![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 7, 2024, 1:37 PM IST
ಬೆಂಗಳೂರು: ಸಮಾಜದಲ್ಲಿ ಕೋಮುದ್ವೇಷ ಸೃಷ್ಟಿಸಲು ಯತ್ನಿಸಿದ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಅಪರಿಚಿತ ಯುವತಿಯೊಬ್ಬಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ “ಸನಾತನಿ.ಹುಡುಗಿ’ ಎಂಬ ಮಹಿಳೆ ಹೆಸರಿನ ಖಾತೆಯಿದ್ದು, ಈ ಖಾತೆ ಮೂಲಕ ಯುವತಿಯೊಬ್ಬಳು ವಿಡಿಯೋ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡದಂತೆ ಅಪಪ್ರಚಾರ ಮಾಡುತ್ತಿದ್ದಾಳೆ. ಹಿಂದೂ ದೇವಾಲಯಗಳ ಮೇಲೆ ರಾಜ್ಯ ಸರ್ಕಾರ ಹಿಡಿತ ತಪ್ಪಿಸಬೇಕು. ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು, ಯಾವುದೇ ದೇವಾಲಯಗಳಿಗೆ ಭೇಟಿ ನೀಡಿದಾಗ ಆ ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿಯೋ? ಇಲ್ಲವೋ? ಎಂಬುದನ್ನು ಪರಿಶೀಲಿಸಿ, ಸರ್ಕಾರಿ ಆಡಳಿತದಲ್ಲಿರುವ ದೇವಾಲಯಗಳಿಗೆ ಕೇವಲ ಒಂದೂ ರೂ. ಅನ್ನು ನೀಡಿ ಹಾಗೂ ದೇವಾಲಯಗಳ ಹಣ ಅನ್ಯ ಧರ್ಮಗಳಿಗೆ ಖರ್ಚಾಗುತ್ತಿದೆ ಎಂಬ ಇತ್ಯಾದಿ ಹೇಳಿಕೆಗಳನ್ನು ನೀಡಿದ್ದಾರೆ.
ಈ ಮೂಲಕ ಸಮಾಜದಲ್ಲಿ ಕೋಮುದ್ವೇಷ ಉಂಟು ಮಾಡುತ್ತಿದ್ದಾರೆ. ಈ ಸಂಬಂಧ ತಪ್ಪಿತಸ್ಥ ಯುವತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್‌ನ ವೈ.ಪುಟ್ಟರಾಜು ಎಂಬವರು ದೂರು ನೀಡಿದ್ದಾರೆ.
ತನಿಖೆ ನಡೆಯುತ್ತಿದೆ ಎಂದು ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್: ಮತ್ತೊಂದು ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದೂಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ.ಎಲ್. ಚೇತನ್ ಕೇಂದ್ರ ವಿಭಾಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೈ ರಾಷ್ಟ್ರ ರಕ್ಷಣಾ ಪಡೆ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಮೊಬೈಲ್ ನಂಬರ್ ವೊಂದರಿಂದ ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಬಿಜೆಪಿ ಬೆಂಬಲ ಕೊಟ್ಟಿದೆ. ಆದರಿಂದ ಎಲ್ಲರೂ ರೆಡಿಯಾಗಿರಿ, ಎಲ್ಲೆಲ್ಲಿ ಏನು ಮಾಡಬೇಕು ಎಂಬುದನ್ನು ನಾವು ಈ ಗ್ರೂಪ್‌ನಲ್ಲಿ ಮಾಹಿತಿ ಕೊಡುತ್ತೇವೆಂದು ಹೇಳಿದ್ದಾರೆ. ಕಾರ್ಯಕರ್ತರೆಲ್ಲರೂ ರೆಡಿಯಾಗಿ ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಬೇಕಿದೆ ಎಂಬ ಸಂದೇಶವನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಲಾಗಿದೆ. ಈ ಸಂದೇಶ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಅದು ಪುನೀತ್ ಕೆರೆಹಳ್ಳಿ ಬಳಸುವ ನಂಬರ್ ಎಂಬುದು ಗೊತ್ತಾಗಿದೆ.
ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಚೇತನ್ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.