ಕರಾವಳಿಯಲ್ಲಿ ಚದುರಿದ ಮಳೆ ಸಾಧ್ಯತೆ
Team Udayavani, Jul 24, 2017, 8:25 AM IST
ಬೆಂಗಳೂರು: ರಾಜ್ಯಾದ್ಯಂತ ಕಳೆದ ವಾರ ಅಬ್ಬರಿಸಿದ್ದ ಮಳೆ ಈಗ ಇಳಿಮುಖವಾಗಿದ್ದು, ಇನ್ನೂ ಐದಾರು ದಿನ ಇದೇ ವಾತಾವರಣ ಮುಂದುವರಿಯಲಿದೆ.
ಕರಾವಳಿ ಸೇರಿ ಇತರೆಡೆ ಚದುರಿದಂತೆ ಮಳೆ ಆಗುವ ಸಾಧ್ಯತೆಯಿದೆ. ಕಳೆದ ವಾರ ಭಾರಿ ಮಳೆಯಾಗಿದ್ದರಿಂದ
ಜಲಾಶಯಗಳಿಗೆ ಇನ್ನೂ ನೀರು ಹರಿದುಬರುತ್ತಿದೆ. ಆದರೆ, ಜುಲೈ 28ರವರೆಗೆ ಮಳೆ ನಿರೀಕ್ಷೆ ಇಲ್ಲ. ಕರಾವಳಿ ಮತ್ತು ಮಲೆನಾಡಿನ ಆಯ್ದ ಭಾಗಗಳಲ್ಲಿ ಮಳೆಯಾದರೂ, ಜಲಾಶಯಗಳ ಒಳಹರಿವು ಹೆಚ್ಚುವ ಪ್ರಮಾಣವಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ನಿರೀಕ್ಷೆ ಕಡಿಮೆ ಇದೆ. ಹಾಗಾಗಿ, ಜಲಾಶಯಗಳ ಒಳಹರಿವು ಇಳಿಮುಖವಾಗುವ ಸಾಧ್ಯತೆಯಿದೆ.
ಈ ಮಧ್ಯೆ ಮುಂದಿನ ವಾರದಲ್ಲಿ ಹವಾಮಾನದಲ್ಲಿ ಬದಲಾವಣೆ ನಿರೀಕ್ಷೆಯೂ ಕಡಿಮೆ. ಪ್ರಸ್ತುತ ಮಧ್ಯಪ್ರದೇಶದಿಂದ ಗುಜರಾತ್ ಮಧ್ಯೆ ವಾಯುಭಾರ ಕುಸಿತ ಉಂಟಾಗಿದೆ. ಆದರೆ, ಅದರಿಂದ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾನುವಾರ ಬೆಳಗ್ಗೆ 8.30ರವರೆಗೆ ರಾಜ್ಯದಲ್ಲಿ ಗರಿಷ್ಠ 3 ಸೆಂ.ಮೀ. ಮಾತ್ರ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ತೀರ್ಥಹಳ್ಳಿ, ಆಗುಂಬೆಯಲ್ಲಿ ಈ ಮಳೆ ದಾಖಲಾಗಿದೆ. ಉಳಿದಂತೆ ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ 1ರಿಂದ 2 ಸೆಂ.ಮೀ. ಮಳೆಯಾಗಿದೆ.
ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ
ರಾಯಬಾಗ: ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ತಾಲೂಕಿನ ಚಿಂಚಲಿ-ಭಿರಡಿ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ಮುಳುಗಡೆಗೆ ಒಂದು ಅಡಿ ಮಾತ್ರ ಬಾಕಿ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.