ತಿಂಗಳಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಣೆ
Team Udayavani, Dec 1, 2018, 6:00 AM IST
ಬೆಂಗಳೂರು: ರಾಜ್ಯಕ್ಕೆ ತಿಂಗಳಿನಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದ್ದು, ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ ಸದ್ಯ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 1.64 ಲಕ್ಷ ಟನ್ ಹೆಚ್ಚುವರಿ ಕಲ್ಲಿದ್ದಲು ದಾಸ್ತಾನು ಇದೆ.
ವಿದೇಶಿ ಕಲ್ಲಿದ್ದಲು ಆಮದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಜನವರಿಯಿಂದ ಪೂರೈಕೆಯಾಗುವ ನಿರೀಕ್ಷೆ ಇದೆ. ಜಲವಿದ್ಯುತ್ ಘಟಕಗಳಲ್ಲಿನ ನೀರಿನ ಸಂಗ್ರಹವೂ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ವಿದ್ಯುತ್ ಪೂರೈಸುವುದು ಸವಾಲೆನಿಸಿದೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪಡೆಯುವ ಪ್ರಯತ್ನವನ್ನು ಇಂಧನ ಇಲಾಖೆ ಮುಂದುವರಿಸಿದೆ.
ಕಳೆದ ಅಕ್ಟೋಬರ್ ಅಂತ್ಯದ ವೇಳೆಗೆ ಕಲ್ಲಿದ್ದಲು ದಾಸ್ತಾನು ಗಣನೀಯವಾಗಿ ಕುಸಿದಿದ್ದರಿಂದ ಉಷ್ಣ ವಿದ್ಯುತ್ ಉತ್ಪಾದನೆ ಕ್ಷೀಣಿಸಿ ಲೋಡ್ ಶೆಡ್ಡಿಂಗ್ ಶುರುವಾಗುವ ಭೀತಿ ಎದುರಾಗಿತ್ತು. ಆಯ್ದ ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುವುದಾಗಿ ಪ್ರಕಟಿಸಿದ್ದರು.
ದಾಸ್ತಾನು ಪ್ರಮಾಣ ಏರಿಕೆ
ಕಳೆದ ಅ.25ಕ್ಕೆ ರಾಯಚೂರಿನ ಆರ್‌ಟಿಪಿಎಸ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯ ತಲುಪಿತ್ತು. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸಬೇಕಾದ ಗಂಭೀರ ಸ್ಥಿತಿ ತಲುಪಿತ್ತು. ಹಾಗೆಯೇ ಬಳ್ಳಾರಿಯ ಬಿಟಿಪಿಎಸ್ ಘಟಕದಲ್ಲಿ 36,000 ಟನ್ ಹಾಗೂ ಯರಮರಸ್‌ನ ವೈಟಿಪಿಎಸ್ ಘಟಕದಲ್ಲಿ 40,000 ಟನ್ ಕಲ್ಲಿದ್ದಲು ದಾಸ್ತಾನು ಮಾತ್ರ ಉಳಿದಿತ್ತು. ಆದರೆ ತಿಂಗಳಿನಿಂದೀಚೆಗೆ ಕಲ್ಲಿದ್ದಲು ದಾಸ್ತಾನಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
1.64 ಲಕ್ಷ ಟನ್ ಹೆಚ್ಚುವರಿ ದಾಸ್ತಾನು
ತಿಂಗಳಿನಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದೆ. ಆರ್‌ಟಿಪಿಎಸ್‌ನಲ್ಲಿ 60,000 ಟನ್, ಬಿಟಿಪಿಎಸ್‌ನಲ್ಲಿ 1.35 ಲಕ್ಷ ಟನ್ ಹಾಗೂ ವೈಟಿಪಿಎಸ್‌ನಲ್ಲಿ 45,000 ಟನ್ ಕಲ್ಲಿದ್ದಲು ದಾಸ್ತಾನು ಇದೆ. ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಹೆಚ್ಚುವರಿ 1.64 ಲಕ್ಷ ಟನ್ ಕಲ್ಲಿದ್ದಲು ಶೇಖರಣೆ ಇರುವುದು ತುಸು ಸಮಾಧಾನ ತರಬಹುದು. ಆದರೂ ರಾಜ್ಯಕ್ಕೆ ಅಗತ್ಯವಿರುವಷ್ಟು ಹಾಗೂ ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ. ವೈಟಿಪಿಎಸ್‌ನ ಒಂದು ಘಟಕ ತಾಂತ್ರಿಕ ದೋಷ ಕಾರಣಕ್ಕೆ ಸ್ಥಗಿತಗೊಂಡಿರುವುದರಿಂದ ಕಲ್ಲಿದ್ದಲು ದಾಸ್ತಾನು ಶೇಖರಣೆಗೂ ಸಹಾಯಕವಾದಂತಾಗಿದೆ.
