ಕಾಫಿ, ಚಿಕೋರಿ ಪ್ರತ್ಯೇಕ ಮಾರಾಟ ಮಾಡಿ
Team Udayavani, Nov 14, 2019, 3:05 AM IST
ಬೆಂಗಳೂರು: ಕಾಫಿ ಹೆಸರಲ್ಲಿ ಚಿಕೋರಿಯನ್ನು ಮಿಶ್ರಣ ಮಾಡದೆ, ಎರಡೂ ಬೆಳೆಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸಲಹೆ ನೀಡಿದರು. ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ನಗರದ ಅಶೋಕ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ 61ನೇ ವಾರ್ಷಿಕ ಸಮಾವೇಶದಲ್ಲಿ ಬುಧವಾರ ಅವರು ಮಾತನಾಡಿದರು.
ಇತ್ತೀಚೆಗೆ ಹೊರಗಡೆ ಕಾಫಿ ಕುಡಿಯಲು ಹೆದರಿಕೆಯಾಗುತ್ತದೆ. ಕಾರಣ ಕಾಫಿಗೆ ಅತೀ ಹೆಚ್ಚು ಚಿಕೋರಿ ಮಿಶ್ರಣ ಮಾಡುತ್ತಿದ್ದಾರೆ. ಕಾಫಿ ಬದಲಿಗೆ ಚಾಫಿಯಾಗುತ್ತಿದೆ. ಇಂತಹ ಚಿಕೋರಿ ಮಿಶ್ರಿತ ಕಾಫಿ ಕುಡಿಯುವುದರಿಂದ ಉದರ ಸೋಂಕು ಸೇರಿದಂತೆ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ. ಜತೆಗೆ ನಿಜವಾದ ಕಾಫಿ ಆಸ್ವಾದ ಇರುವುದಿಲ್ಲ.
ಸದ್ಯ ಕಾಫಿ ಹಾಗೂ ಚಿಕೋರಿಯನ್ನು ಶೇ.70/30 ಪ್ರಮಾಣದಲ್ಲಿ ಮಿಶ್ರಣ ಮಾಡಲಾಗುತ್ತಿದೆ. ಆದರೆ, ಈ ನಿಖರತೆ ಎಲ್ಲೆಡೆ ಸಾಧ್ಯವಾಗುವುದಿಲ್ಲ. ಗ್ರಾಹಕರು ಚಿಕೋರಿ ಹೆಚ್ಚು ಮಿಶ್ರಣವಾಗಿರುವುದನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎರಡನ್ನು ಪ್ರತ್ಯೇಕವಾಗಿ ಮಾರಾಟ ಮಾಡಿ. ಇನ್ನು ಮುಂದಿನ ದಿನಗಳಲ್ಲಿ ಕಾಫಿ ಜತೆ ಚಿಕೋರಿ ಮಿಶ್ರಣ ಮಾಡುವುದನ್ನು ಆಹಾರ ಗುಣಮಟ್ಟ ಕಾಯ್ದೆಯಡಿ ತಂದು ನಿಯಂತ್ರಣ ಮಾಡುವ ಕುರಿತು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಒತ್ತುವರಿ ಕಾಯ್ದೆಯಡಿ ಕಾಫಿ ಬೆಳೆಗಾರರನ್ನು ಕೋರ್ಟ್‌ಗೆ ತಂದು ನಿಲ್ಲಿಸಲಾಗುತ್ತಿದೆ. ಉಳುಮೆ ಮಾಡುವುದಕ್ಕೂ, ಬೆಂಗಳೂರಿನಲ್ಲಿ ಭೂಮಿ ಒತ್ತುವರಿಗೂ ವ್ಯತ್ಯಾಸವಿದೆ. ಈ ಹಿಂದೆ ಭೂ ಒತ್ತುವರಿ ಕಾಯ್ದೆ ಮಾಡುವಾಗ ಅಂದಿನ ಸಚಿವರಾದ ಎಂ.ಪಿ.ಪ್ರಕಾಶ್ ಅವರು ಕಾಯ್ದೆಯನ್ನು ಬೆಂಗಳೂರು ಸೀಮಿತ ಮಾಡುತ್ತೇವೆ ಎಂದಿದ್ದರು. ಆದರೆ, ಕಾಯ್ದೆಯು ರಾಜ್ಯದೆಲ್ಲೆಡೆ ಜಾರಿಯಾಗಿದೆ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ಮಾಡಲು ಚಿಂತಿಸಲಾಗುತ್ತಿದೆ.
