೇಬೇಕಾಗುತ್ತದೆ. ಆದರೆ, ಇದುವರೆಗೆ ಅಂತಹ ಯಾವುದೇ ಸೂಚನೆ ಕೆಎಸ್‌ಆರ್‌ಟಿಸಿಗೆ ಬಂದಿಲ್ಲ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ನಿಲ್ದಾಣಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸೇರಿದಂತೆ ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಈ ಸಂಬಂಧ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ.
-ಮಹೇಂದ್ರ ಜೈನ್, ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ
ಮೆಟ್ರೋ ಬಂದ ಮೇಲೆ ಮೆಜೆಸ್ಟಿಕ್‌ನಲ್ಲಿ ವ್ಯಾಪಾರ ಡಲ್
ಮೊದಲ ಹಂತ ಸಂಪೂರ್ಣವಾಗಿ ಕಾರ್ಯಾಚರಣೆ ಶುರುವಾದ ಬೆನ್ನಲ್ಲೇ ಮೆಜೆಸ್ಟಿಕ್‌ನ ಚಿತ್ರಣ ಕೂಡ ನಿಧಾನವಾಗಿ ಬದಲಾಗುತ್ತಿದ್ದು, ಸುತ್ತಮುತ್ತ ವ್ಯಾಪಾರ-ವಹಿವಾಟಿಗೆ ತುಸು ಮಂಕುಕವಿದಿದೆ. ದೂರದ ಊರುಗಳಿಂದ ಮಾತ್ರವಲ್ಲ; ನಗರದ ವಿವಿಧೆಡೆಯಿಂದ ಬರುವ ಜನರಿಗೆಲ್ಲಾ ಮೆಜೆಸ್ಟಿಕ್ ಹೃದಯಭಾಗ. ಹತ್ತಾರು ಉದ್ದೇಶಗಳಿಗೆ ಇಲ್ಲಿಗೆ ಬಂದಿಳಿಯುವ ಜನ, ಸರ್ಕಾರಿ ಕಚೇರಿಗಳು, ರೈಲು, ಬಸ್ ಸೇವೆ ಒಂದೇ ಕಡೆ ಇರುವುದರಿಂದ ಮೆಜೆಸ್ಟಿಕ್ ಆಸುಪಾಸು ಇರುವ ಲಾಡ್ಜ್ಗಳಲ್ಲಿ ತಂಗುತ್ತಾರೆ.
ಬಸ್-ರೈಲುಗಳು ತಪ್ಪಿದರೆ ಅಥವಾ ತಡವಾದರೆ ಇದೇ ಮೆಜೆಸ್ಟಿಕ್‌ನಲ್ಲಿ ಒಂದು ಸುತ್ತು ಹಾಕಿ ಬರುವವರ ಸಂಖ್ಯೆಯೂ ಸಾಕಷ್ಟಿದೆ. ಆದರೆ, ಕಳೆದ ಒಂದೂವರೆ ತಿಂಗಳಿಂದ ಈ ಚಿತ್ರಣ ಬದಲಾಗುತ್ತಿದೆ. ಮೈಸೂರು, ತುಮಕೂರು ಮಾರ್ಗಗಳು, ಕೋಲಾರ, ಕನಕಪುರ ಕಡೆಗಳಿಂದ ನಗರಕ್ಕೆ ಬರುವವರಲ್ಲಿ ಬಹುತೇಕರು ಪ್ರವೇಶ ದ್ವಾರದಲ್ಲಿರುವ ಮೆಟ್ರೋ ನಿಲ್ದಾಣಗಳ ಬಳಿ ಇಳಿದು, ಅಲ್ಲಿಂದ ಮೆಟ್ರೋ ರೈಲು ಏರುತ್ತಿರುವುದು ಸಾಮಾನ್ಯವಾಗಿದೆ. ನಗರಕ್ಕೆ ಹತ್ತಿರ ಇರುವವರು ಖಾಸಗಿ ವಾಹನಗಳಲ್ಲಿ ಬಂದು, ಮೆಟ್ರೋ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ.
ಕಳೆದ ಒಂದೂವರೆ ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವ್ಯಾಪಾರ ಶೇ. 20ರಷ್ಟು ಕುಂಠಿತವಾಗಿದೆ. ನಿತ್ಯ 10 ಸಾವಿರ ರೂ. ವ್ಯಾಪಾರ ಆಗುತ್ತಿತ್ತು. ಆದರೆ, ಈಗ 8 ಸಾವಿರ ರೂ.ಗಳಿಗೆ ಇಳಿಕೆಯಾಗಿದೆ. ಇದು ಕೇವಲ ನಮ್ಮ ಅಂಗಡಿಯಲ್ಲಿ ಮಾತ್ರವಲ್ಲ; ನಿಲ್ದಾಣದಲ್ಲಿ ಹೋಟೆಲ್, ಜನರಲ್ ಸ್ಟೋರ್ ಸೇರಿದಂತೆ 20ರಿಂದ 25 ಮಳಿಗೆಗಳಿವೆ. ಆ ಎಲ್ಲ ವ್ಯಾಪಾರಿಗಳಿಗೂ ಇದರ ಬಿಸಿ ತಟ್ಟಿದೆ.
-ಜನರಲ್ ಸ್ಟೋರ್ ವ್ಯಾಪಾರಿ ಮೋಹನ್
ಮೆಟ್ರೋ ಸೇವೆ ಆರಂಭಗೊಂಡ ನಂತರ ಮೆಜೆಸ್ಟಿಕ್ ಮೂಲಕ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾತ್ರ ವ್ಯಾಪಾರ ಕುಸಿದಿದೆ! ಹೇಗೆಂದರೆ, ಉದಾಹರಣೆಗೆ ರಾಜಾಜಿನಗರದಿಂದ ಜಯನಗರ ಕಡೆಗೆ ಹೋಗುವ ಜನ, ಮೆಜೆಸ್ಟಿಕ್‌ನಲ್ಲಿರುವ ಇಂಟರ್‌ಚೇಂಜ್‌ನಲ್ಲೇ ಮಾರ್ಗ ಬದಲಿಸಿ, ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಹಾಗಾಗಿ, ಹೊರಗೆ ಬರುವ ಪ್ರಮೇಯವೇ ಬರುವುದಿಲ್ಲ.
-ವ್ಯಾಪಾರಿ ವೇದಮೂರ್ತಿ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.