ಉತ್ತಮ ನೀರು ಸಂಗ್ರಹ
ಜಲವಿದ್ಯುತ್ ಘಟಕಗಳಿರುವ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. 2017ರ ನ.30ಕ್ಕೆ ಹೋಲಿಸಿದರೆ 2018ರ ನ.30ನಲ್ಲಿ ಹೆಚ್ಚುವರಿಯಾಗಿ 2,500 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾದಷ್ಟು ನೀರಿನ ಸಂಗ್ರಹವಿದೆ. ಸದ್ಯ ನಿತ್ಯ 20ರಿಂದ 25 ದಶಲಕ್ಷ ಯೂನಿಟ್ ವಿದ್ಯುತ್‌ಅನ್ನು ಜಲವಿದ್ಯುತ್ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಜನವರಿವರೆಗೆ ಇದೇ ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆಯಾಗಲಿದ್ದು, ನಂತರ ಮೇ ಅಂತ್ಯದವರೆಗೆ ನಿತ್ಯ ಸರಾಸರಿ 30ರಿಂದ 35 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಹಾಗಾಗಿ ಮೇ ಅಂತ್ಯದವರೆಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಿನ ವ್ಯತ್ಯಯವಾಗದು ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
400 ಕೋಟಿ ರೂ. ವೆಚ್ಚ?
ದೇಶೀಯ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಬಳಸಲು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಸದ್ಯದಲ್ಲೇ ಟೆಂಡರ್ ತೆರೆದು ಮುಂದಿನ ಪ್ರಕ್ರಿಯೆ ನಡೆಸಲಿದೆ. ವಿದೇಶಿ ಕಲ್ಲಿದ್ದಲು ದರ ಪ್ರತಿ ಟನ್‌ಗೆ ಸುಮಾರು 7,500ರಿಂದ 8000 ರೂ.ನಷ್ಟಿದ್ದು, 400 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಜನವರಿ ಆರಂಭದಿಂದ ವಿದೇಶಿ ಕಲ್ಲಿದ್ದಲು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಸದ್ಯ ಬೇಡಿಕೆ ಪ್ರಮಾಣ ಸರಾಸರಿ 208 ದಶಲಕ್ಷ ಯೂನಿಟ್‌ನಷ್ಟಿದ್ದು (10,000 ಮೆಗಾವ್ಯಾಟ್‌ಗೂ ಹೆಚ್ಚು), ಬೇಡಿಕೆಯಷ್ಟು ಪೂರೈಕೆ ಮಾಡಲು ಇಂಧನ ಇಲಾಖೆ ತೀವ್ರ ಕಸರತ್ತು ನಡೆಸಿದೆ. ಸೌರಶಕ್ತಿ ಮೂಲದಿಂದ 3,000 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಮೇವರೆಗೆ ಇದೇ ಪ್ರಮಾಣದಲ್ಲಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಉಷ್ಣ ವಿದ್ಯುತ್, ಜಲವಿದ್ಯುತ್ ಮೂಲದಿಂದ 73 ದಶಲಕ್ಷ ಯೂನಿಟ್, ನವೀಕರಿಸಬಹುದಾದ ಇಂಧನ ಮೂಲದಿಂದ 59 ದಶಲಕ್ಷ ಯೂನಿಟ್, ಕೇಂದ್ರ ಸರ್ಕಾರದ ಹಂಚಿಕೆಯಡಿ 67 ದಶಲಕ್ಷ ಯೂನಿಟ್, ಉಡುಪಿಯ ಯುಪಿಸಿಎಲ್ ಘಟಕದಿಂದ 9 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದೆ.
ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ ಸದ್ಯ ಕಲ್ಲಿದ್ದಲು ಪೂರೈಕೆ ಪ್ರಮಾಣ ತುಸು ಸುಧಾರಿಸಿದೆ. ಹಾಗೆಂದು ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ್ಲ. ತಾಂತ್ರಿಕ ದೋಷ ಕಾರಣಕ್ಕೆ ವೈಟಿಪಿಎಸ್‌ನ ಒಂದು ಘಟಕ ಸ್ಥಗಿತಗೊಂಡಿದ್ದು, ಬಿಟಿಪಿಎಸ್, ಆರ್‌ಟಿಪಿಎಸ್‌ನಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬೇಡಿಕೆಗೆ ಪೂರಕವಾಗಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ಪೂರೈಸಲು ಪ್ರಯತ್ನ ಮುಂದುವರಿಸಲಾಗಿದೆ ಎಂದು ಕೆಪಿಸಿಎಲ್ ಉನ್ನತ ಮೂಲಗಳು ತಿಳಿಸಿವೆ.
ಕಲ್ಲಿದ್ದಲು ದಾಸ್ತಾನು ವಿವರ
ಘಟಕ ಅ.25 ನ.30
ಆರ್‌ಟಿಪಿಎಸ್ 00 60,000 ಟನ್
ಬಿಟಿಪಿಎಸ್ 36,000 ಟನ್ 1.35 ಲಕ್ಷ ಟನ್
ವೈಟಿಪಿಎಸ್ 40,000 ಟನ್ 45,000 ಟನ್
ಒಟ್ಟು 76,000 ಟನ್ 2,40,000 ಟನ್
– ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.