ಪರಿಶೀಲನೆ ವೇಳೆ ದೂರುಗಳ ಸುರಿಮಳೆ
Team Udayavani, Aug 20, 2017, 11:18 AM IST
ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ನಡೆಯಿತು.
ಕಳೆದ ಒಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ಸಚಿವರ ನೇತೃತ್ವದಲ್ಲಿ ಹಾನಿಗೊಳಲಾಗದ ಸ್ಥಳಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮಳೆಯಿಂದ ಹಾನಿಗೊಳಗಾದ ಜೆ.ಸಿ. ರೋಡ್, ಶಾಂತಿನಗರ, ಕೋರಮಂಗಲ, ಆನೆ ಪಾಳ್ಯ, ಅವನೀ ಶೃಂಗೇರಿ ಸರಸ್ವತಿ ಪುರಂ, ಯಡಿಯೂರು, ಅರಕೆರೆ ಕೆರೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಸ್ಥಳೀಯರಿಂದ ದೂರು ಸ್ವೀಕರಿಸಿ, ಶೀಘ್ರ ಕ್ರಮಕ್ಕೆ ಮುಂದಾಗದ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮೊದಲಿಗೆ ಜೆ.ಸಿ.ರಸ್ತೆಯ ಬಳಿಯ ರಾಜಕಾಲುವೆ ಪರಿಶೀಲಿಸಿದ ಸಚಿವ ಜಾರ್ಜ್, ಕಾಮಗಾರಿ ವಿಳಂಬವಾಗಿ ಗಮನಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ರಾಜಕಾಲುವೆಯ ನೀರು ರಸ್ತೆಗೆ ಬರದಂತೆ ಮರಳಿನಿ ಚೀಲಗಳನ್ನು ಹಾಕಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು. ನಂತರ ಡಬಲ್ ರೋಡ್‌ನಲ್ಲಿ ರಾಜಕಾಲುವೆ ತಡೆ ಒಡೆದು ರಸ್ತೆಗಳು ಜಲಾವೃತಗೊಂಡ ಶಾಂತಿನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಬಳಿ ಪರಿಶೀಲಿಸಿದರು.
ಕಾಮಗಾರಿ ಪರಿಶೀಲನೆ ವೇಳೆ ಜೆ.ಸಿ.ರಸ್ತೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರೇಣುಕಾ ಅವರ ವಿರುದ್ಧ ಗರಂ ಆದ ಜಾರ್ಜ್, “ಏನು ಕೆಲಸ ಮಾಡಿದ್ದೀರಾ ಎಂದರೆ ಫೈಲ್ ತೋರಿಸುತ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಕಾಲುವೆಯ ನೀರು ರಸ್ತೆಗೆ ಬರದಂತೆ ಅಗತ್ಯ ಕ್ರಮಕೈಗೊಳ್ಳಿ,’ ಎಂದು ಸೂಚಿಸಿದರು.
ನಂತರ ಶಾಂತಿನಗರದಲ್ಲಿರುವ ಬಿಎಂಟಿಸಿ ವಸತಿ ಗೃಹದ ಬಳಿ ಜಲಾವೃತಗೊಂಡಿದ್ದ ಸ್ಥಳ ವೀಕ್ಷಣೆ ನಡೆಸುವ ವೇಳೆ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಅವರು ನೀರು ನಿಲ್ಲದಂತೆ ಕ್ರಮಕೈಗೊಳ್ಳುವಂತೆ ಸಚಿವರನ್ನು ಕೋರಿದರು.
ದೂರುಗಳ ಸುರಿಮಳೆ
ವಿಲ್ಸನ್ ಗಾರ್ಡನ್, ಶಾಂತಿ ನಗರದಲ್ಲಿ ಮಳೆ ನೀರು ನುಗ್ಗಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳು ಸೇರಿದಂತೆ ಕೋರಮಂಗಲದ ಎಸ್.ಟಿ.ಬೆಡ್ ನಿವಾಸಿಗಳು ಸಚಿವ ಜಾರ್ಜ್ ಅವರಿಗೆ ದೂರುಗಳ ಸುರಿಮಳೆಗೈದು ತರಾಟೆಗೆ ತೆಗೆದುಕೊಂಡರು. ಬಡಾವಣೆಯಲ್ಲಿ ಐದು ಅಡಿ ನೀರು ನಿಂತಿದ್ದು, ಮನೆಯಲ್ಲೆಲ್ಲಾ ನೀರು ತುಂಬಿಕೊಂಡು ಪರದಾಡುವಂತಾಗಿದ್ದು, ಇದರಲ್ಲಿ ನಾವು ಮಾಡಿದ ತಪ್ಪೇನು ಎಂದು ಪ್ರಶ್ನಿಸಿದರು.
ಜಾರ್ಜ್ ಪರವಾಗಿ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ರಾಜಕಾಲುವೆಯ ಗೋಡೆ ತೆರೆದಿದ್ದರಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ. ಆಗಿರುವ ಸಮಸ್ಯೆಗಳು ಹಾಗೂ ನಷ್ಟದ ಕುರಿತು ಮಾಹಿತಿ ಪಡೆಯಲಾಗಿದ್ದು, ಈ ಕುರಿತು ಸರ್ಕಾರದೊಂದಿಗೆ ಮಾತನಾಡಿ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದದರು. ಜತೆಗೆ ರಾಜಕಾಲುವೆ ಕಾಮಗಾರಿ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದು ನಿತ್ಯ ಭೇಟಿ ನೀಡಿ ಪರಿಶೀಸುವುದಾಗಿ ತಿಳಿಸಿದರು.
ಶೀಘ್ರ ಪರಿಹಾರ ನೀಡುವ ಭರವಸೆ
ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಎಸ್.ಟಿ.ಬೆಡ್ ಪ್ರದೇಶದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗಿದ್ದು, ಇನ್ನು 10 ದಿನಗಳಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ರಾಜಕಾಲುವೆ ಒತ್ತುವರಿಯಿಂದಾಗಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಈಗಾಗಲೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗಿದ್ದು, ನೂರು ಕಿ.ಮೀ.ಗೂ ಉದ್ದದ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದರೊಂದಿಗೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ನಗರದಲ್ಲಿನ ಎಲ್ಲ ಕಡೆಗಳಲ್ಲಿನ ಒತ್ತುವರಿ ತೆರವುಗೊಳಿಸಲು 3-4 ವರ್ಷಗಳು ಬೇಕಾಗುತ್ತದೆ. ಎಲ್ಲ ಒತ್ತುವರಿ ತೆರವು ಕಾರ್ಯ ನಂತರದಲ್ಲಿ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ.
ಆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಾಗಿದೆ ಎಂದರು. ಇದರೊಂದಿಗೆ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ಪರಿಹಾರಕ್ಕೆ ಇರುವುದು ಕೇವಲ ಒಂದೇ ಮಾರ್ಗವೆಂದರೆ ಅದು ನೀರನ್ನು ಸಂಸ್ಕರಿಸಿ ಕೆರೆಗೆ ಹರಿಸುವುದು. ಆಗ ಮಾತ್ರ ಕೆರೆಯನ್ನು ನೊರೆ ಸಮಸ್ಯೆ ಮುಕ್ತಗೊಳಿಸಲು ಸಾಧ್ಯ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.