ಬೆಂಗಳೂರು ಹೊರತು ಪಡೆಸಿ ಬೇರೆ ಕಡೆಗಳಲ್ಲಿ ಬೇರೆ ಕಡೆಗಳಲ್ಲಿ ವ್ಯವಸಾಯ ಮಾಡುವವರನ್ನು ಭೂ ಒತ್ತುವರಿದಾರರೆಂದು ಪರಿಗಣಿಸಬಾರದು ಎಂದು ಮುಂದಿನ ಅಧಿವೇಶನಲ್ಲಿ ತಿದ್ದುಪಡಿ ತರುತ್ತೇವೆ ಎಂದು ಭರವಸೆ ನೀಡಿದರು. ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದದಿಂದ ಕೇಂದ್ರ ಸರ್ಕಾರವು ಸದ್ಯಕ್ಕೆ ಹಿಂದೆ ಸರಿದಿರುವುದು ಉತ್ತಮ ನಡೆಯಾಗಿದೆ.
ಮುಂದಿನ ದಿನಗಳಲ್ಲಿಯೂ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಈ ಹಿಂದೆ ವಿಯೆಟ್ನಾಂಗೆ ಕಾಫಿ ಬೆಳೆಯಲು ಭಾರತವು ಎಲ್ಲಾ ಸಹಕಾರ ನೀಡಿತು. ಆದರೆ, ಇಂದು ವಿಯೆಟ್ನಾಂ ಭಾರತಕ್ಕಿಂತ ಹೆಚ್ಚು ಕಾಫಿಯನ್ನು ಬೆಳೆಯುತ್ತಿದೆ. ಸದ್ಯ ಕಾಫಿಗೆ ಕೂಲಿ ಕಾರ್ಮಿರ ಸಮಸ್ಯೆ, ಬೆಲೆ ಏರಿಳಿತ ಸಮಸ್ಯೆ ಇದ್ದು, ಆರ್‌ಸಿಇಪಿಯಿಂದ ಇನ್ನಷ್ಟು ಸಮಸ್ಯೆಗುತ್ತದೆ ಎಂದರು ಅಭಿಪ್ರಾಯಪಟ್ಟರು.
ಕಾಫಿ ಬೆಳೆಗಾರರ ಕುಟುಂಬ ಹಿನ್ನೆಲೆ ಹೊಂದಿರುವುದರಿಂದ ಕಾಫಿ ಬೆಳೆಗಾರರ ಸಮಸ್ಯೆ ಅರ್ಥವಾಗುತ್ತಿದೆ. ಒಂದು ಕಾಲದಲ್ಲಿ ಪ್ಲಾಂಟರ್ ಅಥವಾ ಕಾಫಿ ಬೆಳೆಗಾರರು ಎಂದರೆ ಸಾಕಷ್ಟು ಮರ್ಯಾದೆ ಇರುತ್ತಿತ್ತು, ಶೀಮಂತರು ಎಂದುಕೊಳ್ಳುತ್ತಿದ್ದರು. ಜತೆಗೆ ದೊಡ್ಡಸ್ಥಿಕೆಯ ವಿಷಯವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕಾಫಿ ಜತೆಗೆ ಪರ್ಯಾಯ ಬೆಳೆಗೂ ಆದ್ಯತೆ ನೀಡಬೇಕು. ಇನ್ನು ಕಡಿಮೆ ಬಡ್ಡಿದರದಲ್ಲಿ ಸಾಲ, ರಿಯಾತಿಗಳು ಸೇರಿದಂತೆ ಅಸೋಸಿಯೇಷನ್ ನೀಡಿರುವ ಮನವಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಿಡುತ್ತೇನೆ ಎಂದರು.
ಒಪ್ಪಿದರೆ ಬೆಳೆ ಪರಿಹಾರಕ್ಕೆ ಮನವಿ: ಪ್ರಧಾನಮಂತ್ರಿ ಬೆಳೆ ವಿಮೆಯಲ್ಲಿ ಕಾಫಿ ಬೆಳೆ ಸೇರ್ಪಡೆಯಾಗಿಲ್ಲ. ಸದ್ಯ ಕಾಫಿಯನ್ನೂ ಸೇರ್ಪಡೆ ಮಾಡಬೇಕು ಎಂದು ಚಿಂತನೆ ನಡೆಸಲಾಗುತ್ತಿದೆ. ಕಾಫಿ ಬೆಳೆಗಾರರು ಒಪ್ಪಿದರೆ ಈ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ. ಸೇರ್ಪಡೆಯಾದರೆ ಹವಮಾನ ವೈಪರಿತ್ಯ ಸೇರಿದಂತೆ ಇನ್ನಿತರ ಕಾರಣಗಳಿಗೆ ಬೆಳೆಹಾನಿಯಾದರೆ ಪರಿಹಾರ ಸಿಗುತ್ತದೆ. ಈ ಕುರಿತು ಕಾಫಿ ಬೆಳಗಾರರು, ಸಂಘಗಳು ಚರ್ಚಿಸಿ ಆಬಳಿಕ ನಿರ್ಧಾರ ತಿಳಿಸುವಂತೆ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.