![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 24, 2022, 9:31 AM IST
ಬೆಂಗಳೂರು: ಬಾಡಿಗೆ ಮನೆಯಲ್ಲಿದ್ದ ಯುವತಿಯ ಹಣೆಗೆ ರಿವಾಲ್ವರ್ ಇಟ್ಟು ಅತ್ಯಾಚಾರ ಎಸಗಿದ ಮನೆ ಮಾಲೀಕ ಹಾಗೂ ಟೈಲ್ಸ್ ಉದ್ಯಮಿಯನ್ನು ಅಶೋಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದ ನಿವಾಸಿ ಬಿಹಾರ ಮೂಲದ ಅನಿಲ್ ರವಿಶಂಕರ್ ಪ್ರಸಾದ್(40) ಬಂಧಿತ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪಶ್ಚಿಮ ಬಂಗಾಳ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ನಗರದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ಎರಡು ತಿಂಗಳಿಂದ ಆರೋಪಿ ಅನಿಲ್ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇದ್ದರು. ಈ ವೇಳೆಯೇ ಯುವತಿ ಮೇಲೆ ಮೋಹಕ್ಕೊಳಗಾದ ಆರೋಪಿ, ಆಕೆ ಜತೆ ಕೆಲ ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಸಂತ್ರಸ್ತೆ ಎಚ್ಚರಿಕೆ ನೀಡಿ, ಅಂತರ ಕಾಯ್ದುಕೊಂಡಿದ್ದಳು. ಅದರಿಂದ ಆರೋಪಿ ಆಕ್ರೋಶಗೊಂಡಿದ್ದ. ಈ ಮಧ್ಯೆ ಸಂತ್ರಸ್ತೆ ಮನೆಗೆ ಆಕೆಯ ಸ್ನೇಹಿತ ಹಾಗೂ ಇತರರು ಆಗಾಗ್ಗೆ ಬರುತ್ತಿದ್ದರು. ಅದಕ್ಕೆ ಆರೋಪಿ ತಕರಾರು ಮಾಡಿದ್ದು, ಯುವತಿ ಜತೆ ಜಗಳ ಮಾಡುತ್ತಿದ್ದ.
ಕೆಲ ದಿನಗಳ ಹಿಂದೆ ಯುವತಿಯ ಸ್ನೇಹಿತ ಆಕೆಯ ಮನೆಯಲ್ಲೇ ತಂಗಿದ್ದ. ಅದನ್ನು ಗಮನಿಸಿದ ಆರೋಪಿ ಯುವತಿ ಸ್ನೇಹಿತನ ಬೈಕ್‌ಗೆ ಚೈನ್ ಹಾಕಿ, ಪೊಲೀಸರು ಬೈಕ್‌ಗೆ ಚೈನ್ ಹಾಕಿದ್ದಾರೆ. ನೀವಿಬ್ಬರು ಅನೈತಿಕ ಚಟುವಟಿಕೆ ನಡೆಸುತ್ತಿದ್ದಿರಾ ಎಂಬ ಅನುಮಾನದ ಮೇರೆಗೆ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಯುವತಿ ಸ್ನೇಹಿತನಿಗೆ ಹೆದರಿಸಿದ್ದ. ಅಲ್ಲದೆ, ಪೊಲೀಸರಿಂದ ಯಾವುದೇ ತೊಂದರೆ ಆಗದ್ದಂತೆ ನೋಡಿಕೊಳ್ಳುತ್ತೇನೆ. ಕೂಡಲೇ ಇಲ್ಲಿಂದ ಹೊರಡುವಂತೆ ಹೇಳಿ, ಆಕೆಯ ಸ್ನೇಹಿತನನ್ನು ಕಳುಹಿಸಿದ್ದಾನೆ. ಕೆಲ ದಿನಗಳ ಬಳಿಕ ಯಾವುದೋ ವಿಚಾರ ಕುರಿತು ಮಾತನಾಡುವ ನೆಪದಲ್ಲಿ ಆಕೆಯ ಮನೆಗೆ ನುಗ್ಗಿ ಅನಿಲ್, ಆಕೆಯ ಹಣೆಗೆ ರಿವಾಲ್ವರ್ ಇಟ್ಟು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಇದನ್ನೂ ಓದಿ:ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ
ಬಳಿಕ ಈ ವಿಚಾರ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ. ಆದರೆ, ಸಂತ್ರಸ್ತೆ ತನ್ನ ಪೋಷಕರ ಬಳಿ ಹೇಳಿಕೊಂಡು ಗೋಳಾಡಿದ್ದು, ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಹೀಗಾಗಿ ದೂರು ನೀಡಿದ್ದರು. ಈ ಸಂಬಂಧ ಆರೋಪಿ ಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.